ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಶೋಷಣೆ ದೂರುಗಳೇ ಹೆಚ್ಚು

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ
ನಡೆದು ಬಂದ ಹಾದಿ...
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ನೂತನ ಅಧ್ಯಕ್ಷೆ ಸಿ. ಮಂಜುಳಾ ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದವರು. ಶಿವಮೊಗ್ಗದಲ್ಲಿ 1996ರಿಂದ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ 2008ರಿಂದ ನ್ಯಾಯಾಂಗ ಅಧಿಕಾರಿ, ಕುವೆಂಪು ವಿಶ್ವವಿದ್ಯಾಲಯದ ಹಾಲಿ ಸಿಂಡಿಕೇಟ್ ಸದಸ್ಯೆಯೂ ಹೌದು.ಕೇಂದ್ರದ ಸಮಾಜ ಕಲ್ಯಾಣ ನಿಗಮದ ಮಾಜಿ ಸದಸ್ಯೆ. ವಿದ್ಯಾರ್ಥಿ ಮತ್ತು ಮಹಿಳಾ ಹೋರಾಟದಲ್ಲಿ 15ವರ್ಷದ ದುಡಿಮೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಹಲವು ಜವಾಬ್ದಾರಿಗಳ ಯಶಸ್ವಿ ನಿರ್ವಹಣೆ. ಮಹಿಳಾ ವಿಶ್ವವಿದ್ಯಾಲಯದ ಸ್ಥಾಪನೆ ಹೋರಾಟದ ನೇತಾರರಲ್ಲಿ ಒಬ್ಬರು. 1998ರಿಂದ ಮೂರು ವರ್ಷಗಳ ಕಾಲ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ರಾಜಕೀಯ ಅನುಭವವೂ ಇವರಿಗಿದೆ.

   ಎರಡೂವರೆ ವರ್ಷಗಳ ಅಂತರದ ನಂತರ ಆಯೋಗದ ಅಧ್ಯಕ್ಷರಾಗಿ ನೇಮಕವಾಗಿದ್ದೀರಿ, ತುರ್ತಾಗಿ ನಿಮ್ಮೆದುರಿನ ಸವಾಲುಗಳು ಯಾವುವು?
ಆಯೋಗಕ್ಕೆ ಮಹಿಳೆಯರು ಯಾರೇ ದೂರು ತೆಗೆದುಕೊಂಡು ಬಂದರೂ ಖಂಡಿತವಾಗಿ ಅಲ್ಲಿ ಪರಿಹಾರ ಸಿಗುತ್ತದೆಂಬ ವಿಶ್ವಾಸ ಮೂಡಿಸುವುದು ನನಗಿರುವ ದೊಡ್ಡ ಸವಾಲು. ದೂರುಗಳ ತ್ವರಿತ ಇತ್ಯರ್ಥ ಇನ್ನೊಂದು ಸವಾಲು. ಈ ನಿಟ್ಟಿನಲ್ಲಿ ಸಾಧ್ಯವಾಗುವ ಕ್ರಮಗಳ ಬಗ್ಗೆ ಆಯೋಗ ಗಂಭೀರ ಚಿಂತನೆ ನಡೆಸಿದೆ.

ಆಯೋಗಕ್ಕೆ ಶಾಸನಬದ್ಧ ಅಧಿಕಾರ ಇಲ್ಲದಿದ್ದರೂ ಮಹಿಳೆಯರ ಸಮಸ್ಯೆ ನಿವಾರಣೆ ಹೇಗೆ? 
ಸಂವಿಧಾನ ಕಲ್ಪಿಸಿದ ಹಕ್ಕುಗಳು, ಅವಕಾಶಗಳು ಮಹಿಳೆಯರಿಗೆ ಸಿಗದೆ ಶೋಷಣೆ - ದೌರ್ಜನ್ಯಗಳಿಗೆ ಒಳಗಾಗುತ್ತಿದ್ದರೆ ಅವರಿಗೆ ರಕ್ಷಣೆ ನೀಡುವುದು ಆಯೋಗದ ಮೊದಲ ಕರ್ತವ್ಯ. ಮಹಿಳೆಯರು ನೀಡಿದ ದೂರನ್ನು ಪರಿಶೀಲಿಸಿ, ಸಂಬಂಧಪಟ್ಟವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗುತ್ತದೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಪೊಲೀಸರ ಮುಖಾಂತರ ಹಾಜರುಪಡಿಸುವ ವ್ಯವಸ್ಥೆ ಇದೆ. ಅದಕ್ಕೂ ಮೊದಲು ಸಂತ್ರಸ್ತ ಮಹಿಳೆಗೆ ಪೊಲೀಸ್ ರಕ್ಷಣೆ ನೀಡಲಾಗುವುದು.

ಕೌಟುಂಬಿಕ ಸಮಸ್ಯೆಗಳಿದ್ದರೆ ಆಯೋಗದಲ್ಲಿರುವ ಕುಟುಂಬ ಆಪ್ತಸಲಹಾ ಕೇಂದ್ರದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸಲು ಪ್ರಯತ್ನ ಮಾಡಲಾಗುವುದು. ಸಾಧ್ಯವಾಗದಿದ್ದರೆ ನ್ಯಾಯಾಲಯಕ್ಕೆ ಕಳುಹಿಸಲಾಗುವುದು. ಆಯೋಗಕ್ಕೆ ಆರು ಸದಸ್ಯರ ನೇಮಕವಾಗಬೇಕಿದೆ. ಈ ಸಂಬಂಧ ಸರ್ಕಾರಕ್ಕೆ ಮನವಿ ಮಾಡಿದ್ದು, ಇಷ್ಟರಲ್ಲೇ ನೇಮಕವಾಗಲಿದೆ ಎಂಬ ವಿಶ್ವಾಸ ಇದೆ.

 ಪ್ರಕರಣಗಳ ತ್ವರಿತ ವಿಲೇವಾರಿಗೆ ನಿಮ್ಮ ವಿನೂತನ ಕ್ರಮಗಳೇನು?
ವಾರದಲ್ಲಿ ಎರಡು ದಿವಸ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದೇನೆ. ರಾಜ್ಯದ ಏಳು ಕಡೆಗಳಲ್ಲಿ (ಮೈಸೂರು, ಬೆಂಗಳೂರು, ವಿಜಾಪುರ, ರಾಯಚೂರು, ಗುಲ್ಬರ್ಗ, ಬೆಳಗಾವಿ, ದಾವಣಗೆರೆ) ಆಯೋಗ ಸ್ಥಾಪಿಸಿದ ಕುಟುಂಬ ನ್ಯಾಯಾಲಯಗಳಿವೆ. ಆ ಭಾಗಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆ ವ್ಯಾಪ್ತಿಯ ಪ್ರಕರಣಗಳನ್ನು ಅಲ್ಲಿಯೇ ಪರಿಶೀಲಿಸಿ, ಪರಿಹರಿಸಲಾಗುವುದು. ಆಯೋಗದಲ್ಲಿ ಪ್ರಕರಣಗಳ ಇತ್ಯರ್ಥಕ್ಕಾಗಿ ಆರು ಜನ ನ್ಯಾಯಾಧೀಶರಿದ್ದಾರೆ. ಪ್ರತಿಯೊಬ್ಬರಿಗೂ ಐದು ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಈ ವಿಭಾಗಕ್ಕೆ ಬಲ ತುಂಬುವುದಕ್ಕೂ ಚಿಂತನೆ ನಡೆದಿದೆ.

 ಆಯೋಗದಲ್ಲಿ ಈ ಹಿಂದೆ ಕಡತಗಳು ಕಣ್ಮರೆಯಾಗಿವೆ ಎಂಬ ಸುದ್ದಿಗಳಿತ್ತಲ್ಲ?
ಈ ಕುರಿತಂತೆ ಆಗಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವರೇ ಪರಿಶೀಲಿಸಿ, ಆ ರೀತಿ ಆಗಿಲ್ಲ ಎಂದು ಆಗಲೇ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ. ಅದು ಈಗ ಮುಗಿದ ಅಧ್ಯಾಯ.

 ಆಯೋಗಕ್ಕೆ ಯಾವ ರೀತಿಯ ದೂರುಗಳು ಬರುತ್ತಿವೆ?
ವಂಚನೆಗೆ ಒಳಪಡುತ್ತಿರುವವರಲ್ಲಿ ನಗರ-ಹಳ್ಳಿ ಎಂಬ ಭೇದವಿಲ್ಲ. ಮದುವೆ ಮುಂಚೆ ದೈಹಿಕ ಸಂಪರ್ಕ ನಡೆಸಿ, ಹುಡುಗಿಯ ಗರ್ಭಪಾತಕ್ಕೂ ಕಾರಣವಾಗಿ, ನಂತರ ಕೈಕೊಟ್ಟು ಹೋಗುವ ದೂರುಗಳೇ ಹೆಚ್ಚು. ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡಾಗ ಗಂಡ ಆಕೆಗೆ ಬೆದರಿಕೆ ಹಾಕುವುದು, ಅಪಹರಣ ಮಾಡುವುದು, ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರ ಲೈಂಗಿಕ ಕಿರುಕುಳದ ದೂರುಗಳು ಬರುತ್ತವೆ.

ಆಯೋಗಕ್ಕೆ ದೂರು ಸಲ್ಲಿಸಬಹುದು ಹೇಗೆ?
ಆಯೋಗಕ್ಕೆ ನೇರವಾಗಿ ಪತ್ರ ಬರೆದು ದೂರು ಸಲ್ಲಿಸಬಹುದು. ಆ ದೂರುಗಳನ್ನು ಪರಿಶೀಲಿಸಿ, ಆಯೋಗ ಮುಂದಿನ ಕ್ರಮ ಕೈಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗಬೇಡಿ. ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಮೊದಲ ಮಹಡಿ, ಕೆಎಚ್‌ಬಿ ಬಿಲ್ಡಿಂಗ್, ಕಾವೇರಿ ಭವನ, ಕೆ.ಜಿ. ರಸ್ತೆ. ಬೆಂಗಳೂರು. ಇಲ್ಲಿಗೆ ಸಲ್ಲಿಸಬಹುದು. ಕರೆ ಮಾಡಬಹುದಾದ ಆಯೋಗದ ದೂರವಾಣಿ ಸಂಖ್ಯೆಗಳು: 080-22216485/ 080-22216486. ಆಯೋಗಕ್ಕೊಂದು ಹೆಲ್ಪ್‌ಲೈನ್ ಅಗತ್ಯವಿದೆ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಾಂತ್ವನ ಕೇಂದ್ರದಲ್ಲಿ ಹೆಲ್ಪ್‌ಲೈನ್ ಇದೆ.ಅದನ್ನೇ  ಆಯೋಗ ಬಳಸಿಕೊಳ್ಳಬಹುದೇ ಎಂಬ ಚರ್ಚೆಗಳಿವೆ. ಸದ್ಯಕ್ಕೆ ಇದು ಪರಿಶೀಲನೆ ಹಂತದಲ್ಲಿದೆ.

ಮಹಿಳೆಯರಿಗೆ ನಿಮ್ಮ ಸಲಹೆಗಳೇನು?
ಭಾರತೀಯ ಸಮಾಜ ಎಷ್ಟೇ ಮುಂದುವರಿದರೂ ಹೆಣ್ಣುಮಕ್ಕಳು ತಮಗೆ ಆಗುತ್ತಿರುವ ಶೋಷಣೆ-ದೌರ್ಜನ್ಯಗಳನ್ನು ಎಲ್ಲರ ಎದುರು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಆದರೆ, ಇವುಗಳನ್ನು ಪ್ರತಿಭಟಿಸದಿದ್ದರೆ ಈ ವಿಕೃತಿಗಳು ಜೀವಕ್ಕೂ ಅಪಾಯ ತಂದೊಡ್ಡಬಹುದು. ಶೋಷಣೆ ಕಂಡಲ್ಲಿ ಹೋರಾಟ ಮಾಡಿ, ನಿಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಿ; ನಿಮ್ಮ ರಕ್ಷಣೆಗೆ ಆಯೋಗ ನಿಲ್ಲುತ್ತದೆ.

ಮಹಿಳೆಯರ ಸಮಸ್ಯೆಗಳನ್ನು ನೀವು ಯಾವ ರೀತಿ ನೋಡುತ್ತೀರಿ?   
ಮಹಿಳೆಯರ ಸಮಸ್ಯೆಗಳು ನನಗೆ ಎರಡು ರೀತಿ ಕಾಣಿಸುತ್ತಿವೆ. ಒಂದು ವೈಯಕ್ತಿಕ ಮಟ್ಟದ್ದು, ರಕ್ಷಣೆ ಕೇಳಿಕೊಂಡು ಬರುವ ಪ್ರಕರಣಗಳು. ಇನ್ನೊಂದು ಸಾಮೂಹಿಕವಾಗಿ ಮಹಿಳೆಯರಿಗೆ ಇರುವ ಸಮಸ್ಯೆಗಳು. ಉದಾಹರಣೆಗೆ ಉತ್ತರ ಕರ್ನಾಟಕ, ಹೈದರಬಾದ್-ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಮಾರಾಟ, ದೇವದಾಸಿ ಪದ್ಧತಿ, ಬಸ್ ನಿಲ್ದಾಣಗಳಲ್ಲಿ ಶೌಚಾಲಯ-ವಿಶ್ರಾಂತಿ ಕೊಠಡಿಗಳ ಕೊರತೆ, ಸರ್ಕಾರ ಅನುದಾನ ನೀಡಿದರೂ ದಲಿತ ಮತ್ತು ಬುಡಕಟ್ಟು ಹೆಣ್ಣುಮಕ್ಕಳ ಹಾಸ್ಟೆಲ್‌ಗಳಲ್ಲಿ ಮೂಲಸೌಕರ್ಯಗಳ ಕೊರತೆ.
 
ಆಯೋಗ ಯಾವ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ?
ತಮಗಾಗುತ್ತಿರುವ ಶೋಷಣೆ-ದೌರ್ಜನ್ಯಗಳ ಬಗ್ಗೆ ವಿದ್ಯಾವಂತರಿಗೆ ಅರಿವಿಲ್ಲ. ಮುಖ್ಯವಾಗಿ ಮಹಿಳಾ ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಹಾಗಾಗಿ, ಆಯೋಗ ಕಾಲೇಜು ಕೇಂದ್ರೀಕೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಲೋಚಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಬಾರ್ ಅಸೋಸಿಯೇಷನ್ ಮತ್ತು ಕಾನೂನು ನಿಯಂತ್ರಣ ಪ್ರಾಧಿಕಾರದ ಸಹಕಾರ ಪಡೆದುಕೊಳ್ಳಲಾಗುವುದು.                        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT