ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹಕ್ಕು ದಿನವಾಗಿ ರಾಹುಲ್ ಹುಟ್ಟುಹಬ್ಬ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಭಾನುವಾರ 41ನೇ ವರ್ಷಕ್ಕೆ ಕಾಲಿರಿಸಿದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನ ಜನ್ಮದಿನವನ್ನು `ಕಿಸಾನ್ ಅಧಿಕಾರ್ ದಿವಸ್~ (ರೈತ ಹಕ್ಕುಗಳ ದಿನ) ಆಗಿ ಆಚರಿಸಿದರು.

 ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ  ರಾಜ್ಯ ಕಾಂಗ್ರೆಸ್ ಘಟಕವು ರಾಹುಲ್ ಜನ್ಮದಿನವನ್ನು ರೈತರನ್ನು ಸೆಳೆಯುವ ಅವಕಾಶವನ್ನಾಗಿ ಬಳಸಿಕೊಂಡಿತು.
ಗ್ರೇಟರ್ ನೋಯ್ಡಾದಲ್ಲಿ ಭೂಸ್ವಾಧೀನ ವಿರೋಧಿಸಿ ಈಚೆಗಷ್ಟೇ ರಾಹುಲ್ ಗಾಂಧಿ ನಡೆಸಿದ್ದ ಧರಣಿ ಸಾಕಷ್ಟು ಸಂಚಲನ ಉಂಟು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಹುಲ್ ಗಾಂಧಿ ಅವರು ಜನ್ಮದಿನದಂದು ತಮ್ಮ ನಿವಾಸದಲ್ಲಿ ಇರಲಿಲ್ಲ. ಆದ್ದರಿಂದ ಯಾವುದೇ ಸಂಭ್ರಮಾಚರಣೆ ಆಯೋಜಿಸಿಲ್ಲ ಎಂದು ನಿವಾಸದ ಮೂಲಗಳು ತಿಳಿಸಿವೆ.

`ರಾಹುಲ್ ಈಗ ಪ್ರಧಾನಿ ಆಗಬಹುದು~
ಭೋಪಾಲ್, (ಪಿಟಿಐ):
ರಾಹುಲ್‌ಗಾಂಧಿ ಈಗ ಪರಿಪಕ್ವ ರಾಜಕೀಯ ಸಾಮರ್ಥ್ಯ ಹೊಂದಿದ ಸದೃಢ ವ್ಯಕ್ತಿಯಾಗಿದ್ದು, ಪ್ರಧಾನಮಂತ್ರಿಯಾಗಬಹುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಭಾನುವಾರ ಹೇಳಿದರು.

`ರಾಹುಲ್ ಗಾಂಧಿ ಪ್ರಧಾನಿಯಾಗಲು ಇದು ಸಕಾಲ ಎಂಬುದು ನನ್ನ ಭಾವನೆ~ ಎಂದು ಸಿಂಗ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ರಾಹುಲ್‌ಗೆ ಈಗ 40 ವರ್ಷ ಮತ್ತು ಅವರು ಕಾಂಗ್ರೆಸ್ ಪಕ್ಷದಲ್ಲಿ ಕಳೆದ 7ರಿಂದ 8 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡಿದ್ದಾರೆ ಎಂದು ಸಿಂಗ್ ಹೇಳಿದರು. ಗಾಂಧಿ ಕುಟುಂಬದ ಸದಸ್ಯರಲ್ಲಿ ಹುಟ್ಟಿನಿಂದಲೇ ಶ್ರೇಷ್ಠ ಗುಣಗಳಿವೆ. ಈಗ ಪ್ರಧಾನಮಂತ್ರಿ ಹುದ್ದೆಯನ್ನು ನಿಭಾಯಿಸಲು ಬೇಕಾದ ಅನುಭವವನ್ನೂ ರಾಹುಲ್ ಹೊಂದಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

ಉಮಾ ಭಾರತಿ ಉಡುಗೊರೆ
ಲಖಿಂಪುರ (ಪಿಟಿಐ):
  ಕಾಂಗ್ರೆಸ್‌ನ ಯುವ ನಾಯಕ ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಉಡುಗೊರೆಯಾಗಿ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಪುಸ್ತಕವೊಂದನ್ನು ನೀಡುವುದಾಗಿ ಬಿಜೆಪಿ ನಾಯಕಿ ಉಮಾಭಾರತಿ ಘೋಷಿಸಿದ್ದಾರೆ.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, `ಈ ಪುಸ್ತಕದಲ್ಲಿ ನೆಹರು ಅವರು ದೇಶಕ್ಕೆ ಆರ್‌ಎಸ್‌ಎಸ್ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸುವಂತೆ ಆರ್‌ಎಸ್‌ಎಸ್‌ಗೆ ಆಹ್ವಾನ ನೀಡಿರುವ ಉಲ್ಲೇಖವಿದೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT