ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಸಮುದಾಯದ ಬೃಹತ್ ಪ್ರತಿಭಟನೆ

Last Updated 18 ಅಕ್ಟೋಬರ್ 2011, 7:15 IST
ಅಕ್ಷರ ಗಾತ್ರ

ಹಾವೇರಿ: ವಾಲ್ಮೀಕಿ ನಾಯಕ ಸಮುದಾಯಕ್ಕೆ ಶೇ 7.5 ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಎಲ್.ಜಿ.ಹಾವನೂರು ನಾಯಕರ ಮೀಸಲಾತಿ ಹೋರಾಟ ಸಮಿತಿ ಕಾರ್ಯ ಕರ್ತರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಮುರುಘರಾಜೇಂದ್ರ ಮಠ ದಿಂದ ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು, ಮೀಸಲಾತಿಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿದ್ದಪ್ಪ ಹೊಸಮನಿ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸುವ ಮೂಲಕ ರಸ್ತೆತಡೆ ನಡೆಸಿದರು.


ಸಮಿತಿಯ ರಾಜ್ಯ ಪ್ರಧಾನ ಕಾರ್ಯ ದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರ 2001ರ ಜನಗಣತಿಯ ಪ್ರಕಾರ ಎಸ್.ಟಿ.ಗೆ 7.5 ಮೀಸಲಾತಿಯನ್ನು ರಾಜಕೀಯ, ಶಿಕ್ಷಣ, ಉದ್ಯೋಗ, ಆರ್ಥಿಕವಾಗಿ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರವು ರಾಜಕೀಯ ವಾಗಿ ಹಾಗೂ ಆರ್ಥಿಕವಾಗಿ ಮಾತ್ರ ಶೇ.7.5 ಮೀಸಲಾತಿ ನೀಡುತ್ತಿದೆ. ಶಿಕ್ಷಣ ಮತ್ತು ಉದ್ಯೋಗಕ್ಕೆ ಕೇವಲ ಶೇ.3ರ ಮೀಸಲಾತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದರಿಂದಾಗಿ ನಾಯಕ ಜನಾಂಗದ ವಿದ್ಯಾರ್ಥಿಗಳಿಗೆ ಎಂಜನಿಯರಿಂಗ್, ಮೆಡಿಕಲ್‌ನಂತಹ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಉದ್ಯೋಗದಿಂದಲೂ ವಂಚಿತರಾಗು ತ್ತಿದ್ದಾರೆ. ಆದ್ದರಿಂದ ಶೇ.3ರ ಮೀಸಲಾತಿ ಬದಲಾಗಿ ಶೇ 7.5 ಮೀಸಲಾತಿ ನೀಡ ಬೇಕೆಂದು ಆಗ್ರಹಿಸಿದರು.

ನಾಯಕ ಜನಾಂಗಕ್ಕೆ ಸೇರದ ಬಹ ಳಷ್ಟು ಜನರು ಎಸ್ಟಿ ಜಾತಿ ಪ್ರಮಾಣ ಪತ್ರವನ್ನು ನೀಡಿ ಬ್ಯಾಕ್ ಲಾಗ್ ಹುದ್ದೆ ಗಳಲ್ಲಿ ಭರ್ತಿಯಾಗಿದ್ದಾರೆ. ಇಂತಹ ಸುಮಾರು 40 ಸಾವಿರ ಜನರು ನೌಕರಿಯಲ್ಲಿದ್ದಾರೆ. ಕೂಡಲೇ ನಕಲಿ ಜಾತಿ ಪ್ರಮಾಣ ನೀಡಿ ನೌಕರಿ ಪಡೆದ 40 ಸಾವಿರ ನೌಕರರನ್ನು ಕೂಡಲೇ ವಜಾಗೊಳಿಸಬೇಕು. ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನೀಡಿರುವ ಅಧಿಕಾರಿಗಳ ಮೇಲೇ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಅವರು ಒತ್ತಾಯಿಸಿದರು.

ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂೂಕು ಕೇಂದ್ರಗಳಲ್ಲಿ ಕನಿಷ್ಠ 500 ವಿದ್ಯಾರ್ಥಿ, 500 ವಿದ್ಯಾರ್ಥಿನಿಯರ ವಸತಿ ನಿಲಯ ಪ್ರಾರಂಭಿಸಬೇಕು. ಪರಿ ಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಹಣ ವನ್ನು ಪೂರ್ಣ ಬಳಕೆ ಮಾಡದ ಅಧಿ ಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ತಳವಾರ, ಪರಿವಾರ ನಾಯಕ ಎನ್ನುವ ಹೆಸರಿನಿಂದ ಕರೆಯುವ ವಾಲ್ಮೀಕಿ ಸಮಾಜ ಬಾಂಧವರನ್ನು ಕೂಡಾ ಎಸ್ಟಿ ಎಂದು ಪ್ರಮಾಣ ಪತ್ರ ಕೊಡುವಂತೆ ಸರ್ಕಾರ ಆದೇಶಿಸಬೇಕು.
 
ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧಿಸಿದಂತೆ ಕಾನೂನು ತಜ್ಞ ಎಲ್.ಜಿ.ಹಾವನೂರು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಬೇಕು ಎಂಬ ಬೇಡಿಕೆ ಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಸವರಾಜ ಶಿವಣ್ಣನವರ, ಹೊನ್ನಪ್ಪ ಮರೆಮ್ಮನವರ, ಜಿಲ್ಲಾ ಅಧ್ಯಕ್ಷ  ಚಂದ್ರಣ್ಣ ಬೇಡರ, ಬಸವರಾಜ ಹಾದಿಮನಿ, ಎಸ್.ಎಚ್.ಕಳ್ಳಿಮನಿ, ಕೆ.ಬಿ.ನಾಗಮ್ಮ ನವರ, ಪರಮೇಶಪ್ಪ ಚಿನ್ನಣ್ಣನವರ, ಮಂಜು ನಾಥ ಕಂಚಿಕೇರಿ, ಬಸವರಾಜ ಓಲೇಕಾರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT