ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಗಳಿಗೆ ಬುದ್ಧಿಮತ್ತೆ ತಂತ್ರಜ್ಞಾನ!

Last Updated 19 ಜೂನ್ 2012, 19:30 IST
ಅಕ್ಷರ ಗಾತ್ರ

ಅಪಘಾತವೇ ಹಾಗೆ. ಕ್ಷಣ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ. ನಿದ್ದೆಗಣ್ಣಿನಲ್ಲಿ, ಕುಡಿದ ಅಮಲಿನಲ್ಲಿ ಅನೇಕ ಬಾರಿ ಚಾಲಕರು ಬೇರೆಯವರ ಪ್ರಾಣಕ್ಕೆ ಮಾತ್ರವಲ್ಲದೆ ತಮ್ಮ ಜೀವಕ್ಕೇ ಆಪತ್ತು ತಂದುಕೊಳ್ಳುತ್ತಾರೆ.
 
ಇಂಥ ಅಪಾಯಗಳನ್ನು ಮೆಟ್ಟಿ ನಿಲ್ಲಲು ಹೊಸ ಹೊಸ ಆವಿಷ್ಕಾರಗಳು ಸಮರ್ಥವಾಗಿವೆ. `ಅವಘಡ ಎಚ್ಚರಿಕೆಯ ಹೈಟೆಕ್ ವ್ಯವಸ್ಥೆ~, ಫೋನ್ ಸಂಬಂಧಿ ಉಪಕರಣಗಳು ಸುರಕ್ಷಿತ ಚಾಲನೆಗೆ ಒತ್ತು ಕೊಟ್ಟು `ನಿಮ್ಮ ಪಯಣ ಸುಖಕರವಾಗಿರಲಿ~ ಎನ್ನುತ್ತಿವೆ.

ಸೆಲ್‌ಫೋನ್ ನಿಯಂತ್ರಣ
ಇತ್ತೀಚೆಗೆ ಅಮೆರಿಕದಲ್ಲಿ ನಡೆದ 16ರಿಂದ 21 ವರ್ಷದೊಳಗಿನ ಚಾಲಕರ ಸಮೀಕ್ಷಾ ವರದಿಯಲ್ಲಿ ಶೇ 80ರಷ್ಟು ಮಂದಿ, `ವಾಹನ ಚಾಲನೆ ಮಾಡವಾಗ ಮೆಸೇಜ್ ಕಳುಹಿಸುವುದರಿಂದ, ಮಾತಿನಲ್ಲಿ ಮಗ್ನರಾಗುವುದರಿಂದ ಅಪಘಾತಗಳು ಸಂಭವಿಸುತ್ತವೆ~ ಎಂದು ಅಭಿಪ್ರಾಯಪಟ್ಟರು.

ಶೇ 30ರಷ್ಟು ಚಾಲಕರು ಹಾಗೆ ಮಾಡಿರುವುದಾಗಿ ಒಪ್ಪಿಕೊಂಡರು. ಚಾಲನೆ ವೇಳೆ ಅಪಾಯಕಾರಿಯಾಗಿ ಪರಿಣಮಿಸುವ ಸೆಲ್‌ಫೋನ್‌ಗಳನ್ನು ನಿಯಂತ್ರಿಸುವ `ದಿ ಸ್ಕಾಶೆ~ ಸೆಲ್‌ಫೋನ್ ನಿಯಂತ್ರಣ ಸಾಧನ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಸಾಧನದ ದರ 7,256 ರೂಪಾಯಿಯಿಂದ ಆರಂಭ. 1996ರಿಂದ ಇತ್ತೀಚಿನವರೆಗೆ ರಸ್ತೆಗೆ `ಕಾಲಿಟ್ಟಿರುವ~ ಎಲ್ಲಾ ವಾಹನಗಳಿಗೂ ಈ ಸಾಧನವನ್ನು ಅಳವಡಿಸಬಹುದು.

ಕಾರು ಚಲಿಸುವಾಗ ಇದು ತಾನೇ ತಾನಾಗಿ ಸೆಲ್‌ಫೋನ್‌ನಿಂದ ಸಂದೇಶ ಕಳಿಸುವುದನ್ನು, ಜಾಲತಾಣಗಳಲ್ಲಿ ಮುಳುಗೇಳುವುದನ್ನು ತಪ್ಪಿಸುತ್ತದೆ. ಒಮ್ಮೆ ಕಾರು ರಸ್ತೆ ಬದಿ ನಿಂತಿತೋ ಆಗ ಸೆಲ್‌ಫೋನ್ ಮೇಲಿನ ಹಿಡಿತವನ್ನು ಸಡಿಲಗೊಳಿಸುತ್ತದೆ. ಆದರೆ ಐಫೋನ್‌ಗಳನ್ನು ನಿಯಂತ್ರಿಸುವ ಶಕ್ತಿ ಇದಕ್ಕಿಲ್ಲ. ವಿಶೇಷ ಎಂದರೆ ಇದು ಕಾರಿನಲ್ಲಿರುವ ಎಲ್ಲಾ ಪ್ರಯಾಣಿಕರ ಸೆಲ್‌ಫೋನ್‌ಗಳಿಗೂ ಕಡಿವಾಣ ಹಾಕದು. ಇದರಿಂದ ಇತರೆ ಪ್ರಯಾಣಿಕರಿಗೆ ಯಾವುದೇ ಕಿರಿಕಿರಿ ಇಲ್ಲ.

ಜಿಪಿಎಸ್ ಬೆಂಗಾವಲು
ವಾಹನದಲ್ಲಿರುವ ಬಹುತೇಕ ಗ್ಯಾಡ್ಜೆಟ್‌ಗಳಿಗೆ `ಊಟ~ ಒದಗಿಸುವುದು ಪ್ರತ್ಯೇಕವಾದ ಬ್ಯಾಟರಿ. ಒಮ್ಮೆ ಏನಾದರೂ ಬ್ಯಾಟರಿ ಕೈ ಕೊಟ್ಟಿತೋ ಗ್ಯಾಡ್ಜೆಟ್‌ಗಳ ತಲೆ ಓಡದು. ಹೀಗಾಗಿ ಬ್ಯಾಟರಿ ಚಾರ್ಜ್ ಆಗಿದೆಯೇ ಎಂಬುದನ್ನು ಸದಾ ಗಮನಿಸಬೇಕಾಗುತ್ತದೆ. ಸಾಧನವನ್ನು ಚಾರ್ಜ್ ಮಾಡಿ ಮತ್ತೆ ಅದನ್ನು ಕಾರಿಗೆ ಅಳವಡಿಸುವುದೂ ಒಂದು ರಗಳೆ.

ಆದರೆ `ಪಾಕೆಟ್ ಫೈಂಡರ್ ವೆಹಿಕಲ್~ ಸಾಧನ ಕಾರಿನ ಬ್ಯಾಟರಿಯಿಂದಲೇ ಶಕ್ತಿ ಪಡೆದು ಸದಾ `ಜೀವಂತ~ವಾಗಿರುತ್ತದೆ. ಜಿಪಿಎಸ್ ಸೌಲಭ್ಯ ಹೊಂದಿರುವ ಈ ಉಪಕರಣದ ಮೂಲಕ ಜಾಲತಾಣದ ಸಹಾಯ ಪಡೆದು ವಾಹನ ಸಾಗುತ್ತಿರುವ ಪ್ರದೇಶ, ಅದರ ವೇಗ, ಎಷ್ಟು ದೂರ ಕ್ರಮಿಸಿದ್ದೇವೆ ಇತ್ಯಾದಿ ಮಾಹಿತಿಗಳನ್ನೂ ಪಡೆಯಬಹುದು.

ಅಲ್ಲದೇ ಯುವ ಚಾಲಕರು ಚಲಿಸುವ ವೇಗ ಮತ್ತು ದೂರವನ್ನು ನಿಯಂತ್ರಿಸಲು ಕೂಡ ಇದರಿಂದ ಸಾಧ್ಯ. ಮಕ್ಕಳ ಹಿತ ಕಾಯುವ ಪೋಷಕರಿಗೆ ಹೇಳಿ ಮಾಡಿಸಿದ ಸಾಧನವಿದು. ಸುಮಾರು ರೂ. 10 ಸಾವಿರ ಮೌಲ್ಯದ ಈ ಸಾಧನವನ್ನು ಬಳಸಲು ಪ್ರತಿ ತಿಂಗಳೂ ರೂ 725ರಷ್ಟು ಶುಲ್ಕ ಸಲ್ಲಿಸಬೇಕು.

ರಾಡಾರ್ ಮೋಡಿ
ಕೋಬ್ರಾ ಎಲೆಕ್ಟ್ರಾನಿಕ್ಸ್ ಕಂಪೆನಿಯ `ಕೂಸು ಕೋಬ್ರಾ ಐ ರಾಡಾರ್~ ಸಾಧನ. ಈಗ ಇದರ ಪರಿಷ್ಕೃತ ಆವೃತ್ತಿ ಮಾರುಕಟ್ಟೆಯಲ್ಲಿದೆ. 7256 ರೂಪಾಯಿ ಬೆಲೆಯ ಈ ಸಾಧನದ ಹೆಸರು `ಐರ‌್ಯಾಡ್ 200~. ರಾಡಾರ್ ಮತ್ತು ಲೇಸರ್ ಕಿರಣಗಳನ್ನು ಬಳಸಿ ಕಾರಿನ ಡ್ಯಾಷ್‌ಬೋರ್ಡ್ ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ಚಾಲಕರಿಗೆ ಮನದಟ್ಟು ಮಾಡಿಕೊಡುವ ಸಾಧನವಿದು.

ಸೆಲ್‌ಫೋನ್‌ನಲ್ಲಿರುವ ಬ್ಲೂಟೂತ್ ಬಳಸಿ ಮಾಹಿತಿ ಸಂಗ್ರಹಿಸಬಹುದು. ಅಪಘಾತ ಸಂಭವಿಸಿದಾಗ ಕೂಡಲೇ ಬೇರೆಯವರಿಗೆ ಸಂದೇಶ ಮುಟ್ಟಿಸಲು ಕೂಡ ಇದನ್ನು ಬಳಸಬಹುದು. ಅಪಘಾತ ಸ್ಥಳವನ್ನು ಚಿತ್ರೀಕರಿಸುವ ಸಾಮರ್ಥ್ಯ ಕೂಡ ಇದಕ್ಕಿದೆ. ಬೇರೆ ಸ್ಥಳದಲ್ಲಿ ಅಪಘಾತ ನಡೆದಿದ್ದರೂ ಲೇಸರ್ ತಂತ್ರಜ್ಞಾನದ ಮೂಲಕ ಅದರ ಮಾಹಿತಿ ಪಡೆಯಬಹುದು.

ನ್ಯಾವಿಗೇಷನ್
13,954 ರೂಪಾಯಿ ಬೆಲೆ ಬಾಳುವ `ಟಾಂಟಾಂ ಗೋ ಲೈವ್ 1535ಎಂ~ ಉಪಕರಣ ರಿಯಲ್ ಟೈಮ್‌ನಲ್ಲಿ ಪ್ರತಿ ಎರಡು ನಿಮಿಷಗಳಿಗೊಮ್ಮೆ ಟ್ರಾಫಿಕ್ ವರದಿಗಳನ್ನು ನೀಡಲಿದೆ. ಈ ಸಾಧನ ಅಳವಡಿಸಲಾಗಿರುವ ಇತರೆ ವಾಹನಗಳ ವೇಗ, ಅವುಗಳು ಚಲಿಸುತ್ತಿರುವ ಸ್ಥಳದ ಮಾಹಿತಿ ಕೂಡ ಲಭ್ಯ.
 
ಪ್ರವಾಸ ಸಲಹೆ, ಹವಾಮಾನ ವರದಿ, ಹತ್ತಿರದಲ್ಲೇ ದೊರೆಯುವ ಇಂಧನದ ಸದ್ಯದ ಬೆಲೆ ಇತ್ಯಾದಿ ವಿವರಗಳನ್ನು ಪಡೆಯಬಹುದು. ಒಂದು ವರ್ಷದ ಬಳಿಕ ರೂ. 3,348 ನೀಡಿದರಷ್ಟೇ ಈ ಮಾಹಿತಿ ಸೇವೆ ಮುಂದುವರಿಯುತ್ತದೆ.

ಮಾರ್ಗ ಮೇಲ್ವಿಚಾರಣೆ
ಹೊಸದಾಗಿ ಮಾರುಕಟ್ಟೆಗೆ ಬಂದ ವಾಹನಗಳಲ್ಲಿ ಸುಧಾರಿತ ಸುರಕ್ಷತಾ ಉಪಕರಣಗಳನ್ನು ಅಳವಡಿಸಲಾಗಿರುತ್ತದೆ. ಇವುಗಳಿಂದ ಮಾರ್ಗ ಕುರಿತ ಮಾಹಿತಿ ವಿವರ ಹಾಗೂ ದುರಂತದ ವಿವರ ಪಡೆಯಬಹುದು. ಆದರೆ ಇಂಥ ಉಪಕರಣಗಳು ಇಲ್ಲದ ವಾಹನಗಳಿಗೆ  ಕೂಡ ಈಗ ಈ ಸೇವೆ ಲಭ್ಯ.

ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗೆ `ಐಯಾನ್‌ರೋಡ್ ಆಗ್‌ಮೆಂಟೆಡ್ ಡ್ರೈವಿಂಗ್ ಪ್ರೊ~ ಹೆಸರಿನ ಜಾಲ ಕಾರ್ಯಕ್ರಮವನ್ನು ಅಳವಡಿಸಿ ಅಗತ್ಯ ವಿವರಗಳನ್ನು ಪಡೆಯಬಹುದು. ಫೋನ್‌ನಲ್ಲಿರುವ ವೀಡಿಯೊ ಕ್ಯಾಮೆರಾ ಸ್ಟ್ರೀಮ್, ಜಿಪಿಎಸ್ ವ್ಯವಸ್ಥೆ ಬಳಸಿಕೊಂಡು ವಾಹನದ ವೇಗ ಅದು ಚಲಿಸುತ್ತಿರುವ ಪ್ರದೇಶದ ಮಾಹಿತಿಯನ್ನು ಇದು ಒದಗಿಸುತ್ತದೆ.

ಈ ಸಾಧನದ ಮುಖ್ಯ ಉಪಯೋಗ ಎಂದರೆ ಎದುರಿಗೆ ಇರುವ ವಾಹನಗಳ ಅಂತರವನ್ನು ಸುಲಭವಾಗಿ ಅಳೆಯಬಹುದು. ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವ ಅಂತರದ ಕುರಿತು ವೀಡಿಯೊ ಮೂಲಕವೇ ಮಾಹಿತಿ ಪಡೆಯಬಹುದು. ಉದಾಹರಣೆಗೆ ಬೇರೊಂದು ವಾಹನಕ್ಕೆ ನಿಮ್ಮ ವಾಹನ ಸಾಕಷ್ಟು ಸಮೀಪದಲ್ಲಿದ್ದರೆ ವೀಡಿಯೊದಲ್ಲಿ ಕೆಂಪು ದೀಪ ಬೆಳಗಿ ಎಚ್ಚರಿಕೆ ನೀಡುತ್ತದೆ.
 
ಸಾಧಾರಣ ಅಂತರದಲ್ಲಿದ್ದರೆ ಹಳದಿ ಬೆಳಕು ಹಾಗೂ ಸುರಕ್ಷಿತ ಅಂತರದಲ್ಲಿದ್ದರೆ ಹಸಿರು ಬೆಳಕು ಗೋಚರಿಸುತ್ತದೆ. ಆದರೆ ಪದೇ ಪದೇ ಪಥ ಬದಲಿಸಿದಾಗ ಇದರಿಂದ ಹೆಚ್ಚೇನೂ ಮಾಹಿತಿ ಲಭಿಸದು. ಅಲ್ಲದೇ ಮೋಟರ್ ಸೈಕಲ್‌ಗಳನ್ನು ಗುರುತಿಸುವಷ್ಟು ಶಕ್ತಿ ಇದಕ್ಕಿಲ್ಲ.

ಟ್ಯಾಬ್ಲೆಟ್ `ಪೀಠ~
ವಾಹನದ ಚಾಲಕರನ್ನಷ್ಟೇ ಗಮನಹರಿಸಿದರೆ ಸಾಕೆ? ಸಹ ಪ್ರಯಾಣಿಕರ ಹಿತ ಕಾಯುವುದು ಕೂಡ ಮುಖ್ಯ ಅಲ್ಲವೇ? ಈಗ ಡಿವಿಡಿಗಳು ನೀಡುವ ಮನರಂಜನೆಗಿಂತಲೂ ಹೆಚ್ಚಾಗಿ ಐಪ್ಯಾಡ್, ಟ್ಯಾಬ್ಲೆಟ್‌ಗಳು ನೀಡುವ ರಂಜನೆಯೇ ಮುಖ್ಯವಾಗಿದೆ. ಆದರೆ ಇವುಗಳನ್ನು `ಕೂರಿಸಲು~ ಅನೇಕ ಕ್ರೆಡಲ್, ಹೋಲ್ಡರ್ ಹಾಗೂ ಬ್ರಾಕೆಟ್‌ಗಳು ಮಾರುಕಟ್ಟೆಯಲ್ಲಿವೆ.
 
ಹೊಸ ಮಾಡೆಲ್‌ಗಳಿಗೆ ತಕ್ಕ ಹೋಲ್ಡರ್‌ಗಳು ಲಭ್ಯ. ಆದರೆ ಇವುಗಳಿಗೆ ಹೋಲಿಸಿದರೆ ಯಾವುದೇ ಮಾಡೆಲ್‌ಗಳಿಗೆ ಹೊಂದಿಸಬಹುದಾದ ಸೇಟ್‌ಚಿ ಕಪ್ ಹೋಲ್ಡರ್ ಹೆಚ್ಚು ಉಪಯುಕ್ತ. 7ರಿಂದ 10 ಇಂಚು ಅಗಲದ ಯಾವುದೇ ಟ್ಯಾಬ್ಲೆಟ್‌ಗಳನ್ನು ಇದರಲ್ಲಿ ಸುಲಭವಾಗಿ ಕೂರಿಸಬಹುದು.

ಅಲ್ಲದೆ ಇದರ ಪೈವೋಟ್‌ಗಳ ಸಹಾಯ ಪಡೆದು ವೈವಿಧ್ಯಮಯ ಭಂಗಿಯಲ್ಲಿ ಟ್ಯಾಬ್ಲೆಟ್‌ಗಳನ್ನು ಬಳಸಬಹುದು. ಸ್ಮಾರ್ಟ್‌ಫೋನ್‌ಗಳನ್ನು ಇಡಲು ಕೂಡ ಇದರಲ್ಲಿ ಎರಡನೇ ಬ್ರಾಕೆಟ್ ಸೌಲಭ್ಯವಿದೆ. ಬೆಲೆ ರೂ1,674. ಹಿಂದಿನ ಸೀಟಿಗಷ್ಟೇ ಇದನ್ನು ಅಳವಡಿಸಿ, ಚಾಲಕನ ಗಮನ ಬೇರೆಡೆ ಹರಿಯುವುದನ್ನು ತಪ್ಪಿಸಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT