ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರನ್ನು ಹತ್ತಿಕ್ಕುವ ಯತ್ನ

Last Updated 15 ಫೆಬ್ರುವರಿ 2012, 7:25 IST
ಅಕ್ಷರ ಗಾತ್ರ

ಗದಗ: `ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ವು ಲಿಂಗಾಯತ ಮಂತ್ರಿಗಳು, ಶಾಸಕರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು, ಈ ಕುರಿತು ಸಮಾಜಬಾಂಧವರು ಎಚ್ಚರದಿಂದಿರಬೇಕು~  ಎಂದು ಕರ್ನಾಟಕ ರಾಜ್ಯ ವೀರಶೈವ ಪಂಚಮ ಸಾಲಿ ಸಂಘದ ಅಧ್ಯಕ್ಷ ಬಸವರಾಜ ದಿಂಡೂರ ಎಚ್ಚರಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲಿಂಗಾಯತ ಸಮುದಾಯವು ಬಲಿಷ್ಠ ವಾಗುತ್ತಿರುವುದು, ಚುನಾವಣೆಯಲ್ಲಿ ಮೇಲುಗೈ ಸಾಧಿಸುತ್ತಿರುವುದನ್ನು ಸಹಿಸದ ಆರ್‌ಎಸ್‌ಎಸ್ ಮುಖಂಡರು ಸಮಾಜದ ಜನಪ್ರನಿಧಿಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ. ಈ ಕುರಿತು ನಾವು ಎಚ್ಚರವಹಿಸಬೇಕಿದೆ ಎಂದು ಅವರು ನುಡಿದರು.

ಪಂಚಮಸಾಲಿ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸಬೇಕು ಎನ್ನುವುದು ನಮ್ಮ ಬಹುದಿನದ ಬೇಡಿಕೆ. ಬಿಜೆಪಿ ಸರ್ಕಾರವು ಇದಕ್ಕೆ ಸ್ಪಂದಿಸದಿದ್ದಲ್ಲಿ ಮಧ್ಯಂತರ ಚುನಾವಣೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಇದೇ 17ರಂದು ಗೋಕಾಕದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. 

 ಅದಕ್ಕೆ ಅವರು ಸ್ಪಂದಿಸದಿದ್ದಲ್ಲಿ 2 ತಿಂಗಳ ಒಳಗೆ ನಿಯೋಗ ಒಯ್ದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸಮುದಾಯದ ಶಾಸಕರು ಸಂಘವು ಹೇಳಿದಂತೆ ಕೇಳದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಅವರು ಎಚ್ಚರಿಸಿದರು. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಮಾಜದ ಕನಿಷ್ಠ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಇದೇ 17 ಹಾಗೂ 18ರಂದು ಬೆಳಗಾವಿ ತಾಲ್ಲೂಕಿನ ಗೋಕಾಕದಲ್ಲಿ ಪಂಚಮಸಾಲಿ ಶ್ರೀಗಳ ಪೀಠಾ ರೋಹಣದ 4ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯ ಸಮಾವೇಶ ಆಯೋಜಿಸಲಾಗಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 18ರಂದು ಮುಖ್ಯಮಂತ್ರಿ ಸದಾನಂದಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

2008 ಮಹಿಳೆಯರಿಂದ ಕುಂಭ ಮೆರವಣಿಗೆ ಹಾಗೂ 208 ಜನಪದ ಕಲಾತಂಡಗಳಿಂದ ಮೆರವಣಿಗೆ ಆಯೋಜಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿನ 52 ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಗುವುದು  ಎಂದು ಅವರು ತಿಳಿಸಿದರು.

ತನಿಖೆಗೆ ಒತ್ತಾಯ
ಲಕ್ಷ್ಮೇಶ್ವರದಲ್ಲಿ ಸೋಮವಾರ ಮಧ್ಯರಾತ್ರಿ  ಸಂಘದ ಕಾರ್ಯಕರ್ತ ಚಂದ್ರಶೇಖರ ಚೌಕಿನವರ ಎಂಬುವರ ಹತ್ಯೆ ನಡೆದಿದ್ದು, ಪ್ರಕರಣವನ್ನು ಸಿಒಡಿಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಎಚ್ಚರ ಅಗತ್ಯ ಎಂದು ಈ ಸಂದರ್ಭಲ್ಲಿ ಹೇಳಿದರು.

ಸಂಘದ ರಾಜ್ಯ ಸಂಚಾಲಕ ಎಸ್.ವಿ. ನಿಗಲಿ, ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಚ್. ದೇಸಾಯಿಗೌಡ್ರ, ಉಪಾಧ್ಯಕ್ಷ ಈರಣ್ಣ ಕರಿಬಿಷ್ಠಿ, ವೀರಣ್ಣ ಬಾಳಿಕಾಯಿ, ವಿ.ಎಂ. ಮರೀಗೌಡರ, ಅಮರೇಶ ಬೂದಿಹಾಳ, ನೀಲಮ್ಮ ಮೇಗೇರಿ  ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. 

`ನೀಲಚಿತ್ರ ವೀಕ್ಷಣೆ ಖಂಡನೀಯ~
ಸಮಾಜದವರೇ ಆದ ಮಾಜಿ ಸಚಿವ ಸಿ.ಸಿ. ಪಾಟೀಲರು ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿದ ಕುರಿತು ಪ್ರತಿಕ್ರಿಯಿಸಿದ ಬಸವರಾಜ ದಿಂಡೂರ, ಪವಿತ್ರವಾದ ಶಾಸನಸಭೆಯಲ್ಲಿ ಆ ರೀತಿಯ ವರ್ತನೆ ಖಂಡನೀಯ  ಎಂದು ಆಕ್ರೋಶ ವ್ಯಕ್ತ ಪಡಿಸಿದರು.
 ಈ ಕುರಿತು ತನಿಖೆ ನಡೆದ ಮೇಲಷ್ಟೇ ಸತ್ಯ ಹೊರ ಬೀಳಬೇಕಿದೆ ಎಂದು ಅವರು ಈ ಸಂದರ್ಭಲ್ಲಿ ಅವರು ಹೇಳಿದರು.


 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT