ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದೊಳಗೆ ಮಹದೇಶ್ವರ ಬೆಟ್ಟ ಅಭಿವೃದ್ಧಿ: ಸಿಎಂ

Last Updated 12 ಜೂನ್ 2011, 10:40 IST
ಅಕ್ಷರ ಗಾತ್ರ

ಮಲೈ ಮಹದೇಶ್ವರ ಬೆಟ್ಟ: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದ ಪ್ರದೇಶವವನ್ನು ವರ್ಷದೊಳಗೆ ಸಮಗ್ರ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ಮಹದೇಶ್ವರ ಬೆಟ್ಟದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಪ್ರದೇಶಗಳಿಗೆ ರಾತ್ರಿ ಮತ್ತು ಬೆಳಿಗ್ಗೆ ಕಾಲ್ನಡಿಗೆಯಲ್ಲಿ ತೆರಳಿ ವೀಕ್ಷಣೆ ಮಾಡಿದ್ದೇನೆ. ಮಹದೇಶ್ವರ ಬೆಟ್ಟಕ್ಕೆ 4 ತಿಂಗಳಿಗೊಮ್ಮೆ ಲಕ್ಷಾಂತರ ಜನರು ಬರುತ್ತಾರೆ. ಬೃಹತ್ ಪ್ರಮಾಣದಲ್ಲಿ ಜನರು ಸೇರಿದಾಗ ಬೆಟ್ಟಕ್ಕೆ ನಾನು ಬಂದು ಭಕ್ತಾದಿಗಳ ಜತೆ ವಾಸ್ತವ್ಯ ಹೂಡುತ್ತೇನೆ.

ರಸ್ತೆಯಲ್ಲೇ ಮಲಗಿ, ಸ್ನಾನಕ್ಕೆ ನೀರು ಇಲ್ಲದೆ, ಶೌಚಾಲಯಕ್ಕೆ ಪರದಾಡುವ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರದಲ್ಲಿ ಇದ್ದವರಿಗೆ ಅನಿಸಲಿಲ್ಲ. ಬೆಟ್ಟದಲ್ಲಿ 20 ರಿಂದ 25 ಕಡೆ ಸ್ನಾನ ಗೃಹ, ಶೌಚಾಲಯ, ಹೆಣ್ಣುಮಕ್ಕಳಿಗೂ ಅಗತ್ಯವಿರುವ ಸೌಲಭ್ಯ, ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು. ರಾಜ್ಯದಲ್ಲಿಯೇ ಮಾದರಿಯಾಗುವಂತೆ ಮಹದೇಶ್ವರ ಬೆಟ್ಟವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.

ಮಹದೇಶ್ವರ ಬೆಟ್ಟದ ಪಕ್ಕದ ಗುಡ್ಡವನ್ನು ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುಡ್ಡ ಅಭಿವೃದ್ಧಿಯಾದರೆ ಬೆಟ್ಟಕ್ಕೆ ಬರುವವರು ಮೂರು ದಿನ ಇಲ್ಲಿಯೇ ಉಳಿಯಬೇಕು ಎಂದು ಅನಿಸಬೇಕು. ಇದಕ್ಕೆ ಮಾಸ್ಟರ್ ಪ್ಲಾನ್ ಸಿದ್ಧವಿದೆ. ಉದ್ಯಾನ, ಸಂಗೀತ ಕಾರಂಜಿ, ವಾಣಿಜ್ಯ ಕಟ್ಟಡ, ದಾನಿಗಳ ಹೆಸರಿನಲ್ಲಿ ಕಲ್ಯಾಣ ಮಂಟಪ ಎಲ್ಲಿ ನಿರ್ಮಾಣಮಾಡಬೇಕು ಎಂದು ನಿರ್ಧರಿಸಲಾಗಿದೆ.

ವರ್ಷದಲ್ಲಿ ಎಲ್ಲ ಕೆಲಸಗಳಿಗೂ ಮಂಜೂರಾತಿ ಸಿಕ್ಕಿ ಕಾಮಗಾರಿಗಳು ಪೂರ್ಣಗೊಂಡಿರಬೇಕು. ಮೂರು ತಿಂಗಳಿಗೊಮ್ಮೆ ಬೆಟ್ಟಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಲಾಗುವುದು. ಕೆಲಸ ಮಾಡದ ಅಧಿಕಾರಿಗಳನ್ನು 24 ಗಂಟೆಯೊಳಗೆ ಎತ್ತಂಗಡಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಇಲ್ಲಿನ ಚಿನ್ನದ ರಥ ಹೊಳೆಯುತ್ತಿಲ್ಲ. ಅದಕ್ಕೆ ಲೇಪನ ಮಾಡಬೇಕು. ಮೂರು ತಿಂಗಳೊಳಗೆ ರಥಕ್ಕೆ ಪಾಲಿಶ್ ಮಾಡಿಸುವಂತೆ ಸೂಚಿಸಲಾಗಿದೆ. ರಾಜ್ಯದ ಪ್ರತಿಯೊಂದು ದೇವಾಲಯಗಳು ಅಭಿವೃದ್ಧಿಯಾಗ ಬೇಕು.ಈಗಾಗಲೇ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ಶಾಶ್ವತ ಕುಡಿಯುವ ನೀರು, ರಸ್ತೆ ಹಾಗೂ ಕಲ್ಯಾಣಿಗಳನ್ನು ಅಭಿವೃದ್ಧಿ ಪಡಿಸಲಾಗು ವುದು. ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದ ಮೆಟ್ಟಿಲುಗಳ ದುರಸ್ತಿ ವೆಚ್ಚವನ್ನು ದಾನಿಗಳು ವಹಿಸಿಕೊಳ್ಳಬೇಕು. ಸರ್ಕಾರದಲ್ಲಿ ಹಣ ಇಲ್ಲವೆಂದು ಕೇಳುತ್ತಿಲ್ಲ. ಪುಣ್ಯ ಕೆಲಸದಲ್ಲಿ ಸಾರ್ವಜನಿಕರ ಪಾಲು ಇರಬೇಕು ಎಂದು ಹೇಳಿದರು.

ಹೊಗೇನೆಕಲ್ ರಸ್ತೆ ಅಭಿವೃದ್ಧಿಗೆ ನೆರವು ನೀಡಲಾಗುವುದು. ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿಗೆ ಹಣ ಬಿಡುಗಡೆಯಾಗಿದೆ. ಅಂದಾಜು ಪಟ್ಟಿ ಸಿದ್ಧಪಡಿಸಿ 15 ದಿನದೊಳಗೆ ಗುತ್ತಿಗೆದಾರರಿಗೆ ಕಾಲಾವಕಾಶ ನೀಡಿ ಪೂರ್ಣಗೊಳಿಸಬೇಕು. ರಾಜ್ಯದ ರಸ್ತೆಗಳ ಸ್ಥಿತಿ ಸರಿಯಿಲ್ಲದ ಕಾರಣ ಎರಡು ವರ್ಷದಲ್ಲಿ 15 ಸಾವಿರ ಕಿ.ಮೀ. ರಸ್ತೆಯನ್ನು 13 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಂತೆ ಬೆಂಗಳೂರಿನಲ್ಲಿ 50 ಸಾವಿರ ಕೋಟಿ ಬಂಡವಾಳ ಹರಿದು ಬರುವ ಜಾಗತಿಕ ರೈತರ ಸಮಾವೇಶ ನಡೆಸಲಾಗುವುದು. ವರ್ಷದಲ್ಲಿ ಗುಡಿಸಲು ಮುಕ್ತ ರಾಜ್ಯ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ರೇಣುಕಾಚಾರ್ಯ, ಸಂಸದ ಆರ್.ಧ್ರುವನಾರಾಯಣ, ಶಾಸಕರಾದ ಆರ್.ನರೇಂದ್ರ, ಎಚ್.ಎಸ್.ಮಹದೇವಪ್ರಸಾದ್, ಜಿ.ಎನ್.ನಂಜುಂಡಸ್ವಾಮಿ, ಪ್ರೊ. ಮಲ್ಲಿಕಾರ್ಜುನಪ್ಪ, ತೋಂಟದಾರ್ಯ, ಸಾಲೂರು ಮಠದ ಪಟ್ಟದ ಗುರುಸ್ವಾಮಿ, ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖ ಮಠದ ನಿರ್ಮಲಾನಂದ ಸ್ವಾಮೀಜಿ, ಜಿ.ಪಂ. ಅಧ್ಯಕ್ಷೆ ರಾಜೇಶ್ವರಿ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಪರಿಮಳ ನಾಗಪ್ಪ, ಕೃಷ್ಣಯ್ಯ ಶೆಟ್ಟಿ ಹಾಗೂ ಇತರರು ಭಾಗವಹಿಸಿದ್ದರು.

ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಸಂಸದ ಧ್ರುವನಾರಾಯಣ ಆಗ್ರಹ
ಮಲೈ ಮಹದೇಶ್ವರ ಬೆಟ್ಟ: ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಂಸದ ಆರ್.ಧ್ರುವನಾರಾಯಣ ಮನವಿ ಮಾಡಿದರು.

ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ಮಹದೇಶ್ವರ ಬೆಟ್ಟದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಸಮಾರಂಭದಲ್ಲಿ ಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಘೋಷಣೆ ಮಾಡಿ ಅವರು ಮಾತನಾಡಿದರು.

ಕೇರಳ ರಾಜ್ಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿರುವುದರಿಂದ ಆದಾಯ ಹೆಚ್ಚು ಬರುತ್ತಿದೆ.  ಮರಾಜನಗರ ಜಿಲ್ಲೆಯ ಶೇ.50 ಭಾಗ ಅರಣ್ಯವಾಗಿದ್ದು, ಹೊಗೇನೆಕಲ್ ಜಲಪಾತ, ಕೆ.ಗುಡಿ, ಬಿಳಿಗಿರಿರಂಗನಬೆಟ್ಟ, ಭರಚುಕ್ಕಿ, ಗಗನಚುಕ್ಕಿ, ಹುಲಿ ಯೋಜನೆ, ಮಹದೇಶ್ವರಬೆಟ್ಟ, ಗುಂಡಾಲ್ ಜಲಾಶಯಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕುಕ್ಕೆ ಸುಬ್ರಮಣ್ಯ ಹೊರತು ಪಡಿಸಿದರೆ ಅತಿ ಹೆಚ್ಚು ಆದಾಯ ಮಲೈ ಮಹದೇಶ್ವರ ಬೆಟ್ಟದಿಂದ ಬರುತ್ತಿದೆ. ವರ್ಷಕ್ಕೆ 26 ಕೋಟಿ ರೂಪಾಯಿ ಆದಾಯ ಬರುತ್ತಿರುವ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು. ಭಕ್ತಾದಿಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಸಿಎಂ ಗೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆ ಬೇಕು. ಹೊಗೇನಕಲ್‌ನಿಂದ ತಮಿಳುನಾಡಿನ ಎರಡು ಜಿಲ್ಲೆಯ 350 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ನಮ್ಮ ಅಕ್ಕಪಕ್ಕದಲ್ಲಿಯೇ ನದಿಗಳು ಇದ್ದರೂ ನೀರಿನ ಸೌಲಭ್ಯ ಇಲ್ಲ ಎಂದರು.

ಬಿಳಿಗಿರಿ ರಂಗನಬೆಟ್ಟ, ಹಿಮವದ್‌ಗೋಪಾಲಸ್ವಾಮಿ ಬೆಟ್ಟ ಹಾಗೂ ಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವೆಂದು ಘೋಷಿಸಲಾಗಿದೆ. ಕಾಡು ಪ್ರಾಣಿಗಳಿಗೆ ಅಪಾಯ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೊರಗಿನಿಂದ ಬರುವವರು ಪ್ಲಾಸ್ಟಿಕ್ ತರಬಾರದು ಹಾಗೂ ಬಳಸಬಾರದು ಎಂದು ಮನವಿ ಮಾಡಿದರು.

ಶಾಸಕ ಆರ್.ನರೇಂದ್ರ ಮಾತನಾಡಿ, ಹನೂರು ಭಾಗದಲ್ಲಿರುವ 15 ಸಾವಿರ ಗಿರಿಜನರಿಗೆ ಮನೆ ನಿರ್ಮಿಸಿಕೊಡಬೇಕು, ಬೆಟ್ಟದ ಎಲ್ಲ 12 ಗ್ರಾಮಗಳಿಗೂ ವಿದ್ಯುತ್ ಸರಬರಾಜು ಕಲ್ಪಿಸಬೇಕು, ಬೆಟ್ಟದಲ್ಲಿ 500 ಕೊಠಡಿಯ ಪ್ರವಾಸಿ ಮಂದಿರ, ಎರಡು ಸಾವಿರ ಮಂದಿ ಉಳಿದುಕೊಳ್ಳಲು ಡಾರ್ಮೆಂಟರಿ ನಿರ್ಮಾಣ ಮಾಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಚಿವ ರೇಣುಕಾಚಾರ್ಯ ಮಾತನಾಡಿ, ದಿನಕ್ಕೆ 18 ಗಂಟೆಗಳ ಕಾಲ ಜನರು ಹಾಗೂ ರಾಜ್ಯದ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಚಿಂತನೆ ನಡೆಸುತ್ತಾರೆ. ಕರ್ನಾಟಕ ರಾಜ್ಯವನ್ನು ದೇಶದಲ್ಲಿ ಮಾದರಿ ರಾಜ್ಯವನ್ನಾಗಿ ಮಾಡಲು ಸಂಕಲ್ಪ ಮಾಡಿದ್ದಾರೆ. ನಾಲ್ಕು ತಾಲ್ಲೂಕುಗಳಿಗೆ ಸುವರ್ಣಭೂಮಿ ಯೋಜನೆಯಲ್ಲಿ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದು ಶಾಪಗ್ರಸ್ತ ಜಿಲ್ಲೆಯಲ್ಲ. ಪ್ರತಿಪಕ್ಷದ ಮುಖಂಡರು ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೇವರ ಕೃಪೆಯಿಂದ ಯಡಿ ಯೂರಪ್ಪ ಅವರ ಕಂಟಕಗಳು ನಿವಾರಣೆ ಯಾಗುತ್ತಿವೆ. ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಶ್ರಮಿಸಲು ಸಿಎಂ ಗೆ ಭಗವಂತ ಹೆಚ್ಚಿನ ಅವಕಾಶ ಕಲ್ಪಿಸಿಕೊಡಲಿ ಎಂದು ಹಾರೈಸಿದರು.

`ಬಸವ ಭವನ ನಿರ್ಮಾಣಕ್ಕೆ 50 ಲಕ್ಷ~
ಯಳಂದೂರು: ತಾಲ್ಲೂಕಿನಲ್ಲಿ ಬಸವ ಭವನ ನಿರ್ಮಾಣ ಮಾಡಲು 50 ಲಕ್ಷ ರೂಪಾಯಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಘೋಷಿಸಿದರು.

ಅವರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

`ಆರಂಭದಲ್ಲಿ 48 ಸಾವಿರ ಕೋಟಿ ರೂ. ಗಳ ಬಜೆಟ್ ಮಂಡಿಸಿದ್ದ ತಮ್ಮ ಸರ್ಕಾರ ಮುಂದಿನ ದಿನಗಳಲ್ಲಿ 1 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ಗುರಿ ಹೊಂದಿದೆ. ಚಾಮರಾಜನಗರ ಜಿಲ್ಲೆಗೆ ಕಬಿನಿ ನಾಲೆಯಿಂದ ಕೆರೆಗಳಿಗೆ ನೀರು ತುಂಬಿಸುವುದಕ್ಕಾಗಿ 100 ಕೋಟಿ ಬಿಡುಗಡೆ ಮಾಡಲಾಗುವುದು~ ಎಂದು ತಿಳಿಸಿದರು. `ಭಾರತವು ವಿದ್ಯಾವಂತರ ದೇಶವಾಗಿದೆ. ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುವ ಶಕ್ತಿ ಭಾರತದ ಮಕ್ಕಳಿಗಿದೆ. ಹಾಗಾಗಿ ಮಕ್ಕಳಿಗೆ ಒಳ್ಳೇ ಸಂಸ್ಕ್ರತಿ ಬೆಳೆಸಬೇಕು~ ಎಂದರು.

ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, `ಸಾಮಾಜಿಕ ನ್ಯಾಯಕ್ಕೆ ಮುಖ್ಯಮಂತ್ರಿ ಗಳು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಬಸವಣ್ಣನವರ ಕಾಯಕತತ್ವಕ್ಕೆ ಮಹತ್ವ ನೀಡಿ, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತ ಜಿಲ್ಲೆಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು~ ಎಂದು ಭರವಸೆ ನೀಡಿದರು.

ಸಂಸದ ಆರ್. ಧ್ರುವನಾರಾಯಣ್, `ಚಾಮರಾಜನಗರ ಜಿಲ್ಲೆ ಸಂಪದ್ಭರಿತ ಜಿಲ್ಲೆಯಾಗಿದೆ. ಯಳಂದೂರು ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ಒಂದೊಂದು ಕೆರೆ ಇದೆ. ಇದು ರೈತರ ಜೀವನಾಡಿಯಾಗಿದ್ದು ಇದರ ಅಭಿವೃದ್ಧಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು~ ಎಂದು ಮನವಿ ಮಾಡಿದರು.

ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಆಶೀರ್ವಚನ ನೀಡಿದರು. ಕಾರಾಪುರ ವಿರಕ್ತ ಮಠದ ಬಸವರಾಜಸ್ವಾಮಿ, ವಿಧಾನ ಪರಿಷತ್ ಸದಸ್ಯ ಮಲ್ಲಿಕಾರ್ಜುನಪ್ಪ, ಗೋ. ಮಧುಸೂಧನ್, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ, ಜಿ.ಪಂ. ಸದಸ್ಯೆ ಕೇತಮ್ಮ ತಾ.ಪಂ. ಅಧ್ಯಕ್ಷೆ ಗೌರಮ್ಮ ಮಹದೇವಸ್ವಾಮಿ ಉಪಾಧ್ಯಕ್ಷೆ ವಿಜಯಲಕ್ಷ್ಮಿನಂಜುಂಡ, ಸದಸ್ಯ ಮಹೇಶ್‌ಕುಮಾರ್, ಪ.ಪಂ. ಅಧ್ಯಕ್ಷೆ ಮೀನಾಕ್ಷಿ ಮಹದೇವಸ್ವಾಮಿ, ಉಪಾಧ್ಯಕ್ಷೆ ಚಿನ್ನಮ್ಮ ಮರಯ್ಯ, ವೀರಶೈವ ಮಾಹಾಸಭಾದ ಅಧ್ಯಕ್ಷ ಮಲ್ಲೇಶಪ್ಪ ಇತರರು ಹಾಜರಿದ್ದರು.

ಹನೂರಿಗೆ ಹೆಚ್ಚಿನ ಅನುದಾನ: ಮನವಿ
ಕೊಳ್ಳೇಗಾಲ:
ಹನೂರು ಪಟ್ಟಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಮತ್ತು ಹನೂರನ್ನು ತಾಲ್ಲೂಕು ಮಾಡಬೇಕು ಎಂದು ಶಾಸಕ ಆರ್. ನರೇಂದ್ರ ಮನವಿ ಮಾಡಿದರು.

ಹನೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಹನೂರು ಪಟ್ಟಣ ಹಾಗೂ ಮಾರ್ಗದಲ್ಲಿ ಬರುವ ಏಳು ಹಳ್ಳಿಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕುಡಿಯುವ ನೀರು ಸರಬರಾಜು ಯೋಜನೆಯ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾ ಚಾರ್ಯ,  ಲೋಕಸಭಾ ಸದಸ್ಯ ಆರ್. ಧ್ರುವ ನಾರಾಯಣ್, ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ, ಉಪಾಧ್ಯಕ್ಷ ಮಾದೇಶ, ಸದಸ್ಯ ಮುದ್ದುಗಾಮಶೆಟ್ಟಿ, ಶೋಭ ಮಹದೇವ ಮುಖಂಡ ಪುಟ್ಟಸ್ವಾಮಿಗೌಡ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT