ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ರಂ ಕಾಂತಿಕೆರೆ/ ಪ್ರಜಾವಾಣಿ ವಾರ್ತೆ

Last Updated 7 ಜನವರಿ 2013, 6:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಸ ವಿಲೇವಾರಿಗೆ ಸಂಬಂಧಪಟ್ಟು `ಗುತ್ತಿಗೆ ತಲೆನೋವು' ಅನುಭವಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಹೊಸ ಪ್ರಯೋಗಗಳತ್ತ ದೃಷ್ಟಿ ಹಾಕಿದ್ದು ಇದರ ಮೊದಲ ಹೆಜ್ಜೆಯಾಗಿ ನಗರದ 40ನೇ ವಾರ್ಡಿನಲ್ಲಿ `ವೇಲೂರು ಮಾದರಿ' ಕಸ ವಿಲೇವಾರಿ ಪದ್ಧತಿ ಜಾರಿಗೆ ತರಲು ಚಿಂತನೆ ನಡೆದಿದೆ.

ತಮಿಳುನಾಡಿನ ವೇಲೂರಿನಲ್ಲಿ ನೂರು ಶೇಕಡಾ ಯಶಸ್ಸು ಕಂಡ ನಂತರ ಗುಜರಾತ್‌ನ ಸೂರತ್ ಮತ್ತಿತರ ಕಡೆಗಳಿಗೆ ಬಾಹುಗಳನ್ನು ಚಾಚಿರುವ ಶ್ರೀನಿವಾಸನ್ ಅವರ ವೇಲೂರು ಮಾದರಿಯು ಕಸದ ರಾಶಿ ಬೆಳೆದಿರುವ ಬೆಂಗಳೂರಿನ ಎರಡು ಕಡೆಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಮೈಸೂರು ನಗರದಲ್ಲೂ ಈ ಮಾದರಿ ಜಾರಿಗೆ ಸಂಬಂಧಿಸಿ ಪ್ರಾಥಮಿಕ ಹಂತದ ಕಾರ್ಯಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೂ ಶ್ರೀನಿವಾಸನ್ ಅವರನ್ನು ಕರೆಸುವ ಸಾಧ್ಯತೆಗಳಿದ್ದು 40ನೇ ವಾರ್ಡಿನಲ್ಲಿ ಅವರ ಮೊದಲ ಪ್ರಯೋಗ ನಡೆಯಲಿದೆ. ಇದು ಯಶಸ್ಸು ಕಂಡರೆ ಇ-ಟೆಂಡರ್‌ನಿಂದ ಹೊರತಾಗಿರುವ 18 ವಾರ್ಡ್‌ಗಳಲ್ಲಿ ಜಾರಿಗೆ ಬರಲಿದೆ.

ಒಂದೊಂದು ಪ್ರದೇಶವನ್ನು ವಿಂಗಡಿಸಿ ಕಸವನ್ನು ಅಲ್ಲೇ ವಿಲೇವಾರಿ ಮಾಡುವುದೇ ವೇಲೂರು ಮಾದರಿ. ಸೀಮಿತ ಪ್ರದೇಶದಲ್ಲಿ ಎರಡರಿಂದ ಮೂರು ಶೆಡ್‌ಗಳನ್ನು ನಿರ್ಮಿಸಿ ಅಲ್ಲಿ ಕಸ ವಿಲೇವಾರಿ ಮಾಡುವ ಸ್ವಸಹಾಯ ಸಂಘವನ್ನು ಸ್ಥಾಪಿಸಿ ಕೆಲಸ ಮಾಡುವುದು ಈ ಮಾದರಿಯ ವಿಧಾನ. ಕಸ ವಿಂಗಡಣೆ ಮಾಡಿ ಸಂಬಂಧಪಟ್ಟ ಕೈಗಾರಿಕೆಗಳಿಗೆ ರವಾನಿಸಿ ಅದರಿಂದ ಆದಾಯ ಗಳಿಸುವುದಕ್ಕೂ ಇದರಲ್ಲಿ ಅವಕಾಶವಿದೆ. ಕಸದಿಂದ ಕಾಸು ಗಳಿಸಲು ಸಾಧ್ಯವಾಗುವುದರೊಂದಿಗೆ ಸಾಗಾಟ ವೆಚ್ಚ ಹಾಗೂ ಅದರಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಇದರಿಂದ ಸಾಧ್ಯ ಎಂಬುದು ಪಾಲಿಕೆಯ ಲೆಕ್ಕಾಚಾರ.

`ಕಸ ವಿಲೇವಾರಿಗಾಗಿ ವೇಲೂರು ಮಾದರಿ ಜಾರಿಗೆ ಪಾಲಿಕೆ ಮನಸ್ಸು ಮಾಡಿದೆ. ಈ ಕುರಿತು ಶ್ರೀನಿವಾಸನ್ ಅವರ ಜೊತೆ ಮಾತುಕತೆ ನಡೆದಿದೆ. ಅವರು ಶೀಘ್ರದಲ್ಲೇ ಇಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ' ಎಂದು ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ತಿಳಿಸಿದರು.

ವೇಲೂರು ಮಾದರಿಯಲ್ಲಿ ಸ್ವಸಹಾಯ ಸಂಘಗಳಲ್ಲಿ ಪೌರಕಾರ್ಮಿಕರೇ ಇರುತ್ತಾರೆ. ಅಗತ್ಯವಿದ್ದರೆ ಹೊರಗಿನವರನ್ನು ಕೂಡ ಸೇರಿಸಿಕೊಳ್ಳಬಹುದು. ಅವರೆಲ್ಲರಿಗೂ ತರಬೇತಿ ನೀಡಿ ಪಕ್ವ ಮಾಡಿ ಶ್ರೀನಿವಾಸನ್ ವಾಪಸಾಗುತ್ತಾರೆ. ಹೀಗಾಗಿ ಖರ್ಚು-ವೆಚ್ಚದ ಹೊರೆ ಪಾಲಿಕೆಯ ಮೇಲೆ ಬೀಳುವುದಿಲ್ಲ. ಪ್ರತಿ ಮನೆಯಿಂದ ಸಂಗ್ರಹಿಸುವ ಕಸದಲ್ಲಿ ಪಾಲಿಕೆಗೆ ಕನಿಷ್ಟ ಮೂರು ರೂಪಾಯಿ ಆದಾಯ ಬರಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಸ ವಿಲೇವಾರಿಯ ಗುತ್ತಿಗೆ ಪಡೆದವರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದ ನಂತರ ಹೊರಗುತ್ತಿಗೆಯನ್ನು ನೀಡಲು ಪಾಲಿಕೆ ನಿರ್ಧರಿಸಿತ್ತು. ಒಟ್ಟು 67 ವಾರ್ಡ್‌ಗಳ ಪೈಕಿ 49 ವಾರ್ಡ್‌ಗಳ ಗುತ್ತಿಗೆಯನ್ನು ಪುಣೆಯ ಕಂಪೆನಿಯೊಂದಕ್ಕೆ ನೀಡಲಾಗಿದೆ. ಆದರೆ ಈ ಕಂಪೆನಿಯ ಕಾರ್ಯನಿರ್ವಹಣೆ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡದ ಕಾರಣ ಗೊಂದಲ ನಿರ್ಮಾಣವಾಗಿದೆ. ಉಳಿದ ವಾರ್ಡ್‌ಗಳಲ್ಲಾದರೂ ಸಮರ್ಪಕ ಕಸ ನಿರ್ವಹಣೆಯನ್ನು ಮಾಡುವ ಇರಾದೆ ಪಾಲಿಕೆಯದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT