ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಸಮಾನತೆ ಪ್ರಶ್ನೆಗೆ ಉತ್ತರ ಹುಡುಕುವ ಯತ್ನ

ರಂಗಭೂಮಿ
Last Updated 6 ಮೇ 2016, 19:30 IST
ಅಕ್ಷರ ಗಾತ್ರ

ಸ್ತ್ರೀ-ಪುರುಷರ ನಡುವಿನ ಲಿಂಗ ತಾರತಮ್ಯದ ಪಕ್ಷಪಾತ ಭಾವ ಇಂದು ನಿನ್ನೆಯದಲ್ಲ. ಅನೇಕ ಶತಮಾನಗಳಿಂದಲೂ ಸಮಾಜದಲ್ಲಿ ನಡೆದುಕೊಂಡು ಬಂದಿರುವ ಲಿಂಗಾಧಾರಿತ ವ್ಯತ್ಯಾಸ, ಮಹಿಳೆಯರ ಸಾಮರ್ಥ್ಯದ ಬಗ್ಗೆ ಇರುವ ಪೂರ್ವಗ್ರಹ ದೃಷ್ಟಿ ಹೊಸದೇನಲ್ಲ.

ಆಕೆಯ ಶಕ್ತಿಯ ಕಂಡು ಭೀತಿಯೋ ಅಥವಾ ಅಧೈರ್ಯದ ಕೀಳರಿಮೆಯೋ, ತನ್ನನ್ನು ಮೀರಿಸಬಾರದೆಂಬ ಮತ್ಸರವೋ, ಅವಳ ಮುನ್ನಡೆಯ ಪ್ರಯೋಗಗಳಿಗೆ ಪುರುಷಾಹಂಕಾರ ಅಡ್ಡಗಾಲಾಗುತ್ತಲೇ ಬಂದಿರುವುದು ಇತಿಹಾಸ. ಇಂದು ಎಲ್ಲೆಲ್ಲೂ ಪ್ರಚಾರದಲ್ಲಿರುವ ‘ಅಸಹಿಷ್ಣುತೆ' ಎಂಬ ಭಾವದ ಬೇರು ಇಲ್ಲೇ ಅಡಗಿದೆ.

ಹೆಣ್ಣಿನ ಪ್ರಾತಿನಿಧ್ಯವನ್ನು ಸಹಿಸದ ಪುರುಷ ಸಮಾಜದ ಪ್ರತೀಕವಾಗಿ, ಛಲಬಿಡದ ಅವಳ ಹೋರಾಟದ ಪ್ರಯೋಗವಾಗಿ ರೂಪುತಳೆದ ನಾಟಕ ‘ಅಕ್ಷಯಾಂಬರ’ ಇತ್ತೀಚೆಗೆ ‘ರಂಗಶಂಕರ’ದಲ್ಲಿ ಪ್ರದರ್ಶನಗೊಂಡಿತು.

‘ಡ್ರಾಮಾನಾನ್’ ತಂಡ ಪ್ರದರ್ಶಿಸಿದ ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನದ ಹೊಣೆ ಹೊತ್ತವರು ಶರಣ್ಯಾ ರಾಮ್‌ಪ್ರಕಾಶ್, ಸಹ ನಿರ್ದೇಶನ ಸುರಭಿ ಹೆರೂರು.

ನಾಟಕದಲ್ಲಿರುವುದು ಎರಡೇ ಪಾತ್ರ. ಆದರೆ ನಾಟಕ ಎಲ್ಲೂ ಬೇಸರ ತರಿಸಲಿಲ್ಲ. ನಟರ ವೈವಿಧ್ಯಮಯ ಅಭಿನಯ, ಕಣ್ತಣಿಸುವ ವಸ್ತ್ರವಿನ್ಯಾಸ, ಕುತೂಹಲ ಕಾಯ್ದುಕೊಳ್ಳುವ ರಂಗಸಜ್ಜಿಕೆ, ವಿವಿಧ ರಂಗಪರಿಕರಗಳು ನಾಟಕಕ್ಕೆ ಹೊಸ ಕಳೆ ನೀಡಿತು.

ನಿರ್ದೇಶಕಿಯ ಸೂಕ್ಷ್ಮಪ್ರಜ್ಞೆ, ಚಾಕಚಕ್ಯತೆ, ಇಡೀ ನಾಟಕವನ್ನು ಆವರಿಸಿಕೊಂಡಿತ್ತು. ಚುರುಕಿನ ಸಂಭಾಷಣೆ, ರಂಗದ ಚೌಕಟ್ಟಿನ ಪರಿಧಿಯೊಳಗಿನ ಕರಾರುವಾಕ್ ಚಲನೆ, ನಿಶಬ್ದ ಹುಟ್ಟುಹಾಕುವ ಅರ್ಥವಂತಿಕೆ ಗಮನ ಸೆಳೆದವು.

ರಂಗದ ನೋಟ ಪ್ರೇಕ್ಷಕರಿಗೆ ತೆರೆದುಕೊಂಡಾಗ, ಎದುರಿಗಿದ್ದ ರಂಗಪರಿಕರಗಳು ಅವ್ಯಕ್ತ ಕಥೆಯೊಂದನ್ನು ಉಸುರತೊಡಗಿದ್ದವು. ಎಡಬದಿಯ ತುದಿಯಲ್ಲೊಂದು ತಗಡಿನ ಪೆಟ್ಟಿಗೆ, ಮುಂದೆ ಕೈಗನ್ನಡಿ, ಅಕ್ಕಪಕ್ಕ ಅಸ್ತವ್ಯಸ್ತವಾಗಿ ಹರಡಿಬಿದ್ದಿದ್ದ ಸೀರೆ, ಕುಪ್ಪುಸ, ಬಟ್ಟೆ-ಬರೆ, ಜೊತೆಗೆ, ತುರುಬು, ಚೌರಿ ಮತ್ತಿತರ ಆಭರಣಗಳು.

ಬಲತುದಿಯಲ್ಲೂ ಇಂಥದೇ ಜೋಡಣೆಗಳು. ಎದುರಿಗಿದ್ದ ದೊಡ್ಡ ಎರಡು ನಿಲುವುಗನ್ನಡಿಗಳ ಮುಂದೆಯೂ ಇವೇ. ಇಕ್ಕೆಲದಲ್ಲಿ ಸಣ್ಣಬುಡ್ಡಿ (ವಿದ್ಯುತ್ ದೀಪ) ಕಂಡವರು ಯಕ್ಷಗಾನದ ರಂಗ ಸಜ್ಜಿಕೆ ನೆನಪಿಸಿಕೊಂಡರು.

ಮೊದಲ ದೃಶ್ಯದಿಂದಲೇ ಆಸಕ್ತಿ ಮೂಡಿಸುತ್ತಾ ಸಾಗಿದ ನಾಟಕ, ಅಂತ್ಯ ಕಂಡದ್ದೇ ಅರಿವಿಗೆ ಬರಲಿಲ್ಲ. ಅಷ್ಟರಮಟ್ಟಿಗೆ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು.

ದ್ರೌಪದಿಯ ವೇಷಧಾರಿಯಾಗಿದ್ದ ನಟನೊಬ್ಬ ಸಾವಕಾಶವಾಗಿ ಪದ್ಯ ಹಾಡಿಕೊಳ್ಳುತ್ತ, ತನ್ನ ಅರೆಬೆತ್ತಲೆ ದೇಹವನ್ನು ನಾಜೂಕಾಗಿ ನೆರಿಗೆ ಹೆಣೆದ ಸೀರೆ, ಕುಪ್ಪುಸ, ಆಭರಣಗಳಿಂದ ಸಿಂಗರಿಸಿಕೊಳ್ಳುವ ಲಾಸ್ಯದಲ್ಲಿ ಅವನ ಮೊಗದಲ್ಲೊಂದು ಗರ್ವದ ಅಟ್ಟಹಾಸ ನವಿರಾಗಿ ಹಾದುಹೋಗುತ್ತದೆ.

ಸ್ತ್ರೀವೇಷದಲ್ಲಿ ತನ್ನನ್ನು ಬಿಟ್ಟರಿಲ್ಲ ಎಂಬ ಅಹಂ ಇಣುಕುತ್ತದೆ. ಆಟಕ್ಕೆ ಸಿದ್ಧವಾಗುತ್ತಿರುವ ವೇಳೆಗೆ ‘ಆಕೆ’ಯ ಪ್ರವೇಶವಾಗುತ್ತದೆ. ದುರ್ಯೋಧನನ ವೇಷಹಾಕಲು ಮೇಳಕ್ಕೆ ಹೊಸದಾಗಿ ಸೇರ್ಪಡೆಯಾದ ನಟಿಯವಳು. ಹೆಂಗಸು, ಗಂಡಸಿನ ಪಾತ್ರ ಮಾಡುತ್ತಾಳೆ ಎಂಬ ಕಲ್ಪನೆಯನ್ನೂ ಸಹಿಸಲಾರದ ನಟ ಆಕೆಯನ್ನು ಬಣ್ಣ ಹಚ್ಚಿಕೊಳ್ಳುವ ಮೊದಲೇ ಹಿಮ್ಮೆಟ್ಟಿಸಲು ಯತ್ನಿಸುತ್ತಾನೆ.

ಛಲದಂಕಮಲ್ಲ ದುರ್ಯೋಧನನಂತೆಯೇ ಹಟವಾದಿಯಾದ ಅವಳು ನಿರುತ್ಸಾಹಗೊಳ್ಳದೆ, ವೇಷತೊಟ್ಟು ಚೌಕಿಯಿಂದ ರಂಗಸ್ಥಳಕ್ಕೆ ನೆಗೆದು ಕೌರವನಾಗಿ ಆರ್ಭಟಿಸುತ್ತಾಳೆ. ಪಾಂಡವರ ದೌರ್ಬಲ್ಯಗಳನ್ನು ಒಂದೊಂದಾಗಿ ಎತ್ತಾಡುತ್ತ, ತೇಜೋವಧೆಯನ್ನು ಮಾಡಿದಾಗ ದ್ರೌಪದಿಯೊಳಗಿನ ನಟ ಕೆರಳಿ, ಅದು ಆಟವೆಂಬುದನ್ನೂ ಮರೆತು, ನಟಿಯ ಇತಿಮಿತಿಗಳ ಬಗ್ಗೆ ಕಟಕಿಯಾಡಿ, ಮೇಳದಿಂದಾಚೆ ಹೊರಗಟ್ಟುವ ಕಟುನುಡಿಗಳನ್ನಾಡುತ್ತಾನೆ.

ಇದ್ಯಾವುದಕ್ಕೂ ಜಗ್ಗದ-ಕುಗ್ಗದ ನಟಿ ನಿಜವಾದ ಕೌರವನಾಗಿ ಬೊಬ್ಬಿರಿದು, ದುಸ್ಯಾಸನನಾಗಿ ದ್ರೌಪದಿಯ ‘ಅಕ್ಷಯಾಂಬರ’ವನ್ನು ಸೆಳೆದು ರಂಗದ ಮಧ್ಯೆ ಬೆತ್ತಲಾಗಿಸುವ ಮೂಲಕ ಅವನ ಪುರುಷಾಹಂಕಾರವನ್ನು ಮುರಿದು, ಅವನ ಪೊಳ್ಳುದರ್ಪ, ಪೂರ್ವಾಗ್ರಹ ಅಭಿಪ್ರಾಯವನ್ನು ನುಚ್ಚುನೂರಾಗಿಸಿ ಅವನ ಮೈಗಂಟಿದ್ದ ಸುಳ್ಳಿನಬಟ್ಟೆಯನ್ನು ಕಳಚಿ ಸತ್ಯದ ಬೆಳಕಲ್ಲಿ ಬೆತ್ತಲು ಮಾಡುವ ಮೂಲಕ ವಿಜಯಿಯಾಗುತ್ತಾಳೆ. ಸುಮಾರು 800 ವರ್ಷಗಳ ಇತಿಹಾಸವಿರುವ ಯಕ್ಷಗಾನದಂಥ ವೃತ್ತಿಪರ ಕಲೆಯಲ್ಲಿ ಹೆಂಗಸರು ಪ್ರವೇಶ ಪಡೆದರೆ ಪರಿಸ್ಥಿತಿ, ಪ್ರತಿಕ್ರಿಯೆಗಳು ಹೇಗಿದ್ದೀತು? ಎಂಬ ಪ್ರಶ್ನೆಯನ್ನು ನಾಟಕ ಕೇಳುತ್ತದೆ.

ಪುರುಷ ಸ್ಥಾಪಿತ ಕ್ಷೇತ್ರಗಳಲ್ಲಿ ಗಂಡಿನ ಹಿಡಿತ, ಸ್ವಾಮ್ಯ ಮನೋಭಾವ, ಸಂಕುಚಿತ ಧೋರಣೆಗಳನ್ನು ಎತ್ತಿ ತೋರಿಸುತ್ತದೆ. ಇದೇ ನಾಟಕದ ಆಶಯ.
ವೇಷದಲ್ಲಿ ಗಂಡು ಹೆಣ್ಣಾಗುವುದಾದರೆ, ಹೆಣ್ಣೇಕೆ ಗಂಡಾಗಬಾರದು ಎಂಬ ಸೈದ್ಧಾಂತಿಕ ತರ್ಕವನ್ನು ನಾಟಕ ಪ್ರೇಕ್ಷಕರ ಮುಂದಿಡುತ್ತದೆ.

ಪಾರಂಪರಿಕವಾಗಿ ಯಕ್ಷಗಾನದಲ್ಲಿ ಗಂಡು ಸ್ತ್ರೀವೇಷ ಹಾಕುವುದು ಒಪ್ಪಿತ ಪದ್ಧತಿ. ನಟಿಯೊಬ್ಬಳು ಗಂಡು ವೇಷ ಹಾಕಬಾರದೇಕೆ ಎನ್ನುವುದು ನಟಿ ನಮ್ಮ ಮುಂದಿಡುವ ಪ್ರಶ್ನೆ. ಪುರುಷನೆಷ್ಟೇ ಪ್ರತಿರೋಧ ಒಡ್ಡಿದರೂ, ಮಹಿಳೆ ತನ್ನ ಪಾತ್ರ ನಿರ್ವಹಣೆಯಲ್ಲಿ ಯಶಸ್ವಿಯಾಗುವುದೇ ನಾಟಕದ ಸ್ವಾರಸ್ಯ.
ಸಮಾನತೆಯ ಪ್ರತಿಪಾದನೆಯನ್ನು ನಾಟಕಕಾರ್ತಿ ಹಾಗೂ ನಿರ್ದೇಶಕಿ ಶರಣ್ಯಾ ನಾಟಕದುದ್ದಕ್ಕೂ ಹಂತಹಂತವಾಗಿ ಗಟ್ಟಿಗೊಳಿಸುತ್ತಲೇ ಹೋಗುತ್ತಾರೆ.

ಅಭಿಮನ್ಯು ಪಾತ್ರಕ್ಕಾಗಿ ಹಾತೊರೆದ ನಟ, ಸ್ತ್ರೀವೇಷದಿಂದ ಹೊರಬರಲಾರದ ನಿರಾಶೆಯ ಸನ್ನಿವೇಶದಲ್ಲಿ ಅವನ ಗರ್ವಭಂಗ ಮಾಡುವ ಯತ್ನವೂ ಇದೆ. ಅವನ ಈ ಭಾವದೊತ್ತಡ ಸಹನಟಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವಷ್ಟರಮಟ್ಟಿಗೆ ಉದ್ರೇಕಗೊಳ್ಳುತ್ತದೆ ಎಂಬುದು ಮನೋ ವಿಜ್ಞಾನದ ಆಯಾಮದಲ್ಲಿಯೂ ವಿಶ್ಲೇಷಿಸತಕ್ಕ ವಿಚಾರ.

ನಾಟಕದಲ್ಲಿ ಯಕ್ಷಗಾನ ಮಾಧ್ಯಮ ಒಂದು  ನೆಪ ಮಾತ್ರ. ಆಧುನಿಕ ನಾಟಕದ ಪರಿಕರಗಳು ಮತ್ತು ಯಕ್ಷಗಾನದ ಕಲಾಪ್ರಕಾರವನ್ನು ಬಳಸಿಕೊಂಡು ಪುರುಷಾಧಿಕಾರದ ನೆಲೆಗಳನ್ನು ಪ್ರಶ್ನಿಸುತ್ತ ಹೋಗುವುದು ನಾಟಕದ ಬಹುತೇಕ ದೃಶ್ಯಗಳಲ್ಲಿ ಕಣ್ಣಿಗೆ ಬೀಳುತ್ತದೆ.

ನಾಟಕದ ನಿರ್ವಹಣೆ ಅಚ್ಚುಕಟ್ಟಾಗಿತ್ತು. ತಾಲೀಮಿನ ಶಿಸ್ತು ಎದ್ದು ಕಾಣುತ್ತಿತ್ತು. ನಟನ (ಪ್ರಸಾದ್ ಚೆರ್ಕಾಡಿ) ಹೆರಳಸಿಂಗಾರ, ಸೀರೆ-ಒಡವೆಗಳ ಧಾರಣೆಯಲ್ಲಿ ತೋರುತ್ತಿದ್ದ ಸೂಕ್ಷ್ಮಗಾರಿಕೆ, ಆಂಗಿಕಭಾಷೆ, ಪರಿಪಕ್ವ ಅಭಿನಯ, ನಡುನಡುವೆ ಸೈಡ್‌ವಿಂಗ್‌ನತ್ತ ತಿರುಗಿ ತುಳುಭಾಷೆಯಲ್ಲಿ ಸಣ್ಣದನಿಯಲ್ಲಿ ಗೊಣಗಾಡುತ್ತಿದ್ದ ರೀತಿ ಸೊಗಸಾಗಿತ್ತು.

ಇದ್ದಕ್ಕಿದ್ದ ಹಾಗೆ ಚಾವಣಿಯಿಂದ ಇಳಿಬಿದ್ದ ಬೃಹದಾಕಾರದ ತೆರೆಯಮೇಲೆ ಮೂಡಿದ ಕೌರವನ ದೈತ್ಯ ಕುಣಿತದ ಪರಿಕಲ್ಪನೆ ಅದ್ಭುತವಾಗಿತ್ತು. ಚೌಕಿಯಲ್ಲಿನ (ನೇಪಥ್ಯ) ನಟ-ನಟಿಯರ ವಾಗ್ವಾದ, ರಂಗಸ್ಥಳದಲ್ಲಿನ ಕುಣಿತ-ಹೆಜ್ಜೆಗಾರಿಕೆ, ಅಭಿನಯ ಮನೋಜ್ಞವಾಗಿತ್ತು.

ನಟಿಯ (ಶರಣ್ಯಾ) ಆಂಗಿಕಾಭಿನಯ ಆಕರ್ಷಕವಾಗಿತ್ತು. ಆದರೆ ಅದು ಸಂಭಾಷಣೆಯಲ್ಲಿ ವ್ಯಕ್ತವಾಗಲಿಲ್ಲ. ನಟಿಯ ವ್ಯಕ್ತಿತ್ವ ಎಷ್ಟು ಗಟ್ಟಿ ಎಂಬುದನ್ನು ನಿರೂಪಿಸಲು ಮತ್ತವಳ ದನಿ ದಮನಾತೀತ ಎಂಬುದನ್ನು ತೋರಿಸಲು ನಾಟಕದಲ್ಲಿ ಮೊಬೈಲ್‌ಗಳ ಮೊರೆತ ಬಳಸಲಾಯಿತು. ಹೆಣ್ಣಿನ ಪ್ರತಿಭೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಸಾಂಕೇತಿಕವಾಗಿ ಅಭಿವ್ಯಕ್ತಿಸಿರುವ ಬಗೆ ಅನನ್ಯವಾಗಿತ್ತು.

ಹೆಣ್ಣಿಗೆ ಯಾವುದೂ ಅಸಾಧ್ಯವಲ್ಲ, ಅವಳನ್ನೇಕೆ ಯಕ್ಷಗಾನ ಕಲೆಯಲ್ಲಿ ಗಂಡುಪಾತ್ರಗಳಿಗೆ ಒಪ್ಪಿಕೊಳ್ಳುವುದಿಲ್ಲವೆಂದು ನಟಿ ಆಕ್ಷೇಪಿಸಿದರೂ, ಆಟದಲ್ಲಿ ಮಾತ್ರ, ನಟ ಸಂಪೂರ್ಣ ಹೆಣ್ಣಾಗಿ ಸ್ತ್ರೀ ಪಾತ್ರವನ್ನು ಆವಾಹಿಸಿಕೊಂಡಷ್ಟು, ನಟಿ ಪುರುಷ ಪಾತ್ರದ ಆವಾಹನೆ ಮಾಡಿಕೊಳ್ಳಲಿಲ್ಲ ಎನಿಸಿತು.

ಮಿಕ್ಕಂತೆ ನಾಟಕದ ಬೆಳಕಿನ ಆಟ, ಹಿನ್ನೆಲೆಯ ಚಂಡೆ-ಪದ್ಯಗಳ ಗಾಯನ ನಾಟಕದ ವರ್ಚಸ್ಸು ಹೆಚ್ಚಿಸಿತ್ತು. ಸಂಭಾಷಣೆ, ರಂಗಕ್ರಿಯೆ ಮತ್ತು ಆಂಗಿಕಾಭಿನಯದ ನಡುವಿನ ‘ಟೈಮಿಂಗ್’ ಬೆರಗುಗೊಳ್ಳುವಷ್ಟು ಪರಿಪೂರ್ಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT