ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ವಿರೋಧಿಯಲ್ಲ: ದೇವೇಗೌಡ

Last Updated 19 ಜೂನ್ 2011, 10:00 IST
ಅಕ್ಷರ ಗಾತ್ರ

ಬಾಗಲಕೋಟೆ: `ನನ್ನನ್ನು ಲಿಂಗಾಯತ ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ, ನಾನು ಲಿಂಗಾಯತ ವಿರೋಧಿಯಲ್ಲ~ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ಮುಧೋಳ ತಾಲ್ಲೂಕಿನ ಪೆಟ್ಲೂರ ಗ್ರಾಮದಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿಯವರು ತಮ್ಮ ಮನೆಯೊಳಗೆ ಕಳ್ಳನನ್ನು ಇಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಇವರಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ನೈತಿಕ ಹಕ್ಕಿಲ್ಲ, ಭ್ರಷ್ಟಾಚಾರದಲ್ಲಿ ತೊಡಗಿರುವ ಯಡಿಯೂರಪ್ಪ ಅವರನ್ನು ಮುಟ್ಟಲು ಬಿಜೆಪಿ ಹಿರಿಯ ಮುಖಂಡರಿಗೆ ಆಗುತ್ತಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿಗೆ ಹಳ್ಳಿಗಳ ಬಗ್ಗೆ ಚಿಂತನೆ ಇಲ್ಲ, 2ಜಿ ಹಗರಣದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಅನ್ನು ಜನ ನಂಬುವುದಾದರೂ ಹೇಗೆ? ಎಂದು ಪ್ರಶ್ನಿಸಿದ ಅವರು ಅವಕಾಶ ಸಿಕ್ಕಾಗ ದುಡ್ಡು ಬಾಚಬೇಕೆಂದು ನಿರ್ಧರಿಸಿರುವ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ, ಅನೇಖರು ಜೈಲಿಗೆ ಹೋಗಲಿದ್ದಾರೆ ಎಂದರು.

ರಾಜ್ಯ ಬಿಜೆಪಿ ಸರ್ಕಾರ ಶೇ.1ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುತ್ತಿರುವುದಾಗಿ ಹೇಳುತ್ತಿದೆ. ಆದರೆ ಇದುವರೆಗೂ ಯಾವೊಬ್ಬ ರೈತರಿಗೂ ಈ ಸೌಲಭ್ಯ ಸಿಕ್ಕಿಲ್ಲ, ಬಡ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ನೀಡುವ ಬದಲು 110 ರೂಪಾಯಿ ಸೀರೆಗೆ 230 ರೂಪಾಯಿ ಬಿಲ್ ಹಾಕಿಸಿ ವಿತರಿಸಿ, ಮತ ನನಗೆ ಹಾಕಿ ಎಂದು ಅಂಗಲಾಚುವ ಮುಖ್ಯಮಂತ್ರಿಗೆ ನಾಚಿಕೆ ಇಲ್ಲವೇ ಎಂದು ಟೀಕಿಸಿದರು.

ರೈತರ ಸಮಸ್ಯೆ ಬಗೆಹರಿಸುವವರೆಗೆ ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ, ಮತಕೊಡದಿದ್ದರೂ ರೈತರ ಪರವಾಗಿ ಹೋರಾಡುತ್ತೇನೆ, ಇಲ್ಲದಿದ್ದರೆ ನಾನು ಇದ್ದೂ ಸತ್ತಂತೆ ಎಂದರು.

ಕಾರ್ಯಕ್ರಮದಲ್ಲಿ ಎನ್.ಬಿ. ಬನ್ನೂರ, ಬಿ.ಜೆ. ಜಮಖಂಡಿ, ಶಂಕರ ನಾಯಕ, ಶಂಭುಲಿಂಗ ಅಕ್ಕಿಮರಡಿ, ಅರವಿಂದ ದಳವಾಯಿ ಮತ್ತಿತರರು ಇದ್ದರು. ಗ್ರಾಮಕ್ಕೆ ಆಗಮಿಸಿದ ಮಾಜಿ ಪ್ರಧಾನಿಯನ್ನು ಗ್ರಾಮಸ್ಥರು ಡೊಳ್ಳು ಕುಣಿತ ಮತ್ತು ಲಮಾಣಿ ನೃತ್ಯದೊಂದಿಗೆ ಆರತಿ ಬೆಳಗಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT