ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷಾಂತರ ಅನುದಾನ ದುರ್ಬಳಕೆ: ತನಿಖೆಗೆ ಆದೇಶ

Last Updated 3 ಅಕ್ಟೋಬರ್ 2011, 6:45 IST
ಅಕ್ಷರ ಗಾತ್ರ

ಬೀದರ್: ಬಸವ ವಸತಿ ಯೋಜನೆಯ ಅಡಿ ಭಾಲ್ಕಿ ತಾಲ್ಲೂಕಿನಲ್ಲಿ ನಕಲಿ `ಪ್ರಗತಿ ವರದಿ~ ದಾಖಲಿಸಿ ಹಣ ಎತ್ತಿ ಹಾಕಿರುವ ಕುರಿತಂತೆ ತನಿಖೆ ನಡೆಸಲಾಗುತ್ತದೆ ಎಂದು ರಾಜೀವ್‌ಗಾಂಧಿ ವಸತಿ ನಿಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ರವಿಕುಮಾರ ತಿಳಿಸಿದರು.

ಈಗಾಗಲೇ ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರಿಗೆ ಹೇಳಿದರು.

ಭಾಲ್ಕಿ ತಾಲ್ಲೂಕಿನಲ್ಲಿ ಪಾಸ್‌ವರ್ಡ್ ಬಳಸಿ ಖೊಟ್ಟಿ ಮಾಹಿತಿ ದಾಖಲಿಸುವ ಮೂಲಕ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಪರಿಶೀಲನೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಯೋಜನೆಯಡಿ ಮುಂದಿನ ದಿನಗಳಲ್ಲಿ ಈ ರೀತಿಯ ಅಕ್ರಮ ನಡೆದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಭಾಲ್ಕಿ ತಾಲ್ಲೂಕಿನಲ್ಲಿ ಯೋಜನೆಯ ಅಡಿ 2,066 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಆನ್‌ಲೈನ್ ಮೂಲಕ ದಾಖಲು ಮಾಡಿರುವ ವರದಿ ಪ್ರಕಾರ 401 ಮನೆಗಳ ತಳಪಾಯ ಆಗಿದೆ. 28 ಮನೆಗಳು ಲೆಂಟಲ್ ಮಟ್ಟಕ್ಕೆ ಬಂದಿವೆ. 7 ಮನೆಗಳು ಪೂರ್ಣಗೊಂಡಿವೆ. ಆದರೆ, ಪರಿಶೀಲನೆ ವೇಳೆ ಪ್ರಗತಿ ವರದಿ ಬೋಗಸ್ ಎನ್ನುವುದು ಗೊತ್ತಾಗಿದೆ ಎಂದು ತಿಳಿಸಿದರು.

ನಿಗಮದ ಪಾಸ್‌ವರ್ಡ್ ಇರುವುದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನೋಡಲ್ ಅಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಳಿ ಮಾತ್ರ. ಆದರೆ, ನಿಗಮಕ್ಕೆ ಕಳುಹಿಸಿದ ಪ್ರಗತಿ ವರದಿ ಬಗ್ಗೆ ಅವರಿಂದ ಸೂಕ್ತ ಮಾಹಿತಿ ಸಿಗುತ್ತಿಲ್ಲ. ಪ್ರಗತಿ ವರದಿ ತಾವು ಕಳಹಿಸಿಲ್ಲ ಎನ್ನುವ ವಾದವೂ ಅವರದ್ದಾಗಿದೆ. ಆದರೆ, ಪಾಸ್‌ವರ್ಡ್ ಸೋರಿಕೆ ಆಗಿದ್ದರಿಂದಲೇ ಈ ಅಕ್ರಮ ನಡೆದಿದೆ ಎಂದು ಹೇಳಿದರು.

ಪಾಸ್‌ವರ್ಡ್ ಸೋರಿಕೆ ಆಗುವಲ್ಲಿ ಯಾರು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ನಿಗಮಕ್ಕೆ ಆನ್‌ಲೈನ್‌ನಲ್ಲಿ ಕಳಹಿಸಲಾದ ಮಾಹಿತಿ ಆಧರಿಸಿ ಒಟ್ಟು 78.62 ಲಕ್ಷ ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಆದರೆ, ಕಾಮಗಾರಿ ಕೈಗೊಳ್ಳದೇ ಕೇವಲ ಪಾಸ್‌ವರ್ಡ್ ಬಳಸಿ, ನಕಲಿ ಪ್ರಗತಿ ವರದಿ ಕಳುಹಿಸಿರುವುದು ದೃಢಪಟ್ಟಿದೆ ಎಂದು ಹೇಳಿದರು.

ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿಯಲ್ಲಿ 50 ಮನೆಗಳ ಫೌಂಡೇಶನ್ ಆಗಿದೆ ಎಂದು ನಿಗಮಕ್ಕೆ ವರದಿ ಬಂದಿದೆ. ಆದರೆ, ವಾಸ್ತವದಲ್ಲಿ ಕೇವಲ 8 ಮನೆಗಳ ಪೌಂಡೇಶನ್ ಆಗಿದೆ. 42 ಫಲಾನುಭವಿಗಳು ಇನ್ನು ಕಾಮಗಾರಿ ಆರಂಭಿಸಿಲ್ಲ. ಎಲ್ಲ ಫಲಾನುಭವಿಗಳ ಖಾತೆಗೆ ಮೊದಲ ಕಂತಾಗಿ ತಲಾ 12,500 ರೂಪಾಯಿ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

ಭಾಲ್ಕಿ ತಾಲ್ಲೂಕಿನ ಜ್ಯಾಂತಿ, ಸಾಯಗಾಂವ್, ಸಿದ್ಧೇಶ್ವರ, ತಳವಾಡ (ಕೆ), ಬ್ಯಾಲಹಳ್ಳಿಯು ಮನೆ ನಿರ್ಮಿಸಿರುವ ಕುರಿತು ಸುಳ್ಳು ಮಾಹಿತಿ ನೀಡಲಾಗಿದೆ. ಮೊದಲ ಹಂತದಲ್ಲಿಯೇ ಅಕ್ರಮ ಬಯಲಾಗಿರುವ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ ಜಿ.ಪಿ.ಎಸ್. ತಂತ್ರಜ್ಞಾನ ಬಳಸಲಾಗುತ್ತದೆ. ಮನೆ ಫೋಟೋ ಬಂದ ಬಳಿಕವೇ ಹಣ ಬಿಡುಗಡೆ ಮಾಡಲಾತ್ತದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿತೇಂದ್ರ ನಾಯಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT