ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವನ್ಯಮೃಗ ಹಾವಳಿ ನಿಯಂತ್ರಣಕ್ಕೆ ತಂತಿ ಬೇಲಿ'

Last Updated 5 ಜುಲೈ 2013, 6:46 IST
ಅಕ್ಷರ ಗಾತ್ರ

ಹಾವೇರಿ: `ಜಿಲ್ಲೆಯಲ್ಲಿ ಹೆಚ್ಚಾಗಿರುವ ವನ್ಯಮೃಗಗಳಾದ ಜಿಂಕೆ, ಕೃಷ್ಣಮೃಗ ಹಾಗೂ ಕಾಡು ಹಂದಿಗಳ ಹಾವಳಿ ತಡೆಗಟ್ಟಲು ರಾಣೆಬೆನ್ನೂರಿನ ಕೃಷ್ಣಮೃಗ ಧಾಮದಲ್ಲಿ ಪ್ರತ್ಯೇಕ ಎರಡು ಕಡೆಗಳಲ್ಲಿ ತಂತಿ ಬೇಲಿ ಹಾಕುವ ಮೂಲಕ ಅವುಗಳನ್ನು ಹಿಡಿದಿಡಲು ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ರೈತರಿಗೆ ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವನ್ಯಜೀವಿಗಳ ನಿಯಂತ್ರಣ ಕುರಿತು ರೈತ ಸಂಘಟನೆಗಳ, ರೈತ ಮುಖಂಡರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲು ಜಿಲ್ಲಾಧಿಕಾರಿಗಳು ಗುರುವಾರ ಕರೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾಣೆಬೆನ್ನೂರ, ಬ್ಯಾಡಗಿ, ಹಿರೇಕೆರೂರ, ಹಾವೇರಿ, ಸವಣೂರು ತಾಲ್ಲೂಕುಗಳಲ್ಲಿ ಈ ವನ್ಯ ಜೀವಿಗಳಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ರಾಣೆಬೆನ್ನೂರಿನ ಕೃಷ್ಣಮೃಗಗಳನ್ನು ಸಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೂ ಮೊದಲು ಧಾರವಾಡ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಶಿರೂರ ಮಾತನಾಡಿ, 2007 ರಲ್ಲಿ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಜಿಲ್ಲೆಯಾದ್ಯಂತ 5,500 ಜಿಂಕೆಗಳಿದ್ದವು, ಈಗ ಅವುಗಳ ಸಂಖ್ಯೆ 11 ಸಾವಿರ ದಾಟಿದೆ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಆವರಿಸಿದ ಪರಿಣಾಮ ಅರಣ್ಯದಲ್ಲಿರುವ ಜಿಂಕೆಗಳಿಗೆ ಆಹಾರ, ನೀರು ಹುಡುಕಿಕೊಂಡು ರೈತರ ಹೊಲಗಳಿಗೆ ನುಗುತ್ತಿವೆ. ಅಲ್ಲಿನ ಬೆಳೆಗಳನ್ನು ನಾಶ ಮಾಡುತ್ತಿವೆ ಎಂದು ಹೇಳಿದರು.

ರೈತರ ಬೆಳೆ ಹಾನಿಗೆ ಇಲಾಖೆಯಿಂದ ಪರಿಹಾರ ನೀಡಲಾಗುತ್ತದೆ, ಆದರೆ, ಹಾನಿಯ ಪ್ರಮಾಣದಷ್ಟು ಪರಿಹಾರ ನೀಡಲಾಗುತ್ತಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವಾನಂದ ಗುರುಮಠ, ರಾಮಣ್ಣ ಕೆಂಚಳ್ಳೇರ, ಜಿ.ಎ.ಹಿರೇಮಠ ಮಾತನಾಡಿ, ಗಿಡಗಳನ್ನು ಕಡಿದರೆ, ಜಿಂಕೆಗಳನ್ನು ಹೊಡೆದರೆ ಅರಣ್ಯ ಇಲಾಖೆಯವರು ಶಿಕ್ಷೆ ವಿಧಿಸುತ್ತಾರೆ. ಆದರೆ, ವನ್ಯ ಪ್ರಾಣಿಗಳು ರೈತರ ಜಮೀನನಲ್ಲಿಯ ಎಲ್ಲ ಬೆಳೆಗಳನ್ನು ತಿಂದು ಹಾಕಿದರೆ ನಾವ್ಯಾರಿಗೆ ಶಿಕ್ಷೆ ಕೊಡಬೇಕು ಎಂದು ಪ್ರಶ್ನಿಸಿದರು.

ವನ್ಯಜೀವಿಗಳು ಹಾನಿ ಮಾಡಿದ ಬೆಳೆಗೆ ಅರಣ್ಯ ಇಲಾಖೆ ನೀಡುವ ಪರಿಹಾರ ತೀರಾ ಕಡಿಮೆಯಿದೆ. ಒಂದು ಎಕರೆಗೆ ರೈತರು 20-30 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಬೆಳೆ ಹಾನಿಯಾದ ಒಂದು ಎಕರೆಗೆ ಕೇವಲ ಮೂರು ಸಾವಿರ ರೂಪಾಯಿ ಪರಿಹಾರವನ್ನು ನೀಡುತ್ತದೆ. ಅದು ಪರಿಶೀಲನೆ, ವರದಿ ಕಳಿಸಿ ಒಂದು ವರ್ಷದ ನಂತರ ಪರಿಹಾರ ನೀಡಲಾಗುತ್ತದೆ. ಸರ್ಕಾರಕ್ಕೆ ಈ ಕುರಿತು ಪತ್ರ ಬರೆದು ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಪರಿಹಾರ ನೀಡುವುದರಲ್ಲಿಯೂ ಪ್ರಾದೇಶಿಕ ತಾರತಮ್ಯ ಮಾಡಲಾಗುತ್ತದೆ. ಹಳೇ ಮೈಸೂರ ಭಾಗದಲ್ಲಿ ಆನೆಗಳ ಹಾವಳಿಯಿಂದ ಜೀವಹಾನಿ, ಬೆಳೆ ನಾಶವಾದರೆ ನೀಡುವ ಪರಿಹಾರಕ್ಕೂ, ಉತ್ತರ ಕರ್ನಾಟಕದಲ್ಲಿ ವನ್ಯಜೀವಿಗಳಿಂದ ಆಗುವ ಜೀವ ಹಾನಿ, ಬೆಳೆಹಾನಿ ಪರಿಹಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದರು.

ರೈತರ ಎಲ್ಲ ವಿಚಾರಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿ ತಂತಿಬೇಲಿ ಹಾಕಿ ಅವುಗಳನ್ನು ಅಲ್ಲಿ ಸಾಗಿಸಲಾಗುತ್ತದೆ. ಪರಿಹಾರ ಇನ್ನಿತರ ನಿರ್ಧಾರಗಳನ್ನು ಸರ್ಕಾರವೇ ತೆಗೆದುಕೊಳ್ಳಬೇಕಾಗುವುದರಿಂದ ಅಲ್ಲಿಗೆ ಪತ್ರ ಬರೆಯಲಾಗುತ್ತದೆ ಎಂದು ಹೇಳಿದರು.

ಗ್ರಾ.ಪಂ. ಮಟ್ಟದಲ್ಲಿ ಪಹಣಿ ವಿತರಣೆಗೆ ಒತ್ತಾಯ
ರೈತರ ಪ್ರತಿಯೊಂದು ಕೆಲಸಕ್ಕೆ ಪಹಣಿಪತ್ರಿಕೆ ಅವಶ್ಯವಾಗಿದ್ದು, ಪಹಣಿ ಪಡೆಯಲು ರೈತರು ನೂರಾರು ರೂಪಾಯಿ ಖರ್ಚು ಮಾಡಿಕೊಂಡು ತಾಲ್ಲೂಕು ಕೇಂದ್ರಗಳಿಗೆ ಹೋಗಬೇಕಿದೆ. ಅದನ್ನು ತಪ್ಪಿಸಲು ಗ್ರಾಮ ಪಂಚಾಯಿತಿಗಳಲ್ಲಿಯೇ ಪಹಣಿ ವಿತರಣಾ ಕೇಂದ್ರ ಆರಂಭಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT