ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ಸಲ್ಲಿಕೆಗೆ ಫೇಸ್‌ಬುಕ್‌ಗೆ ಆದೇಶ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಸಾಮಾಜಿಕ ಜಾಲತಾಣಗಳಲ್ಲಿ (ಸೋಷಿಯಲ್ ನೆಟ್‌ವರ್ಕ್) ಪ್ರಕಟವಾಗುವ ಆಕ್ಷೇಪಾರ್ಹ ವಿಚಾರಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ 15 ದಿನಗಳೊಳಗೆ ಲಿಖಿತ ಹೇಳಿಕೆ ನೀಡುವಂತೆ ದೆಹಲಿ ಸಿವಿಲ್ ನ್ಯಾಯಾಲಯ, ಫೇಸ್‌ಬುಕ್, ಗೂಗಲ್, ಯಾಹೂ ಸೇರಿದಂತೆ ಇತರ 22 ಸಾಮಾಜಿಕ ಜಾಲತಾಣಗಳಿಗೆ ನಿರ್ದೇಶಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ವಿಚಾರಗಳನ್ನು ಸೆನ್ಸಾರ್ ಮಾಡಬೇಕು ಎಂದು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಕೆಲ ದಿನಗಳ ಹಿಂದೆ ಹೇಳಿದಾಗ ಎದ್ದ ವಿವಾದ ಹಸಿರಾಗಿರುವಾಗಲೇ ಕೋರ್ಟ್‌ನ ಈ ಆದೇಶ ಹೊರಬಿದ್ದಿದೆ.

ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಬರಹ, ಛಾಯಾಚಿತ್ರ, ವಿಡಿಯೋ ಪ್ರಸಾರ ಮಾಡದಂತೆ ಸಾಮಾಜಿಕ ಜಾಲತಾಣಗಳಿಗೆ ನಿರ್ದೇಶನ ನೀಡುವಂತೆ ಮುಫ್ತಿ ಐಜಾಜ್ ಅರ್ಷದ್ ಕಾಜ್ಮಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಕೋರ್ಟ್ ಈ ಸೂಚನೆ ನೀಡಿದೆ.

ಕಾಜ್ಮಿ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪ್ರವೀಣ್ ಸಿಂಗ್, ವೆಬ್‌ಸೈಟ್‌ಗಳಲ್ಲಿ ಆಕ್ಷೇಪಾರ್ಹ ವಿಚಾರ ಪ್ರಕಟಿಸುವುದರ ಕುರಿತು ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ ನೀಡಿದರು.
ಜನರ ಭಾವನೆಗಳಿಗೆ ಧಕ್ಕೆ ಮಾಡುವ ಅಥವಾ ವ್ಯಕ್ತಿಗಳ ತೇಜೋವಧೆ ಮಾಡುವ ಲೇಖನಗಳನ್ನು ತೆಗೆದುಹಾಕುವ ಜವಾಬ್ದಾರಿ ವೆಬ್‌ಸೈಟ್‌ಗಳದ್ದು. ಕೋರ್ಟ್ ಆದೇಶವನ್ನು ಅವು ಪಾಲಿಸಬೇಕು ಎಂದೂ ನ್ಯಾಯಾಧೀಶರು ಹೇಳಿದರು.

ಹಿನ್ನೆಲೆ: ಕಾಜ್ಮಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ, ಕಳೆದ ವರ್ಷದ ಡಿಸೆಂಬರ್ 20ರಂದು ಕೋರ್ಟ್, 22 ಸಾಮಾಜಿಕ ಜಾಲತಾಣಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ತಾವು ಕೈಗೊಂಡ ಕ್ರಮದ ಕುರಿತು ವಿವರಿಸಲು ಪ್ರತಿವಾದಿಗಳಿಗೆ ಫೆಬ್ರುವರಿ 6ರಂದು ಗಡುವು ನಿಗದಿಪಡಿಸಿತ್ತು.

ಫೇಸ್‌ಬುಕ್, ಫೇಸ್‌ಬುಕ್ ಇಂಡಿಯಾ, ಗೂಗಲ್, ಗೂಗಲ್ ಇಂಡಿಯಾ, ಆರ್ಕುಟ್, ಯೂಟ್ಯೂಬ್, ಬ್ಲಾಗ್‌ಸ್ಪಾಟ್, ಮೈಕ್ರೋಸಾಫ್ಟ್ ಇಂಡಿಯಾ, ಮೈಕ್ರೋಸಾಫ್ಟ್, ಜಾಂಬಿ ಟೈಮ್, ಐಎಂಸಿ ಇಂಡಿಯಾ, ಶೈನಿ ಬ್ಲಾಗ್, ಮೈ ಲಾಟ್ ಸೇರಿದಂತೆ ಇತರ ವೆಬ್‌ಸೈಟ್‌ಗಳಿಗೆ ಆಕ್ಷೇಪಾರ್ಹ ವಿಷಯ ಕಿತ್ತುಹಾಕುವಂತೆ ಸೂಚಿಸಲಾಗಿತ್ತು.
ಸೋಮವಾರದ ವಿಚಾರಣೆಯ ಸಂದರ್ಭದಲ್ಲಿ  `ಫೇಸ್‌ಬುಕ್ ಇಂಡಿಯಾ~ ಹಾಗೂ ಗೂಗಲ್ ತಾವು ಕೈಗೊಂಡ ಕ್ರಮದ ಬಗ್ಗೆ ಕೋರ್ಟ್‌ಗೆ ವಿವರಿಸಿದವು.

ಗೂಗಲ್ ಉತ್ತರದಿಂದ ತೃಪ್ತರಾಗದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪ್ರವೀಣ್ ಸಿಂಗ್, ಸಮರ್ಪಕ ಉತ್ತರ ನೀಡಲು ತೊಂದರೆಯೇನು? ನಮಗೆ ಶುಕ್ರವಾರವಷ್ಟೇ ಸಮನ್ಸ್ ಬಂದಿದೆ ಎಂದು ಸಮಜಾಯಿಷಿ ನೀಡಬೇಡಿ.
ಕಳೆದ ಕೆಲ ತಿಂಗಳಿನಿಂದ ಇಷ್ಟೊಂದು ಗದ್ದಲ ನಡೆಯುತ್ತಿರುವಾಗ ನೀವು ಸಿದ್ಧರಾಗಿ ಬರಬೇಕಿತ್ತು ಎಂದರು.
 ಈ ಮಧ್ಯೆ, ಫೇಸ್‌ಬುಕ್, ಯಾಹೂ ಹಾಗೂ ಮೈಕ್ರೋಸಾಫ್ಟ್ ಈ ಪ್ರಕರಣದಲ್ಲಿ ತಮ್ಮ ಪಾತ್ರವೇನೂ ಇಲ್ಲ. ನಮ್ಮ ಮೇಲೆ ಕ್ರಮ ಕೈಗೊಳ್ಳಲು ಕಾರಣವಿಲ್ಲ ಎಂದು ವಾದಿಸಿದವು.

ಈ ಅರ್ಜಿಯ ಮುಂದಿನ ವಿಚಾರಣೆ ಮಾರ್ಚ್ 1ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT