ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನಕ್ಕೆ ಪ್ರತಿಸ್ಪಂದಿಸಿದ ‘ಹಿಂದ್‌ ಸ್ವರಾಜ್‌

ಲೇಖಕ ಡಾ.ಜಿ.ಬಿ.ಹರೀಶ್‌ ಅಭಿಮತ ’
Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯದ ವರ್ತಮಾನಕ್ಕೆ ಮಹಾತ್ಮ ಗಾಂಧಿ ಅವರ ಪ್ರತಿಸ್ಪಂದನ ‘ಹಿಂದ್‌ ಸ್ವರಾಜ್‌’ ಪುಸ್ತಕ’ ಎಂದು ಲೇಖಕ ಡಾ.ಜಿ.ಬಿ.ಹರೀಶ್‌ ಅಭಿಪ್ರಾಯಪಟ್ಟರು. ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಗಾಂಧೀವಾದಿ ಡಬ್ಲ್ಯು.ಎಚ್‌.­ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪುಸ್ತಕ ಕೇವಲ ಸ್ವಾತಂತ್ರ್ಯಪೂರ್ವ ಕಾಲದ ಬಗ್ಗೆ ಮಾತನಾಡುವುದಿಲ್ಲ. ಅದು ನಿತ್ಯ ವರ್ತಮಾನಕ್ಕೆ ಪ್ರತಿಸ್ಪಂದಿಸುವ ಗುಣ ಹೊಂದಿದೆ. ಭಾರತೀಯರು ಒಳ– ಹೊರಗಿನ ಸಂಕಟಗಳನ್ನು ಕಳೆದುಕೊಂಡು ಸ್ವಾಭಿಮಾನಿಯಾಗಿ ಸಭ್ಯ ಜೀವನ ನಡೆಸುವುದು ಹೇಗೆ ಎಂಬುದನ್ನು ಪುಸ್ತಕ ತಿಳಿಸುತ್ತದೆ’ ಎಂದರು.

‘ಅಗ್ಗದ ಜ್ಞಾನವೇ ಶ್ರೇಷ್ಠ ಜ್ಞಾನ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಬ್ರಿಟಿಷರ ಕಾಲದ ಇಂಗ್ಲಿಷ್‌ ಶಿಕ್ಷಣ ಕ್ರಮದ ಪ್ರಭಾವದಿಂದ ನಾವು ಹೊರ ಬಂದಿಲ್ಲ. ಯಾವುದನ್ನೂ ಕೇಳಿಸಿಕೊಳ್ಳದ ಸ್ಥಿತಿಯಲ್ಲಿ ನಾವಿದ್ದೇವೆ. ರಾಜಕೀಯ ಪಕ್ಷಗಳು ಸ್ವದೇಶಿ ಚಿಂತನೆಯ ಬಗ್ಗೆ ಯೋಚಿಸುವ ಗೊಡವೆಗೇ ಹೋಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಪುಸ್ತಕ ನಮ್ಮನ್ನು ಎಚ್ಚರಿಸುತ್ತದೆ’ ಎಂದು ತಿಳಿಸಿದರು.

‘ಸಂಪಾದಕ ಮತ್ತು ಓದುಗನ ನಡುವಿನ ಪ್ರಶ್ನೋತ್ತರದ ಶೈಲಿಯಲ್ಲಿ ಈ ಪುಸ್ತಕವಿದೆ. ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕವಿದು. ಭಾರತದ ಜೀವನ ವಿಧಾನವನ್ನು ಸರಿದಾರಿಗೆ ತರುವುದು ಹೇಗೆ ಎಂಬ ಬಗ್ಗೆ ಮಹಾತ್ಮ ಗಾಂಧಿ ನೂರು ವರ್ಷಗಳ ಹಿಂದೆಯೆ ಈ ಪುಸ್ತಕದಲ್ಲಿ ತಿಳಿಸಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಹೋ.ಶ್ರೀನಿವಾಸಯ್ಯ ಮಾತನಾಡಿ, ‘ಮಕ್ಕಳು ಸೇರಿದಂತೆ ಎಲ್ಲರೂ ಓದಬೇಕಾದ ಪುಸ್ತಕ ಇದು. ಇಂದಿನ ಬಹುತೇಕ ಮಕ್ಕಳು ಹಾಗೂ ಯುವಕರಿಗೆ ಮಹಾತ್ಮ ಗಾಂಧಿ ಯಾರು ಎಂಬುದೇ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಪೂಜಾ ಗಾಂಧಿ ಮಾತ್ರ. ಇಂತಹ ಪರಿಸ್ಥಿತಿಗೆ ನಾವಿಂದು ಮಕ್ಕಳನ್ನು ತಳ್ಳಿದ್ದೇವೆ’ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT