ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಹ ಸಂಗ್ರಹ ಜ.15ರಿಂದ ಆರಂಭ

ಪಟೇಲ್‌ ಪ್ರತಿಮೆ ನಿರ್ಮಾಣಕ್ಕೆ ಭೂಮಿಕೆ ಸಿದ್ಧ
Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗುಜರಾತ್‌ನಲ್ಲಿ ಜಗತ್ತಿನ ಅತಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಭೂಮಿಕೆ ಸಿದ್ಧವಾಗಿದೆ. ಉಕ್ಕಿನ ಮನುಷ್ಯ ಸರ್ದಾರ್‌ ವಲಭಭಾಯಿ ಪಟೇಲ್‌ ಅವರ ಪ್ರತಿಮೆ ಸ್ಥಾಪನೆಗೆ ದೇಶದ ಎಲ್ಲ ಹಳ್ಳಿಗಳಿಂದಲೂ ಬಳಸಿದ ಕಬ್ಬಿಣ ಮತ್ತು ಮಣ್ಣು ಸಂಗ್ರಹಿಸುವ ಅಭಿಯಾನದ ಹಿನ್ನಲೆಯಲ್ಲಿ ಭಾನುವಾರ ಏಕತಾ ಓಟ ಆಯೋಜಿಸಲಾಗಿದೆ.

ದೇಶದ ಎಲ್ಲ 550 ಜಿಲ್ಲಾ ಕೇಂದ್ರಗಳಲ್ಲಿಯೂ ಏಕತಾ ಓಟ ನಡೆಯಲಿದೆ. ಅದೇ ರೀತಿ ರಾಜ್ಯದ 31 ಸ್ಥಳಗಳಲ್ಲಿ ಭಾನುವಾರ ಬೆಳಿಗ್ಗೆ 8ಕ್ಕೆ ಏಕತಾ ಓಟ ಆಯೋಜಿಸಿದ್ದು, ಇದರಲ್ಲಿ ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವರೂ ಆದ ರಾಜ್ಯದ ಲೋಹ ಸಂಗ್ರಹಣಾ ಸಮಿತಿ ಅಧ್ಯಕ್ಷ ಮುರುಗೇಶ ನಿರಾಣಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸರ್ದಾರ್‌ ವಲಭಭಾಯಿ ಪಟೇಲ್‌ ಏಕತಾ ಟ್ರಸ್ಟ್ ಅಧ್ಯಕ್ಷ ನರೇಂದ್ರ ಮೋದಿ ಅವರು ಭಾನುವಾರ ಬೆಳಿಗ್ಗೆ 8ಕ್ಕೆ ಗುಜರಾತ್‌ನಲ್ಲಿ ಏಕತಾ ಓಟಕ್ಕೆ ಚಾಲನೆ ನೀಡುವರು ಎಂದರು.

ಜನವರಿ 15ರಿಂದ 26ರವರೆಗೆ ದೇಶದ ಎಲ್ಲ ಗ್ರಾಮಗಳಿಂದಲೂ ಬಳಕೆ ಮಾಡಿದ ಕಬ್ಬಿಣ ಸಂಗ್ರಹಿಸಲಾಗು­ವುದು. ಒಂದು ಗ್ರಾಮದಿಂದ ಕನಿಷ್ಠ ಒಂದು ತುಂಡು ಕಬ್ಬಿಣ ಸಂಗ್ರಹಿಸು­ವುದು. ಹೀಗೆ ಪ್ರತಿ ಜಿಲ್ಲೆಯಿಂದ ಐದೈದು ಟನ್‌ ಕಬ್ಬಿಣ ಸಂಗ್ರಹಿಸುವ ಉದ್ದೇಶ ಇದೆ ಎಂದು ಹೇಳಿದರು.

ಗ್ರಾಮಗಳಲ್ಲಿ ಒಂದು ತುಂಡಿಗಿಂತ ಹೆಚ್ಚು ಕಬ್ಬಿಣ ಸಂಗ್ರಹಿಸುವ ಉದ್ದೇಶ ಇಲ್ಲ. ಊರಿನ ಜನರೇ ಯಾರ ಮನೆಯ ಕಬ್ಬಿಣದ ತುಂಡನ್ನು ತೆಗೆದುಕೊಂಡು ಹೋಗಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ. ಕೆಲವು ಕಡೆ ಈ ವಿಷಯದಲ್ಲಿ ಗೊಂದಲ ಉಂಟಾದರೆ, ಅಂತಹ ಕಡೆ ಎಲ್ಲರಿಂದಲೂ ಕಬ್ಬಿಣ ಸ್ವೀಕರಿಸಲಾಗುವುದು ಎಂದರು.

ದೇಶದ ಪ್ರತಿಯೊಂದು ಹಳ್ಳಿಯ ಮಣ್ಣು ಮತ್ತು ಕಬ್ಬಿಣ ಪ್ರತಿಮೆ ನಿರ್ಮಾಣದಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಎಲ್ಲ ಕಡೆಯಿಂದಲೂ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ಈ ಸಲುವಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಲೋಹ ಮತ್ತು ಮಣ್ಣು ಸಂಗ್ರಹದ ನಂತರ ಅದನ್ನು ತೆಗೆದುಕೊಂಡು ಹೋಗಲು ಗುಜರಾತ್‌ನಿಂದಲೇ ಲಾರಿಗಳು ಬರುತ್ತವೆ ಎಂದು ಅವರು ಹೇಳಿದರು.

ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರ ಭಾವಚಿತ್ರಗಳನ್ನೂ ಈ ಸಂದರ್ಭದಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಎಲ್ಲರಿಗೂ ಆಹ್ವಾನ: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏಕತಾ ಓಟ ಆಯೋಜಿಸಿದ್ದು, ಎಲ್ಲ ಪಕ್ಷಗಳ ಮುಖಂಡರಿಗೂ ಆಹ್ವಾನ ನೀಡಲಾಗು­ವುದು. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ವಿರೋಧಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿ­ದಂತೆ ಎಲ್ಲರನ್ನೂ ಆಹ್ವಾನಿಸಲಾಗು­ವುದು ಎಂದು  ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ವಾತಂತ್ರ್ಯ ಉದ್ಯಾನವನದಿಂದ ಕೆ.ಆರ್‌.ವೃತ್ತ, ಸಿವಿಲ್‌ ಕೋರ್ಟ್‌ ನಂತರ ಸ್ವಾತಂತ್ರ್ಯ ಉದ್ಯಾನವನದಲ್ಲೇ ಓಟ ಕೊನೆಗೊಳ್ಳಲಿದೆ ಎಂದರು.
ಲೋಹ ಸಂಗ್ರಹಣಾ ಸಮಿತಿಯ ಸಹ ಸಂಚಾಲಕ ಸಚ್ಚಿದಾನಂದ ಮೂರ್ತಿ, ಪ್ರಚಾರ ಸಮಿತಿ ಸಂಚಾಲಕ ನಾಗರಾಜ ಬಿ.ಜಮಖಂಡಿ, ಬೆಂಗಳೂರು ಸಮಿತಿಯ ಸಂಚಾಲಕರಾದ ಲಕ್ಷ್ಮೀಕಾಂತ್‌ ಮತ್ತು ಕೆ.ಗಣೇಶ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT