ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಕಪ್ಪಗೆ ಟಿಕೆಟ್ ತಪ್ಪಿಸಿದ 2 ಲಕ್ಷ ಟೆಲಿಗ್ರಾಂ

1984–89ರ ಲೋಕಸಭೆ ಚುನಾವಣೆ
Last Updated 29 ಮಾರ್ಚ್ 2014, 10:23 IST
ಅಕ್ಷರ ಗಾತ್ರ

ತುಮಕೂರು: ಚಿತ್ರದುರ್ಗ ಸಂಸದ ಕೆ.ಮಲ್ಲಣ್ಣ, ತುಮಕೂರು ಸಂಸದ ಕೆ.ಲಕ್ಕಪ್ಪ ನಡುವೆ 1984ರಲ್ಲಿ ತುಮಕೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯಿತು. ಕೆಪಿಸಿಸಿ, ಎಐಸಿಸಿಯಲ್ಲಿ ಇಬ್ಬರೂ ಪ್ರಭಾವಿಗಳು.

ಟಿಕೆಟ್‌ಗಾಗಿ ಹಳೆ ಹುಲಿಗಳ ನಡುವಿನ ಕದನ ಯುವಕ ಜಿ.ಎಸ್‌.ಬಸವರಾಜು ಅವರಿಗೆ ವರವಾಯಿತು. ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ, ಎಪಿಎಂಸಿ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದ ಬಸವರಾಜ್‌ಗೆ ಟಿಕೆಟ್‌ ಸಿಕ್ಕಿತು.

ಚುನಾವಣೆಗೂ ಮುನ್ನ ಸ್ಥಳೀಯ ಕಾಂಗ್ರೆಸ್‌ನ ಪ್ರಮುಖರು ಲಕ್ಕಪ್ಪ ವಿರುದ್ಧ ಎಐಸಿಸಿಗೆ 2 ಲಕ್ಷ ಟೆಲಿಗ್ರಾಂ ಸಂದೇಶ ರವಾನಿಸಿದ್ದರು. ಎಲ್ಲವೂ ದೂರುಗಳೇ. ಇದು ಸಹ ಟಿಕೆಟ್‌ ತಪ್ಪಲು ಕಾರಣವಾಯಿತು.

ಕೆ.ಎಚ್‌.ಪಾಟೀಲ್‌ ಕೆಪಿಸಿಸಿ ಅಧ್ಯಕ್ಷರು. ಎಸ್‌.ಎಂ.ಕೃಷ್ಣ ಬಸವರಾಜು ಆಪ್ತರು. ರೆಡ್ಡಿ ಕಾಂಗ್ರೆಸ್‌ನಲ್ಲಿ ಇದ್ದವರು. ಕೆ.ಎಚ್‌.ಪಾಟೀಲ್‌ ಜಿಎಸ್‌ಬಿ ರಾಜಕೀಯ ಗುರು. ಜಿಲ್ಲಾ ಕಾಂಗ್ರೆಸ್‌ ಘಟಕಗಳಲ್ಲಿ ಸಕ್ರಿಯವಾಗಿದ್ದ ಕೆಲ ಅಧ್ಯಕ್ಷರಲ್ಲಿ ಬಸವರಾಜು ಒಬ್ಬರು. ಯುವಕ, ಹೊಸಮುಖದ ಪರ ನಡೆದ ಲಾಬಿಗೆ ಮನ್ನಣೆ ಸಿಕ್ಕಿತು.

ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿತ್ತು. ಚುನಾವಣೆ ಗೆಲ್ಲುವುದು ಜನತಾ ಪಕ್ಷಕ್ಕೆ ಅನಿವಾರ್ಯವಾಗಿತ್ತು. ಸೂಕ್ತ ಅಭ್ಯರ್ಥಿ ಹುಡುಕಾಟ ತೀವ್ರವಾಗಿತ್ತು. 77 ಹಾಗೂ 80ರಲ್ಲಿ ಭಾರತೀಯ ಲೋಕದಳ, ಜನತಾಪಕ್ಷದಿಂದ ಸ್ಪರ್ಧಿಸಿದ್ದ ಎಸ್‌.ಮಲ್ಲಿಕಾರ್ಜುನಯ್ಯ ಜನಸಂಘದ ಜತೆ ಗುರುತಿಸಿಕೊಂಡಿದ್ದರು.

ರಾಜ್ಯ ಗೃಹ ಮಂಡಳಿ ಅಧ್ಯಕ್ಷರಾಗಿದ್ದ ಕುಣಿಗಲ್‌ ಶಾಸಕ ವೈ.ಕೆ.ರಾಮಯ್ಯ ಹೆಸರು ಅಂತಿಮವಾಯಿತು. ಆಗಿನ್ನೂ ರಾಮಯ್ಯ ಹೆಸರು ಜಿಲ್ಲೆಯಲ್ಲಿ ಸದ್ದು ಮಾಡಿರಲಿಲ್ಲ. ನೀರಾವರಿ ಹೋರಾಟಕ್ಕೆ ಚಾಲನೆ ನೀಡಿದ್ದರು. ಒಲ್ಲದ ಮನಸ್ಸಿನಿಂದಲೇ ಲೋಕಸಭೆಗೆ ಸ್ಪರ್ಧಿಸಿದರೂ; ತೀವ್ರ ಪೈಪೋಟಿ ನೀಡಿದರು.

ಒಂಬತ್ತು ಮಂದಿ ಅಖಾಡಕ್ಕಿಳಿದಿದ್ದರೂ; ಸ್ಪರ್ಧೆ ನಡೆದಿದ್ದು ಜಿಎಸ್‌ಬಿ–ವೈಕೆಆರ್‌ ನಡುವೆ. ಬಸವರಾಜು 30410 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ವೈಕೆಆರ್‌ ಪರ ಜನತಾ ಪಕ್ಷದ ಧುರೀಣರು ಪ್ರಚಾರ ನಡೆಸಿದರು. ಚುನಾವಣಾ ವೆಚ್ಚಕ್ಕಾಗಿ ಕುಣಿಗಲ್‌ ಕ್ಷೇತ್ರದ ಜನತೆ ಚಂದಾ ವಸೂಲಿ ಮಾಡಿ ರಾಮಯ್ಯಗೆ ನೀಡಿದ್ದು ಚರಿತ್ರಾರ್ಹ. ಬಸವರಾಜು ಗೆಲುವಿಗೆ ಇಂದಿರಾ ಗಾಂಧಿ ಅಲೆ ಪೂರಕವಾಯಿತು. ಜತೆಗೆ ತಾವು ನಡೆಸುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮವೂ ಕೈಹಿಡಿಯಿತು.

89ರ ಚುನಾವಣೆ ವೇಳೆಗೆ ಅಖಾಡ ರಂಗೇರಿತ್ತು. ಕಾಂಗ್ರೆಸ್‌ ಹಗರಣಗಳ ಕೆಸರು ಮೆತ್ತಿಸಿಕೊಂಡಿತ್ತು. ಕ್ಷೇತ್ರದಲ್ಲಿ ಮತ್ತೆ ಜಿಎಸ್‌ಬಿ–ವೈಕೆಆರ್‌ ಮುಖಾಮುಖಿಯಾದರು. ಬಸವರಾಜು ರಾಜೀವ್‌ಗಾಂಧಿ, ವೀರೇಂದ್ರಪಾಟೀಲರ ಆಪ್ತರಾಗಿ, ಎಐಸಿಸಿಯಲ್ಲಿ ಪ್ರಭಾವಿಯಾದರು. ತಂತ್ರಗಾರಿಕೆ ರೂಪಿಸುವಲ್ಲಿ ನಿಪುಣರಾದರು.

ವೈ.ಕೆ.ರಾಮಯ್ಯ ರಾಜ್ಯ ಸರ್ಕಾರದಲ್ಲಿ ಸಚಿವರಾದರೂ ಜಿಲ್ಲೆಗೆ ಹೇಮೆ ಹರಿಸಲು ಸಾಕಷ್ಟು ಹೋರಾಟ ನಡೆಸಿದರು. ಇಬ್ಬರೂ ಪ್ರಭಾವಿಗಳಾಗಿದ್ದರು. ಕಾಂಗ್ರೆಸ್‌ ಬಿಟ್ಟರೆ ಬೇರೆ ಪಕ್ಷಗಳ ನಾಯಕರಿಗೆ ದಲಿತರ ಕಾಲೊನಿ, ಮುಸ್ಲಿಂರ ಮೊಹಲ್ಲಾಗಳಲ್ಲಿ ಮಾನ್ಯತೆ ಸಿಕ್ಕುತ್ತಿರಲಿಲ್ಲ. ಹೋರಾಟಗಾರನ ಜತೆ ಪ್ರಚಾರಕ್ಕೆ ತೆರಳಿದರೂ; ಮನ್ನಣೆ ನೀಡುತ್ತಿರಲಿಲ್ಲ ಎಂದು ವೈ.ಕೆ.ರಾಮಯ್ಯ ಬೆಂಬಲಿಗ ವೈ.ಎಚ್‌.ಹುಚ್ಚಯ್ಯ ‘ಪ್ರಜಾವಾಣಿ’ ಜತೆ ತಮ್ಮ ನೆನಪು ಹಂಚಿಕೊಂಡರು.

ರಾಜ್ಯದಲ್ಲಿ ವೀರೇಂದ್ರ ಪಾಟೀಲ್‌ ಅಲೆಯಿತ್ತು. ಬಸವರಾಜು ಜನಸಂಪರ್ಕ ಸಾಧಿಸುವ ಕಲೆ ಕರಗತ ಮಾಡಿಕೊಂಡಿದ್ದರು. ವಿರೋಧಿಗಳನ್ನು ಒಲಿಸಿಕೊಳ್ಳುವಲ್ಲಿ ನಿಷ್ಣಾತರಾಗಿದ್ದರು. ತಳಸಮುದಾಯದ ನಾಯಕರ ಜತೆ ಗುರುತಿಸಿಕೊಂಡಿದ್ದರು. ಇವೆಲ್ಲ ಕೆಲಸ ಮಾಡಿದವು.

ಹೇಮಾವತಿ ನೀರಾವರಿಗಾಗಿ ಹೋರಾಟ ನಡೆಸಿದ ಜನ ನಾಯಕನನ್ನು ಬಸವರಾಜು 199138 ಮತಗಳಿಂದ ಮಣಿಸಿ ಎರಡನೇ ಬಾರಿ ಸಂಸದರಾಗಿ ಆಯ್ಕೆಯಾದರು. ರಾಮಯ್ಯ 84ರ ಚುನಾವಣೆಯಲ್ಲಿ 234839 (ಶೇ 45.15) ಮತ ಪಡೆದಿದ್ದರೇ, 89ರಲ್ಲಿ 177740 (ಶೇ 26.37) ಮತ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT