ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಎಂಜಿನಿಯರ್ ಬಂಧನ

Last Updated 13 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಗಾರಿಯೊಂದರ ಬಿಲ್ ಪಾವತಿಗೆ ಗುತ್ತಿಗೆದಾರರಿಂದ 1.10 ಲಕ್ಷ ರೂಪಾಯಿ ಲಂಚ ಪಡೆದ ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ಎಂಜಿನಿಯರ್ ಸುಖದೇವ್ ಮಹತೊ ಅವರನ್ನು ಸಿಬಿಐ ಪೊಲೀಸರು ಸೋಮವಾರ ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ.

ಪ್ರಿಯಾಂಕ ಕನ್‌ಸ್ಟ್ರಕ್ಷನ್ಸ್ ಎಂಬ ಸಂಸ್ಥೆ ನೈರುತ್ಯ ರೈಲ್ವೆಯಲ್ಲಿ ಕಾಮಗಾರಿಗಳನ್ನು ಗುತ್ತಿಗೆ ಪಡೆದು, ನಿರ್ವಹಿಸಿತ್ತು. ಅದರ ಬಿಲ್ ಮೊತ್ತ ಪಾವತಿಸುವಂತೆ ಕಂಪೆನಿ ಕೋರಿಕೊಂಡಿತ್ತು. ಬಿಲ್ ಪಾವತಿಗೆ ರೂ 1.10 ಲಕ್ಷ  ಲಂಚ ನೀಡುವಂತೆ ಮಹತೊ ಒತ್ತಾಯಿಸಿದ್ದರು. ಈ ಕುರಿತು ಪ್ರಿಯಾಂಕ ಕನ್‌ಸ್ಟ್ರಕ್ಷನ್ ಪ್ರತಿನಿಧಿಗಳು ಸಿಬಿಐನ ಬೆಂಗಳೂರು ಕಚೇರಿಯ ಭ್ರಷ್ಟಾಚಾರ ನಿಯಂತ್ರಣ ವಿಭಾಗದ ಅಧಿಕಾರಿಗಳಿಗೆ ದೂರು ನೀಡಿದ್ದರು.

ದೂರನ್ನು ದಾಖಲಿಸಿಕೊಂಡಿದ್ದ ಸಿಬಿಐ ಡಿಐಜಿ ಆರ್.ಹಿತೇಂದ್ರ ಅವರು ಸಿಬಿಐ ಪೊಲೀಸರ ತಂಡವೊಂದನ್ನು ಹುಬ್ಬಳ್ಳಿಗೆ ಕಳುಹಿಸಿದ್ದರು. ಸೋಮವಾರ ಗುತ್ತಿಗೆದಾರರಿಂದ ಮಹತೊ ಲಂಚ ಪಡೆಯುತ್ತಿರುವಾಗಲೇ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದರು.
 
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಸೇರಿದಂತೆ ಹಲವೆಡೆ ದಾಳಿಗಳನ್ನು ಸಂಘಟಿಸಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 7ರ ಅಡಿಯಲ್ಲಿ ಆರೋಪಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
 
ಮಹತೊ ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ಮಂಗಳವಾರ ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತನಿಖಾ ತಂಡದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT