ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಅದಾಲತ್-ವೆಚ್ಚ ತಗ್ಗಿಸಲು ಸಹಕಾರಿ

Last Updated 6 ಫೆಬ್ರುವರಿ 2012, 10:20 IST
ಅಕ್ಷರ ಗಾತ್ರ

ಹರಪನಹಳ್ಳಿ: ಭಾರತೀಯ ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಅತ್ಯಂತ ಮಹತ್ವರವಾದ ಸ್ಥಾನ ಕಲ್ಪಿಸಲಾಗಿದ್ದು, ವ್ಯಾಜ್ಯಗಳ ಇತ್ಯರ್ಥಕ್ಕಾಗಿ ನ್ಯಾಯಾಲಯದ ಕದ ತಟ್ಟುತ್ತಿರುವ ಜನಸಾಮಾನ್ಯ ಕಕ್ಷಿದಾರರಿಗೆ ಆರ್ಥಿಕವಾಗಿ ಹೊರೆಯಲ್ಲದ ಹಾಗೂ ತ್ವರಿತಗತಿಯ ನ್ಯಾಯದಾನ ಒದಗಿಸಲು ವಕೀಲರು ಮುಂದಾಗಬೇಕಿದೆ ಎಂದು ಸ್ಥಳೀಯ ಜೆಎಂಎಫ್ ಹಿರಿಯ ವಿಭಾಗದ ನ್ಯಾಯಾಧೀಶ ಅಭಯ್ ಡಿ. ಚೌಗಲಾ ಅಭಿಪ್ರಾಯಪಟ್ಟರು.

ಶನಿವಾರ ಜೆಎಂಎಫ್ ನ್ಯಾಯಾಲಯದ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅನಕ್ಷರತೆ ಹಾಗೂ ಕೆಲ ಸಂದರ್ಭಗಳಲ್ಲಿನ ಅಮಾಯಕತೆ ಯಿಂದಲೂ ಉದ್ಭವಿಸುವ ತಗಾದೆಗಳ ಪರಿಹಾರಕ್ಕಾಗಿ ಕಕ್ಷಿದಾರರು ನ್ಯಾಯಾಲಯಕ್ಕೆ ಬರುತ್ತಾರೆ. ಅಂತಹ ಕಕ್ಷಿದಾರರಿಗೆ ಸರ್ಕಾರ ಕಾನೂನಿನ ಅನುಸಾರವಾಗಿ ಸಂಧಾನದ ಮೂಲಕ ನ್ಯಾಯ ಒದಗಿಸಲು ಲೋಕ ಅದಾಲತ್ ಜಾರಿಗೊಳಿಸಿದೆ. ಈ ವ್ಯವಸ್ಥೆಯಿಂದ ನ್ಯಾಯಾಲಯದ ಅಮೂಲ್ಯ ಸಮಯವು ಉಳಿತಾಯವಾಗುತ್ತದೆ.
 
ಜತೆಗೆ, ಕಡಿಮೆ ಖರ್ಚಿನಲ್ಲಿ ಹಾಗೂ ಅತೀ ಶೀಘ್ರದಲ್ಲಿ ವ್ಯಾಜ್ಯಗಳಿಗೆ ಪರಿಹಾರ ದೊರಕುತ್ತಿರುವುದರಿಂದ ನ್ಯಾಯಾಂಗದ ಘನತೆಯೂ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ವಕೀಲರು ಕಕ್ಷಿದಾರರ ಮನವೊಲಿಸುವಂತೆ ಸಲಹೆ ನೀಡಿದರು.

ಮೆಗಾ ಲೋಕ ಅದಾಲತ್ ಕಾರ್ಯಾರಂಭಗೊಂಡ ಒಂದೂವರೆ ವರ್ಷದ ಅವಧಿಯಲ್ಲಿ ಜೆಎಂಎಫ್ ಹಿರಿಯ ಹಾಗೂ ಕಿರಿಯ ವಿಭಾಗದ ನ್ಯಾಯಾಲಯದ ವ್ಯಾಪ್ತಿಗೆ ಸಂಬಂಧಿಸಿದಂತೆ 31 ವಾಹನ ಅಪಘಾತ ಪ್ರಕರಣಗಳು ಸೇರಿದಂತೆ 344 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.
 
ವಾಹನ ಅಪಘಾತಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ರೂ. 27.69ಲಕ್ಷ ಮೊತ್ತದ ಪರಿಹಾರವನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸುವ ಮೂಲಕ ನೊಂದವರಿಗೆ ನೆರವು ಕಲ್ಪಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಸಹಕರಿಸಿದ ವಕೀಲರಿಗೂ, ವಿಮಾ ಕಂಪೆನಿಗಳ ವಕೀಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಜೆಎಂಎಫ್ ಕಿರಿಯ ವಿಭಾಗದ ನ್ಯಾಯಾಧೀಶ ಎಚ್.ಕೆ. ನವೀನ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಕಣವಿಹಳ್ಳಿ ಮಂಜುನಾಥ, ಡಿವೈಎಸ್‌ಪಿ ಎಚ್.ಆರ್. ರಾಧಾಮಣಿ, ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಸಿ. ದೀಪಕ್, ಹಿರಿಯ ವಕೀಲ ಎ.ಕೆ. ಅಜ್ಜಪ್ಪ,  ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್ ಜತ್ತಿ, ಪುರಸಭಾ ಮುಖ್ಯಾಧಿಕಾರಿ ಎಚ್.ಬಿ. ಜಟ್ಟಪ್ಪ ಉಪಸ್ಥಿತರಿದ್ದರು.

ಹರಿಹರ ವರದಿ
`120 ದಿನಗಳ ಮೆಗಾ ಲೋಕ್‌ಅದಾಲತ್ ಅವಧಿಯಲ್ಲಿ 146 ಪ್ರಕರಣಗಳು ರಾಜಿ ಆಗಿರುವುದು ಸಂತಸ ತಂದಿದೆ~ ಹಿರಿಯ ಸಿವಿಲ್ ನ್ಯಾಯಧೀಶ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಬಿ.ಬಿ. ಜಕಾತಿ ಅಭಿಪ್ರಾಯಪಟ್ಟರು.

ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ನಗರದ ಪ್ರಧಾನ ಸಿವಿಲ್ ನ್ಯಾಯಾಧೀಶರ ಮತ್ತು ನ್ಯಾಯಾಲಯದಲ್ಲಿ ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೂರು ತಿಂಗಳ ಅವಧಿಯಲ್ಲಿ 1 ಭೂಸ್ವಾಧೀನ, 16 ಮೋಟಾರು ವಾಹನ ಪ್ರಕರಣ, 8 ಅಸಲು ದಾವೆ, 2 ಮೇಲ್ಮನವಿ, 9 ಚೆಕ್ ಬೌನ್ಸ್, 107 ಜನನ-ಮರಣ ದಾಖಲೆಗಳು, 1 ಅಮಲ್ಜಾರಿ, ಇತರ 2 ಒಟ್ಟು ಹಿರಿಯ ಸಿವಿಲ್ ನ್ಯಾಯಾಲಯದ 25 ಹಾಗೂ ಪ್ರಧಾನ ಸಿವಿಲ್ ನ್ಯಾಯಾಯದ 121 ಪ್ರಕರಣಗಳನ್ನು ರಾಜಿ ಮಾಡಿಸಲಾಗಿದೆ. ವಕೀಲರು ಸಹ ರಾಜಿ ಸೂತ್ರಕ್ಕೆ ತಮ್ಮ ಕಕ್ಷಿದಾರರ ಮನವೊಲಿಸಬೇಕು ಎಂದು ಕರೆ ನೀಡಿದರು.

ಅನೇಕ ಸಣ್ಣ-ಪುಟ್ಟ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ. ಕೆಲವೊಮ್ಮೆ ಇಂಥ ಪ್ರಕರಣಗಳಲ್ಲಿ ವೈಯಕ್ತಿಕ ಪ್ರತಿಷ್ಠೆ ಮುಖ್ಯವಾಗಿರುತ್ತದೆ. ಸಹಕಾರದಿಂದ ಜೀವಿಸುವುದನ್ನು ಕಲಿತರೆ ನ್ಯಾಯಾಲಯದ ಪ್ರಕರಣಗಳ ಸಂಖ್ಯೆ ತಾನಾಗಿಯೇ ಕಡಿಮೆಯಾಗುತ್ತದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಚ್.ಎಂ. ಷಡಾಕ್ಷರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಜಿ.ಸಿ. ಚಂದ್ರಪ್ಪ, ಸಿಪಿಐ ನಾಗೇಶ್ ಐತಾಳ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT