ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಕ್ ಮತ್ತು ಶ್ರವಣ ದೋಷ ಮಕ್ಕಳು ಎಸ್ಸೆಸ್ಸೆಲ್ಸಿ ಪಾಸಾದ್ರು!

Last Updated 1 ಜೂನ್ 2013, 11:35 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ:  ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿದ್ದ ಈ ಶಾಲೆಯಲ್ಲಿ 12 ಮಕ್ಕಳಿಗೂ ಮಾತು ಬಾರದು; ಕಿವಿಯೂ ಕೇಳಿಸದು. ಆದರೂ ಸಾಮಾನ್ಯ ಮಕ್ಕಳಿಗಿಂತ ನಾವೇನು ಕಮ್ಮಿ ಎಂಬಂತೆ ಎಲ್ಲರೂ ಪಾಸಾಗಿದ್ದಾರೆ. ಕಾಲೇಜು ಮೆಟ್ಟಿಲು ಹತ್ತುವ ತವಕದಲ್ಲಿದ್ದಾರೆ.

ತಾಲ್ಲೂಕಿನ ಬೆಳಗೊಳ ಸಮೀಪದ ಮಾಂಟ್‌ಫೋರ್ಟ್ ಶಾಲೆಯ ವಾಕ್ ಮತ್ತು  ಶ್ರವಣ ದೋಷ ಮಕ್ಕಳ ವಿಶೇಷ ಶಾಲೆಗೆ 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಕುಳಿತಿದ್ದ 12 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದಾರೆ. ಈ ಪೈಕಿ ಧಾರವಾಡ ಮೂಲದ ಭಾಗ್ಯಶ್ರೀ ಭೀಮಪ್ಪ ಹಾಗೂ ಬಸವ್ವ ಕಲ್ಲಪ್ಪ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಮಾತು ಬಾರದ, ಕಿವಿಯೂ ಕೇಳಿಸದ ಮಕ್ಕಳು ಶಿಕ್ಷಕರ ಕೈ ಸನ್ನೆ ಹಾಗೂ ತುಟಿಯ ಚಲನೆಯನ್ನು ಗಮನಿಸಿ ಪಾಠ ಕಲಿತು ಪರೀಕ್ಷೆ ಎದುರಿಸಿದ್ದಾರೆ.

ಸಾವಿರಾರು ರೂಪಾಯಿ ಡೊನೇಷನ್ ಕಟ್ಟಿ ಖಾಸಗಿ ಶಾಲೆಗಳಲ್ಲಿ ಕಲಿತ ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಪಾಸು ಆಗಿದ್ದಾರೆ.  ಮಾತೃಭಾಷೆಯಲ್ಲಿ ನಪಾಸು ಆದವರು ಇದ್ದಾರೆ. ಆದರೆ, ಭಾಷೆಯೇ ಬಾರದ, ಬಾಹ್ಯ ಸಂವಹನ ಸಾಮರ್ಥ್ಯವನ್ನೇ ಕಳೆದುಕೊಂಡಿರುವ ಬೆಳಗೊಳ ಮಾಂಟ್‌ಫೋರ್ಟ್ ಶಾಲೆಯ ಶ್ರವಣ ದೋಷ ವಿದ್ಯಾರ್ಥಿಗಳು ಜೀವನದ ಪ್ರಮುಖ ಘಟ್ಟ ಎನ್ನಲಾದ 10ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.

2000-2001ನೇ ಶೈಕ್ಷಣಿಕ ವರ್ಷದಿಂದ ಮಾಂಟ್ ಫೋರ್ಟ್ ಶಾಲೆಯಲ್ಲಿ ಶ್ರವಣ ದೋಷ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಲಾಗುತ್ತಿದೆ. ಸಮೂಹ ಮಾಧ್ಯಮ, ಕೈ ಸನ್ನೆ ಹಾಗೂ ತುಟಿಯ ಚಲನೆಯ ಮೂಲಕವೇ ಅವರಿಗೆ ಶಿಕ್ಷಣ ನೀಡಲಾಗುತ್ತಿದೆ. `ನೋಡಿ ಕಲಿ; ಮಾಡಿ ತಿಳಿ' ತತ್ವದಡಿ ಇಲ್ಲಿ ಶಿಕ್ಷಣ ನೀಡಲಾಗುತ್ತದೆ. ಸಾಮಾನ್ಯ ವಿದ್ಯಾರ್ಥಿಗಳು 6 ವಿಷಯಗಳನ್ನು ಕಲಿತು ಪರೀಕ್ಷೆ ಎದುರಿಸುತ್ತಾರೆ.   ಆದರೆ ಇಲ್ಲಿನ ವಿಶೇಷ ಮಕ್ಕಳಿಗೆ ಕನ್ನಡ, ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ಪಠ್ಯಕ್ರಮ ಮಾತ್ರ ಇದ್ದು, 400 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ.

`ನಮ್ಮ ಶಾಲೆಗೆ ಈ ಬಾರಿ ಶೇ100 ಫಲಿತಾಂಶ ಬಂದಿರುವುದು ಖುಷಿಯಾಗಿದೆ. ಶಿಕ್ಷಕರ ಶ್ರಮಕ್ಕೆ ಫಲ ಸಿಕ್ಕಿದೆ. ಉತ್ತೀರ್ಣರಾಗಿರುವ ಕಿವುಡ ಮತ್ತು ಮೂಕ ಮಕ್ಕಳು ಅವರಿಗಾಗಿಯೇ ಇರುವ ಡಿಪ್ಲೊಮಾ ಕೋರ್ಸ್‌ಗೆ ಸೇರಲು ಅವಕಾಶ ಇದೆ. ನಮ್ಮ ಸಂಸ್ಥೆ ಪೋಷಕರಿಗೆ ಸೂಕ್ತ ಮಾರ್ಗದರ್ಶನ ನೀಡಲಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಸಾಧನೆ ಇನ್ನಷ್ಟು ಉತ್ತಮಗೊಳ್ಳಲಿದೆ'                           ಎಂದು ಶಾಲೆಯ ಮುಖ್ಯ ಶಿಕ್ಷಕ ಅರ್ಕೇಶ್,                     ಬ್ರದರ್ ಫ್ರಾನ್ಸಿಸ್, ಬ್ರದರ್ ಲೂಯಿಸ್ ಆಶಯ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT