ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೇಂದ್ರೀಕೃತ ಭ್ರಷ್ಟಾಚಾರ

Last Updated 23 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಕರ್ನಾಟಕದ ಪಂಚಾಯ್ತಿಗಳ ಕಥೆಯ ಧನಾತ್ಮಕ ಆಯಾಮಗಳೇನೇ ಇದ್ದರೂ ಅದರ ಜೊತೆ ಜೊತೆಗೇ ಪಂಚಾಯ್ತಿ ಸದಸ್ಯರು ಭ್ರಷ್ಟರಾದ ನೇತ್ಯಾತ್ಮಕ ಆಯಾಮವನ್ನೂ ಚರ್ಚಿಸಲೇಬೇಕಾಗುತ್ತದೆ. ನಜೀರ್‌ಸಾಬ್ ಅವರ ಕಾಲದಿಂದ ಘೋರ್ಪಡೆಯವರ ಅವಧಿಯ ತನಕವೂ ಕೊಂಚ ಗಂಭೀರ ಮತ್ತು ಬಿಗಿಯಾಗಿದ್ದ ಈ ಸಂಸ್ಥೆಗಳು 2006ರಿಂದ ಈಚೆಗೆ ಸಂಪೂರ್ಣವಾಗಿ ತಮ್ಮ ಉದ್ದೇಶವನ್ನು ಮರೆತು ಭ್ರಷ್ಟತೆಯ ಕೂಪಗಳಾದವು ಅನ್ನಿಸುತ್ತದೆ.

ಪಂಚಾಯ್ತಿಗಳಿಗೆ ಅನುದಾನ ತೀರಾ ಕಡಿಮೆಯಿದ್ದ ಕಾಲದಲ್ಲಿ ಅದೊಂದು ಆದಾಯದ ಮೂಲ ಎಂದು ಪಂಚಾಯ್ತಿ ಸಂದಸ್ಯರಿಗೆ ಅನ್ನಿಸಿರಲಿಲ್ಲ. ಅನುದಾನದ ಮೊತ್ತ ಹೆಚ್ಚುತ್ತಾ ಹೋದಂತೆ ಅದನ್ನು ಸ್ವಂತ ಲಾಭಕ್ಕೆ ಬಳಸಿಕೊಳ್ಳುವ ಲೋಭವೊಂದು ಸದಸ್ಯರನ್ನು ಆವರಿಸಿಕೊಂಡಿತು.

ನಮ್ಮದೇ ಊರಾದ ಸುಳ್ಯ ತಾಲೂಕಿನ ಅಮರಮುದ್ದೂರು ಪಂಚಾಯ್ತಿಯ ಉದಾಹರಣೆಯನ್ನೇ ಇಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ.  ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆ ಬಂದಾಗ ಅದರ ನಿರ್ವಹಣೆಯ ಅನುದಾನ ಇರಲಿಲ್ಲ. ಪೈಪು ಒಡೆದರೆ ಊರಿನಲ್ಲಿ ಯಾರಬಳಿ ಪೈಪ್ ಇದೆ ಎಂಬುದನ್ನು ಹುಡುಕಿ ಅವರನ್ನು ಕೇಳಿ ಪೈಪ್ ತಂದು ದುರಸ್ತಿ ಕಾರ್ಯ ನಡೆಸುತ್ತಿದ್ದರು.

ಈ ದುರಸ್ತಿಗೆ ಬಿಲ್ ಮಾಡಬಹುದು ಎಂದು ತಿಳಿದಿದ್ದರ ಹಿಂದೆಯೇ ದುರಸ್ತಿಯ ಪ್ರಮಾಣ ಹೆಚ್ಚಿತು. ಒಂದು ವರ್ಷದಲ್ಲಿ 48 ದುರಸ್ತಿ ಬಿಲ್ಲುಗಳಾದವು. ತುರ್ತು ಕಾಮಗಾರಿ ಎಂದು ಎರಡು  ಸಾವಿರ ರೂಪಾಯಿಗಳ ವರೆಗಿನ ಮೊತ್ತವನ್ನು ಟೆಂಡರ್, ಮಂಜೂರಾತಿ ಇಲ್ಲದೇ ಬಳಸುವ  ಅಧಿಕಾರ ಪಂಚಾಯ್ತಿಗಿದೆ. ಈ ಪಂಚಾಯ್ತಿಯಲ್ಲಿ ಬಿಲ್ಲುಗಳ ಮೊತ್ತ 1660 ರೂಪಾಯಿಗಳಿಂದ 1980 ರೂಪಾಯಿಗಳ ಒಳಗೇ ಇತ್ತು!
ರಸ್ತೆಯ ಹೊಂಡ ಮುಚ್ಚುವ ಕೆಲಸವೂ ಹೀಗೇ ನಡೆಯಿತು.

ಕುಕ್ಕುಜಡ್ಕ-–ಅಜ್ಜನಗದ್ದೆಯ ತನಕದ ರಸ್ತೆಯ ದುರಸ್ತಿಯನ್ನು ಒಮ್ಮೆ ಮಾಡಲಾಯಿತು. ಮತ್ತೊಮ್ಮೆ  ಅಜ್ಜನಗದ್ದೆ-–ಕುಕ್ಕುಜಡ್ಕ ದುರಸ್ತಿ ಕಾಮಗಾರಿ ಕೈಗೊಳ್ಳಲಾಯಿತು. ಒಂದೇ ರಸ್ತೆಗೆ ಎರಡೆರಡು ಬಿಲ್ಲುಗಳನ್ನು ಸೃಷ್ಟಿಸಿದ ಕಥೆಯಿದು.  ಕಚೇರಿ ಮುಂದಿರುವ ೪-೫ ತೆಂಗಿನ ಮರಗಳಿಗೆ ‘ನೀರಾವರಿ ಒದಗಿಸಿ’ ಸಾವಿರಾರು ರೂಪಾಯಿ ಖರ್ಚಾಯಿತು. ಹೀಗೆ ಆವಿಷ್ಕರಿಸಿದ ಖರ್ಚುಗಳ ಲೆಕ್ಕದಲ್ಲಿ ಸರ್ಕಾರಿ ರಜೆ ಇರುವ ದಿನ ಅಧ್ಯಕ್ಷರು ತಾಲೂಕು ಪಂಚಾಯ್ತಿ ಕಚೇರಿಗೆ ಸಭೆಗೆಂದು ಹೋದ ಖರ್ಚೂ ಸೇರಿತ್ತು.

ಇದೆಲ್ಲವೂ ಸೇರಿದಾಗ ಆದ ಒಟ್ಟು ಖರ್ಚು ಸುಮಾರು 3 ಲಕ್ಷ ರೂಪಾಯಿಗಳು. ಕರ್ನಾಟಕಕ್ಕೂ ಕಂಪ್ಯೂಟರ್ ಖರೀದಿ ಹಗರಣಗಳಿಗೂ ಹಳೆಯ ನಂಟು. ಅದು ನಮ್ಮ ಗ್ರಾಮ ಪಂಚಾಯ್ತಿಯನ್ನೂ ಬಿಡಲಿಲ್ಲ.  ೨೦೦೭ರಲ್ಲಿ ಒಂದೊಂದು ಕಂಪ್ಯೂಟರ್‌ಗೂ ಒಂದು ಲಕ್ಷ ರೂಪಾಯಿಗಳನ್ನು ನೀಡಿ ಖರೀದಿಸಲಾಗಿತ್ತು. ಪಂಚಾಯ್ತಿಯಿಂದ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದಾಗ ಮತ್ತೊಂದು ಅಂಶ ಬಯಲಾಯಿತು.

ಒಂದು ಲಕ್ಷ ರೂಪಾಯಿಗಳಿಗೆ ಕಂಪ್ಯೂಟರ್ ಒದಗಿಸಿದ್ದ ವಿತರಕ ತಾಲೂಕಿನ ಇತರ ಪಂಚಾಯ್ತಿಗಳಿಗೂ ಕಂಪ್ಯೂಟರ್ ಮಾರಿದ್ದ. ಮೂವರು ವಿತರಕರಿಂದ ಅಂದಾಜು ಮೊತ್ತದ ಕೊಟೇಶನ್‌ಗಳನ್ನೂ ಈತನೇ ಪಂಚಾಯ್ತಿಗಳಿಗೆ ನೀಡಿದ್ದ. ಈ ಕೊಟೇಶನ್‌ಗಳನ್ನು ಆತನೇ ಸೃಷ್ಟಿಸಿದ್ದ. ಆತ ನೀಡಿದ್ದ ದೂರವಾಣಿ ಸಂಖ್ಯೆಗಳೂ ಕೆಲಸ ಮಾಡುತ್ತಿರಲಿಲ್ಲ. ಕೊಟೇಶನ್‌ನಲ್ಲಿ ಇದ್ದ ವಿಳಾಸದಲ್ಲಿ ಅಂಥದ್ದೊಂದು ಸಂಸ್ಥೆಯೇ ಇರಲಿಲ್ಲ.

ಈ ಸುದ್ದಿ ಪತ್ರಿಕೆಗಳಲ್ಲಿ ಬಯಲಾದಾಗ ಹಾಸನ ಜಿಲ್ಲಾ ಪಂಚಾಯತ್ ಎಚ್ಚೆತ್ತುಕೊಂಡು ಸುಮಾರು 27 ಪಂಚಾಯ್ತಿಗಳ  ಕಂಪ್ಯೂಟರ್ ಖರೀದಿ ಅವ್ಯವಹಾರ ಪತ್ತೆ ಮಾಡಿ ಅಲ್ಲಿನ ಕಾರ್ಯದರ್ಶಿಗಳಿಂದ ದಂಡ ವಸೂಲು ಮಾಡಿತು.

ಈ ಎಲ್ಲಾ ವಿವರಗಳನ್ನು ತಿಳಿಯುವುದಕ್ಕೆ ನಾನು ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿದೆ. ಹಾಗೆಂದು ಮಾಹಿತಗಳೇನೂ ಸುಲಭದಲ್ಲಿ ಸಿಗಲಿಲ್ಲ. ನೂರೆಂಟು ಸಬೂಬುಗಳಿಗೆ ಪ್ರತ್ಯುತ್ತರ ಬರೆದು ಇವನ್ನು ಸಂಗ್ರಹಿಸಬೇಕಾಯಿತು. ಎಲ್ಲಾ ದಾಖಲೆಗಳನ್ನು ಒಟ್ಟುಗೂಡಿಸಿ ಮೇಲಧಿಕಾರಿಗಳಿಗೆ ದೂರು ನೀಡಿದ್ದಷ್ಟೇ ಬಂತು. ಅವರಿಂದ ಪ್ರತಿಕ್ರಿಯೆ ಬಾರದೇ ಇದ್ದಾಗ ಲೋಕಾಯುಕ್ತ ಸಂತೋಷ್ ಹೆಗ್ಡೆಯವರನ್ನು ಭೇಟಿ ಮಾಡಿ ಹಗರಣದ ಸಕಲ ಮಾಹಿತಿಗಳನ್ನೂ ನೀಡಿದೆವು.

ಲೋಕಾಯುಕ್ತರು ಬೆಂಗಳೂರಿನಿಂದಲೇ ಇಬ್ಬರು ಹಿರಿಯ ಅಧಿಕಾರಿಗಳನ್ನು ತನಿಖೆಗೆ ಕಳಿಸಿದರು.  ಗ್ರಾಮ ಪಂಚಾಯ್ತಿಯಿಂದ ಜಿಲ್ಲಾ ಪಂಚಾಯ್ತಿಯ ತನಕ ಒಂದೇ ಪಕ್ಷ ಅಧಿಕಾರದ ಸೂತ್ರ ಹಿಡಿದಿದ್ದ ಕಾರಣ ಈ ಹಗರಣದ ತನಿಖೆಯನ್ನು ಜಿಲ್ಲಾ ಪಂಚಾಯ್ತಿ ತಿಪ್ಪೆ ಸಾರಿಸಿ ಮುಗಿಸಿತು.

ಲೋಕಾಯುಕ್ತ ನಡೆಸಿದ ತನಿಖೆಯಲ್ಲಿ ನಮ್ಮ ದೂರುಗಳು ನಿಜವೆಂದು ತಿಳಿದುಬಂದಿತ್ತು. ಆದರೂ ಇಂದಿನ ತನಕವೂ ಏನೂ ಆಗಲಿಲ್ಲ. ಆದರೆ ಈ ಪ್ರಕ್ರಿಯೆ ರಾಜಕೀಯವಾಗಿ ಪರಿಣಾಮ ಬೀರಿತು. ಅಧಿಕಾರ ಸೂತ್ರ ಹಿಡಿದಿದ್ದ ಪಕ್ಷದವರು ಮುಂದಿನ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಸರ್ಕಾರ ಗ್ರಾಮ ಪಂಚಾಯ್ತಿಗಳಲ್ಲಿ ಪಕ್ಷಾಧಾರಿತ ಚುನಾವಣೆ ಇಲ್ಲ ಎಂದು ಎಷ್ಟೇ ಹೇಳಿದರೂ ಕೊನೆಗೂ ಅಲ್ಲಿಯೂ ರಾಜಕೀಯ ಪಕ್ಷಗಳು ಪರೋಕ್ಷವಾಗಿ ಇದ್ದೇ ಇರುತ್ತವೆ.

ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಹೆಗ್ಗಡದೇವನ ಕೋಟೆಯ ಗಿರಿಜನ ಹಾಡಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ಅಲ್ಲಿನ ಪಂಚಾಯ್ತಿ ದಾಖಲೆಗಳ ಖೊಟ್ಟಿತನ ಕಾಣಲು ಸಾಧ್ಯವಾಯಿತು. ಇದನ್ನು ಆಧಾರವಾಗಿಟ್ಟುಕೊಂಡು ಒಂದು ಆನ್‌ಲೈನ್ ದೂರು ಸಲ್ಲಿಸಿದೆ.  ಕನಿಷ್ಠ ಆರು ಪಂಚಾಯ್ತಿಗಳ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಅಕ್ರಮ ಎಸೆಗಿದ್ದು ಕಂಡುಬಂದಿತ್ತು. 

ಹಾಗೆಯೇ ಬೀದರ್‌ನಲ್ಲಿ  ನಾನೇ ಖುದ್ದು ನೋಡಿದ ಪ್ರಕರಣದಲ್ಲಿ ಈ ಅಕ್ರಮ ಯಾವ ಮಟ್ಟಕ್ಕೆ ಇತ್ತೆಂದರೆ ಸ್ಥಳೀಯ ಹೋರಾಟಗಾರರು ಪೋಲೀಸರಿಗೆ ದೂರು ನೀಡಿದ್ದರ ಹಿಂದೆಯೇ ಪಂಚಾಯ್ತಿಯ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ ಮತ್ತು ಕಿರಿಯ ಇಂಜಿನಿಯರ್ ಬಂಧನಕ್ಕೊಳಗಾದರು. ಇವರ ಮೇಲಿದ್ದ ಆರೋಪಗಳು ಎಷ್ಟು ಗಂಭೀರವಾಗಿದ್ದವೆಂದರೆ ಯಾರಿಗೂ ಮೂರು ತಿಂಗಳು ಜಾಮೀನು ಸಿಗದೇ ಜೈಲಲ್ಲಿದ್ದರು.  ಇಷ್ಟಾದ ಮೇಲೆ ಏನಾಯಿತು ಎಂದು ಕೇಳಿದರೆ ಅದಕ್ಕೆ ಮತ್ತೆ ಹಳೆಯ ಉತ್ತರವನ್ನೇ ಕೊಡಬೇಕಾಗುತ್ತದೆ–ಏನೂ ಆಗಲಿಲ್ಲ.

ಕಳೆದ ವರ್ಷ ಕೇಂದ್ರ ಸರ್ಕಾರ ನಡೆಸಿದ ತನಿಖೆಯಂತೆ ಸುಮಾರು ೬೦೦ ಕೋಟಿ ರೂ.ಗಳ ಅಕ್ರಮ ಪಂಚಾಯ್ತಿಗಳಲ್ಲಿ ನಡೆದಿತ್ತು. ಆದರೆ ಈ ತನಕವೂ ಯಾರ ವಿರುದ್ಧವೂ ಕ್ರಮ ಕೈಗೊಂಡ ದಾಖಲೆಗಳಿಲ್ಲ. ಚಿತ್ರದುರ್ಗದಲ್ಲಿ ಫ್ಲೋರೈಡ್ ರಹಿತ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮಂಜೂರಾದ ಅನುದಾನವನ್ನು ಕುರುಹೇ ಇಲ್ಲದಂತೆ ನುಂಗಿ ನೊಣೆದ ಸಂಗತಿಯನ್ನು ಎಚ್.ಕೆ. ಪಾಟೀಲರೇ ಪ್ರಸ್ತಾಪಿಸಿದ್ದರು. ಈಗ ಅವರೇ ಪಂಚಾಯತ್ ರಾಜ್ ಸಚಿವರಾಗಿದ್ದಾರೆ. ಆದರೆ ಈ ಕುರಿತ ತನಿಖೆ ಯಾವ ಸ್ಥಿತಿಯಲ್ಲಿದೆ ಎಂಬುದು ತಿಳಿಯುತ್ತಿಲ್ಲ. ಇತ್ತೀಚೆಗಷ್ಟೇ ೨೫೦೦೦ ಮಾನವ ದಿನಗಳಿಗಿಂತ ಜಾಸ್ತಿ ಕೆಲಸ ತೋರಿಸಿದ ಪಂಚಾಯತ್‌ಗಳ ವಿರುದ್ಧ ತನಿಖೆ ನಡೆಸುವ ಘೋಷಣೆ ಸರ್ಕಾರ ಮಾಡಿದೆ.

ಈ ತನಕ ನಡೆದ ತನಿಖೆಗಳ ಸ್ಥಿತಿಯನ್ನು ಕಂಡವರು ಇದರ ಭವಿಷ್ಯ ನುಡಿಯುವುದು ಸುಲಭ.
ಇಲ್ಲಿಯ ತನಕ ಪಂಚಾಯ್ತಿಗಳಿಗೆ ದೊರೆಯುತ್ತಿದ್ದ ಅನುದಾನದ ಸ್ವರೂಪಕ್ಕೊಂದು ಬಿಗಿ ಇತ್ತು. ಅನುದಾನವನ್ನು ನಿರ್ದಿಷ್ಟ ಉದ್ದೇಶಗಳಿಗಾಗಿಯೇ ಖರ್ಚು ಮಾಡಬೇಕೆಂಬ ನಿಯಮವಿತ್ತು. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಂದ ಮೇಲೆ ಪಂಚಾಯ್ತಿಗಳು ಅದನ್ನು ಅನಿರ್ಬಂಧಿತವಾಗಿ ಬಳಸಲು ಆರಂಭಿಸಿದವು. ಬಡವರು ಬೇಸಿಗೆಯಲ್ಲಿ ಹಸಿವಿನಿಂದ ಇರಬಾರದು, ಕೆಲಸ ಹುಡುಕಿಕೊಂಡು ಊರು ತೊರೆಯಬಾರದು ಎಂಬ ಉದಾತ್ತ ಧ್ಯೇಯದೊಂದಿಗೆ ಊರು ಕಟ್ಟುವ ಉದ್ದೇಶ ಹೊಂದಿದ್ದ ಈ ಯೋಜನೆಯ ಬಗ್ಗೆ ಹಿಂದಿನ ಸರ್ಕಾರ ಕಿಂಚಿತ್ತೂ ನಿಗಾ ವಹಿಸಲಿಲ್ಲ.

ವಿರೋಧ ಪಕ್ಷದಲ್ಲಿದ್ದ ಈಗಿನ ಆಡಳಿತಾರೂಢರೂ ಆಗ ತೆಪ್ಪಗಿದ್ದರು. ಅದೂ ೨೦೦೯ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗಲಂತೂ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಣದ ದುರ್ಬಳಕೆ ಬಹಳ ವ್ಯಾಪಕವಾಯಿತು. ಮುಳುಗಿದ್ದ ಊರುಗಳಲ್ಲಿ ಕಾಮಗಾರಿಗಳು ನಡೆದಿದ್ದವೆಂಬ ದಾಖಲೆಗಳನ್ನು ಸೃಷ್ಟಿಸಿ ಸಿಕ್ಕಿಬಿದ್ದ ಉದಾಹರಣೆಗಳೂ ಇವೆ.

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕಾಂಗ್ರೆಸ್ ಸರ್ಕಾರದ ಕೂಸೇ ಆಗಿರುವುದರಿಂದ ಹೊಸ ಸರ್ಕಾರವಾದರೂ ಸ್ಥಿತಿಯನ್ನು ಬದಲಾಯಿಸಬಹುದೆಂಬ ನಿರೀಕ್ಷೆಯಿದ್ದವರಿಗೂ ನಿರಾಶೆಯಾಗುತ್ತಿದೆ.

ಅಧಿಕಾರಿ–ಚುನಾಯಿತ ಪ್ರತಿನಿಧಿಗಳ ಜಂಟಿ ಭ್ರಷ್ಟಾಚಾರದ ಪರಿ ಹೇಗಿದೆಯೆಂದರೆ, ಉದ್ಯೊಗದ ಬೇಡಿಕೆಯೇ ಇಲ್ಲದ ಜಿಲ್ಲೆಗಳಲ್ಲೂ ಇದರ ಹೆಸರಿನಲ್ಲಿ ದುಡ್ಡೆತ್ತುವುದನ್ನು ಸರ್ಕಾರ ಅಧಿಕೃತಗೊಳಿಸಿದೆ. ಪಂಚಾಯ್ತಿಗಳು ತಮ್ಮ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಳಸಿಕೊಳ್ಳುವ ಒಂದೇ ಕಾರಣಕ್ಕೆ ರಾಜ್ಯ ಸರ್ಕಾರ ಜಾಣಗುರುಡು ನಟಿಸುತ್ತಿದೆ. ಉದ್ಯೋಗ ಖಾತರಿಯಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಆದ್ಯತೆಯನ್ನು ತಿರುಚಿ ಎಷ್ಟೋ ಕಾಲವಾಯ್ತು.

ಈ ಯೋಜನೆಯಲ್ಲಿ ರಸ್ತೆಗಳು, ಕಟ್ಟಡಗಳಿಗಿರುವುದು ಕೊನೆಯ ಆದ್ಯತೆ. ಆದರೆ ಬಹುತೇಕ ಕಾಮಗಾರಿಗಳು ಇದೇ ಬಾಬಿನಲ್ಲಿ ಆಗಿವೆ. ರೈತರು ತಮ್ಮ ಜಮೀನು ಸರಿಪಡಿಸುವ ಅವಕಾಶವಿದ್ದರೂ  ರಾಜ್ಯದಲ್ಲಿ ಈ ಅವಕಾಶ ಪಡೆದ ರೈತರ ಸಂಖ್ಯೆ ಐದಂಕಿ ಮೀರುವುದಿಲ್ಲ.

ರಾಮನಗರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಈ ಯೋಜನೆಯಲ್ಲಿ ಖರ್ಚು ಮಾಡಲಾಗಿದೆ. ಆದರೆ, ಜಮೀನು ಸರಿಪಡಿಸುವ ಕೆಲಸಕ್ಕೆ ಅನುದಾನ ಪಡೆದ ರೈತರ ಸಂಖ್ಯೆ ರಾಮನಗರದಲ್ಲಿ ಇನ್ನೂರು, ಚಿತ್ರದುರ್ಗದಲ್ಲಿ ಮುನ್ನೂರು ಅಷ್ಟೇ.( ಇದು ೨೦೧೦–-೧೧ನೇ ಸಾಲಿನಲ್ಲಿ)
ಅಂಕಿ ಅಂಶಗಳನ್ನು ಸುರಳೀತಗೊಳಿಸುವುದಕ್ಕಾಗಿ  ಎಮ್.ಐ.ಎಸ್ ಎಂಬ ಗಣಕೀಕೃತ ವಿವರಗಳ ಬಗ್ಗೆ ತಲೆ ಕೆಡಿಸಿಕೊಂಡಷ್ಟು  ಅನುಷ್ಠಾನದ ಲೋಪಗಳನ್ನು ಸರಿಪಡಿಸುವ ಆಡಳಿತಾತ್ಮಕ ಇಚ್ಛಾಶಕ್ತಿಯನ್ನು ಸರ್ಕಾರ ತೋರಿಸಲಿಲ್ಲ. 

ಈ ಇಚ್ಛಾಶಕ್ತಿ ತೋರದಿದ್ದರೆ  ಸ್ಥಳೀಯವಾಗಿ ಗ್ರಾಮಸ್ಥರಿಗೆ ತಿಳಿದಿರುವ ಅಕ್ರಮಗಳಿಗೆ ಶಿಕ್ಷೆಯೇ ಆಗುವುದಿಲ್ಲ. ಏನೂ ಆಗುವುದಿಲ್ಲ ಎಂಬ ಹತಾಶೆ ಸೃಷ್ಟಿಯಾದರೆ, ಎಲ್ಲರೂ ಸಿನಿಕರಾಗುತ್ತಾರೆ. ಈ ಸಿನಿಕತನ ಪ್ರಜಾಸತ್ತೆಯನ್ನೇ ದುರ್ಬಲಗೊಳಿಸುತ್ತದೆ. ಎಂಥಾ ಅದ್ಭುತ ತಾಂತ್ರಿಕತೆ ಇದ್ದರೇನು, ಅದು ಪತ್ತೆ ಮಾಡುವ ರೋಗಕ್ಕೆ ಔಷದಿ ನೀಡುವ ಶಕ್ತಿ ಸರ್ಕಾರಕ್ಕೆ ಇಲ್ಲದಿದ್ದರೆ ?

ಪಂಚಾಯತ್ ರಾಜ್ ಇಲಾಖೆ  ತನಗೆ ದೊರಕಿರುವ ಕೇಂದ್ರ ಸರ್ಕಾರದ ಪ್ರಶಸ್ತಿಗಳನ್ನು  ಪ್ರದರ್ಶಿಸಿ ಕೊಡುವ ಜಾಹೀರಾತುಗಳನ್ನು ನೋಡಿ ಹಳ್ಳಿಯ ಮಂದಿ ಮುಸಿಮುಸಿ ನಗುವುದನ್ನು ಮಂತ್ರಿಗಳೂ, ಅಧಿಕಾರಿಗಳೂ ಕಂಡಿಲ್ಲ ಅನ್ನಿಸುತ್ತೆ.  ದರ್ಪಣ ಮೋಹಿ ಮನೋಭಾವ ಸ್ಥಾಯೀ ಆದರೆ, ಲೋಕ ಗಮನಿಸುವ ಸತ್ಯ ಕಾಣಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT