ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಸೌಲಭ್ಯ: ಸಚಿವರಿಗೆ ಸಂಸದ ಧ್ರುವ ಮನವಿ

Last Updated 8 ಫೆಬ್ರುವರಿ 2011, 10:40 IST
ಅಕ್ಷರ ಗಾತ್ರ

ಚಾಮರಾಜನಗರ:  ಮೈಸೂರು-ಚಾಮರಾಜ ನಗರ ಜೋಡಿ ರೈಲು ಮಾರ್ಗ. ನಂಜನಗೂಡಿಗೆ ಆದರ್ಶ ನಿಲ್ದಾಣದ ಸೌಲಭ್ಯ. ಬೆಂಗಳೂರು- ಚಾಮರಾಜನಗರ ನಡುವೆ ಹೊಸ ಮಾರ್ಗ. ಮೈಸೂರು-ಶಿವಮೊಗ್ಗ ಹಾಗೂ ಮೈಸೂರು- ಹುಬ್ಬಳ್ಳಿ ರೈಲು ವಿಸ್ತರಣೆ. ಹಾಲಿ ಇರುವ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ.

-ಇದು ರೈಲ್ವೆ ಬಜೆಟ್‌ನಲ್ಲಿ ಚಾಮರಾಜ ನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವಂತೆ ಸಂಸದ ಆರ್. ಧ್ರುವನಾರಾಯಣ, ಕೇಂದ್ರ ರೈಲ್ವೆ ಸಚಿವರಿಗೆ ಸಲ್ಲಿಸಿರುವ ಮನವಿ ಪತ್ರದ ಮುಖ್ಯಾಂಶ.

‘ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಸೌಲಭ್ಯ ಕಲ್ಪಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಮನವಿ ಮಾಡಲಾಗಿದೆ. ನಂಜನಗೂಡಿನಲ್ಲಿ ರೈಲ್ವೆ ಮೇಲುಸೇತುವೆ ಸ್ಥಾಪಿಸಬೇಕು. ಕೃಷ್ಣಗಿರಿ-ಚಾಮರಾಜನಗರ ಮಾರ್ಗದ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು. ಗುಂಡ್ಲುಪೇಟೆ ಮಾರ್ಗವಾಗಿ ತಲಸ್ಸೇರಿ- ಮೈಸೂರು ಹೊಸ ಮಾರ್ಗ ಸ್ಥಾಪಿಸಲು ಕೋರಲಾಗಿದೆ’ ಎಂದು ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕೃಷ್ಣಗಿರಿ-ಚಾಮರಾಜನಗರ ಮಾರ್ಗದ ಅನುಷ್ಠಾನಕ್ಕೆ ಕೇಂದ್ರ ಪರಿಸರ ಉನ್ನತ ಸಮಿತಿ ತಡೆಯೊಡ್ಡಿದೆ. ಕೊಂಕಣ ರೈಲ್ವೆ ಮಾದರಿಯಂತೆ ಯೋಜನೆ ಅನುಷ್ಠಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಚಾಮರಾಜನಗರದಲ್ಲಿ ಬ್ಯಾಂಕ್ ಎಟಿಎಂ ಸೌಲಭ್ಯ ಹಾಗೂ ದೊಡ್ಡ ಕೌಲಂದೆ ನಿಲ್ದಾಣ ಮೇಲ್ದರ್ಜೆಗೇರಿಸಿ ಪ್ರಯಾ ಣಿಕರಿಗೆ ಅನುಕೂಲ ಕಲ್ಪಿಸಲು ಮನವಿ ಸಲ್ಲಿಸಲಾಗಿದೆ ಎಂದರು.

ಜತೆಗೆ, ನಗರದ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಆರ್‌ಪಿಎಫ್ ಹಾಗೂ ಜಿಆರ್‌ಪಿ ಹುದ್ದೆ ಮಂಜೂರು ಮಾಡಿ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು. ಕನಕಪುರ-ಮಳವಳ್ಳಿ- ಕೊಳ್ಳೇಗಾಲ ಮಾರ್ಗವಾಗಿ ಚಾಮರಾಜ ನಗರ-ಬೆಂಗಳೂರು ನಡುವೆ ಹೊಸ ಮಾರ್ಗ ಸ್ಥಾಪನೆಗೆ ಒತ್ತಾಯಿಸಲಾಗಿದೆ ಎಂದರು.

ಪ್ರಸ್ತುತ 3 ಸಾವಿರ ಮಂದಿಗೆ ರೈಲ್ವೆ ಪಾಸ್ ವಿತರಿಸಲಾಗಿದೆ. ಹೀಗಾಗಿ, ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ- ಮೈಸೂರು ನಡುವೆ ಸಂಚರಿಸುವ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಬೇಕು. ಚಾಮರಾಜನಗರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವಂತೆ ಫಾಸ್ಟ್ ಇಂಟರ್‌ಸಿಟಿ ರೈಲು ಓಡಿಸಲು ಬಜೆಟ್‌ನಲ್ಲಿ ಕ್ರಮಕೈಗೊಳ್ಳಲು ಒತ್ತಾಯಿಸಲಾಗಿದೆ ಎಂದು ವಿವರಿಸಿದರು.

25ಕಿ.ಮೀ ಉದ್ದದ ಚಾಮರಾಜನಗರ- ನಂಜನಗೂಡು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿ ಸಲು ಪ್ರಸ್ತಾವ ಸಲ್ಲಿಸಲಾಗಿದೆ. ಕ್ಷೇತ್ರಕ್ಕೆ ರಾಷ್ಟ್ರೀಯ ರಸ್ತೆ ನಿಧಿಯಡಿ ಹೆಚ್ಚಿನ ಅನುದಾನ ಮೀಸಲಿಡಲು ಒತ್ತಾಯಿಸಲಾಗಿದೆ ಎಂದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಾಜ್ಯದಲ್ಲಿ ಎಲ್ಲಾ ಕಾಮಗಾರಿ ಪೂರ್ಣಗೊಂಡಿವೆ.

ಉಳಿದ ರಾಜ್ಯಗಳಲ್ಲಿನ ಕಾಮಗಾರಿ ಪೂರ್ಣಗೊಂಡ ಬಳಿಕ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಅಗತ್ಯವಿರುವೆಡೆ ಕಾಮಗಾರಿಗೆ ಅನುದಾನ ನೀಡಲು ಕೋರಲಾಗಿದೆ. ಪಿಎಂಜಿಎಸ್‌ವೈ ಯೋಜನೆಯಡಿ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT