ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ: ಒಕ್ಕೂಟ ವ್ಯವಸ್ಥೆಯಲ್ಲಿ ರಾಜಿ ಇಲ್ಲ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಲೋಕಪಾಲ ಮಸೂದೆಯಲ್ಲಿರುವ ಲೋಕಾಯುಕ್ತ ನಿಯಮದ ಬಗೆಗಿನ ತನ್ನ ಕಠಿಣ ನಿಲುವಿಗೆ ಬದ್ಧವಾಗಿರುವ ತೃಣಮೂಲ ಕಾಂಗ್ರೆಸ್, ಸಂವಿಧಾನದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದೆ.

`ನಮಗೆ ಪ್ರಬಲ ಲೋಕಪಾಲ ಕಾಯ್ದೆ ಬೇಕು. ಪಕ್ಷ ಮುಂದಿಟ್ಟ ತಿದ್ದುಪಡಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ~ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಮುಕುಲ್ ರಾಯ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮಸೂದೆಯಲ್ಲಿ ಪ್ರಸ್ತಾಪವಾಗಿರುವ ಲೋಕಾಯುಕ್ತ ನಿಯಮವನ್ನು ಸಂಪೂರ್ಣವಾಗಿ ಅಳಿಸಿಹಾಕಬೇಕೆನ್ನುವ ತೃಣಮೂಲ ಕಾಂಗ್ರೆಸ್ ಪಕ್ಷದ ಬೇಡಿಕೆ ಈಡೇರಿಸುವುದು ಸುಲಭವಲ್ಲ.

ಒಂದು ಅಥವಾ ಎರಡು ತಿದ್ದುಪಡಿಗಳನ್ನು ಸರ್ಕಾರ ಒಪ್ಪಿಕೊಳ್ಳಬಹುದು ಎಂದು ಶನಿವಾರ ಗೃಹ ಸಚಿವ ಪಿ.ಚಿದಂಬರಂ ಅವರು ನೀಡಿರುವ ಹೇಳಿಕೆಗೆ ರಾಯ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಮುನ್ನ ತೃಣಮೂಲ ಕಾಂಗ್ರೆಸ್ ಸಲಹೆಯನ್ನು ಪರಿಗಣಿಸಬೇಕೆಂದು ಸರ್ಕಾರದೊಂದಿಗೆ ಒಡಂಬಡಿಕೆಯಾಗಿತ್ತು. ಹಾಗಾಗಿಯೇ ಪಕ್ಷದ ಸಂಸದರು ಮಸೂದೆಯಲ್ಲಿ ಪ್ರಸ್ತಾಪವಾದ ಲೋಕಾಯುಕ್ತಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸ್ದ್ದಿದರು ಎಂದು ರಾಯ್ ಹೇಳಿದ್ದಾರೆ.

`ಸರ್ಕಾರ ಭರವಸೆಯಂತೆ ನಡೆದುಕೊಂಡಿಲ್ಲ. ದೇಶದ ಇತರ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ಅಭಿಪ್ರಾಯದಲ್ಲಿ ಮಮತಾ ಅವರ ದನಿ ಪ್ರತಿಧ್ವನಿಯಾಗಿ ಕೇಳಿಬಂತು.

ಅಲ್ಲದೆ ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶುಭ ಲಕ್ಷಣವಲ್ಲ~ ಎಂದೂ ಅವರು ದೂರಿದ್ದಾರೆ.

ಲೋಕಪಾಲ ಪ್ರತ್ಯೇಕ ವಿಷಯವಲ್ಲ. ಕೇಂದ್ರದ ಕೈಗೆ ಲಗಾಮು ಕೊಟ್ಟು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವುದು ಸೂಕ್ತವಲ್ಲ ಎಂದು ರಾಯ್ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT