ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುವಿಹಾರಿಗಳ ನೆಚ್ಚಿನ ತಾಣ ಸುರಪುರ

Last Updated 7 ಜುಲೈ 2013, 11:06 IST
ಅಕ್ಷರ ಗಾತ್ರ

ಸುರಪುರ:  ಸುರಪುರ ಎಂದರೆ ತಟ್ಟನೆ ಕಣ್ಮುಂದೆ ಬರುವುದು ಬೆಟ್ಟ ಗುಡ್ಡಗಳ ಸಾಲು. ಇಲ್ಲಿನ ಮನಮೋಹಕ ಪ್ರಾಕೃತಿಕ ಸೊಬಗು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

ಇಡೀ ಪಟ್ಟಣ ಸಮುದ್ರ ಮಟ್ಟಕ್ಕಿಂತ ಸಾವಿರ ಅಡಿ ಎತ್ತರದಲ್ಲಿದೆ. ಏಳು ಸುತ್ತಿನ ಬೆಟ್ಟ ಗುಡ್ಡಗಳು ಪಟ್ಟಣವನ್ನು ಕಾಯುತ್ತಿವೆ. ಇದು ನೈಸರ್ಗಿಕ ಕೋಟೆಯೆಂದೇ ಬಿಂಬಿತವಾಗಿದೆ.

ಹಿಂದೆ ಗೋಸಲ ಅರಸರು ಸುರಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಗುಡ್ಡದಲ್ಲಿರುವ ಕಲ್ಲು ಬಂಡೆಗಳು ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ವಿವಿಧ ಆಕಾರದ ಬಂಡೆಗಳು ಎಲ್ಲರ ಮನಸೆಳೆಯುತ್ತಿವೆ. ಈ ಕಲ್ಲು ಬಂಡೆಗಳ ತುಂಬೆಲ್ಲ ಹಸಿರು ಬೆಳೆದು ಇನ್ನಷ್ಟು ಕಂಗೊಳಿಸುತ್ತಿದೆ.

ವಾಯು ವಿಹಾರಿಗಳಿಗೆ ಸುರಪುರ ಹೇಳಿ ಮಾಡಿಸಿದ ತಾಣ. ಇಲ್ಲಿಗೆ ಬರುವ ಅತಿಥಿಗಳು ತಪ್ಪದೆ ವಾಯು ವಿಹಾರಕ್ಕೆ ಬರುತ್ತಾರೆ.

ಇಲ್ಲಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗಂಟೆ ಗಟ್ಟಲೆ ವಾಯುವಿಹಾರ ಮಾಡಿ ಇಲ್ಲಿನ ಸೌಂದರ್ಯವನ್ನು ಸವಿದಿದ್ದರು.

ಇಲ್ಲಿ ಯಾವುದೆ ಕಾರ್ಖಾನೆಗಳಿಲ್ಲ. ಆದ್ದರಿಂದಲೇ ಪರಿಸರ ಮಾಲಿನ್ಯವು ಇಲ್ಲ. ಪಟ್ಟಣದಿಂದ ನ್ಯಾಯಾಧೀಶರ ವಸತಿಗೃಹ ಮಾರ್ಗವಾಗಿ ಟೇಲರ್ ಮಂಜಿಲ್ ಮೂಲಕ ಹೊರಟರೆ ಸಿಗುವ ಆನಂದಕ್ಕೆ ಸಾಟಿಯಿಲ್ಲ.
ಎಲ್ಲಪ್ಪನ ಬಾವಿಯಿಂದ ಫಾಲನ್ ಬಂಗ್ಲಾದವರೆಗೆ ಮತ್ತು ಅಲ್ಲಿಂದ ಟೇಲರ್ ಮಂಜಿಲ್‌ವರೆಗೆ ಒಂದು ಸುತ್ತು ವಾಯುವಿಹಾರ ಮಾಡಿದರೆ ಅದ್ಭುತ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಇಲ್ಲಿರುವ ಯಲ್ಲಪ್ಪನ ಬಾವಿ ನೀರು ಸಿಹಿಯಾಗಿದೆ. ವಾಯುವಿಹಾರಕ್ಕೆ ಬಂದವರು ಈ ಬಾವಿಯ ನೀರನ್ನು ಕುಡಿಯುತ್ತಾರೆ. ಈ ನೀರಿಗೆ ಮಧುಮೇಹ, ರಕ್ತದೊತ್ತಡ ನಿಯಂತ್ರಿಸುವ ಶಕ್ತಿ ಇದೆ ಎನ್ನುವುದು ಇಲ್ಲಿನವರ ನಂಬಿಕೆ. ಐತಿಹಾಸಿಕ ಟೇಲರ್ ಮಂಜಿಲ್‌ನಲ್ಲಿ ವಾಯುವಿಹಾರಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಪಕ್ಕದ್ಲ್ಲಲೇ ಕುದುರೆ ಗುಡ್ಡ ಇದೆ. ಈ ಗುಡ್ಡವನ್ನು ಹತ್ತಿ ಕುಳಿತರೆ ಇಡೀ ಪಟ್ಟಣ ಕಾಣುತ್ತದೆ.

ನೂರಾರು ಮಂದಿ ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ವಿಹಾರ ನಡಸುತ್ತಾರೆ. ಟೇಲರ್ ಮಂಜಿಲ್ ಹತ್ತಿರ ಪ್ರತಿದಿನ ಉಚಿತವಾಗಿ ಪತಂಜಲಿ ಯೋಗ ಹೇಳಿ ಕೊಡಲಾಗುತ್ತಿದೆ.ನಗರ ನಿವಾಸಿಗಳೂ ಇಲ್ಲಿಗೆ ಬಂದು ವಾಯು ವಿಹಾರ ಮಾಡುತ್ತಾರೆ.

ಈ ಪ್ರದೇಶದಲ್ಲಿ ಅಲ್ಲಲ್ಲಿ ಆಸನಗಳನ್ನು ನಿರ್ಮಿಸಬೇಕು. ಫಾಲನ್ ಬಂಗ್ಲಾದ ಹತ್ತಿರ ಇರುವ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು.

ಈ ಪ್ರದೇಶದಲ್ಲಿ ವಾಯು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು ಜೊತೆಗೆ ವಾಹನಗಳನ್ನು ನಿಷೇಧಿಸಬೇಕು ಎಂಬುದು ವಾಯುವಿಹಾರಿಗಳ ಬೇಡಿಕೆ  ಯಾಗಿದೆ.             
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT