ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್ ಮಡಿಲಿಗೆ ಚುಟುಕು ವಿಶ್ವಕಪ್; ಶ್ರೀಲಂಕಾದ ಕನಸು ಭಗ್ನ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೊಲಂಬೊ: ಕ್ರಿಸ್ ಗೇಲ್ ಬ್ಯಾಟಿಂಗ್‌ನಲ್ಲಿ ಕೈಕೊಟ್ಟರೂ ಅವರು ನುಡಿದಿದ್ದ ಭವಿಷ್ಯ ಸುಳ್ಳಾಗಲಿಲ್ಲ. ಫೈನಲ್‌ಗೆ ಮುನ್ನವೇ `ಕ್ಷಮಿಸು ಲಂಕಾ, ಈ ಬಾರಿ ಪ್ರಶಸ್ತಿ ಕೆರಿಬಿಯನ್ ಪಡೆ ಪಾಲಾಗಲಿದೆ~ ಎಂದ್ದ್ದಿದ ಅವರ  ಮಾತು ನಿಜವಾಯಿತು.

ಏಕೆಂದರೆ ವೆಸ್ಟ್‌ಇಂಡೀಸ್ ತಂಡ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹಾಗಾಗಿಯೇ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಕೆರಿಬಿಯನ್ ಬಳಗದ ಖುಷಿಗೆ ಅಂತ್ಯವೇ ಇರಲಿಲ್ಲ. ನಿರಾಸೆಯ ಮಡುವಿನಲ್ಲಿದ್ದ ಆತಿಥೇಯ ಅಭಿಮಾನಿಗಳನ್ನೂ ತಮ್ಮ ವಿಚಿತ್ರ ನೃತ್ಯದ ಮೂಲಕ ರಂಜಿಸಿದರು.

ಏಕೆಂದರೆ ಇದು ಈ ತಂಡಕ್ಕೆ ಒಲಿದ ಚೊಚ್ಚಲ ಚುಟುಕು   ವಿಶ್ವಕಪ್. ಕುತೂಹಲ ಮೂಡಿಸಿದ್ದ ಅಂತಿಮ ಪೈಪೋಟಿಯಲ್ಲಿ ಲಂಕಾ ತಂಡವನ್ನು 36 ರನ್‌ಗಳಿಂದ ಬಗ್ಗುಬಡಿದ ವಿಂಡಿಸ್ ತಂಡದವರು ಟ್ರೋಫಿ ಎತ್ತಿ ಹಿಡಿದರು. ಕೆರಿಬಿಯನ್ ಬಳಗ ನೀಡಿದ 138 ರನ್‌ಗಳ ಗುರಿಗೆ ಉತ್ತರವಾಗಿ ಲಂಕಾ 18.4 ಓವರ್‌ಗಳಲ್ಲಿ ಕೇವಲ 101 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಕೆರಿಬಿಯನ್ ಬಳಗದವರು 33 ವರ್ಷಗಳ ಬಳಿಕ ಅದ್ಭುತ ಸಾಧನೆಯೊಂದಕ್ಕೆ ಕಾರಣರಾಗಿದ್ದಾರೆ. ಏಕೆಂದರೆ 1979ರಲ್ಲಿ ಏಕದಿನ ಚಾಂಪಿಯನ್ ಆಗಿದ್ದ ಈ ತಂಡ 1983ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ವಿರುದ್ಧ ಸೋಲು ಕಂಡಿತ್ತು.

ಅಷ್ಟವರೆಗೆ ವಿಶ್ವ ಕ್ರಿಕೆಟ್‌ನಲ್ಲಿ ಪಾರುಪತ್ಯ ಸಾಧಿಸಿದ್ದ ಈ ತಂಡ ನಂತರದ ದಿನಗಳಲ್ಲಿ ಕುಸಿತ ಕಂಡಿತ್ತು. ಆದರೆ ಈ ಬಾರಿ ಚುಟಕು ವಿಶ್ವಕಪ್ ಗೆಲ್ಲುವ ಮೂಲಕ ತಮ್ಮ ದೇಶದ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ವಿವಾದಗಳಿಗೆ ಒಳಗಾಗಿರುವ ಈ ದೇಶದ ಕ್ರಿಕೆಟ್ ಮಂಡಳಿಗೆ ಈ ಗೆಲುವು ಹೊಸ ಚೈತನ್ಯ ತಂದಿದೆ. 

ಶ್ರೀಲಂಕಾ ಹಾಗೂ ಟ್ರೋಫಿ ನಡುವೆ ಇದ್ದ ದೊಡ್ಡ ಸವಾಲು ಕ್ರಿಸ್ ಗೇಲ್. ಆದರೆ ಈ ಆಟಗಾರನನ್ನು ನಿಯಂತ್ರಿಸುವಲ್ಲಿ ಆತಿಥೇಯರು ಯಶಸ್ವಿಯಾದರು.ಆದರೆ ಮಾರ್ಲೊನ್ ಸ್ಯಾಮುಯೆಲ್ಸ್ (78; 56 ಎಸೆತ, 3 ಬೌಂಡರಿ, 6 ಸಿಕ್ಸರ್) ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

2009ರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಪಾಕ್ ಎದುರು ಹಾಗೂ 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಎದುರು ಸೋಲು ಕಂಡಿದ್ದ ಲಂಕಾ ಮತ್ತೆ ನಿರಾಸೆಗೆ ಒಳಗಾಯಿತು. ವಿಂಡೀಸ್‌ನ ಸವಾಲಿನ ಗುರಿ ಎದುರು ಲಂಕಾ ಆರಂಭದಿಂದಲೇ ಎಡವುತ್ತಾ ಸಾಗಿತು. ಎರಡನೇ ಓವರ್‌ನಲ್ಲಿಯೇ ತಿಲಕರತ್ನೆ ದಿಲ್ಶಾನ್ ವಿಕೆಟ್ ಕಳೆದುಕೊಂಡಿತು. ಆಗ ನಾಯಕ ಮಾಹೇಲ ಜಯವರ್ಧನೆ (33; 36 ಎಸೆತ) ಹಾಗೂ ಕುಮಾರ ಸಂಗಕ್ಕಾರ ತಂಡದ ನೆರವಿಗೆ ನಿಂತರು.

ಆದರೆ ಕ್ರಮೇಣ ವಿಕೆಟ್ ಪತನ ಈ ತಂಡದ ಪ್ರಶಸ್ತಿ ಆಸೆಯನ್ನು ಭಗ್ನಗೊಳಿಸಿತು. ಕೊನೆಯಲ್ಲಿ ಕುಲಶೇಖರ (26; 13 ಎಸೆತ) ಪ್ರಯೋಜನಕ್ಕೆ ಬರಲಿಲ್ಲ. ಸುನಿಲ್ ನಾರಾಯಣ್ (9ಕ್ಕೆ3) ಹಾಗೂ ಡರೆನ್ ಸಮಿ (6ಕ್ಕೆ2) ಅವರ ಪ್ರಭಾವಿ ಬೌಲಿಂಗ್ ದಾಳಿಗೆ ಲಂಕಾ ಬಳಿ ಉತ್ತರವೇ ಇರಲಿಲ್ಲ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡದ ಆರಂಭ ತೀರಾ ಕಳಪೆಯಾಗಿತ್ತು. ಏಕೆಂದರೆ ಭಾರಿ ಭರವಸೆ ಮೂಡಿಸಿದ್ದ ಗೇಲ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇದು ಲಂಕಾ ಪಾಳಯದಲ್ಲಿ ಭಾರಿ ಸಂಭ್ರಮಕ್ಕೆ ಕಾರಣವಾಯಿತು.

ಮೊದಲ ಏಳು ಓವರ್‌ಗಳಲ್ಲಿ ಈ ತಂಡ ಗಳಿಸಿದ್ದು ಕೇವಲ 12 ರನ್. 12 ಓವರ್‌ಗಳ ಅಂತ್ಯಕ್ಕೆ ಈ ತಂಡದ ಸ್ಕೋರ್ 48. ಆದರೆ ಮಾಲಿಂಗ ಹಾಕಿದ 13ನೇ ಓವರ್‌ನಲ್ಲಿ ಮಾರ್ಲೊನ್ ಸ್ಯಾಮುಯೆಲ್ಸ್ ಮೂರು ಸಿಕ್ಸರ್ ಎತ್ತಿದ್ದು ಪಂದ್ಯಕ್ಕೊಂದು ಹೊಸ ತಿರುವು ನೀಡಿತು. ಕೊನೆಯ ಎಂಟು ಓವರ್‌ಗಳಲ್ಲಿ ವಿಂಡೀಸ್ 89 ರನ್ ಕಲೆಹಾಕಿತು. ಸಮಿ (ಔಟಾಗದೆ 26; 15 ಎಸೆತ) ಕೊನೆಯಲ್ಲಿ ಗುಡುಗಿದರು.

`ಎರಡು ವರ್ಷಗಳಿಂದ ನಾವು ಸಾಕಷ್ಟು ಕಠಿಣ ಪರಿಶ್ರಮ ಹಾಕಿ ಆಡುತ್ತಿದ್ದೆವು. ಅದಕ್ಕೀಗ ಪ್ರತಿಫಲ ಸಿಕ್ಕಿದೆ. ಇದು ಎಂದೂ             ಮರೆಯಲಾಗದ ಕ್ಷಣ~
- ಡರೆನ್ ಸಮಿ, ವಿಂಡೀಸ್ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT