ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಹದ ಹಕ್ಕಿಗಳ ಹಾರಾಟಕ್ಕೆ ಕ್ಷಣಗಣನೆ...

Last Updated 4 ಫೆಬ್ರುವರಿ 2013, 19:40 IST
ಅಕ್ಷರ ಗಾತ್ರ

ಬೆಂಗಳೂರು: ರಕ್ಷಣಾ ಇಲಾಖೆಯ ಆಶ್ರಯದಲ್ಲಿ ನಗರದ ಯಲಹಂಕದ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಚಮತ್ಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಲಹಂಕದ ವಾಯುನೆಲೆಯು ಹಳೆಯ `ಟೈಗರ್ ಮಾತ್' ಹಾಗೂ ಭಾರತೀಯ ವಾಯುಸೇನೆಗೆ ಇತ್ತೀಚೆಗೆ  ಸೇರ್ಪಡೆಯಾದ `ಸಿ-17 ಗ್ಲೋಬ್ ಮಾಸ್ಟರ್-3' ವಿಮಾನಗಳನ್ನು ಪ್ರದರ್ಶನಕ್ಕೆ ಇಡಲಿದೆ.

ಎರಡು ತಲೆಮಾರಿನ ವಿಮಾನಗಳ ಸಮ್ಮಿಲನಕ್ಕೆ ಪ್ರದರ್ಶನ ಸಾಕ್ಷಿಯಾಗಲಿದೆ. ಫೆ. 6ರಿಂದ 10ರವರೆಗೆ ನಡೆಯಲಿರುವ ಒಂಬತ್ತನೇ ಭಾರತೀಯ ವೈಮಾನಿಕ ಪ್ರದರ್ಶನ `ಏರೋ ಇಂಡಿಯಾ-2013'ಕ್ಕೆ ಬುಧವಾರ ಬೆಳಿಗ್ಗೆ 10ಕ್ಕೆ ರಕ್ಷಣಾ ಸಚಿವ ಎ.ಕೆ. ಆಂಟನಿ ಚಾಲನೆ ನೀಡುವರು.

ಟೈಗರ್ ಮಾತ್ ವಿಮಾನವು ಮೊದಲ ಬಾರಿಗೆ ಪ್ರದರ್ಶನದಲ್ಲಿ ಚಮತ್ಕಾರ ತೋರಲಿದೆ. `ಮಾತ್' ಹಾಗೂ `ಮಾಸ್ಟರ್' ಅವಧಿಯ ತಾಂತ್ರಿಕ ಅಭಿವೃದ್ಧಿಯ ಬಗ್ಗೆ ಈ ವಿಮಾನ ಬೆಳಕು ಚೆಲ್ಲಲಿದೆ.

ಎರಡು ರೆಕ್ಕೆಯ ಈ ವಿಮಾನ ಎರಡು ಸೀಟುಗಳನ್ನು ಹೊಂದಿದೆ. ಈ ವಿಮಾನವನ್ನು ಎರಡನೇ ವಿಶ್ವ ಸಮರದ ಸಮಯದಲ್ಲಿ ಪ್ರಾರಂಭಿಕ ತರಬೇತಿ ವಿಮಾನವನ್ನಾಗಿ ಬಳಸಲಾಗುತ್ತಿತ್ತು. 1940ರಿಂದಲೂ ಭಾರತೀಯ ವಾಯುಪಡೆಯ ತರಬೇತಿ ವಿಮಾನವಾಗಿ ಕಾರ್ಯನಿರ್ವಹಿಸುತ್ತಿತ್ತು. ವಾಯುನೆಲೆಯ ತರಬೇತಿ ಶಾಲೆಗಳಲ್ಲಿ ಇದನ್ನು ಬಳಸಲಾಗುತ್ತಿತ್ತು. ಬಳಿಕ ಎಚ್‌ಟಿ-2 ಇದರ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು.

ಟೈಗರ್ ಮಾತ್‌ಗೆ ವಿದ್ಯುತ್ ವ್ಯವಸ್ಥೆ ಇಲ್ಲ. ಈ ವಿಮಾನದ ಮೋಟಾರನ್ನು ಜನರೇಟರ್ ಯಂತ್ರದಂತೆ ಕೈಯಿಂದಲೇ ತಿರುಗಿಸಿ ಶುರು ಮಾಡಬೇಕಾಗುತ್ತದೆ. ಅಲ್ಲದೆ ಇದಕ್ಕೆ ಇಂಧನವನ್ನು ಕೈಯಿಂದಲೇ ಹಾಕಬೇಕಿದೆ.  

ಅಮೆರಿಕದ ಇತ್ತೀಚಿನ ಅತ್ಯಾಧುನಿಕ ಬಹುಭಾರದ ವಿಮಾನವನ್ನು ಭಾರತೀಯ ವಾಯುಸೇನೆಯು ಪಡೆದಿದೆ. ಗ್ಲೋಬ್ ಮಾಸ್ಟರ್ ವಿಮಾನವು ಯುದ್ಧವಾಹನಗಳು, ಫಿರಂಗಿ ಗನ್‌ಗಳು ಸೇರಿದಂತೆ 77.5 ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಈ ವಿಮಾನ ನಾಲ್ಕು ಎಂಜಿನ್‌ಗಳನ್ನು ಹೊಂದಿದೆ.

ಪ್ರದರ್ಶನದಲ್ಲಿ 40ಕ್ಕೂ ಅಧಿಕ ದೇಶಗಳು ಪಾಲ್ಗೊಳ್ಳಲಿವೆ. ಅಮೆರಿಕ, ರಷ್ಯಾ, ಫ್ರಾನ್ಸ್, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ ಅವುಗಳಲ್ಲಿ ಪ್ರಮುಖವಾಗಿವೆ. 53 ವಿಮಾನಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಕಳೆದ ಸಲ 75 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಬಾರಿ ಅದರ ವ್ಯಾಪ್ತಿಯನ್ನು 1.25 ಲಕ್ಷ ಚದರ ಮೀಟರ್‌ಗೆ ವಿಸ್ತರಿಸಲಾಗಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ (ಎಚ್‌ಎಎಲ್) ನಿರ್ಮಿಸಲಾದ ಬಹುಪಯೋಗಿ ಯುದ್ಧ ವಿಮಾನಗಳು ಈ ಬಾರಿ ಚಮತ್ಕಾರ ತೋರಲಿವೆ. ಶಸ್ತ್ರ ಸನ್ನದ್ಧವಾದ ಹಗುರ ಹೆಲಿಕಾಪ್ಟರ್ (ಎಎಲ್‌ಎಚ್) `ರುದ್ರ', ಮಾನವರಹಿತ ಯುದ್ಧ ವಿಮಾನ `ಲಕ್ಷ್ಯ', ಉಡಾವಣಾ ವಾಹನ `ನಿಶಾಂತ', ಹಗುರ ವಿಮಾನ `ಆಕಾಶದೀಪ' ಭಾರತದ ಪ್ರಧಾನ ಆಕರ್ಷಣೆಗಳಾಗಿವೆ.

ವಿಶೇಷ ಬಸ್ ಸೌಲಭ್ಯ
ಬೆಂಗಳೂರು: ಯಲಹಂಕದ ಭಾರತೀಯ ವಾಯುಪಡೆಯ ವಾಯುನೆಲೆಯಲ್ಲಿ ಇದೇ 6ರಿಂದ 10ರ ವರೆಗೆ ನಡೆಯಲಿರುವ `ಏರೋ ಇಂಡಿಯಾ-2013' ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಪ್ರದರ್ಶನ ವೀಕ್ಷಿಸಲು ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ವಿಶೇಷ ಬಸ್ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ.

ವೈಮಾನಿಕ ಪ್ರದರ್ಶನವು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿರುವ ಕಾರಣ ಬೆಳಿಗ್ಗೆ 8 ಗಂಟೆಯಿಂದ ನಗರದ ವಿವಿಧ ಭಾಗಗಳಿಂದ ಹೆಚ್ಚುವರಿ ಬಸ್ಸುಗಳನ್ನು ಓಡಿಸಲಾಗುವುದು. ಕೆಂಪೇಗೌಡ ಬಸ್ ನಿಲ್ದಾಣ, ಎಂ.ಜಿ. ರಸ್ತೆ ಬಳಿ ಇರುವ ಮಾಣೆಕ್ ಷಾ ಪೆರೇಡ್ ಮೈದಾನ, ಹೆಬ್ಬಾಳ ರಿಂಗ್ ರಸ್ತೆ ವೃತ್ತ, ಯಲಹಂಕದಿಂದ ವಿಶೇಷ ಸಾರಿಗೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದಲ್ಲಿ ಯಶವಂತಪುರ ಬಸ್ ನಿಲ್ದಾಣ, ಜಯನಗರ ಬಸ್ ನಿಲ್ದಾಣ,  ಕೋರಮಂಗಲ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತಿತರ ಸ್ಥಳಗಳಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗುವುದು.

ಸಂಸ್ಥೆಯ ಯಶವಂತಪುರ ಬಸ್ ನಿಲ್ದಾಣ,  ಶಾಂತಿನಗರ ಬಸ್ ನಿಲ್ದಾಣ, ಜಯನಗರ ಬಸ್ ನಿಲ್ದಾಣ, ಕೋರಮಂಗಲ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರ ವಾಹನಗಳಿಗೆ ವಾಹನ ನಿಲುಗಡೆ ವ್ಯವಸ್ಥೆ ಇದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಇಲ್ಲಿ ನಿಲ್ಲಿಸಿ ಸಂಸ್ಥೆಯ ಸೇವೆಗಳನ್ನು ಬಳಸಿಕೊಳ್ಳಬೇಕು ಎಂದು ಬಿಎಂಟಿಸಿ ವಿನಂತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT