ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಿರಣ ನಿಯಮ ಪರಿಷ್ಕರಣೆ ಸಲಹೆ

Last Updated 3 ಫೆಬ್ರುವರಿ 2011, 16:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೊಬೈಲ್ ಫೋನ್ ಮತ್ತು ಗೋಪುರಗಳು ಹೊರ ಸೂಸುವ ವಿಕಿರಣಗಳು ವ್ಯಕ್ತಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣಕ್ಕೆ, ಭಾರತದ ಅಗತ್ಯಗಳಿಗೆ ತಕ್ಕಂತೆ  ವಿಕಿರಣ ನಿಯಮಾವಳಿ ಪರಿಷ್ಕರಿಸಲು ಉನ್ನತ ಮಟ್ಟದ ಸಮಿತಿ ಸಲಹೆ ನೀಡಿದೆ.

ಮೊಬೈಲ್  ಮತ್ತು ಮೊಬೈಲ್ ಗೋಪುರಗಳಿಂದ ಹೊರ ಸೂಸುವ ವಿಕಿರಣಗಳು ಖಿನ್ನತೆ, ನಿದ್ರಾಹೀನತೆ, ನಿರಾಸಕ್ತಿ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗುತ್ತಿವೆ ಎಂದು ಅಂತರ್ ಸಚಿವಾಲಯ ಸಮಿತಿ (ಐಎಂಸಿ) ಅಭಿಪ್ರಾಯಪಟ್ಟಿದೆ. ವಿಕಿರಣ ಪ್ರಭಾವದಿಂದ ಸ್ಮರಣ ಶಕ್ತಿ ನಷ್ಟ, ತಲೆನೋವು, ನಿಧಾನ ಪ್ರತಿಕ್ರಿಯೆ, ಆಹಾರ ಜೀರ್ಣ ವ್ಯವಸ್ಥೆ ಮತ್ತು  ಹೃದಯ ಬಡಿತದಲ್ಲಿ ಸಮಸ್ಯೆಗಳು ತಲೆದೋರಲಿವೆ ಎಂದೂ ಸಮಿತಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಜನದಟ್ಟಣೆ ಇರುವ ಪ್ರದೇಶ, ಶಾಲೆ, ಆಟದ ಮೈದಾನ ಮತ್ತು ಆಸ್ಪತ್ರೆಗಳ ಸುತ್ತಮುತ್ತ ಮೊಬೈಲ್ ಗೋಪುರಗಳನ್ನು ಸ್ಥಾಪಿಸುವುದಕ್ಕೆ ಕಠಿಣ ಸ್ವರೂಪದ ನಿರ್ಬಂಧಗಳನ್ನು ವಿಧಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.

ಮೊಬೈಲ್ ವಿಕಿರಣ ಹೊರಸೂಸುವಿಕೆಯಿಂದ ವ್ಯಕ್ತಿಯ ಆರೋಗ್ಯದ ಮೇಲೆ  ಅದರಲ್ಲೂ ವಿಶೇಷವಾಗಿ ಮಕ್ಕಳು, ಗರ್ಭೀಣಿಯರು ಮತ್ತು ವಯೋವೃದ್ಧರ ಮೇಲೆ ದೀರ್ಘಾವಧಿಯಲ್ಲಿ ಆಗುವ ದುಷ್ಪರಿಣಾಮಗಳ ಬಗ್ಗೆ ಸದ್ಯಕ್ಕೆ ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಮೊಬೈಲ್ ಗೋಪುರಗಳಿಂದ ಹೊರ ಸೂಸುವ ವಿದ್ಯುತ್ ಆಯಸ್ಕಾಂತೀಯ ವಿಕಿರಣಗಳು ಪರಿಸರದ  ಬಗ್ಗೆ ಅತ್ಯುತ್ತಮ ಸಾಕ್ಷ್ಯ ಒದಗಿಸುವ ಜೇನು ನೊಣ ಮತ್ತು ಪಕ್ಷಿಗಳ ಚಲನವಲನ ಮತ್ತು ಸಂತಾನೋತ್ಪತ್ತಿ ಮೇಲೆ ತೀವ್ರ ಬೆದರಿಕೆ ಒಡ್ಡಿವೆ ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಮೊಬೈಲ್ ವಿಕಿರಣಗಳು ಗುಬ್ಬಿ, ಪಾತರಗಿತ್ತಿ, ದುಂಬಿ ಮತ್ತಿತರ ಕ್ರಿಮಿ ಕೀಟಗಳ ನಾಶಕ್ಕೆ ಕಾರಣವಾಗಿರುವ ಬಗ್ಗೆ ಕೆಲ ಅಧ್ಯ್ಯನಗಳು ಬೆಳಕು ಚೆಲ್ಲಿವೆ ಎಂದೂ ಸಮಿತಿ ತಿಳಿಸಿದೆ. ಮೊಬೈಲ್‌ಗಳ ಬಳಕೆಯಲ್ಲಿ ವೈಯರ್‌ಲೆಸ್ ಸೌಲಭ್ಯ, ಕರೆ ಅವಧಿ ಕಡಿತ, ಸಂಕ್ಷಿಪ್ತ ಸಂದೇಶ ಸೇವೆ (ಎಸ್‌ಎಂಎಸ್) ಮತ್ತು ಸಂಕೇತ ಗುಣಮಟ್ಟ ಕಡಿಮೆ ಇದ್ದಾಗ ಮೊಬೈಲ್ ಬಳಕೆ ನಿರ್ಬಂಧ ಮತ್ತಿತರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT