ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ಷಿಪ್ತ ವ್ಯಾನ್ ಗೋ

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ಚಿತ್ರರೂಪಕ

ವಿನ್ಸೆಂಟ್ ವ್ಯಾನ್ ಗೋ (1853- 1890) ಹಾಲೆಂಡ್‌ನ ಕಲಾವಿದ. ಪುಸ್ತಕದಂಗಡಿಯಲ್ಲಿ ಗುಮಾಸ್ತನಾಗಿ, ಕಲಾಕೃತಿಗಳ ಮಾರಾಟಗಾರನಾಗಿ, ಧರ್ಮೋಪದೇಶಕನಾಗಿ ಬದುಕು ನಡೆಸಿದ ಆತ ಯಾವುದರಲ್ಲಿಯೂ ಸಾಫಲ್ಯ ಕಾಣಲಿಲ್ಲ.

ಅತಿ ಭಾವುಕತೆಯನ್ನು, ಆತ್ಮವಿಶ್ವಾಸದ ಕೊರತೆಯನ್ನು ಕಟ್ಟಿಕೊಂಡು ಬೆಳೆದವನು ವ್ಯಾನ್‌ಗೋ. ನಿರಾಶೆಯ ಹೊತ್ತಿನಲ್ಲಿ ಅವನ ಕೈ ಹಿಡಿದದ್ದು ಬಣ್ಣಗಳು. 1860ರಿಂದ 1880ರ ಈತ ಕಲಾವಿದನಾಗಿ ರೂಪುಗೊಂಡ ಅವಧಿ ಎಂದು ಗುರ್ತಿಸಲಾಗುತ್ತದೆ.

`ಪೊಟ್ಯಾಟೊ ಈಟರ್ಸ್‌~, `ಸ್ಟಾರಿ ನೈಟ್ಸ್~, `ಐರಿಸ್~, `ಪಪ್ಪೀಸ್~, `ಸನ್ ಫ್ಲವರ್ಸ್‌~ ಈತನ ಜಗದ್ವಿಖ್ಯಾತ ಕಲಾಕೃತಿಗಳು. 900ಕ್ಕೂ ಹೆಚ್ಚು ಕಲಾಕೃತಿಗಳು ಈತನ ಕುಂಚದಿಂದ ಅರಳಿವೆ.

ಕಲಾವಿದನಾಗಲೇ ಬೇಕು ಎಂಬ ತುಡಿತದೊಂದಿಗೆ ಬೆಲ್ಜಿಯಂನಲ್ಲಿ ಉಳಿದ ವ್ಯಾನ್ ಗೋ ತನ್ನ 28ನೇ ವಯಸ್ಸಿನಲ್ಲಿ ಮೊದಲ ಕಲಾಕೃತಿ ರಚಿಸಿದ. ಅಲ್ಲಿಂದ ಆತ ಪಯಣ ಬೆಳೆಸಿದ್ದು ಪ್ಯಾರಿಸ್‌ಗೆ. ಅಲ್ಲಿ ಪಿಸಾರೊ, ಮೊನೆಟ್, ಗಾಗ್ವಿನ್‌ನಂತಹ ಕಲಾವಿದರ ಸಹವಾಸ. ಆದರೆ ಆತನ ದುರ್ಬಲ ಮನಸ್ಥಿತಿ ಗೆಳೆತನಕ್ಕೆ ಎರವಾಯಿತು. ಕಡೆಗೆ ಕಲಾಶಾಲೆಯೊಂದನ್ನು ಸ್ಥಾಪಿಸುವ ಕನಸಿನೊಂದಿಗೆ ಫ್ರಾನ್ಸ್‌ನ ದಕ್ಷಿಣ ನಗರಿ ಅರ್ಲೆಸ್‌ಗೆ ನಡೆದ, ಪ್ಯಾರಿಸ್‌ನ ಗೆಳೆಯರೂ ಜತೆಗೆ ಸೇರಬಹುದು ಎಂಬ ಹಂಬಲದೊಂದಿಗೆ.

ಗಾಗ್ವಿನ್ ಆತನ ಜತೆಗೂಡಿದ. ಆದರೆ ಆ ಸ್ನೇಹ ಹೆಚ್ಚು ದಿನ ಬಾಳಲಿಲ್ಲ. ರೇಜರ್ ಹಿಡಿದು ಗಾಗ್ವಿನ್‌ನತ್ತ ನಡೆದ ವ್ಯಾನ್‌ಗೊ ಕಡೆಗೆ ತನ್ನ ಕಿವಿಯನ್ನೇ ಕತ್ತರಿಸಿಕೊಂಡ. ನಂತರ ಆತ ಮಾನಸಿಕ ಸ್ಥಿಮಿತ ಕಳೆದುಕೊಂಡ. ಚಿತ್ತ ಚಾಂಚಲ್ಯ ಬಲವಾಗತೊಡಗಿದಂತೆ ಶುಶ್ರೂಷಾಲಯಕ್ಕೆ ಸೇರಿಸಲಾಯಿತು. ಆಸ್ಪತ್ರೆಯಲ್ಲಿಯೇ ಆತ ಸುಮಾರು 130 ಕಲಾಕೃತಿಗಳನ್ನು ರಚಿಸಿದ.

ಕೊಂಚ ಚೇತರಿಸಿಕೊಂಡ ವ್ಯಾನ್‌ಗೊನನ್ನು ವೈದ್ಯ ಡಾ. ಗಚೆಟ್ ಅವರ ಕಣ್ಗಾವಲಲ್ಲಿ ಔವರ್ಸ್‌- ಸುರ್- ಒಯ್ಸೆ ಎಂಬಲ್ಲಿಗೆ ಕರೆದೊಯ್ಯಲಾಯಿತು. ಅದಾದ ಎರಡೇ ತಿಂಗಳಿಗೆ ವ್ಯಾನ್‌ಗೊ ಗುಂಡಿಕ್ಕಿಕೊಂಡು ಸತ್ತ. 37 ವರ್ಷವಷ್ಟೇ ಬದುಕಿದ್ದ ಆತ ತನ್ನ ಜೀವಿತ ಅವಧಿಯಲ್ಲಿ ಮಾರಾಟ ಮಾಡಿದ ಕೃತಿ ಒಂದೇ ಒಂದು. ಮನುಷ್ಯ ಮತ್ತು ಪ್ರಕೃತಿಯ ಸಂಬಂಧವನ್ನು ದಟ್ಟ ವರ್ಣಗಳ ಮೂಲಕ ಕಟ್ಟಿಕೊಟ್ಟ ವ್ಯಾನ್‌ಗೋನ ಬದುಕು ಒಂದರ್ಥದಲ್ಲಿ ನೋವು ನಿರಾಶೆಯಲ್ಲಿ ಅದ್ದಿ ತೆಗೆದ ಚಿತ್ರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT