ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿರ್ಲಕ್ಷ್ಯ

Last Updated 18 ಜನವರಿ 2013, 19:59 IST
ಅಕ್ಷರ ಗಾತ್ರ

ವಿಜಾಪುರ: ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಐತಿಹಾಸಿಕ ಪ್ರವಾಸಿ ತಾಣ ವಿಜಾಪುರದಲ್ಲಿ ಪ್ರವಾಸೋದ್ಯಮ ಕಚೇರಿಗೆ ಮೂರು ವರ್ಷಗಳಿಂದ ಪೂರ್ಣಾವಧಿ ಅಧಿಕಾರಿ ಇಲ್ಲ. ಇರುವುದು ಒಬ್ಬರು ಪ್ರಥಮ ದರ್ಜೆ ಸಹಾಯಕ ಮತ್ತೊಬ್ಬರು 4ನೇ ದರ್ಜೆ ನೌಕರ ಮಾತ್ರ. ಪ್ರವಾಸೋದ್ಯಮ ಸಚಿವರು ಆರು ವರ್ಷಗಳಿಂದ ಈ ಊರಿಗೆ ಭೇಟಿಯನ್ನೂ ನೀಡಿಲ್ಲ!

ವಿಶ್ವವಿಖ್ಯಾತ ಪಿಸುಗುಟ್ಟುವ ಗ್ಯಾಲರಿಯ ಗೋಲಗುಮ್ಮಟ, ವಾಸ್ತುಶಿಲ್ಪ ವೈಭವದ ಇಬ್ರಾಹಿಂ ರೋಜಾ ಸೇರಿದಂತೆ 80ಕ್ಕೂ ಅಧಿಕ ಸಂರಕ್ಷಿತ ಸ್ಮಾರಕಗಳು. ಅಣ್ಣ ಬಸವಣ್ಣನ ಜನ್ಮಭೂಮಿ, ಸಹಸ್ರಫಣಿ ಪಾರ್ಶ್ವನಾಥರ ಮಂದಿರ. ಆಲಮಟ್ಟಿ ಜಲಾಶಯ-ಉದ್ಯಾನವೂ ಸೇರಿದಂತೆ ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿ ಇವೆ.

`ವಿಜಾಪುರ ಪ್ರಮುಖ ಪ್ರವಾಸಿ ತಾಣವಾಗಿರುವುದರಿಂದ ಸಾಹಿತ್ಯ ಸಮ್ಮೇಳನಕ್ಕೆ ಮೂರು ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂಬುದು ಸಮ್ಮೇಳನದ ಸ್ವಾಗತ ಸಮಿತಿಯ ನಿರೀಕ್ಷೆ. `ವಿಜಾಪುರ ಪ್ರತಿ ತಿಂಗಳು ಜಿಲ್ಲೆಗೆ ಸರಾಸರಿ 80,000 ಪ್ರವಾಸಿಗರು ಭೇಟಿ ನೀಡುತ್ತಾರೆ. ಸ್ವಯಂ ಉದ್ಯೋಗ ಯೋಜನೆಯಡಿ ಸಹಾಯಧನದಲ್ಲಿ ಈವರೆಗೆ 105 ಪ್ರವಾಸಿ ಟ್ಯಾಕ್ಸಿಗಳನ್ನು ಇಲಾಖೆ ವತಿಯಿಂದ ವಿತರಿಸಲಾಗಿದೆ. ಇವುಗಳಿಗೆ ಕೇಂದ್ರೀಕೃತ ಬುಕ್ಕಿಂಗ್ ಕೌಂಟರ್, ನಗರ ಮತ್ತು ಸಮೀಪದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಪ್ಯಾಕೇಜ್ ಟೂರ್ ಸೌಲಭ್ಯ ಇಲ್ಲ. ಪ್ರವಾಸಿ ಮಾಹಿತಿ ಕೇಂದ್ರಗಳೂ ಇಲ್ಲ' ಎಂಬುದು ಜಿಲ್ಲಾ ವಿಕಾಸ ವೇದಿಕೆಯ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಆರೋಪ.

ವಿಜಾಪುರದ ಆದಿಲ್‌ಶಾಹಿ ಆನೆಕ್ಸ್ ಹೋಟೆಲ್, ಪ್ರವಾಸೋದ್ಯಮ ಕಚೇರಿ ಹಾಗೂ ಯಾತ್ರಿ ನಿವಾಸ ಕಟ್ಟಡವನ್ನು ಮಹಿಳಾ ವಿಶ್ವವಿದ್ಯಾಲಯಕ್ಕೆ ಬಿಟ್ಟು ಕೊಡಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸೇರಿದ ಮಯೂರ ಆದಿಲ್‌ಶಾಹಿ ಹೋಟೆಲ್ ಇದೆಯಾದರೂ ಅಲ್ಲಿ ಪ್ರವಾಸಿಗರಿಗೆ ಲಭ್ಯ ಇರುವುದು ನಾಲ್ಕು ಕೊಠಡಿಗಳು ಮಾತ್ರ.

`ಇಲಾಖೆಯ ಇಲ್ಲಿನ ಕಚೇರಿಗೆ ಸಹಾಯಕ ನಿರ್ದೇಶಕರು ಸೇರಿ ಒಟ್ಟು ಏಳು ಹುದ್ದೆಗಳು ಮಂಜೂರಾಗಿವೆ. ಆದರೆ ಇರುವುದು ಇಬ್ಬರು ಮಾತ್ರ. ಹೊಸಪೇಟೆ ಕಚೇರಿಯ ಸಹಾಯಕ ನಿರ್ದೇಶಕರಿಗೆ ಈ ಕಚೇರಿಯ ಪ್ರಭಾರ ವಹಿಸಲಾಗಿದ್ದು, ವಿಜಾಪುರ ಸೇರಿದಂತೆ ಎಂಟು ಜಿಲ್ಲೆಗಳ ಪ್ರಭಾರದ ಹೊಣೆ ಆ ಅಧಿಕಾರಿ ಮೇಲಿದೆ. ಇಂತಹ ಆಧುನಿಕ ಯುಗದಲ್ಲಿಯೂ ಪ್ರವಾಸಿಗರ ಅನುಕೂಲಕ್ಕಾಗಿ ಕಂಪ್ಯೂಟರ್, ಫ್ಯಾಕ್ಸ್ ಸೌಲಭ್ಯ ಈ ಕಚೇರಿಯಲ್ಲಿ ಇಲ್ಲ. ವಿಜಾಪುರದ ಬಗ್ಗೆ 20 ವರ್ಷಗಳಿಂದಲೂ ಈ ನಿರ್ಲಕ್ಷ್ಯ ಮುಂದುವರಿದಿದೆ' ಎಂದು ಭಾರತೀಯ ಕಲೆ ಮತ್ತು ಪಾರಂಪರಿಕ ಸಂಸ್ಕೃತಿಯ ರಾಷ್ಟ್ರೀಯ ಪ್ರತಿಷ್ಠಾನದ ಆಡಳಿತ ಮಂಡಳಿಯ ಸದಸ್ಯ, ಸ್ಥಳೀಯ ಸಂಶೋಧಕ ಡಾ.ಕೃಷ್ಣ ಕೊಲ್ಹಾರಕುಲಕರ್ಣಿ ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಬಳಕೆಯಾಗದ ಅನುದಾನ: `ನಗರದ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿಗೆ ಸರ್ಕಾರ ರೂ.  2.76 ಕೋಟಿ ಅನುದಾನ ನೀಡಿದೆ. ಇದರಲ್ಲಿ 2.7 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ಕೈಗೊಳ್ಳುವ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದು, ಕೆಲಸ ಇನ್ನಷ್ಟೇ ಆರಂಭಗೊಳ್ಳಬೇಕಿದೆ' ಎಂಬುದು ಜಿಲ್ಲಾ ಆಡಳಿತದ ಮೂಲಗಳ ಮಾಹಿತಿ.

`ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ಮಳಿಗೆ ತೆರೆಯಲು ರೂ.  45,000 ರೂಪಾಯಿ ಅನುದಾನ ನೀಡುವಂತೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಊಟ-ವಸತಿ, ಸಾರಿಗೆ ವ್ಯವಸ್ಥೆ ಕಲ್ಪಿಸುವುದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೊಣೆ' ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
`ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಇಲ್ಲಿಯ ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸವಾಗಬೇಕು. ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಬೇಕು. ರೈಲು-ಬಸ್ ನಿಲ್ದಾಣಗಳಲ್ಲಿ ಪ್ರವಾಸಿ ಸಹಾಯ ಕೇಂದ್ರ ಆರಂಭಿಸಬೇಕು' ಎಂಬುದು ಇತಿಹಾಸಕಾರ ಡಾ.ಎಚ್.ಜಿ. ದಡ್ಡಿ, ಡಾ.ಸದಾಶಿವ ಪವಾರ, ಪ್ರೊ.ರಾಜು ಬಿದರಿ ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT