ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ್ ಮಸೂದೆ ಕರಡು ರಚನೆ ವಾಗ್ದಾಳಿ...

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪರಸ್ಪರ ವಾಗ್ದಾಳಿ ನಡುವೆಯೇ ಲೋಕಪಾಲ್ ಮಸೂದೆ ಕರಡು ರಚನಾ ಜಂಟಿ ಸಮಿತಿಯ ಮಹತ್ವದ ಸಭೆ ಬುಧವಾರ ನಡೆಯಲಿದೆ. ಈ ಸಭೆಯಲ್ಲಿ ಸರ್ಕಾರವು ನಾಗರಿಕ ಸಮಿತಿ ಪ್ರತಿನಿಧಿಗಳ ಪ್ರಮುಖ ಬೇಡಿಕೆಗಳಿಗೆ ಒಪ್ಪದಿದ್ದರೆ ಪುನಃ ಚಳವಳಿ ಆರಂಭಿಸುವುದಾಗಿ ಅಣ್ಣಾ ಹಜಾರೆ ಅವರು ಹೇಳಿದ್ದಾರೆ.

ಇದೇ ವೇಳೆ, ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದೇ ವಿನಾ ಸಂಘರ್ಷದಿಂದ ಇತ್ಯರ್ಥ ಮಾಡಿಕೊಳ್ಳಲಾಗದು ಎಂದೂ ಅಣ್ಣಾ ಹಜಾರೆ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.

`ನನ್ನ ಬಗ್ಗೆ, ಆರೆಸ್ಸೆಸ್ ಹಾಗೂ ಬಿಜೆಪಿಯ ಮುಖವಾಡ ಎಂಬ ಕಾಂಗ್ರೆಸ್ ದಾಳಿ ಮುಂದುವರಿದಿದೆ. ಹೀಗೆ ಟೀಕಿಸುವವರನ್ನು ಬಾಯಿ ಮುಚ್ಚಿಸಲು ನನ್ನಿಂದ ಆಗದು. ಆದರೆ, ಬುಧವಾರದ ಸಭೆಯಲ್ಲಿ ಕೆಲವು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಲು ನಾಗರಿಕ ಸಮಿತಿಗೆ ಎಲ್ಲ ಅಧಿಕಾರವೂ ಇದೆ~ ಎಂದು ಅಣ್ಣಾ ವಿವರಿಸಿದ್ದಾರೆ.

ನಾಗರಿಕ ಸಮಿತಿಯು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಜಂಟಿ ಸಮಿತಿಯಲ್ಲಿನ ಸರ್ಕಾರದ ಪ್ರತಿನಿಧಿಗಳಲ್ಲಿ ಒಬ್ಬರಾದ ಪ್ರಣವ್ ಮುಖರ್ಜಿ ಅವರಿಗೆ ಈಗಾಗಲೇ ಪತ್ರಗಳನ್ನು ಬರೆದಿದೆ. ಅದರಲ್ಲಿರುವಂತೆ, ಬುಧವಾರದ ಸಭೆಯಲ್ಲಿ ಕೂಡ, ಪ್ರಧಾನಿ, ನ್ಯಾಯಾಂಗ ಮತ್ತು ಸಂಸದರನ್ನು ಲೋಕಪಾಲ್ ತನಿಖೆ ವ್ಯಾಪ್ತಿಗೆ ಒಳಪಡಿಸಲು ಅವಕಾಶ ಇರಬೇಕು ಎಂದು ನಾಗರಿಕ ಸಮಿತಿ ಒತ್ತಾಯಿಸಲಿದೆ.

`ಸರ್ಕಾರ ನಮ್ಮ ಕೆಲವು ಬೇಡಿಕೆಗಳಿಗೆ ಒಪ್ಪಿದ್ದರೂ ಹಲವು ಹಾಗೆಯೇ ಬಾಕಿ ಇವೆ. ಸರ್ಕಾರಕ್ಕೆ ಸ್ಪಂದಿಸಲು ಜೂನ್ 30ರವರೆಗೆ ಕಾಲಾವಕಾಶ ಇದೆ~ ಎಂದು ಅಣ್ಣಾ ಸುದ್ದಿಗಾರರೊಂದಿಗೆ ಅಭಿಪ್ರಾಯಪಟ್ಟಿದ್ದಾರೆ.ರಾಮ್‌ಲೀಲಾ ಮೈದಾನದಲ್ಲಿ ರಾಮ್‌ದೇವ್ ಅವರ ಚಳವಳಿ ಹತ್ತಿಕ್ಕಿದ ಸರ್ಕಾರದ ಕ್ರಮ ಖಂಡಿಸಿ ಜೂನ್ 6ರಂದು ನಡೆಯಬೇಕಿದ್ದ ಜಂಟಿ ಸಮಿತಿ ಸಭೆಯನ್ನು ನಾಗರಿಕ ಸಮಿತಿ ಸದಸ್ಯರು ಬಹಿಷ್ಕರಿಸಿದ್ದರು.

`ಅಣ್ಣಾ~ಗೆ ಇಂದು 75ರ ಸಂಭ್ರಮ

ಮುಂಬೈ (ಪಿಟಿಐ):
ಭ್ರಷ್ಟಾಚಾರದ ವಿರುದ್ಧ ಚಳವಳಿಯ ದಂಡ ಕೈಗೆತ್ತಿಕೊಂಡಿರುವ ಅಣ್ಣಾ ಹಜಾರೆ ಅವರು ಬುಧವಾರ 74 ವರ್ಷಗಳನ್ನು ಪೂರೈಸಿ 75ನೇ ವಸಂತಕ್ಕೆ ಕಾಲಿರಿಸಲಿದ್ದಾರೆ.ಈ ವೇಳೆ ಅವರು ದೆಹಲಿಯಲ್ಲಿದ್ದು, ಲೋಕ್‌ಪಾಲ್ ಮಸೂದೆ ಕರಡು ರಚನಾ ಜಂಟಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ವಗ್ರಾಮವಾದ ಅಹಮ್ಮದ್‌ನಗರ ಜಿಲ್ಲೆಯ ರಾಳೇಗಾಂವ್ ಸಿದ್ದಿಯಲ್ಲಿಯೇ ಇದ್ದು, ವೈಭವವಿಲ್ಲದೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಅಣ್ಣಾ ಅವರು ರೂಢಿಸಿಕೊಂಡಿರುವ ಪರಿಪಾಠ. ಈ ವರ್ಷವೂ ಹುಟ್ಟುಹಬ್ಬ ಇದೇ ರೀತಿ ಇರುತ್ತದೆ ಎಂದು ಹಜಾರೆ ಅವರ ಸಹಾಯಕ ದತ್ತ ಆವಾರಿ ತಿಳಿಸಿದ್ದಾರೆ.

ಪ್ರತಿವರ್ಷದಂತೆ ಈ ವರ್ಷವೂ ಗಿಡಗಳನ್ನು ನೆಡಲಾಗುತ್ತದೆ. ಅನಾಥ ಮಕ್ಕಳಿಗೆ ಭೋಜನ, ರಕ್ತದಾನ, ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ನಡೆಯಲಿದೆ ಎಂದೂ ಅವರು ಹೇಳಿದ್ದಾರೆ.
ಆದರೆ ಮುಂದಿನ ವರ್ಷ ಹಜಾರೆ ಅವರು 75 ವಸಂತಗಳನ್ನು ಪೂರೈಸುವ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಆಚರಣೆ ಆಯೋಜಿಸುವ ಯೋಚನೆ ಇದೆ ಎಂದೂ ದತ್ತ ಇದೇ ವೇಳೆ ತಿಳಿಸಿದ್ದಾರೆ.


ಈ ಮಧ್ಯೆ ಅಣ್ಣಾ ಹಜಾರೆ ಅವರನ್ನು `ಚುನಾಯಿತರಲ್ಲದ ನಿರಂಕುಶ ಪ್ರಭು~ ಎಂದು ಕಾಂಗ್ರೆಸ್ ಚುಚ್ಚಿದೆ. ಮತ್ತೊಂದೆಡೆ, ಪ್ರಣವ್ ಮುಖರ್ಜಿ ಅವರ ಹೇಳಿಕೆಗಳು ಪ್ರಜಾಪ್ರಭುತ್ವದ ಘನತೆಗೆ ಕುಂದು ತಂದಿವೆ ಎಂದು ನಾಗರಿಕ ಸಮಿತಿ ಸದಸ್ಯರು ದೂಷಿಸಿದ್ದಾರೆ.

`ನನ್ನ ಜೀವಮಾನದಲ್ಲಿ ಎಂದಿಗೂ ನಾನು ಯಾವ ರಾಜಕೀಯ ಪಕ್ಷದ ಹತ್ತಿರಕ್ಕೂ ಸುಳಿದಿಲ್ಲ. ಪಕ್ಷಗಳ ನಡುವೆ ಈಗ ಭೇದವೇನೂ ಇಲ್ಲ. ಕೆಲವರು ಭ್ರಷ್ಟಾಚಾರದಲ್ಲಿ ಪದವೀಧರರಾಗಿದ್ದರೆ ಇನ್ನು ಕೆಲವರು ಪಿಎಚ್.ಡಿ. ಮಾಡಿದ್ದಾರೆ~ ಎಂದು ಅಣ್ಣಾ ವ್ಯಂಗ್ಯವಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT