ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ-ಜೀಪ್ ಮುಖಾಮುಖಿ: 13 ಸಾವು

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಜೇವರ್ಗಿ (ಗುಲ್ಬರ್ಗ ಜಿ.): ಅಂತ್ಯಸಂಸ್ಕಾರ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಒಂದೇ ಗ್ರಾಮದ 13 ಸೋದರ ಸಂಬಂಧಿಗಳು ಲಾರಿ- ಜೀಪು ಮುಖಾಮುಖಿಯಾಗಿ ಸ್ಥಳದಲ್ಲೇ ಅಸುನೀಗಿದ ಘಟನೆ ರಾಷ್ಟ್ರೀಯ ಹೆದ್ದಾರಿ 218ರ ಸೊನ್ನ ಕ್ರಾಸ್-ಹಿಪ್ಪರಗಿ ಮಧ್ಯೆ ಶುಕ್ರವಾರ ರಾತ್ರಿ ನಡೆದಿದೆ. ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಜೇವರ್ಗಿಯಿಂದ 17 ಕಿ.ಮೀ. ದೂರದ ಹರನೂರ ಗ್ರಾಮಕ್ಕೆ ಸೇರಿದ 20 ಮಂದಿ ಶುಕ್ರವಾರ ಬೆಳಿಗ್ಗೆ  ವಿಜಾಪುರ ತಾಲ್ಲೂಕಿನ ಯರಗಲ್ ಗ್ರಾಮದಲ್ಲಿ ಸಂಬಂಧಿಕರ ಅಂತ್ಯಸಂಸ್ಕಾರಕ್ಕೆ ತೆರಳಿದ್ದರು.

ಸಂಜೆ ಹಿಂತಿರುಗುವ  ವೇಳೆ ಶಹಾಬಾದ್‌ನಿಂದ ಪರ್ಸಿ ಕಲ್ಲು ತುಂಬಿಕೊಂಡು ವಿಜಾಪುರಕ್ಕೆ ಹೋಗುತ್ತಿದ್ದ ಲಾರಿಗೆ ಮುಖಾಮುಖಿಯಾಗಿದೆ. ಡಿಕ್ಕಿಯ ವೇಗಕ್ಕೆ ಜೀಪ್ ನಜ್ಜುಗುಜ್ಜಾಗಿ ಪಕ್ಕದ ಹೊಲಕ್ಕೆ ಉರುಳಿ ಬಿದ್ದಿತು. ಮೃತ ಐದು ಮಂದಿಯ ದೇಹವು ರಸ್ತೆಗೆ ಬಿದ್ದರೆ ಏಳು ಮಂದಿಯ ದೇಹದ ಅವಯವಗಳು ಜೀಪಿನ ಬಿಡಿಭಾಗದೊಂದಿಗೆ ಜಜ್ಜಿ ಹೋಗಿವೆ. ಒಬ್ಬರ ದೇಹವು ಹೊಲಕ್ಕೆ ಹೋಗಿ ಬಿದ್ದಿದೆ. ಅವಘಡ ಸಂಭವಿಸಿದ ವೇಳೆ ಮಳೆ ಸುರಿಯಲು ಆರಂಭಿಸಿತ್ತು.

ಹೀಗಾಗಿ ಉಳಿದವರ ಜೀವ ರಕ್ಷಿಸುವ ಕಾರ್ಯವೂ ಕಷ್ಟಕರವಾಗಿತ್ತು. 12 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗಂಭೀರವಾಗಿ ಗಾಯಗೊಂಡವರನ್ನು ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಜೀಪ್ ಚಾಲಕ ಯಲ್ಲಪ್ಪ ಶರಣಪ್ಪ ರಾಜಪುರ (40), ಸಾವಿತ್ರಿ ಯಲ್ಲಪ್ಪ (35), ಸಕ್ರೆಪ್ಪ ಹುಲೇಪ್ಪ ಚನಗುಂಡಿ (50), ನಾಗಪ್ಪ ಹುಲೇಪ್ಪ ಚನಗುಂಡಿ (45), ಸಕ್ರವ್ವ ಶಂಕ್ರಪ್ಪ ಚನಗುಂಡಿ (50), ಶಂಕ್ರಪ್ಪ ಶರಣಪ್ಪ ಸಾಸಾಬಾಳ (45), ಯಮನಪ್ಪ ಚಂದ್ರಾಮ (30), ಅಯ್ಯವ್ವ ವೀರಪ್ಪ (55), ಅವಮ್ಮ ಶೇಖಪ್ಪ ಮುದನೂರ (50), ಚಂದ್ರಪ್ಪ ಸಕ್ರೆಪ್ಪ ಪೂಜಾರಿ (50), ಸಿದ್ದವ್ವ ಕರೇಪ್ಪ ಪೂಜಾರಿ (30) ಮತ್ತು ಲಕ್ಷ್ಮೀಬಾಯಿ ದೊಡ್ಡ ಯಲ್ಲಪ್ಪ ಗೋಗಿ (50) ಮೃತಪಟ್ಟವರು. ಮೃತಪಟ್ಟ ಇನ್ನೊಬ್ಬ ಮಹಿಳೆಯ ಹೆಸರು ತಿಳಿದುಬಂದಿಲ್ಲ.

ಶಾಸಕ ದೊಡ್ಡಪ್ಪಗೌಡ ನರಿಬೋಳ, ಜಿಲ್ಲಾಧಿಕಾರಿ ಪ್ರಸನ್ನಕುಮಾರ್, ಎಸ್ಪಿ ಪ್ರವೀಣ್ ಮಧುಕರ್ ಪವಾರ್, ಹೆಚ್ಚುವರಿ ಎಸ್ಪಿ ಕಾಶೀನಾಥ ತಳಕೇರಿ, ಡಿವೈಎಸ್ಪಿ ತಿಮ್ಮಪ್ಪ, ಜೇವರ್ಗಿ ಸಿಪಿಐ ರಾಮಣ್ಣ ಸಾವಳಗಿ, ತಹಸೀಲ್ದಾರ್ ಡಿ.ವೈ. ಪಾಟೀಲ್, ನೇಲೋಗಿ ಎಸ್‌ಐ ಲಕ್ಷ್ಮಣ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿದ್ದರು.

ಮಾನವೀಯತೆ
:  ಬಸವರಾಜ ಪಾಟೀಲ ನರಿಬೋಳ, ಶಿವಾನಂದ ಮಾಕ, ಬೈಲಪ್ಪ ನೇಲೋಗಿ, ವಿಜಯಕುಮಾರ್ ಬಿರಾದಾರ್, ರೇವಣಸಿದ್ಧಪ್ಪ ಸಂಕಾಲಿ, ಎಸ್.ಎಸ್.ಸಲಗರ, ರಾಜಶೇಖರ ಸೀರಿ ಹಾಗೂ ಸೊನ್ನ, ಹಿಪ್ಪರಗಿ, ಹರನೂರ ಗ್ರಾಮಸ್ಥರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT