ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಬರ್ ಸಿಗಂಗಿಲ್ಲ ಅಂದ್ರ ಏನ್ರಿ?

Last Updated 14 ಜನವರಿ 2012, 10:25 IST
ಅಕ್ಷರ ಗಾತ್ರ

ಬೀದರ್: `ಕೂಲಿ ಕೇಳಿ ಜನ ಬಂದಿಲ್ಲ ಅಂದರೆ ಏನ್ರಿ? ಲೇಬರ್ ಹ್ಯಾಂಗ್ ಸಿಗಂಗಿಲ್ರಿ? ನೀವು ಕೆಲಸ ಮಾಡಲಾರದೆ ಜನರ ಮ್ಯಾಲ ಹಾಕ್ತಿರೇನ್ರಿ? ಢಂಗುರ ಹೊಡಸರಿ ಅದ್ಹ್ಯಾಂಗ ಬರಂಗಿಲ್ಲ, ನೋಡೋಣ~
ಹೀಗೆಂದು ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡದ್ದು ಶಾಸಕ ರಾಜಶೇಖರ ಪಾಟೀಲ್.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೇಂದ್ರ ಸರ್ಕಾರದ ಯೋಜನೆಗಳ ಜಿಲ್ಲಾ ಜಾಗೃತಿ ಮತ್ತು ಅನುಷ್ಠಾನ ಸಮಿತಿಯ ಸಭೆಯಲ್ಲಿ ಮಾತನಾಡಿದ ಶಾಸಕರು `ಕೂಲಿ ಕೇಳಿ ಜನ ಬಂದಿಲ್ಲ ಎಂಬ ನೆಪ ಹೇಳಿ ಪ್ರಸಕ್ತ ಸಾಲಿನಲ್ಲಿ ಹುಮನಾಬಾದ್ ತಾಲ್ಲೂಕಿನ 7 ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತರಿ ಯೋಜನೆಯನ್ನೇ ಆರಂಭಿಸಿಲ್ಲ. ಕೆಲಸದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ~ ಎಂದು ಆರೋಪಿಸಿದರು.

`ಇದುವರೆಗೆ ಬಂದಿರಲಿಲ್ಲ. ಇನ್ನು ಮುಂದೆ ಢಂಗುರ ಹೊಡೆಸಿ ಜನರಲ್ಲಿ ಅರಿವು ಮೂಡಿಸಲಾಗುತ್ತದೆ~ ಎಂದು ಅಧಿಕಾರಿಗಳು ಹೇಳಿದರು. ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಿತೇಂದ್ರ ನಾಯಕ್ ಅವರು `ಪ್ರತಿ ಪಂಚಾಯಿತಿಯಲ್ಲಿ 10 ಯೋಜನೆಗಳನ್ನು ಸಿದ್ಧಪಡಿಸಿ ಇಡಲಾಗಿದೆ. ಬೇಡಿಕೆ ಬಂದ ತಕ್ಷಣ ಕೆಲಸ ನೀಡಲಾಗುತ್ತಿದೆ~ ಎಂದು ಸಮರ್ಥಿಸಿಕೊಂಡರು.

ಕೇಳಿ ಬಂದವರಿಗೆ ಕೆಲಸ ಇಲ್ಲ: ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೂಲಿ ಕೆಲಸ ಕೊಡಿಸಿ ಎಂದು ಶಾಸಕರ ಮನೆಗೆ 50 ಜನ ಬಂದ ಪ್ರಸಂಗವನ್ನು ವಿವರಿಸಿದರು.

`ಕೂಲಿ ಕೇಳಿ ಕೊಂಡು ಬಂದ ಕಾರ್ಮಿಕರ ಹೆಸರಿನಲ್ಲಿ ಹಣ ಪಾವತಿ ಆಗಿರುವುದರಿಂದ ಕೆಲಸ ನೀಡಲು ಬರುವುದಿಲ್ಲ~ ಎಂದು ಅಧಿಕಾರಿಗಳು ಹೇಳಿದ್ದನ್ನು ಶಾಸಕರು ಪ್ರಸ್ತಾಪಿಸಿದರು. ಹಿಂದಿನ ವರ್ಷ ಹಾಜರಾತಿ ಪಟ್ಟಿಯಲ್ಲಿ (ಎನ್‌ಎಂಆರ್) ದಾಖಲಿಸದೇ ಹಣ ಪಾವತಿ ಮಾಡಲಾಗಿತ್ತು. ಆದ್ದರಿಂದ ಅದನ್ನು ಸರಿ ತೂಗಿಸುವುದಕ್ಕಾಗಿ ಪ್ರಸಕ್ತ ಸಾಲಿನ ಹಾಜರಾತಿ ಪಟ್ಟಿಯಲ್ಲಿ ದಾಖಲಿಸಿದ್ದರಿಂದ ಹೊಸದಾಗಿ ಕೆಲಸ ನೀಡಲು ಆಗದಂತಹ ಸ್ಥಿತಿ ನಿರ್ಮಾಣ ಆಗಿತ್ತು~ ಎಂದು ತಿಳಿಸಿದರು.

`ಕುಡಿಯುವ ನೀರಿನ ಯೋಜನೆಯ ಜಾರಿಯ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿ ತೋಡಿಸಲಾಗಿತ್ತದೆ. ಆದರೆ, ಹತ್ತು ಸಾವಿರ ರೂಪಾಯಿ ಖರ್ಚು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸುವುದಿಲ್ಲ. ಇದರಿಂದಾಗಿ ನೀರಿನ ಸೆಲೆ ಬತ್ತಿ ಜನ ಪರದಾಡುವಂತಾಗುತ್ತಿದೆ. ಇದೆಂತಹ ಅವ್ಯವಸ್ಥೆ~ ಎಂದು ಶಾಸಕ ರಹೀಮ್‌ಖಾನ್ ಅಸಹನೆ ವ್ಯಕ್ತಪಡಿಸಿದರು.

ಭಾಲ್ಕಿಯಲ್ಲಿ 21 ಕೊಳವೆ ಬಾವಿ ತೋಡಿಸಲಾಗಿದೆ. ಕೇವಲ ಐದು ಕಡೆಗಳಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಕಾಲಮಿತಿ ಹಾಕಿಕೊಂಡು ಯೋಜನೆ ಪೂರೈಸದಿದ್ದರೆ ಹೇಗೆ? ಎಂಬ ಪ್ರಶ್ನೆ ಈಶ್ವರ ಖಂಡ್ರೆ ಕೇಳಿದರು.

ಭಾರತ ನಿರ್ಮಾಣ ಯೋಜನೆಯ ಅಡಿಯಲ್ಲಿ ಕೊಳವೆ ಬಾವಿ ಕೊರೆಯಿಸಲಾಗಿದೆ. ಜೆಸ್ಕಾಂೆ ವಿದ್ಯುತ್ ಸಂಪರ್ಕದ ಹಣ ಪಾವತಿಸಿಲ್ಲ. ಆದ್ದರಿಂದ ಜೆಸ್ಕಾಂ ವಿಚಕ್ಷಣ ದಳದವರು ಅತಿಕ್ರಮ ವಿದ್ಯುತ್ ಸಂಪರ್ಕ ಎಂದು ದಾಳಿ ನಡೆಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ಹಾಗೆಯೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ವೈರ್ ತೆಗೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ ಎಂದು ಆಕ್ಷೇಪಿಸಿ ಜನ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಖಂಡ್ರೆ ವಿವರಿಸಿದರು.

ಸಾಮರ್ಥ್ಯ ಸೌಧ: ಬೀದರ್ ನಗರದಲ್ಲಿ ನಿರ್ಮಿಸಲಾಗುತ್ತಿರುವ ಸಾಮರ್ಥ್ಯ ಸೌಧದ ಕಟ್ಟಡ ನಿರ್ಮಾಣದಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಪುಂಡಲೀಕರಾವ ಆರೋಪಿಸಿದರು. ನಿವೇಶನ ಹಸ್ತಾಂತರ ಆಗುವ ಮುನ್ನವೇ ಕಾಮಗಾರಿ ಆರಂಭಿಸಲಾಗಿದೆ. ರಸ್ತೆಯನ್ನು ಅತಿಕ್ರಮಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಬಗ್ಗೆ ತನಿಖೆ ತನಿಖೆ ನಡೆಸುವಂತೆ ಸಂಸದರು ಸೂಚಿಸಿದರು.

ವಿಧಾನ ಪರಿಷತ್ ಸದಸ್ಯರಾದ ಕಾಜಿ ಅರ್ಷದ್ ಅಲಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಿತೇಂದ್ರ ನಾಯಕ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT