ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯೋಮಿತಿ ಸಡಿಲಿಕೆ ಭರವಸೆ

Last Updated 1 ಅಕ್ಟೋಬರ್ 2011, 20:05 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಸಂಸ್ಥೆ ಬಸ್‌ಗಳ ಪ್ರಯಾಣದಲ್ಲಿ ಶೇ 25ರಷ್ಟು ರಿಯಾಯಿತಿ ಪಡೆಯಲು ಹಿರಿಯ ನಾಗರಿಕರಿಗೆ ನಿಗದಿ ಪಡಿಸಿರುವ ವಯೋಮಿತಿಯನ್ನು 65ರಿಂದ 60ಕ್ಕೆ ಇಳಿಸಲು ಪ್ರಯತ್ನ ನಡೆಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ. ಪಾಟೀಲ ಶನಿವಾರ ಇಲ್ಲಿ ಭರವಸೆ ನೀಡಿದರು.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು.

`ಈ ಸಂಬಂಧ ಸಾರಿಗೆ ಸಚಿವರೊಂದಿಗೆ ಚರ್ಚಿಸಲಾಗುವುದು. ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುವುದು~ ಎಂದರು.

`ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗಾಗಿ ಪ್ರಾರಂಭಿಕ ಹಂತದಲ್ಲಿ ರಾಜ್ಯದ ಪ್ರತಿ ವಿಭಾಗೀಯ ಮಟ್ಟದಲ್ಲಿ ಸಂಚಾರಿ ವೈದ್ಯಕೀಯ ಸೇವಾ ಘಟಕ ಪ್ರಾರಂಭಿಸಲಾಗುವುದು~ ಎಂದರು.

ಸಮಾಜದ ಆಸ್ತಿ: ಕಾನೂನು ಆಯೋಗದ ಅಧ್ಯಕ್ಷ ವಿ.ಎಸ್. ಮಳಿಮಠ್,   `ಹಿರಿಯರು ಸಮಾಜದ ಆಸ್ತಿ.  ಆದರೆ, ಇಂದು ಅವರು ಸರ್ಕಾರದ ಪಿಂಚಣಿ ಅವಲಂಬಿಸುವಂತಹ ಸ್ಥಿತಿ ನಿರ್ಮಾಣವಾಗಿದೆ~ ಎಂದು ವಿಷಾದಿಸಿದರು.
`ಈ ಹಿಂದೆ ಹಿರಿಯರನ್ನು ಗೌರವದಿಂದ ನೋಡಿಕೊಳ್ಳಲಾಗುತ್ತಿತ್ತು. ಹಿರಿಯರು ಎಂದಿಗೂ ಸಮಸ್ಯೆಯಾಗಿರಲಿಲ್ಲ. ಹಿರಿಯ ಅನುಭವಿಗಳು ಕುಟುಂಬದ ಮಾರ್ಗದರ್ಶಕರಾಗಿದ್ದರು~ ಎಂದರು.

 ಸನ್ಮಾನಿತರ ಪರವಾಗಿ ಮಾತನಾಡಿದ ಹರಿಕೃಷ್ಣ ಪುನರೂರು,`ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಬದಲಿಗೆ ಹಣ ಗಳಿಸುವ ಯಂತ್ರಗಳನ್ನಾಗಿ ಮಾರ್ಪಡಿಸುತ್ತಿದ್ದೇವೆ~ ಎಂದು ವಿಷಾದಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶತಾಯುಷಿ ಪಂಡಿತ್ ಸುಧಾಕರ್ ಚತುರ್ವೇದಿ (ಸಾಹಿತ್ಯ), ಬಿ.ಯು. ಕೃಷ್ಣಮೂರ್ತಿ (ಕ್ರೀಡೆ), ವಕೀಲ ಸಿ.ಎಂ. ಕುಲಕರ್ಣಿ (ಕಾನೂನು), ಶ್ರೀಶೈಲಪ್ಪ ಮಲ್ಲೇಶಪ್ಪ ರಮಣಿ (ಕಲೆ), ಧರ್ಮದರ್ಶಿ ಹರಿಕೃಷ್ಣ ಪುನರೂರು (ಸಮಾಜ ಸೇವೆ), ತಿಮ್ಮಪ್ಪ ಬಿನ್ ಅಂಗಡಿ ಯಾಲಕ್ಕಗೌಡ (ಶೈಕ್ಷಣಿಕ) ಅವರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ `ಹೆಲ್ಪೇಜ್ ಇಂಡಿಯಾ~ ಸಂಸ್ಥೆಗೂ ಗೌರವ ಸಲ್ಲಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಮೇಶ್ ಬಿ. ಝಳಕಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ನಿರ್ದೇಶಕ ವಿ.ಎ. ಮಾಚಕನೂರ, ಕೆಸಿಸಿಎಫ್ ಅಧ್ಯಕ್ಷ ಜಿ.ಪಿ. ಪಾಟೀಲ್ ಉಪಸ್ಥಿತರಿದ್ದರು.

300 ವರ್ಷ ಬದುಕುವ ಬಯಕೆ!
`ನನಗಿನ್ನೂ 122 ವರ್ಷ. 150 ವರ್ಷವೂ ಆಗಿಲ್ಲ. ಹೀಗಾಗಿ, ಹೇಗೆ ಸಾಯಲು ಸಾಧ್ಯ? 300 ವರ್ಷ ಬದುಕಲು ಇಚ್ಛೆಪಟ್ಟಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು~ಹೀಗೆ ಕೋರಿದವರು ಶತಾಯುಷಿ ಪಂಡಿತ್ ಸುಧಾಕರ್ ಚತುರ್ವೇದಿ.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, `ಬ್ರಹ್ಮಚರ್ಯವೇ ಈ ಶತಾಯುಷಿಯ ದೀರ್ಘಾಯುಷ್ಯದ ಗುಟ್ಟು. ಅದರಲ್ಲೂ ನಾನು ನಿಷ್ಠಾವಂತ ಬ್ರಹ್ಮಚಾರಿ. ಇಂಥ ಬ್ರಹ್ಮಚಾರಿಗಳು ಕೋಟಿಗೊಬ್ಬರು ಸಿಗುತ್ತಾರೆ~ ಎಂದು ಅವರು ಹೇಳಿದರು.
              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT