ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಖ್ಯಾತ ಕಲಾವಿದೆ ಗೋಹರ್‌ಜಾನ್‌ ರಾಜ್ಯ ಅತಿಥಿ

ಯದುವಂಶ ಸಾಲುದೀಪ
Last Updated 20 ಡಿಸೆಂಬರ್ 2013, 5:47 IST
ಅಕ್ಷರ ಗಾತ್ರ

ಚಾಮರಾಜೇಂದ್ರ ಒಡೆಯರ್‌ ಅವರು ಮೈಸೂರಿಗೆ ಕುಡಿಯುವ ನೀರು ಒದಗಿಸಬೇಕೆಂದು ಕುಕ್ಕರಹಳ್ಳಿ ಕೆರೆ ನಿರ್ಮಿಸಿದರು. ಇವತ್ತಿನ ಅಗ್ನಿಶಾಮಕ ಕಚೇರಿ ಬಳಿ ಇದ್ದ ತೆರೆದ ಕಾರಾಗೃಹದಲ್ಲಿನ ನೂರಾರು ಕೈದಿಗಳು ತಂತಮ್ಮ ದಿನಗೂಲಿ ತ್ಯಾಗ ಮಾಡಿ ಈ ಕೆರೆಯನ್ನು ಇತರ ಕಾರ್ಮಿಕರೊಂದಿಗೆ ಕೈಜೋಡಿಸಿ ಅತಿ ಶೀಘ್ರದಲ್ಲಿ ಕಟ್ಟಿದರು. ಮೈಸೂರು ಕುಕ್ಕರಹಳ್ಳಿ ಕೆರೆ ನೀರನ್ನು ಕುಡಿಯಲು ಮತ್ತು ವಿವಿಧ ಕಾರ್ಯಗಳಿಗೆ ಬಳಸಲಾಯಿತು. ಕೈದಿಗಳು ಮಹಾರಾಜರಿಗೆ ಭಕ್ತಿಪೂರ್ವಕ ನಮ್ಮ ಅಳಿಲು ಸೇವೆ ಎಂದೇ ಗೆಜೆಟ್‌ನಲ್ಲಿ ದಾಖಲಿಸಿದರು.

ಸ್ಯಾನಿಟರಿ ಎಂಜಿನಿಯರ್ ಸ್ವಾಂಡಿಶ್‌ ಲೀ ಬಂದು ಕೆರೆಯ ನೀರನ್ನು ಅಳೆದರು. ಪ್ರತಿದಿನ ನೀರಿನ ಮಟ್ಟ ಗುರುತಿಸುವ ಯಂತ್ರ ಸ್ಥಾಪಿಸಿದರು. ಪ್ರತಿದಿನವೂ ಅಳತೆ ನೋಡಿಕೊಂಡು ನೀರನ್ನು ಬಿಡುತ್ತಿದ್ದರು. ನಂತರ ಬಂದ ನಾಲ್ಕನೇ (ನಾಲ್ವಡಿ) ಕೃಷ್ಣರಾಜ ಒಡೆಯರ್ ಅವರಂತೂ ರಾಜ್ಯ ಸುಧಾರಣೆಯ, ರಾಜ್ಯ ಅಭಿವೃದ್ಧಿಯ ಮಹಾಫಲವನ್ನೇ ನೀಡಿದರು. ಕೃಷ್ಣರಾಜ ಸಾಗರಕ್ಕೆ ವಾಣಿವಿಲಾಸ ಸನ್ನಿಧಾನ ಎಂದು ಹೆಸರಿಡಲು ಮುಂದಾದರು. ಆದರೆ, ಮಹಾಜನತೆಯ ಒತ್ತಾಯದ ಮಹಾಪೂರದಂತೆ ಕನ್ನಂಬಾಡಿ ಕಟ್ಟೆಗೆ ‘ಕೃಷ್ಣರಾಜ ಸಾಗರ’ ಎಂದೇ ಹೆಸರಿಟ್ಟು ಗೌರವ ಸಲ್ಲಿಸಿದರು.

ನಾಲ್ವಡಿಯವರು ಕಾಳಮ್ಮನ ಗುಡಿ ಬೀದಿಯಲ್ಲಿ ಆಟವಾಡುತ್ತಿದ್ದ ಹುಡುಗನನ್ನು ಅರಮನೆಗೆ ಕರೆಸಿಕೊಂಡು ಸಾಕಿ ಸಲುಹಿ ದೇಶದ ಮಾನ್ಯ ಚಿತ್ರ ಕಲಾವಿದನನ್ನಾಗಿ ಎಸ್‌.ಎನ್. ಸ್ವಾಮಿ ಅವರನ್ನು ರೂಪಿಸಿದರು. ದೂರದಿಂದ ಬಂದಿದ್ದ ಅಂಧ (ವಿಶೇಷ ಚೇತನ) ಶಿವರುದ್ರಸ್ವಾಮಿ ಅವರನ್ನು ಪಿಟೀಲು ಕಲಾವಿದ, ವಿದ್ವಾನರನ್ನಾಗಿ ಮಾಡಿಕೊಂಡು ಸೀತಾವಿಲಾಸ ಛತ್ರದಲ್ಲಿ ಆಶ್ರಯ ನೀಡಿದರು. ಆಸ್ಥಾನ ಪಿಟೀಲು ವಿದ್ವಾಂಸರಾದ ಇವರ ಪಿಟೀಲು ವಾದನವಿಲ್ಲದೆ ಮೈಸೂರಿನಲ್ಲಿದ್ದಾಗ ಎಂದೂ ನಿದ್ದೆ ಮಾಡುತ್ತಿರಲಿಲ್ಲ.

ದೂರದ ಕೊಲ್ಕತ್ತದ ಸಂಗೀತ ವಿದ್ವಾಂಸರಾದ ಗೋಹರ್‌ಜಾನ್ ಅವರನ್ನು ರಾಜ್ಯದ ಅತಿಥಿಯೆಂದು ಆಹ್ವಾನಿಸಿದರು. ಲಲಿತ್‌ಮಹಲ್ ರಸ್ತೆಯಲ್ಲಿ ‘ದಿಲ್‌ಕುಶ್‌ ಮಂಜಿಲ್’ (ಕಾಟೇಜ್‌) ಅನ್ನು ಉಚಿತವಾಗಿ ಕೊಟ್ಟು ಗೌರವಿಸಿದರು. ಆ ಮನೆಗೆ ಅರಮನೆಯ ಪರಿಚಾರಕರನ್ನು ನೇಮಿಸಿದರು. ಗೋಹರ್‌ಜಾನ್ ಕೆಆರ್ ಆಸ್ಪತ್ರೆಯಲ್ಲಿ ನಿಧನರಾದಾಗ ಮಮ್ಮಲ ಮರುಗಿದರು. ಆಸ್ಥಾನ ಕಲಾವಿದೆಯನ್ನಾಗಿ  ಜೀವನಪೂರ್ತಿ ಮಾನ–ಸಮ್ಮಾನಗಳಿಂದ ನೋಡಿಕೊಂಡುದು ಅವರ ರಾಜರ್ಷಿ ತನವನ್ನು ಪ್ರಕಟಪಡಿಸಲಾಯಿತು ಎನ್ನಬಹುದು. ಇಡೀ ದೇಶದಲ್ಲಿ ರಾಜ್ಯದ ಅತಿಥಿ, ಒಬ್ಬ ಕಲಾವಿದರನ್ನು ಆಜೀವ ಪರ್ಯಂತ ಪ್ರತಿಭಾ ಪ್ರಕಾಶನಗೊಳಿಸಿದುದು ಇದೇ ಮೊದಲು.

ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ, ತಮ್ಮ ಆಪ್ತವಲಯದ ಮಹನೀಯರು ರಾಜರಿಗೆ ಗೊತ್ತಿಲ್ಲದಂತೆ ಸಿಗರೇಟ್‌ ಸೇದುವ ಅಭ್ಯಾಸ ಇಟ್ಟುಕೊಂಡಿದ್ದರು. ಎಂದೋ ಯಾವುದೋ ಕ್ಷಣದಲ್ಲಿ ಈ ಚಟ ನೋಡಿದ ರಾಜರು ಅವರಿಗಾಗಿಯೇ ಬೆಳ್ಳಿಯಲ್ಲಿ ಸಿಗರೇಟ್ ಪೆಟ್ಟಿಗೆ ಮಾಡಿಸಿ ಇದನ್ನು ಇಟ್ಟುಕೊಂಡಿರಿ. ನಿಮ್ಮ ಉಪಯೋಗಕ್ಕೆ ಬರಬಹುದೆಂದು ಮಾಮೂಲಿಯಾಗಿಯೇ ಅವರಿಗೆ ಕೊಟ್ಟಿದ್ದರು.

ದಿ  ಡೈಲಿ ನ್ಯೂಸ್‌ ಪತ್ರಿಕೆ 14ನೇ  ಮೇ 1941ರಲ್ಲಿ ಪ್ರಕಟಿಸಿದುದು  ಈ ರೀತಿ ಇದೆ–  ‘ ಹೊಸ ಮೈಸೂರು ನಿರ್ಮಾಣಕ್ಕೆ  ಕೆ. ಶೇಷಾದ್ರಿ ಅಯ್ಯರ್‌ ಅಸ್ತಿಭಾರಕ್ಕೆ  ಗುಂಡಿ ತೋಡಿದ್ದಾರೆ, ವಿಶ್ವೇಶ್ವರಯ್ಯ ತಳಹದಿ ನಿರ್ಮಿಸಿದರು. ನಂತರ ಕಟ್ಟಡ ನಿರ್ಮಾಣ ಮಾಡಿದವರು ಮಿರ್ಜಾ ಇಸ್ಮಾಯಿಲ್‌ ಎಂದಿದೆ. ಈ ಸರ್‌ ಮಿರ್ಜಾ ಇಸ್ಮಾಯಿಲ್‌ ಬೆಂಗಳೂರಿನಲ್ಲಿ ವಾಸವಾಗಿದ್ದರು. ಬೆಳ್ಳಿ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಆಗರ್ಭ ಶ್ರೀಮಂತ ಮನೆತನದವರು. ಮೂಲತಃ ಪರ್ಶಿಯಾದಿಂದ ಬೆಂಗಳೂರಿಗೆ ವಲಸೆ ಬಂದವರು. ಕುದುರೆ ವ್ಯಾಪಾರಿಗಳು.  ಇವರ ತಾತ, ಅಂತೆಯೇ ಭಾರಿ ಲೇವಾದೇವಿದಾರರು.

1824ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು ಇವರು. ಮಹಾರಾಜರಿಗೆ ಸ್ನೇಹಿತರು ಆದರು. ಅರಮನೆಗೆ ನಿಕಟವರ್ತಿಗಳೂ, ಮಹಾರಾಜರಿಗೆ ಕುದುರೆಗಳನ್ನೂ ಸರಬರಾಜು ಮಾಡುತ್ತಿದ್ದರು. ಕುದುರೆಗಳ ಬಗ್ಗೆ ಆಸಕ್ತಿ ವಹಿಸುತ್ತಿದ್ದ ಯುರೋಪಿಯನ್‌ ಅಧಿಕಾರಿಗಳ ಮಿತ್ರತ್ವ ಬೆಳೆಸಿಕೊಂಡಿದ್ದರು. ಎಷ್ಟೋ ಮಂದಿ ಇವರ ಗ್ರಾಹಕರೂ ಆಗಿದ್ದರು.

ಹೈಗ್ರೌಂಡ್ಸ್‌ ಜಾಗೀರ್‌ದಾರ್‌ ಎಂದೇ ಜನರು ಕರೆಯುತ್ತಿದ್ದರು. ಆ ವ್ಯಕ್ತಿ  ಅಲಿ ಆಸ್ಕರ್‌ ಅವರು ಮಿರ್ಜಾ ಇಸ್ಮಾಯಿಲ್‌ ತಾತ. ಬೆಂಗಳೂರಿನ ರಸ್ತೆಯೊಂದಕ್ಕೆ ಅಲಿ ಆಸ್ಕರ್‌  ಎಂದು ಹೆಸರಿಡಲಾಗಿದೆ. ಮುಮ್ಮಡಿಯ ಅವರು ಬ್ರಿಟಿಷ್‌ ಅವರಿಂದ ಸಿಂಹಾಸನವನ್ನು ಮರಳಿ ಪಡೆಯುವ ಹೋರಾಟದಲ್ಲಿ ಅಲಿ ಆಸ್ಕರ್‌ ಅವರ ಸಹಾಯವನ್ನು ಪಡೆದಿದ್ದರು. ಇವರು ಬ್ರಿಟಿಷರಿಗೆ ರಾಜರ ಪರವಾಗಿ ಅನೇಕ ರಹಸ್ಯಪತ್ರಗಳನ್ನು ಇಂಗ್ಲೆಂಡಿಗೆ ಬರೆದಿದ್ದರು. ಇವರ ಪುತ್ರ ಆಗಾಜಾನ್‌, ತಂದೆಯಂತೆಯೇ ಕುದುರೆ ವ್ಯಾಪಾರ ಮುಂದುವರಿಸಿದರು. ಚಾಮರಾಜೇಂದ್ರ ಒಡೆಯರ್‌ ಅವರಿಗೆ ಕುದುರೆ ಸಾಕುವುದು, ಸವಾರಿ ಮಾಡುವುದು ಬಹಳ ಪ್ರೀತಿ. ಇವರೂ ಆಗಾಜಾನ್ ಸ್ನೇಹವನ್ನು ಸಹಜವಾಗಿಯೇ ಮುಂದುವರಿಸಿದರು.

ಆಗಾಜಾನ್‌ ಅರಮನೆಗೆ ಬಂದಾಗಲೆಲ್ಲಾ ತನ್ನ ಮಗ ಮಿರ್ಜಾ ಇಸ್ಮಾಯಿಲ್ ಅವರನ್ನು ಜತೆಗೆ ಕರೆತರುತ್ತಿದ್ದರು. ನಾಲ್ವಡಿ ಅವರಿಗೂ ಅವರ ಸಹೋದರ ನರಸಿಂಹರಾಜರಿಗೂ ಮಿರ್ಜಾ ಬಾಲ್ಯ ಸ್ನೇಹಿತರೂ ಹಾಗೂ ರಾಜ ಕುಟುಂಬದ ಸ್ನೇಹಿತರು ಆದರು. ಆರಮನೆ ಆವರಣದಲ್ಲಿ ರಾಜ ಕುಟುಂಬದವರಿಗೆ ಪ್ರಾರಂಭಿಸಿದ ರಾಯಲ್ ಶಾಲೆಯಲ್ಲಿ ಶ್ರೀಮಂತ ಮತ್ತು ಗಣ್ಯರ ಮಕ್ಕಳೊಂದಿಗೆ ಮಿರ್ಜಾ ಸಹಪಾಠಿಯಾದರು. ಐಸಿಎಸ್ ಅಧಿಕಾರಿ ಎಸ್.ಎಂ. ಫ್ರೇಸರ್‌ ಇವರ ಶಿಕ್ಷಕರಾಗಿದ್ದರು.

ಸೆಂಟ್ರಲ್‌ ಕಾಲೇಜಿನಲ್ಲಿ ಬಿ.ಎ ಮುಗಿಸಿದ ಮಿರ್ಜಾ ಪೊಲೀಸ್ ಇಲಾಖೆ ಸೇರಿದರು. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ತನ್ನ ಬಾಲ್ಯ ಸ್ನೇಹಿತ– ಸಹಪಾಠಿಯನ್ನು ಮಹಾರಾಜರ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು. ಸರಿಯಾಗಿ ನೂರು ವರ್ಷಗಳ ಹಿಂದೆ ಮಿರ್ಜಾ ಅವರು ಹುಜೂರ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಬ್ರಿಟಿಷರ ನಂತರ ಈ ಹುದ್ದೆಯನ್ನು ತಾವೇ ನಿರ್ವಹಿಸತೊಡಗಿ ರಾಜರ ಮೇಲೆ ‘ಒಂದು ಕಣ್ಣು’ ಇಟ್ಟುಕೊಂಡರು. ಈ ಸ್ಥಾನಕ್ಕೆ ಕ್ಯಾಂಪ್‌ಬೆಲ್ ಬಂದರು.

ನಂತರದ ವರ್ಷಗಳಲ್ಲಿ ಅಂದರೆ 1926ರಲ್ಲಿ ದಿವಾನ್ ಪದವಿಗೆ ಏರಿದರು. ಇವರ ಆಡಳಿತದಲ್ಲಿ ಬಿನ್ನಿಮಿಲ್‌ ಗಲಾಟೆ ಆಯಿತು. ಬಿನ್ನಿಮಿಲ್ ಮುಷ್ಕರಕ್ಕೆ ಕಾಂಗ್ರೆಸ್ ಕೈಜೋಡಿಸಿತು. ಕಾರ್ಮಿಕರ ಮುಷ್ಕರದ ಮೇಲೆ ಫೈರಿಂಗ್‌ ಮಾಡಿದ ಇಂಗ್ಲಿಷ್ ಅಧಿಕಾರಿಗೆ ಹಿಂಬಡ್ತಿ ನೀಡಿ, ಶಿಸ್ತು ಕ್ರಮ ಜರುಗಿಸಿದರು. ಭಾರತೀಯನೇ ಆದ ಒಬ್ಬ ಆಡಳಿತಗಾರ ಇಂಗ್ಲಿಷ್ ಅಧಿಕಾರಿಗೆ ಶಿಸ್ತು ಕ್ರಮ ಕೈಗೊಂಡಿದ್ದು ದೇಶದಲ್ಲಿಯೇ ಮೊದಲನೆಯದು. ಇಂಗ್ಲಿಷರಿಗೆ ರಾಜರು ಕೊಡಬೇಕಾದ ಸಬ್ಸಿಡಿ ಕಡಿಮೆ ಮಾಡಿಸಿದವರು ಮಿರ್ಜಾ. ವರ್ಷಕ್ಕೆ 34 ಲಕ್ಷ ಕೊಡುವ ಬದಲಿಗೆ 23 ಲಕ್ಷ ಕೊಡುವಂತೆ ಬ್ರಿಟಿಷ್‌ ಸರ್ಕಾರ ಪ್ರಕಟಿಸಿತು. ಹತ್ತೂವರೆ ಲಕ್ಷ ಉಳಿಸಲಾಯಿತು. ಒಂದು ರೀತಿ ರಾಜ್ಯಕ್ಕೆ ಮತ್ತು ರಾಜರಿಗೆ ಮಾಡಿದ ಉಪಕಾರ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT