ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಗಿನ್: ಇ-ಮೇಲ್ಗೆ ಗಾಳ!

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇ-ಮೇಲ್ ಬಾಕ್ಸ್‌ಗೆ ಬಂದು ಕೂತಿರುವ ಮಿಂಚಂಚೆ ಹೇಳುತ್ತದೆ: `ನಿಮ್ಮ ಖಾತೆಯ ಭದ್ರತೆಗೆ ಒಂದಷ್ಟು ಸಮಯ ಕೊಡಿ.~ ಅದು ಕೇಳುವ ಎಲ್ಲ ಪ್ರಶ್ನೆಗೆ ಉತ್ತರ ಕೊಡುತ್ತೀರಿ. `ಧನ್ಯವಾದಗಳು. ನಿಮ್ಮ ಅಕೌಂಟ್ ಸುರಕ್ಷಿತವಾಗಿದೆ!~ ಎಂಬ ಸಂದೇಶ ಪರದೆ ಮೇಲೆ ಮೂಡುತ್ತದೆ.

ಸ್ವಲ್ಪ ಸಮಯದ ಬಳಿಕ ನೋಡಿದಾಗ, ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಎಲ್ಲ ಹಣ ಮಂಗಮಾಯ ಆಗಿರುತ್ತದೆ! ಇದಕ್ಕೆ ಯಾರನ್ನು ದೂರುವುದು? ನೀವೇ ಎಲ್ಲ ವಿವರವನ್ನು ಕೊಟ್ಟಿರುವಾಗ..!

ಬಳಕೆದಾರರನ್ನು ಸುಲಭವಾಗಿ ಮೋಸ ಮಾಡುವ `ಇ-ಮೇಲ್~ಗಳಿಗೆ ಲೆಕ್ಕವಿಲ್ಲ. `ಅಭಿನಂದನೆಗಳು! ನಿಮಗೆ ಹತ್ತು ಲಕ್ಷ ಡಾಲರ್ ಲಾಟರಿ ಬಂದಿದೆ!!~ ಎಂದೋ, `ನಿಮ್ಮ ಬ್ಯಾಂಕ್ ಖಾತೆ ವಿವರ ಕೊಡಿ. ನಾನು ಹಣ ಹಾಕುತ್ತೇನೆ~ ಎಂದೋ ಆಮಿಷವೊಡ್ಡುವ ಹತ್ತಾರು `ಇ-ಮೇಲ್~ಗಳು ಬರುತ್ತಲೇ ಇರುತ್ತವೆ. ಅದನ್ನು ನಂಬಿ ಮೋಸ ಹೋದವರೂ ಇದ್ದಾರೆ.

ಬಳಕೆದಾರರು ಇಂತಹ ಯಾವುದೇ ವಂಚನೆಗೆ ಈಡಾಗದಂತೆ ನೋಡಿಕೊಳ್ಳಲು ಯಾಹೂ, ಗೂಗಲ್, ರೆಡಿಫ್‌ಮೇಲ್, ಫೇಸ್‌ಬುಕ್, ಎಒಎಲ್, ಮೈಕ್ರೊಸಾಫ್ಟ್ ಸೇರಿದಂತೆ ಜಗತ್ತಿನ ಪ್ರಮುಖ 15 `ಇ-ಮೇಲ್~ ಸೇವಾ ಕಂಪೆನಿಗಳು ಸಾಮೂಹಿಕ ಪ್ರಯತ್ನವೊಂದಕ್ಕೆ ಚಾಲನೆ ನೀಡಿವೆ.

 ಸತತ 18 ತಿಂಗಳುಗಳ ಸಂಶೋಧನೆ ಬಳಿಕ, `ಡೊಮೇನ್ ಬೇಸ್ಡ್ ಮೆಸೇಜ್ ಅಥೆಂಟಿಕೇಶನ್, ರಿಪೋರ್ಟಿಂಗ್ ಅಂಡ್ ಕನ್‌ಫಾರ್ಮನ್ಸ್~  (ಡಿಎಂಎಆರ್‌ಸಿ.ಆರ್ಗ್) (which stands for "Domain-based Message Authentication, Reporting & Conformance-DMARC)  ಎಂಬ ವ್ಯವಸ್ಥೆಯೊಂದನ್ನು ರೂಪಿಸಿವೆ.

ಇದರ ನೆರವಿನೊಂದಿಗೆ, ನಕಲಿ ಇ-ಮೇಲ್‌ಗಳನ್ನು ತಡೆಯಬಹುದಾಗಿದೆ. ಅದರಲ್ಲೂ ಇಂಟರ್‌ನೆಟ್, ಇ-ಮೇಲ್ ಅತ್ಯಂತ ಅನಿವಾರ್ಯ ಆಗಿರುವ ಇಂದಿನ ದಿನಗಳಲ್ಲಿ ಇದು ತುರ್ತು ಅಗತ್ಯವೂ ಹೌದು.

`ಒಬ್ಬ ಬಳಕೆದಾರನಿಗೆ ಬೇರೊಂದು ಅಕೌಂಟ್‌ನಿಂದ ಬರುವ ಇ-ಮೇಲ್‌ಗಳನ್ನು ಪರಿಶೋಧಿಸುವುದು. ಅದು ವಂಚನೆಯ ಉದ್ದೇಶದಿಂದ ಬಂದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಸಂಬಂಧಿಸಿದ ಬಳಕೆದಾರನಿಗೆ ತಲುಪಿಸುವುದು ಈ ವ್ಯವಸ್ಥೆಯಲ್ಲಿ ಸೇರಿದೆ~ ಎಂದು `ಡಿಎಂಎಆರ್‌ಸಿ.ಆರ್ಗ್~ ಮುಖ್ಯಸ್ಥ ಬ್ರೆಟ್ ಮ್ಯಾಕ್‌ಡೊವೆಲ್ ಹೇಳುತ್ತಾರೆ.

ತಂತ್ರಜ್ಞಾನದ ಉಪಯೋಗ ಮತ್ತು ಬಳಕೆದಾರನಿಗೆ ಅರಿವು ಕೊಡುವುದು- ಇವೆರಡರ ಜತೆ ಉದ್ದಿಮೆಗಳ ಸಹಕಾರವೂ ಸೇರಿಕೊಂಡರೆ, ಅಂತರ್ಜಾಲದಲ್ಲಿ ನಡೆಯುವ ವಂಚನೆ ತಡೆಯಲು ಸಾಧ್ಯವಿದೆ ಎಂಬುದು ಅವರ ಪ್ರತಿಪಾದನೆ.

ಎಲ್ಲ `ಇ-ಮೇಲ್~ ಸೇವಾ ಕಂಪೆನಿಗಳಿಗೆ `ಡಿಎಂಎಆರ್‌ಸಿ.ಆರ್ಗ್~ ನಿಯಮಾವಳಿ ರೂಪಿಸಿದ್ದು, ತಂತ್ರಜ್ಞಾನದ ನೆರವನ್ನೂ ನೀಡಲಿದೆ. ಇಂದಿನ ದಿನಗಳಲ್ಲಿ ಅಂತರ್ಜಾಲ ಬಳಕೆದಾರರು ತಮಗೆ ಯಾವ ಮೂಲದಿಂದ `ಇ-ಮೇಲ್~ ಬಂದಿದೆ ಎಂಬುದನ್ನು ಗಂಭೀರವಾಗಿ ಗಮನಿಸುವುದೇ ಇಲ್ಲ. ಇದರಿಂದ ಕೊನೆಗೆ ವಂಚನೆಗೆ ಈಡಾಗುವುದು ಅವರೇ. ಇಂಥ ಪರಿಸ್ಥಿತಿಯನ್ನು ತಪ್ಪಿಸಲು ಸ್ವತಃ ಕಂಪೆನಿಗಳು `ಡಿಎಂಎಆರ್‌ಸಿ.ಆರ್ಗ್~ ಮೂಲಕ ಇ-ಮೇಲ್ ಪರಿಶೀಲಿಸಿ, ಅದರ ಉದ್ದೇಶ ಪತ್ತೆ ಹಚ್ಚಿ ಯೋಗ್ಯವಿದ್ದರೆ ಬಳಕೆದಾರನಿಗೆ ತಲುಪಿಸಲಿವೆ.

ಇದಲ್ಲದೇ ಇ-ಮೇಲ್ ಸೌಲಭ್ಯ ಒದಗಿಸುವ ಕಂಪೆನಿಗಳಿಗೆ `ಡಿಎಂಎಆರ್‌ಸಿ.ಆರ್ಗ್~ ಮೂಲಕ ತಂತ್ರಜ್ಞಾನ ಹಾಗೂ ಮಾರ್ಗದರ್ಶನ ಒದಗಿಸಲಾಗುವುದು. ಇದರಿಂದ ಆ ಕಂಪೆನಿಗಳು ತಮ್ಮ ಸೇವಾ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ನೆರವಾಗಲಿದೆ.
ಉದಾಹರಣೆಗೆ, ತನ್ನ ಬ್ಯಾಂಕ್ ಅಕೌಂಟ್, ವೈಯಕ್ತಿಕ ವಿವರಗಳನ್ನು ತಪಾಸಣೆ ಮಾಡುವ ಉದ್ದೇಶದಿಂದ ಮಾಹಿತಿ ಬಯಸಿ ಬರುವ ವಂಚನೆಯ `ಇ-ಮೇಲ್~ಗಳನ್ನು ಇನ್‌ಬಾಕ್ಸ್‌ಗೆ ಬಾರದಂತೆ ಬಳಕೆದಾರನೊಬ್ಬ ಸೇವಾ ಕಂಪೆನಿಗೆ ಮನವಿ ಮಾಡಿಕೊಳ್ಳಬಹುದು. ಇದರ ಅನ್ವಯ ಆ ಕಂಪೆನಿಯು ಅಸಲಿ `ಇ-ಮೇಲ್~ಗಳನ್ನು ಮಾತ್ರ ಪತ್ತೆ ಹಚ್ಚಿ ಬಳಕೆದಾರನಿಗೆ ತಲುಪಿಸುತ್ತದೆ.

ಇದೇ ವೇಳೆ, ಇಂಥ ನಕಲಿ ಮೇಲ್‌ಗಳ ಮೂಲವನ್ನು ಪತ್ತೆ ಹಚ್ಚಿ ಇತರ ಸೇವಾ ಕಂಪೆನಿಗಳಿಗೆ ಮಾಹಿತಿ ರವಾನಿಸುವುದು ಸಹ ಈ ವ್ಯವಸ್ಥೆಯ ವೈಶಿಷ್ಟ್ಯ. ಈ ಮಾಹಿತಿ ಪಡೆಯುವ ವ್ಯವಸ್ಥೆ (feedback)  ಉಳಿದ ಕಂಪೆನಿಗಳಿಗೂ ಗೊತ್ತಾದರೆ, ಅಷ್ಟರ ಮಟ್ಟಿಗೆ ವಂಚನೆಯ ಜಾಲಕ್ಕೆ ತಡೆ ಬೀಳಲಿದೆ.

`ನಮ್ಮದು ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದ ಸೇವೆಗಳನ್ನು ಬಳಕೆದಾರನಿಗೆ ನೀಡುವ ಸಂಸ್ಥೆ. ನಮ್ಮ ಗ್ರಾಹಕರು ಆಗಾಗ್ಗೆ ನಕಲಿ `ಇ-ಮೇಲ್~ಗಳಿಂದ ಮೋಸ ಹೋಗಿದ್ದೂ ಇದೆ. ಈಗ ನಮ್ಮಂಥ ಹಲವು ಕಂಪೆನಿಗಳು ಒಟ್ಟಾಗಿ ಸೇರಿ ರೂಪಿಸಿದ `ಡಿಎಂಎಆರ್‌ಸಿ.ಆರ್ಗ್~ನಿಂದ ವಂಚನೆಯ ಪ್ರಮಾಣ ತೀವ್ರವಾಗಿ ಇಳಿಮುಖವಾಗುವ ಆಶಾಭಾವ ನಮ್ಮದು” ಎಂದು ಫೈನಾನ್ಸಿಯಲ್ ಸರ್ವೀಸೆಸ್ ರೌಂಡ್‌ಟೇಬಲ್ ಕಂಪೆನಿಯ ಮುಖ್ಯಸ್ಥ ಪಾಲ್ ಸ್ಮೊಸರ್ ಸಂತಸ ವ್ಯಕ್ತಪಡಿಸುತ್ತಾರೆ.

ಪ್ರಸ್ತುತ ಈ ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆ ಮಾಡಲಾಗುತ್ತಿದೆ. ಬಳಕೆಯ ಸಂದರ್ಭದಲ್ಲಿ ಕಂಡುಬರುವ ಲೋಪದೋಷಗಳನ್ನು ಪರಿಹರಿಸಿ, ಇ-ಮೇಲ್ ಸೇವಾ ಕಂಪೆನಿಗಳಿಗೆ ಕೊಡುವ ಉದ್ದೇಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT