ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ನಿಲಯದ ಅವ್ಯವಸ್ಥೆಗೆ ಆಕ್ರೋಶ

Last Updated 22 ಜನವರಿ 2011, 8:55 IST
ಅಕ್ಷರ ಗಾತ್ರ

ಗಜೇಂದ್ರಗಡ: ’ಮಕ್ಕಳು ಇಂಥ ಕಳಪೆ ಊಟಾನ ಹೇಗೆ ಮಾಡೋದು. ನಾಚಿಕೆ ಆಗಲ್ವಾ! ಇಂಥ ಊಟ ನಿಮ್ಮನೇಲಿ ಮಾಡ್ತೀರಾ?’ ಹೀಗೆ ಕಿಡಿಕಿಡಿಕಾರಿದ್ದು ಲೋಕಾಯುಕ್ತ ಡಿಎಸ್ಪಿ ಜಿ.ಆರ್. ಪಾಟೀಲ.ಶುಕ್ರವಾರ ಇಲ್ಲಿನ ಎಸ್.ಸಿ, ಎಸ್.ಟಿ. ಮಕ್ಕಳ ವಸತಿ ಶಾಲೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶಗೊಂಡ ಲೋಕಾಯುಕ್ತರು ಅಲ್ಲಿನ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ರೀತಿ ಇದು.

1ರಿಂದ 5 ನೇ ತರಗತಿ ಇರುವ ಈ ವಸತಿ ಶಾಲೆಯಲ್ಲಿ 105 ಮಕ್ಕಳು ದಾಖಲಾತಿ ಇದ್ದರೂ ಹಾಜರಾತಿ ಮಾತ್ರ 60 ಇತ್ತು. ಆದರೆ, ನಿತ್ಯ ಶೇ.100ರಷ್ಟು ಮಕ್ಕಳ ಹಾಜರಾತಿಯನ್ನು ತೋರಿಸಿ ಅವರ ಪಾಲಿನ ಆಹಾರ ಧಾನ್ಯವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಕಾರಣವೂ ಲೋಕಾಯುಕ್ತರ ಆಕ್ರೋಶಕ್ಕೆ ಕಾರಣವಾಯಿತು.
ಶಾಲೆಯ ಊಟದ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು, ಕಳಪೆ ಮಟ್ಟದ ತರಕಾರಿ, ಕಲ್ಲು ಮಿಶ್ರಿತ ಜೋಳ, ಅಕ್ಕಿ, ಹುಳುಕು ಬಿದ್ದ ಗೋಧಿಯನ್ನು ಅಲ್ಲಿನ ಸಿಬ್ಬಂದಿಗೆ ತೋರಿಸಿ,

‘ಇದನ್ನು ಮಕ್ಕಳು ಹೇಗೆ ತಿನ್ನೋದು. ಎಳ್ಳೆಷ್ಟು ಸ್ವಚ್ಛತೆಯೇ ಇಲ್ಲವಲ್ಲ. ಕೆಲ ಆಹಾರ ವಸ್ತುಗಳ ಅವಧಿ ಮೀರಿದ್ದರೂ ಅದನ್ನು ಮಕ್ಕಳಿಗೆ ಕೊಡುತ್ತಿರುವುದು ಸರಿಯೇ? ಇದನ್ನು ಸೇವಿಸಿ ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಏನು ಗತಿ. ಬೇಜವಬ್ದಾರಿಗೆ ಒಂದು ಮಿತಿ ಬೇಡವೇ’ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಪಕ್ಕದಲ್ಲಿಯೇ ಇದ್ದ 6ರಿಂದ10 ತರಗತಿ ವರೆಗಿನ ಎಸ್.ಸಿ, ಎಸ್.ಟಿ. ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಲೋಕಾಯುಕ್ತ ತಂಡಕ್ಕೆ ಅಲ್ಲಿಯೂ  ಸಹ ಇಂಥದ್ದೆ ಅನುಭವ ಆಯಿತು. ಅದರಿಂದ ಮತ್ತಷ್ಟು ಕುಪಿತಗೊಂಡ ಲೋಕಾಯುಕ್ತರು, ಮೇಲ್ವಿಚಾರಕರನ್ನು ಕರೆಯುವಂತೆ ಅಲ್ಲಿನ ಸಿಬ್ಬಂದಿಗೆ ಹೇಳಿದರು.

ಆದರೆ, ಅಲ್ಲಿನ ಮೇಲ್ವಿಚಾರಕ ಸರಗಣಚಾರಿಮಠ ಅವರು ರಜೆ ಇದ್ದಾರೆಂದು ಸಿಬ್ಬಂದಿ ತಿಳಿಸಿದರು. ವಸತಿ ನಿಲಯದ ಮಾಳಿಗೆ ಮೇಲೆ ಇದ್ದ ವಿದ್ಯಾರ್ಥಿಗಳ ಕುಡಿಯುವ ನೀರಿನ ತೊಟ್ಟಿಗೆ ಮುಚ್ಚುಳವೇ ಇದ್ದಿರಲಿಲ್ಲ. ಅದೇ ನೀರನ್ನು ಮಕ್ಕಳಿಗೆ ಕುಡಿಯಲು ಪೂರೈಕೆ ಮಾಡುತ್ತಿರುವ ಕ್ರಮಕ್ಕೆ ಅಸಮದಾನಗೊಂಡ ಪಾಟೀಲರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡರು.

ಶಿಸ್ತು ಕ್ರಮಕ್ಕೆ ಶಿಪಾರಸ್ಸು: ‘ಇಲ್ಲಿನ ಹಿಂದುಳಿದ ಮಕ್ಕಳ ಆಶ್ರಮ ವಸತಿ ಶಾಲೆಯಲ್ಲಿ ಮೇಲ್ವಿಚಾರಕಿ ಆರ್.ವೈ. ಚಿಗಡೊಳ್ಳಿ ಹಾಗೂ ತಾಲ್ಲೂಕು ಪ್ರಭಾರಿ ಸಮಾಜ ಕಲ್ಯಾಣ ಇಲಾಯ ಅಧಿಕಾರಿ ಎಸ್.ಎಂ. ಹೆಬ್ಬಳ್ಳಿ ಅವರು ಮಕ್ಕಳ ಹಾಜರಾತಿಯಲ್ಲಿ ಏರು ಪೇರು ಮಾಡಿ ಪ್ರತಿ ದಿನ 25 ಮಕ್ಕಳ ಆಹಾರ ಧಾನ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದು ದಾಖಲೆ ಪರಿಶೀಲನೆಯಿಂದ ತಿಳಿದು ಬಂದಿದೆ. ಹೀಗಾಗಿ ಇವರಿಬ್ಬರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಲು ಜಿಲ್ಲಾ ಸಮಾಜ ಕಲ್ಯಾಣ ಇಲಾಕೆಯ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು’ ಎಂದು  ಲೋಕಾಯುಕ್ತ ಡಿಎಸ್ಪಿ ಜಿ.ಆರ್. ಪಾಟೀಲ ಸುದ್ದಿಗಾರರಿಗೆ ತಿಳಿಸಿದರು.

‘ಪಟ್ಟಣದಲ್ಲಿ ಎರಡು ವಸತಿ ನಿಲಯಗಳಿಗೆ ಭೇಟಿ ಕೊಟ್ಟಾಗ ಲೋಕಾಯುಕ್ತ ತಂಡಕ್ಕೆ ಕಣ್ಣಿಗೆ ಬಿದ್ದಿದ್ದು ಅಲ್ಲಿನ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳು. ಹೀಗಾಗಿ ಇಷ್ಟೊಂದು ಕಡಿಮೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ಗುತ್ತಿಗೆದಾರರ ಪರವಾನಿಗೆಯನ್ನು ರದ್ದು ಮಾಡುವಂತೆ ಇಲಾಖೆಗೆ ಸೂಚಿಸಲಾಗುವುದು’ ಎಂದರು.

ಇದಕ್ಕೂ ಮುನ್ನ ಲೋಕಾಯುಕ್ತರು ಇಲ್ಲಿನ ನಿರೀಕ್ಷಣಾ ಗೃಹದಲ್ಲಿ  ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಲೋಕಾಯುಕ್ತ ಪಿ.ಐ. ಸಂಗನಗೌಡ, ಎಸ್.ವೈ. ದಿವಟರ, ಎಸ್.ಎನ್. ಕಲಾದಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT