ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಾಂಬಿಕೆ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಾಗರ ತಾಲ್ಲೂಕಿನ ವರದಾಮೂಲದ ವರದಾಂಬಿಕಾ ದೇವಿ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ. ಇದು ವರದಾ ನದಿಯ ಮೂಲ ಸ್ಥಾನವಾದ್ದರಿಂದ ಈ ಊರಿಗೆ ವರದಾಮೂಲ ಎಂಬ ಹೆಸರು ಬಂದಿದೆ.

ಈ ಕ್ಷೇತ್ರಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಹಿಂದೆ ವರದಾ ದೇವಿಯ ಮೂಲವಿಗ್ರಹವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದರು. ನಂತರ ಮತ್ತೊಂದು ವಿಗ್ರಹವನ್ನು ಮಾಡಿಸಿ ಪ್ರತಿಷ್ಠಾಪಿಸಲಾಯಿತು.

ಈ ಕ್ಷೇತ್ರ ಶಿವನ ಬ್ರಹ್ಮ ಹತ್ಯಾದೋಷ ನಿವಾರಣೆಯಾದ ಸ್ಥಳ ಎಂಬ ಐತಿಹ್ಯವಿದೆ. ಬ್ರಹ್ಮನ ಒಂದು ಶಿರವನ್ನು ಕತ್ತರಿಸಿದ್ದರಿಂದ ಶಿವನಿಗೆ ಹತ್ಯಾದೋಷ ಬಂತು. ಅದರ ನಿವಾರಣೆಗೆ ಶಿವನು ವರದಾಮೂಲದಲ್ಲಿ ತಪಸ್ಸು ಮಾಡಿದ ಎನ್ನಲಾಗಿದೆ. ಆಗ ವಿಷ್ಣುವು ಪಾಂಚಜನ್ಯವೆಂಬ ತನ್ನ ಶಂಖದಲ್ಲಿರುವ ಭಾಗೀರಥಿಯನ್ನು ಶಿವನ ತಲೆಯ ಮೇಲೆ ಸುರಿದು ಅಭಿಷೇಕ ಮಾಡಿದನು. ಶಿವನ ದೋಷ ನಿವಾರಣೆ ಮಾಡಿ ನೆಲದಮೇಲೆ ವಿರಾಜಿಸಿದ ಭಾಗೀರಥಿಯನ್ನು ದೇವತೆಗಳು `ವರದಾ~ ಎಂಬ ಹೆಸರಿನಿಂದ ಕರೆದರು ಎಂಬ ಐತಿಹ್ಯವಿದೆ. ಈ ಸ್ಥಳವನ್ನು `ವರದಾ ತೀರ್ಥ~ ಎಂದೂ ಕರೆಯುತ್ತಾರೆ.

ಇಲ್ಲಿ ವರದಾಂಬಿಕಾ ವಿಗ್ರಹದ ಕೆಳಗೆ ಚಕ್ರ ತೀರ್ಥವಿದೆ. ಇಲ್ಲಿಂದ ದೇವಸ್ಥಾನದ ಪ್ರಾಕಾರದಲ್ಲಿರುವ ಲಕ್ಷ್ಮೀ ತೀರ್ಥಕ್ಕೆ ಬಂದು  `ಸರ್ವ ತೀರ್ಥ~ದ ಮೂಲಕ ಈಶಾನ್ಯ ದಿಕ್ಕಿಗೆ ನದಿ ರೂಪದಲ್ಲಿ ಹರಿದು ಬನವಾಸಿಯ ಮಾರ್ಗವಾಗಿ ಸಾಗಿ ತುಂಗಾ ನದಿಯಲ್ಲಿ ಸಂಗಮವಾಗಿ ಕೊನೆಗೆ ಕೃಷ್ಣಾ ನದಿಯನ್ನು ಸೇರಿ ಅಂತಿಮವಾಗಿ ಪೂರ್ವ ಕರಾವಳಿಯಲ್ಲಿ ಸಮುದ್ರ ಸೇರುತ್ತದೆ. ಇಲ್ಲಿ ಲಕ್ಷ್ಮೀತೀರ್ಥ, ಅಗ್ನಿತೀರ್ಥ, ಅಗಸ್ತ್ಯತೀರ್ಥ, ರಾಮತೀರ್ಥ, ಗೋಪಾಲಕೃಷ್ಣ ತೀರ್ಥಗಳೆಂಬ ಪುಷ್ಕರಣಿಗಳಿವೆ. ಇವುಗಳಲ್ಲಿ  ಮಿಂದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಲ್ಲಿರುವ ಪ್ರಸನ್ನ ಗಣಪತಿಯನ್ನು ಪೂಜಿಸಿದರೆ ಚೌತಿಚಂದ್ರ ದರ್ಶನ ದೋಷ ನಿವಾರಣೆಯಾಗುತ್ತದೆಂಬ ನಂಬಿಕೆ ಇದೆ.

ವರದಾ ಮೂಲದಲ್ಲಿ ಪ್ರತಿ ಎಳ್ಳಮವಾಸ್ಯೆ ದಿನ ಜಾತ್ರೆ ನಡೆಯುತ್ತದೆ. ನವರಾತ್ರಿಯಲ್ಲಿ ವಿಶೇಷ ಪೂಜೆ, ವಿಜಯ ದಶಮಿಯಂದು ಉತ್ಸವ ನಡೆಯುತ್ತವೆ. ಇಲ್ಲಿರುವ ತೀರ್ಥಗಳಲ್ಲಿ ವೈಶಾಖ, ಶ್ರಾವಣ, ಕಾರ್ತಿಕ, ಮಾಘ ಮಾಸಗಳಲ್ಲಿ  ಸ್ನಾನ ಮಾಡುವುದರಿಂದ ಸಮಸ್ತ ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ.

ಇಲ್ಲಿ ಮಹಾಗಣಪತಿ, ಸೂರ್ಯನಾರಾಯಣ, ಗೋಪಾಲಕೃಷ್ಣ, ವೀರಭದ್ರ, ಆಂಜನೇಯ, ರಾಮೇಶ್ವರ, ಸದಾಶಿವ, ಹರಿಹರೇಶ್ವರ, ಕೇದಾರೇಶ್ವರ ದೇವರುಗಳ ಗುಡಿಗಳಿವೆ. ಬನವಾಸಿಯ ದೊರೆ ಮಯೂರ ವರ್ಮನು ಯಜ್ಞಯಾಗಾದಿಗಳನ್ನು ಮಾಡುವುದಕ್ಕಾಗಿ ವರದಾ ಉಗಮ ಸ್ಥಳದಲ್ಲಿ ಅಗ್ರಹಾರವೊಂದನ್ನು ಮಾಡಿಕೊಟ್ಟನೆಂಬ ಇತಿಹಾಸವಿದೆ. ಕೆಳದಿಯ ವೆಂಕಟನಾಯಕರು ರಾಮೇಶ್ವರ ಗುಡಿಯನ್ನು, ಇಕ್ಕೇರಿಯ ಸದಾಶಿವ ನಾಯಕರು ಸದಾಶಿವ ದೇವರ ಗುಡಿಯನ್ನು ಕಟ್ಟಿಸಿದರು ಎನ್ನಲಾಗಿದೆ.

ವರದಾಮೂಲದಲ್ಲಿ ವಿವಾಹ ಮತ್ತು ಮಂಗಳ ಕಾರ್ಯ ನಡೆಸಲು ವ್ಯವಸ್ಥಿತ ಸಭಾಂಗಣವಿದೆ. ಈ ಕ್ಷೇತ್ರದಲ್ಲಿ ಅಪರ ಕ್ರಿಯೆಗಳನ್ನು ನಡೆಸಲು ವ್ಯವಸ್ಥೆ ಇದೆ.

ಕ್ಷೇತ್ರಕ್ಕೆ ದಾರಿ: ಸಾಗರದಿಂದ ಸಿಗಂದೂರು ರಸ್ತೆಯಲ್ಲಿ ಸಂಜಯ ಪಾಲಿಟೆಕ್ನಿಕ್ ಕಾಲೇಜು ವೃತ್ತದಲ್ಲಿ ಎಡಕ್ಕೆ ತಿರುಗಿ  ಮೂರು ಕಿ.ಮೀ ರಸ್ತೆಯಲ್ಲಿ ಸಾಗಿದರೆ ಕ್ಷೇತ್ರಕ್ಕೆ ಬರಬಹುದು. ಪ್ರವಾಸಿಗಳ ವಾಸ್ತವ್ಯಕ್ಕೆ ಸಾಗರದಲ್ಲಿ ವಸತಿ ಗೃಹಗಳಿವೆ. ಇಲ್ಲಿಗೆ ಬಂದವರು ಜೋಗ ಜಲಪಾತ, ಇಕ್ಕೇರಿ, ಕೆಳದಿ, ಸಿಗಂದೂರು, ಗುಡವಿ ಪಕ್ಷಿಧಾಮಗಳಿಗೆ ಭೇಟಿ ನೀಡಬಹುದು. ಶಿವಮೊಗ್ಗ, ಶಿರಸಿಗಳಿಂದಲೂ ಕ್ಷೇತ್ರಕ್ಕೆ ಬಸ್ ಸೌಕರ್ಯವಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ: 08183-265863.

ಸೇವಾ ವಿವರ
* ಪಂಚಾಮೃತ ಅಭಿಷೇಕ 15 ರೂ
* ಕ್ಷೀರಾಭಿಷೇಕ 30 ರೂ
* ಮಹಾಭಿಷೇಕ 30 ರೂ
* ಕುಂಕುಮಾರ್ಚನೆ 20 ರೂ
* ಸಪ್ತಶತಿ ಪಾರಾಯಣ 150 ರೂ
* ಸರ್ವಾಭರಣ ಪೂ 51 ರೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT