ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಖ್‌ ಗಡಿಯಲ್ಲಿ ಚೀನಾ ಯೋಧರು

Last Updated 20 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಲೇಹ್‌/ ನವದೆಹಲಿ (ಪಿಟಿಐ): ಚೀನಾ ಸೇನೆಯ ಇನ್ನಷ್ಟು ಯೋಧರು ಲಡಾಖ್‌ನ ಚುಮಾರ್‌ ಗಡಿಯಲ್ಲಿ ಶನಿವಾರ ಭಾರತದ ಭೂಪ್ರದೇಶಕ್ಕೆ ನುಗ್ಗಿದ್ದು ಆತಂಕ ಮತ್ತಷ್ಟು ಹೆಚ್ಚಾ­ಗಿದೆ. ಚೀನಾ ಯೋಧರು ಎರಡು ದಿನ­ಗಳ ಅವಧಿಯಲ್ಲಿ ಭಾರತದ ಗಡಿ­ಯೊಳಕ್ಕೆ ಎರಡನೇ ಸಲ ನುಗ್ಗಿದಂತಾಗಿದೆ.

ಚೀನಾದ ಸೇನೆಯ (ಪಿಎಲ್‌ಎ) ಸುಮಾರು 50 ಯೋಧರು ಒಂಬತ್ತು ವಾಹ­ನ­ಗಳಲ್ಲಿ ‘ಪಾಯಿಂಟ್‌ 30 ಆರ್‌’ ಎಂಬ ಪ್ರದೇಶಕ್ಕೆ ನುಗ್ಗಿದರು. ಇದಕ್ಕೆ ಮುನ್ನ  ಚೀನಾದ ಸುಮಾರು 30 ಸೈನಿಕರು  ಶುಕ್ರವಾರದಿಂದಲೇ ಚುಮಾರ್‌ ಪ್ರದೇಶದ ಗುಡ್ಡವೊಂದರ ಮೇಲೆ ಬಿಡಾರ ಹೂಡಿದ್ದರು.

ಚೀನಾದ ಸೈನಿಕರು ಪಾಯಿಂಟ್‌ 30 ಆರ್‌ ಪ್ರದೇಶದಲ್ಲಿ ವಾಹನಗ­ಳಿಂದ ಇಳಿಯುತ್ತಿದ್ದಂತೆಯೇ ಭಾರ­ತೀಯ ಸೇನೆಯಿಂದ ಕೇವಲ 100 ಮೀಟರ್‌ ದೂರದಲ್ಲಿ ಸನ್ನದ್ಧ ಭಂಗಿ­ಯಲ್ಲಿ ನಿಂತರು. ಈ ಮಧ್ಯೆ, ಚೀನಾ ಸೇನೆ  ಗುರು­ವಾರ ರಾತ್ರಿ ಚುಮಾರ್ ಪ್ರದೇಶದಿಂದ ಕಾಲ್ತೆಗೆ­ದರೂ ಭಾರತದ ಸೇನೆ ಅಲ್ಲಿಂದ ಕದಲಿರಲಿಲ್ಲ ಎಂದೂ ಮೂಲಗಳು ತಿಳಿಸಿವೆ.

ಭಾರತದ ಸೇನೆಯು ಚುಮಾರ್‌ನ ವಾಸ್ತವ ಗಡಿ ರೇಖೆಯ ಬಳಿ ವೀಕ್ಷಣಾ ನೆಲೆಯನ್ನು ಹೊಂದಿದ್ದು ಇದು ಚೀನಾದ ಚಲನವಲನಗಳ ಮೇಲೆ ನಿಗಾ ಇಡಲು ಹೆಚ್ಚು ಅನುಕೂಲ­ಕರ­ವಾ­ಗಿದೆ. ಹೀಗಾಗಿ ಈ ಪ್ರದೇಶಕ್ಕೆ ಚೀನಾದ ಪಿಎಲ್‌ಎ ಕೂಡ ಆಗಾಗ ಒಳನುಗ್ಗುತ್ತಲೇ ಇರುತ್ತದೆ.

ಈಗ ಚುಮಾರ್‌ ಪ್ರದೇಶದಲ್ಲಿ ಶುಕ್ರವಾರ ಒಳನುಗ್ಗಿದ 35 ಸೈನಿಕರೂ ಸೇರಿ ಒಟ್ಟು 80ರಿಂದ 90 ಚೀನಾ ಯೋಧರು ಇದ್ದಾರೆ. ಚೀನಾದ ಹೆಲಿ­ಕಾಪ್ಟರ್‌ಗಳು ಇವರಿಗೆ ಆಹಾರದ ಪೊಟ್ಟಣ­ಗಳನ್ನು ಸುರಿಯುತ್ತಿವೆ. ಆದರೆ ಈ ಹೆಲಿಕಾಪ್ಟರ್‌ಗಳು ಭಾರ­ತದ ವಾಯುಗಡಿಯನ್ನು ಉಲ್ಲಂಘಿ­ಸಿಲ್ಲ ಎಂದೂ ಮೂಲಗಳು ಹೇಳಿವೆ.

ಚೀನಾವು ವಾಸ್ತವ ಗಡಿ ರೇಖೆಗೆ ಹೊಂದಿಕೊಂಡಿರುವ ತನ್ನ ನೆಲದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿತ್ತು. ಈ ರಸ್ತೆ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ಕಳೆದ ಭಾನುವಾರ ಭಾರತದ ಗಡಿಯೊಳಕ್ಕೆ ನುಗ್ಗಿ ರಸ್ತೆ ನಿರ್ಮಾಣ ಮಾಡಲು ಮುಂದಾದಾಗ ಭಾರತದ ಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಆಗಿನಿಂದ ಎರಡೂ ರಾಷ್ಟ್ರಗಳ ಸೈನಿಕರ ಮುಖಾಮಖಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT