ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಲೈಫ್ ಆಫ್ ಪೈ'ಗೆ 4 ಆಸ್ಕರ್ ಗರಿ

Last Updated 25 ಫೆಬ್ರುವರಿ 2013, 20:20 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್ (ಪಿಟಿಐ): ದುರಂತಕ್ಕೀಡಾದ ಹಡಗಿನಿಂದ ಬೇರ್ಪಟ್ಟು, ಹುಲಿಯೊಂದಿಗೆ ಸಾಗರದಲ್ಲಿ ಪಯಣಿಸಿ ಬದುಕುಳಿಯುವ ಭಾರತೀಯ ಬಾಲಕನೊಬ್ಬನ ಕತೆ ಆಧರಿಸಿದ `ಲೈಫ್ ಆಫ್ ಪೈ' ಚಿತ್ರವು ನಾಲ್ಕು ವಿಭಾಗಗಳಲ್ಲಿ 85ನೇ ವರ್ಷದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಬೆರಗುಗೊಳಿಸುವ ದೃಶ್ಯಗಳಿಂದ ಕೂಡಿರುವ `ಪೈ' 3ಡಿ ಚಿತ್ರವನ್ನು ನಿರ್ದೇಶಿಸಿರುವ ತೈವಾನ್ ಮೂಲದ ಹೆಲ್ಮರ್ ಆಂಗ್ ಲೀ ಅವರು ಘಟಾನುಘಟಿ ನಿರ್ದೇಶಕರುಗಳಾದ ಸ್ಟೀವನ್ ಸ್ಪೀಲ್‌ಬರ್ಗ್ ಮತ್ತು ಮೈಕೆಲ್ ಹನೆಕೆ ಅವರನ್ನು ಹಿಮ್ಮೆಟ್ಟಿಸಿ `ಅತ್ಯುತ್ತಮ ನಿರ್ದೇಶಕ' ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇದುವರೆಗೆ ಐದು ಬಾರಿ ಆಸ್ಕರ್‌ಗೆ ನಾಮಕರಣಗೊಂಡಿರುವ ಲೀ ಅವರಿಗೆ ಪ್ರಶಸ್ತಿ ಒಲಿದಿರುವುದು ಇದು ಎರಡನೇ ಬಾರಿ. ಈ ಹಿಂದೆ 2005ರಲ್ಲಿ `ಬ್ರೋಕ್‌ಬ್ಯಾಕ್ ಮೌಂಟೇನ್' ಚಿತ್ರಕ್ಕಾಗಿ ಅವರು ಆಸ್ಕರ್ ಗಿಟ್ಟಿಸಿಕೊಂಡಿದ್ದರು.

ನಿರ್ದೇಶನ ವಿಭಾಗ ಹೊರತಾಗಿ ಛಾಯಾಗ್ರಹಣ ಮತ್ತು ವಿಷುವಲ್ ಎಫೆಕ್ಟ್ಸ್ (ದೃಶ್ಯ ಸಂಯೋಜನೆ) ಮತ್ತು ಸಂಗೀತ (ಮೂಲ) ವಿಭಾಗಗಳಲ್ಲಿಯೂ `ಪೈ' ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

`ಪೈ' ಚಿತ್ರದ ಅತ್ಯದ್ಭುತ ಛಾಯಾಗ್ರಹಣಕ್ಕಾಗಿ ಕ್ಲೌಡಿಯೊ ಮಿರಾಂಡ ಅವರಿಗೆ ಆಸ್ಕರ್ ಒಲಿದರೆ, ವಿಷುವಲ್ ಎಫೆಕ್ಟ್ಸ್ ವಿಭಾಗದ ಪ್ರಶಸ್ತಿಯು ಅದೇ ಚಿತ್ರದಲ್ಲಿ ಬೆರಗು ಮೂಡಿಸುವ ಕೈಚಳಕ ತೋರಿದ ಬಿಲ್ ವೆಸ್ಟೆನ್ಹೊಫರ್, ಗ್ಯುಲ್ಲಾವುಮೆ ರೊಚೆರೊನ್, ಎರಿಕ್-ಜನ್ ಡಿ ಬೊಯರ್ ಮತ್ತು ಡೊನಾಲ್ಡ್ ಆರ್ ಎಲಿಯಟ್ ಅವರ ಪಾಲಾಗಿದೆ. ಇದೇ ಚಿತ್ರಕ್ಕೆ ಸಂಗೀತ ನೀಡಿದ ಮೈಕೆಲ್ ಡನ್ನಾ ಅವರಿಗೆ ಸಂಗೀತ (ಮೂಲ) ವಿಭಾಗದಲ್ಲಿ ಆಸ್ಕರ್ ಲಭಿಸಿದೆ.

`ಆರ್ಗೊ' ಅತ್ಯುತ್ತಮ ಚಿತ್ರ:  1979ರಲ್ಲಿ ನಡೆದಿದ್ದ ಇರಾನ್ ಒತ್ತೆಯಾಳು ಬಿಕ್ಕಟ್ಟು ಪ್ರಕರಣ ಆಧರಿಸಿದ ಬೆನ್ ಅಫ್ಲೆಕ್ಸ್ ಅವರ `ಆರ್ಗೊ' ಚಿತ್ರವು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಸ್ಕರ್ ಮುಡಿಗೇರಿಸಿಕೊಂಡಿದೆ.

ಟೆಹರಾನ್‌ನಲ್ಲಿ ಅಪಹರಣಕ್ಕೀಡಾಗಿದ್ದ ಆರು ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳನ್ನು ಬಿಡುಗಡೆ ಮಾಡುವುದಕ್ಕಾಗಿ ಹಾಲಿವುಡ್-ಸಿಐಎ ಜಂಟಿಯಾಗಿ ನಡೆಸಿದ್ದ ಕಾರ್ಯಾಚರಣೆಯನ್ನು ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ. ಸಿನಿಮಾ ನಿರ್ಮಾಣ ಸಂಸ್ಥೆಯ ಸಿಬ್ಬಂದಿಯ ವೇಷದಲ್ಲಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದರು.

ಅತ್ಯುತ್ತಮ ನಟ, ನಟಿ:  ಅಮೆರಿಕದ 16ನೇ ಅಧ್ಯಕ್ಷರಾಗಿದ್ದ  ಅಬ್ರಹಾಂ ಲಿಂಕನ್ ಅವರ ಜೀವನಾಧಾರಿತ `ಲಿಂಕನ್' ಚಿತ್ರದ ನಟನೆಗಾಗಿ 55 ವರ್ಷದ ಬ್ರಿಟನ್ ನಟ ಡೇನಿಯಲ್  ಡೇ -ಲೆವಿಸ್ ಅವರು `ಅತ್ಯುತ್ತಮ ನಟ' ಪ್ರಶಸ್ತಿಗೆ ಭಾಜನಾಗಿದ್ದಾರೆ.

ಲೆವಿಸ್ ಅವರಿಗೆ ಆಸ್ಕರ್ ಒಲಿದಿರುವುದು ಇದು ಮೂರನೇ ಬಾರಿ. ಈ ಹಿಂದೆ 1989ರಲ್ಲಿ `ಮೈ ಲೆಫ್ಟ್ ಫೂಟ್' ಮತ್ತು 2007ರಲ್ಲಿ `ದೇರ್ ವಿಲ್ ಬಿ ಬ್ಲಡ್' ಚಿತ್ರಗಳ ನಟನೆಗಾಗಿ ಪ್ರಶಸ್ತಿ ಅವರನ್ನು ಅರಸಿ ಬಂದಿತ್ತು.

`ಸಿಲ್ವರ್ ಲೈನಿಂಗ್ಸ್ ಪ್ಲೇಬುಕ್' ಚಿತ್ರದ ನಟನೆಗಾಗಿ 22 ವರ್ಷದ ನಟಿ ಜೆನಿಫರ್ ಲಾರೆನ್ಸ್ `ಅತ್ಯುತ್ತಮ ನಟಿ' ವಿಭಾಗದಲ್ಲಿ ಆಸ್ಕರ್ ಮುಡಿಗೇರಿಸಿಕೊಂಡಿದ್ದಾರೆ.

ನೋರಾ ಸಂಗೀತದ ಅಲೆ.. : ಸಿತಾರ್ ಮಾಂತ್ರಿಕ ದಿ. ಪಂಡಿತ್ ರವಿಶಂಕರ್ ಅವರ ಪುತ್ರಿ ನೋರಾ ಜೋನ್ಸ್, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದ ಕೊಡಾಕ್ ಸಭಾಂಗಣದಲ್ಲಿ ಜಾಸ್ ಸಂಗೀತ ಕಾರ್ಯಕ್ರಮ ನೀಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಆಸ್ಕರ್‌ಗಾಗಿ ನಾಮಕರಣಗೊಂಡಿದ್ದ `ಟೆಡ್' ಚಿತ್ರದ `ಎವೆರಿಬಡಿ ನೀಡ್ಸ್ ಅ ಬೆಸ್ಟ್ ಫ್ರೆಂಡ್' ಗೀತೆಯನ್ನು ಹಾಡಿ ರಂಜಿಸಿದರು. ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ಆತಿಥೇಯರೂ ಆಗಿರುವ ಸೇತ್ ಮ್ಯಾಕ್‌ಫರ್ಲೇನ್ ಅವರು `ಟೆಡ್' ಚಿತ್ರದ ಚಿತ್ರಕತೆಯ ಸಹ ರಚನೆಕಾರರಾಗಿದ್ದಾರೆ.

`ಆಸ್ಕರ್'ನಲ್ಲಿ ನಮಸ್ತೆ..!
ಅತ್ಯುತ್ತಮ ನಿರ್ದೇಶಕ ಎಂಬ ಗೌರವಕ್ಕೆ ಪಾತ್ರರಾದ `ಲೈಫ್ ಆಫ್ ಪೈ' ನಿರ್ದೇಶಕ ಆಂಗ್ ಲೀ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ `ನಮಸ್ತೆ' ಎಂದು ಉದ್ಗರಿಸಿ ಗಮನ ಸೆಳೆದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡುವ ಸಂದರ್ಭದಲ್ಲಿ ಲೀ ಅವರು ತಮ್ಮ ಚಿತ್ರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಅದರಲ್ಲೂ ವಿಶೇಷವಾಗಿ ತಂಡದಲ್ಲಿದ್ದ ಭಾರತೀಯರಿಗೆ ಧನ್ಯವಾದ ಸಲ್ಲಿಸಿ, `ನಮಸ್ತೆ'  ಎಂದು ಹೇಳುತ್ತಾ ಭಾಷಣ ಕೊನೆಗೊಳಿಸಿದರು.

ಜಯಶ್ರೀ ಕೈ ತಪ್ಪಿದ ಪ್ರಶಸ್ತಿ
ಅತ್ಯುತ್ತಮ ಗಾಯನ ವಿಭಾಗದಲ್ಲಿ  ನಾಮಕರಣಗೊಂಡಿದ್ದ ಏಕೈಕ ಭಾರತೀಯ ಸ್ಪರ್ಧಿ ಬಾಂಬೆ ಜಯಶ್ರೀ ಅವರಿಗೆ ಪ್ರಶಸ್ತಿ ಕೈ ತಪ್ಪಿದೆ.
ಜೇಮ್ಸಬಾಂಡ್ ಸರಣಿಯ ಚಲನಚಿತ್ರ `ಸ್ಕೈಫಾಲ್'ನಲ್ಲಿ ಹಾಡಿರುವ ಬ್ರಿಟನ್ ಗಾಯಕಿ ಅಡಿಲೆ ಈ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಇದರಿಂದ ಜೇಮ್ಸಬಾಂಡ್ ಸರಣಿಯ ಚಲನಚಿತ್ರಕ್ಕೆ ಇದೇ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಒಲಿದಂತಾಗಿದೆ.

ಇರಾನ್ ಆಕ್ಷೇಪ
ಟೆಹರಾನ್ (ಎಪಿ): ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ `ಆರ್ಗೊ' ಚಿತ್ರವನ್ನು ಇರಾನ್ ಸರ್ಕಾರಿ ಟಿವಿ ತಿರಸ್ಕರಿಸಿದೆ. `ಈ ಚಿತ್ರವು ಅಮೆರಿಕದ ಸಿಐಎಯ ಜಾಹೀರಾತು' ಎಂದು ಟೀಕಿಸಿದೆ.

ಈ ಪ್ರಶಸ್ತಿಯು, 1979ರಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯ ನಂತರ ತನ್ನನ್ನು ಹೀನಾಯವಾಗಿ ಬಿಂಬಿಸುತ್ತಿರುವುದರ ವಿರುದ್ಧ ಅಮೆರಿಕ ನೀಡಿರುವ ರಾಜಕೀಯ ಹೇಳಿಕೆ ಎಂದು ಇರಾನ್ ನಾಗರಿಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT