ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರೊಂದಿಗೆ ಸಿಎಂ ಕಾಲ್ನಡಿಗೆ : ಸಂಚಾರ ಅಸ್ತವ್ಯಸ್ತ

Last Updated 24 ಫೆಬ್ರುವರಿ 2011, 20:15 IST
ಅಕ್ಷರ ಗಾತ್ರ


ಬೆಂಗಳೂರು: ಬಜೆಟ್ ಮಂಡನೆಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೇಸ್‌ಕೋರ್ಸ್ ರಸ್ತೆಯ ತಮ್ಮ ನಿವಾಸದಿಂದ ಬಸವೇಶ್ವರ ವೃತ್ತದವರೆಗೆ ರೈತರೊಂದಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದ ಪರಿಣಾಮ ರೇಸ್‌ಕೋರ್ಸ್ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಗುರುವಾರ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಯಿತು.

ಸಾವಿರಾರು ರೈತರು ಮುಖ್ಯಮಂತ್ರಿಗಳೊಂದಿಗೆ ಬಸವೇಶ್ವರ ವೃತ್ತದವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದರಿಂದ ರೇಸ್‌ಕೋರ್ಸ್ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಪರಿಣಾಮ ಸುಮಾರು 15 ನಿಮಿಷಗಳವರೆಗೆ ಈ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ವಾಹನಗಳ ನಡುವೆ ಸಿಲುಕಿದ್ದ ಆಂಬುಲೆನ್ಸ್‌ಗಳ ಸಂಚಾರಕ್ಕೂ ಅಡ್ಡಿಯಾಯಿತು.

ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಕೆ.ಆರ್.ವೃತ್ತ, ಮೈಸೂರು ಬ್ಯಾಂಕ್ ವೃತ್ತ, ರಾಜಭವನ ರಸ್ತೆ, ಶಿವಾನಂದ ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು.

ಕ್ರೀಡಾಂಗಣದ ಬಳಿಯೂ ಟ್ರಾಫಿಕ್ ಜಾಮ್: ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಕ್ರಿಕೆಟ್ ಪಂದ್ಯದ ಟಿಕೆಟ್ ಖರೀದಿಸಲು ಭಾರಿ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಕ್ರೀಡಾಂಗಣದ ಬಳಿ ಜಮಾಯಿಸಿದ್ದರು. ಪರಿಣಾಮ ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ ಮತ್ತು ಕಸ್ತೂರಬಾ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಟಿಕೆಟ್ ಖರೀದಿಸಲು ಬಂದಿದ್ದ ಜನರು ವಾಹನಗಳನ್ನು ರಸ್ತೆಗಳ ಅಕ್ಕಪಕ್ಕ ನಿಲುಗಡೆ ಮಾಡಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ಹೆಚ್ಚು ಸ್ಥಳಾವಕಾಶವಿಲ್ಲದೆ ತೊಂದರೆಯಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT