ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕು

Last Updated 15 ಅಕ್ಟೋಬರ್ 2012, 4:50 IST
ಅಕ್ಷರ ಗಾತ್ರ

ಮಾಗಡಿ: ಲೋಕೋಪಯೋಗಿ ಇಲಾಖೆಯಲ್ಲಿ ಯಾವುದೇ ಕೆಲಸ ಮಾಡಿಸಲು ವಿಧಾನಸೌಧದಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳು ಅಧಿಕಾರಿಗಳು ಹಾಗೂ ಸಂಬಂಧಿಸಿದ ಮಂತ್ರಿಗಳಿಗೆ ಶೇ.50ರಷ್ಟು ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ತಾಲ್ಲೂಕಿನ ಕುದೂರು ಹೋಬಳಿ ಚೀಲೂರು ಗ್ರಾಮದಲ್ಲಿ ಭಾನುವಾರ ನಡೆದ ಭೈರವೇಶ್ವರ ವಾರ್ಷಿಕೋತ್ಸವ, ನೂತನ ಅಂಗನವಾಡಿ ಕಟ್ಟಡದ ಉದ್ಘಾಟನೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದೆ ಡಿ.ಕೆ.ಶಿವಕುಮಾರ್ ನನ್ನ ಮನೆಗೆ ಬಂದು ಕಾಂಗ್ರೆಸ್ ಸೇರಿಕೊಳ್ಳುವಂತೆ ಒತ್ತಡ ಹೇರಿದ್ದರು. ಎಸ್.ಎಂ. ಕೃಷ್ಣ ಸಹಾ ನನ್ನನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ್ದರು. ಆದರೂ ನಾನೆಂದು ಕಾಂಗ್ರೆಸ್‌ನವರ ಮನೆ ಬಾಗಿಲಿಗೆ ಅರ್ಜಿ ಹಿಡಿದು ಹೋಗಿಲ್ಲ ಎಂದರು.

ಉಡಾಫೆ ಮಾತನಾಡುವ ಶಾಸಕ ನಾನಲ್ಲ. ತೂಕ ಇಲ್ಲದ ವ್ಯಕ್ತಿಗಳ ಬಗ್ಗೆ ನಾನೆಂದೂ ಮಾತನಾಡುವುದೂ ಇಲ್ಲ ಎಂದು ಪರೋಕ್ಷವಾಗಿ ಕೆಪಿಸಿಸಿ ಸದಸ್ಯ ಎ.ಮಂಜು ಅವರನ್ನು ಗುರಿಯಾಗಿಟ್ಟುಕೊಂಡು ಮಾತನಾಡಿದ ಅವರು,  ಮಾಜಿ ಸಚಿವ ಎಚ್.ಎಂ.ರೇವಣ್ಣ ಅಧಿಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಕಾಮಗಾರಿಗಳು ನಡೆಯಲಿಲ್ಲ ಎಂದು ದೂರಿದರು.

ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ  ಮಾತನಾಡಿ, ತಾಲ್ಲೂಕಿನಲ್ಲಿ 220 ಹಾಲು ಉತ್ಪಾದಕ ಸಹಕಾರ ಸಂಘಗಳಿವೆ. ನಿತ್ಯ 1.75ಲಕ್ಷ ಲೀಟರ್ ಹಾಲು ಉತ್ಪತ್ತಿ ಮಾಡಲಾಗುತ್ತಿದೆ. ರೈತರಿಗೆ ತಿಂಗಳಿಗೆ ಏಳೂವರೆ ಕೋಟಿ ರೂಪಾಯಿ ನೀಡಲಾಗುತ್ತಿದೆ. ನಾರಸಂದ್ರ ಮಹಿಳಾ ಹಾಲು ಉತ್ಪಾದಕರ ಸಂಘಕ್ಕೆ ಧರ್ಮಸ್ಥಳದ ವತಿಯಿಂದ ಕಟ್ಟಡಕ್ಕೆ ಒಂದು ಲಕ್ಷ ರೂಪಾಯಿ ಸಹಾಯಧನ ಲಭಿಸಿದೆ ಎಂದರು.

ಗದ್ದಲ: ನರಸಿಂಹಮೂರ್ತಿ ಮಾತನಾಡುವಾಗ ಸಭಿಕರಲ್ಲಿ ಕುಳಿತಿದ್ದ ಮಣಿಗನಹಳ್ಳಿ ಶ್ರೀನಿವಾಸ್ ಎಂಬುವರು ಎದ್ದುನಿಂತು ಮಣಿಗನಹಳ್ಳಿ ಡೈರಿಯಲ್ಲಿ ಲಕ್ಷಾಂತರ ರೂಗಳ ಅವ್ಯವಹಾರ ನಡೆದಿದೆ. ಡೈರಿಯಿಂದ ರೈತರಿಗೆ ಏನೇನೂ ಅನುಕೂಲವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಮಾತಿಗೆ ಸ್ಥಳದಲ್ಲಿದ್ದ ಇತರರೂ ದನಿಗೂಡಿಸಿ ಕೆಲಕ್ಷಣ ಗದ್ದಲ ಉಂಟು ಮಾಡಿದರು.

ಇದಕ್ಕೆ ಉತ್ತರಿಸಿದ ನರಸಿಂಹಮೂರ್ತಿ, ಒಂದು ವಾರದ ಒಳಗೆ ಮಣಿಗನಹಳ್ಳಿಯ ಹಾಲು ಉತ್ಪಾದಕ ಸಹಕಾರ ಸಂಘದ ಆಡಳಿತ ಮಂಡಳಿಯ ಸಭೆ ಕರೆದು ಸಮಸ್ಯೆಯನ್ನು ಪರಿಹರಿಸುವುದಾಗಿ ತಿಳಿಸಿದರು.

ಮಿಂಚು ಹುಳು: ಕತ್ತಲೆಯಲ್ಲಿ ಬಂದ ಮಿಂಚು ಹುಳು ಕಣ್ಮರೆಯಾಗುವಂತೆ ಚುನಾವಣಾ ಸಮಯದಲ್ಲಿ ಸಮಾಜ ಸೇವೆ ಮಾಡುವ ನೆಪದಲ್ಲಿ ಬರುವ ಎ.ಮಂಜು ಮತ್ತು ಎಚ್.ಎಂ.ಕೃಷ್ಣಮೂರ್ತಿ ಅವರ ಬಗ್ಗೆ ಮತದಾರರು ನಂಬಿಕೆಯಿಟ್ಟಿಲ್ಲ. ಇಡುವುದೂ ಬೇಡ. ಇವರು ನಾಯಕರಲ್ಲ ಮಿಂಚು ಹುಳುಗಳು ಅಷ್ಟೆ ಎಂದು ನರಸಿಂಹಮೂರ್ತಿ ಚುಚ್ಚಿದರು.

ಏಸಪ್ಪನ ಪಾಳ್ಯದ ಜೆ.ಡಿ.ಎಸ್ ಮುಖಂಡ ಗಂಗಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಕಾಗೆ ಓಡಿಸುವವರಿದ್ದಂತೆ. ಅವರನ್ನು ನಂಬುವುದು ಬೇಡ. ಬಾಲಕೃಷ್ಣ ಅವರನ್ನು ಮುಂಬರುವ ಚುನಾವಣೆಯಲ್ಲಿ ಮತ್ತೊಂದು ಬಾರಿ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ನಾರಸಂದ್ರ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಎಚ್. ಸುರೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಶಾಸಕರು ನಮ್ಮ ಆಸ್ತಿ. ಅವರನ್ನು ರಕ್ಷಿಸಿಕೊಳ್ಳುವುದು ಮತದಾರರಾದ ನಮ್ಮ ಧರ್ಮ ಎಂದು ಎಚ್ಚರಿಸಿದರು.

ನಾರಸಂದ್ರ ಗ್ರಾಪಂ ಅಧ್ಯಕ್ಷ ರವಿಕುಮಾರ್ ಮಾತನಾಡಿ, ನಾರಸಂದ್ರ ಗ್ರಾಮದ ಅಭಿವೃದ್ಧಿಗೆ ಶಾಸಕರು ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.

ಗ್ರಾಮದ ಸುರೇಶ್‌ಚಂದ್ರ ಮಾತನಾಡಿ, ದಲಿತ ಕಾಲೋನಿಗೆ ರಸ್ತೆ, ಚರಂಡಿ, ತ್ಯಾರನಪಾಳ್ಯದ ಬಳಿ ಸೇತುವೆ ಕಟ್ಟಿಸಿಕೊಡುವಂತೆ ಮನವಿ ಮಾಡಿದರು.

ಜಿ.ಪಂ ಮಾಜಿ ಸದಸ್ಯ ಶಿವರುದ್ರಯ್ಯ, ವೀರಪ್ಪ, ತಾ.ಪಂ ಸದಸ್ಯೆ ಅನುಸೂಯಮ್ಮ ಮರಿಗೌಡ, ಮಣಿಗನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ರಮೇಶ್, ಭೈರವೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಿದ್ದಲಿಂಗಪ್ಪ, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಕಾರ್ಯದರ್ಶಿ ಪಿ.ಗಂಗಾಧರಯ್ಯ, ಮೃತ್ಯುಂಜಯ, ರಾಜಣ್ಣ, ಉಡುಕುಂಟೆ ಮಂಜುನಾಥ್, ಎ.ಸಿ.ಡಿ.ಪಿ.ಒ ಶಿವಣ್ಣ, ಗ್ರಾ.ಪಂ ಸದಸ್ಯ ಚಿದಾನಂದಮೂರ್ತಿ ಮಾತನಾಡಿದರು.

ಪ್ರಕಾಶ್, ಸಿದ್ದಪ್ಪ, ನಂಜುಂಡಪ್ಪ, ರೇಣುಕಪ್ಪ, ಭೈರಲಿಂಗೇಶ್, ನಿವೃತ್ತ ಶಿರಸ್ತೇದಾರ್ ಬಸವರಾಜು, ಸಿದ್ದರಾಜು, ಚೆನ್ನವೀರಪ್ಪ, ಜಗದೀಶ್, ಕುಮಾರಸ್ವಾಮಿ, ಸುರೇಶ್, ಸಿದ್ದಣ್ಣ, ರಾಜಣ್ಣ, ಪ್ರಸನ್ನ, ನಟರಾಜು, ಸತೀಶ್, ಬಸವರಾಜು, ರೇಣುಕಪ್ಪ, ಅಡವೀಶಯ್ಯ, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಮಾದಿಗೊಂಡನಹಳ್ಳಿ ರಾಮಸ್ವಾಮಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೆ.ಪಿ.ರಂಗಸ್ವಾಮಿ, ನರಸಿಂಹಮೂರ್ತಿ ಹಾಗೂ ಭೈರವೇಶ್ವರ ಸ್ವಾಮಿ ಸೇವಾ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಾಲಕಿ ಉತ್ಸವ: ಭೈರವೇಶ್ವರ ಸ್ವಾಮಿ ವಾರ್ಷಿಕೋತ್ಸವದ ಅಂಗವಾಗಿ ವಿನಾಯಕ, ಆಂಜನೇಯ, ಕರಡಿಗುಚ್ಚಮ್ಮ ದೇವರ ಮೂರ್ತಿಗಳ  ಹೂವಿನ ಪಲ್ಲಕ್ಕಿ ಉತ್ಸವ ವಿವಿಧ ಜಾನಪದ ತಂಡಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಆರತಿ ಉತ್ಸವವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT