ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಿಸಿದ ವಿನಯ್ ಬಳಗ

ರಣಜಿ ಟ್ರೋಫಿ: ಏಳು ವರ್ಷಗಳ ಬಳಿಕ ದೆಹಲಿ ವಿರುದ್ಧ ಕರ್ನಾಟಕ ತಂಡಕ್ಕೆ ಒಲಿದ ಮೊದಲ ಜಯ
Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರು: ವೇಗಿ ವಿನಯ್ ಕುಮಾರ್ ಎಸೆತದ ಚೆಂಡನ್ನು ಪರ್ವಿಂದರ್ ಅವಾನ `ಥರ್ಡ್ ಮ್ಯಾನ್' ಬಳಿ ಹೊಡೆದಾಗ ಅದನ್ನು ಕೆ.ಎಲ್. ರಾಹುಲ್ ತಮ್ಮ ಹಿಡಿತಕ್ಕೆ ಪಡೆದರು. ಈ ಮೂಲಕ ಕರ್ನಾಟಕ ತಂಡದ ಚೊಚ್ಚಲ ಗೆಲುವಿನ ಕನಸು ನನಸಾಯಿತು. ಅಷ್ಟೇ ಅಲ್ಲ, ಫಲಿತಾಂಶ ಏನಾಗಲಿದೆಯೋ ಎನ್ನುವ ಒತ್ತಡದಲ್ಲಿದ್ದ ಆಟಗಾರರ ಮನಸ್ಸೂ ನಿರಾಳವಾಯಿತು.

ಈ ಸಲದ ರಣಜಿ ಋತುವಿನಲ್ಲಿ ಮೊದಲ ಗೆಲುವು ಸಾಧಿಸಲು ಕರ್ನಾಟಕ ಐದು ಪಂದ್ಯಗಳವರೆಗೆ ಕಾಯಬೇಕಾಯಿತು. ಎರಡನೇ ಇನಿಂಗ್ಸ್‌ನಲ್ಲಿ ದೆಹಲಿ ಸೋಮವಾರವೇ ಮೂರು ವಿಕೆಟ್ ಕಳೆದುಕೊಂಡಿದ್ದ ಕಾರಣ ವಿನಯ್ ಬಳಗದ ಜಯದ ಕನಸು ಕಷ್ಟವಾಗಲಿಲ್ಲ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ಗೆಲುವಿಗೆ ಅಗತ್ಯವಿದ್ದ 410 ರನ್ ಗುರಿಯನ್ನು ಮುಟ್ಟಲು ಅವರಿಗೆ ಕಷ್ಟವೆಂಬುದು ಕರ್ನಾಟಕಕ್ಕೂ ಗೊತ್ತಿತ್ತು. ಆದರೂ, ದೆಹಲಿ 81.5 ಓವರ್‌ಗಳವರೆಗೆ `ದರ್ಬಾರ್' ನಡೆಸಿತು. ಕೊನೆಗೆ ಗೆಲುವೆಂಬ ಚಂಚಲೆಯ ಚಿತ್ತ ವಿನಯ್ ಬಳಗದತ್ತ ಮುಖ ಮಾಡಿತು. ಈ ಪರಿಣಾಮ ಆತಿಥೇಯರು 159 ರನ್‌ಗಳ ಭರ್ಜರಿ ಗೆಲುವಿನ ಜೊತೆಗೆ ಆರು ಅಂಕಗಳನ್ನು ಪಡೆದುಕೊಂಡರು.

ಸೂಪರ್ ಶರತ್: ಪಂದ್ಯದಿಂದ ಪಂದ್ಯಕ್ಕೆ ತಮ್ಮ `ವೇಗ'ದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಮಂಡ್ಯದ ಶರತ್ ಈ ಪಂದ್ಯದಲ್ಲೂ ಮಿಂಚು ಹರಿಸಿದರು. ದ್ವಿತೀಯ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಪಡೆದ ಬಲಗೈ ವೇಗಿ ಮಂಗಳವಾರ ವೈಭವ್ ರಾವಲ್ (13) ವಿಕೆಟ್ ಉರುಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು.

ಉತ್ತರ ಪ್ರದೇಶ ವಿರುದ್ಧದ ಪಂದ್ಯದ ಮೂಲಕ ರಣಜಿಗೆ ಪದಾರ್ಪಣೆ ಮಾಡಿದ್ದ ಶರತ್, ಈ ಪಂದ್ಯದಲ್ಲೂ ಮಿಂಚಿ ವೇಗದ ಬೌಲಿಂಗ್‌ನಲ್ಲಿ ಕರ್ನಾಟಕದ ಭರವಸೆಯನ್ನು ಹೆಚ್ಚಿಸಿದ್ದಾರೆ. ಶರತ್ ಬೌಲಿಂಗ್ ಬಗ್ಗೆ ನಾಯಕ ವಿನಯ್ ಮತ್ತು ಬ್ಯಾಟಿಂಗ್ ಕೋಚ್ ಅರುಣ್ ಕುಮಾರ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಗಿ ಮೂರು ಪಂದ್ಯಗಳಿಂದ ಒಟ್ಟು 14 ವಿಕೆಟ್ ಪಡೆದಿದ್ದಾರೆ.

ಆತಂಕದ ಆ ಜೊತೆಯಾಟ: ಮೂರನೇ ದಿನದಾಟದ ಅಂತ್ಯಕ್ಕೆ 13 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 40 ರನ್ ಗಳಿಸಿದ್ದ ದೆಹಲಿ, ನಾಲ್ಕನೇ ದಿನದ ಆರಂಭದಲ್ಲಿ ಬೇಗನೇ ವಿಕೆಟ್ ಕಳೆದುಕೊಂಡಿತು. ಆದರೆ, ಮಿಥುನ್ ಮನ್ಹಾಸ್ (80, 168 ಎಸೆತ, 11 ಬೌಂಡರಿ) ಮತ್ತು ರಜತ್ ಭಾಟಿಯಾ (63, 122 ಎಸೆತ, 11 ಬೌಂಡರಿ, 1 ಸಿಕ್ಸರ್) ಅವರ ಆರನೇ ವಿಕೆಟ್ ಜೊತೆಯಾಟ ಶಿಖರ್ ಧವನ್ ಬಳಗವನ್ನು ಸಂಕಷ್ಟದಿಂದ ಪಾರು ಮಾಡಿತು. ಇದು ಕರ್ನಾಟಕದ ಆತಂಕಕ್ಕೂ ಕಾರಣವಾಯಿತು.

ಭೋಜನ ವಿರಾಮದ ವೇಳೆಗೆ 137 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ದೆಹಲಿ ತಂಡಕ್ಕೆ ಮಿಥುನ್ ಮತ್ತು ಭಾಟಿಯಾ ಭರ್ಜರಿ ಚೇತರಿಕೆ ನೀಡಿದರು. ಈ ಜೋಡಿ 226 ಎಸೆತಗಳಲ್ಲಿ 110 ರನ್ ಕಲೆ ಹಾಕಿತು. ಸೋಲಿನ ಕಾರ್ಮೋಡ ದೆಹಲಿ ತಂಡದ ಮೇಲೆ ಆವರಿಸುತ್ತಿದ್ದ ಸಂದರ್ಭದಲ್ಲಿಯೂ ಇಬ್ಬರೂ ಬ್ಯಾಟ್ಸ್‌ಮನ್‌ಗಳು ದಿಟ್ಟತನದಿಂದ ಬ್ಯಾಟ್ ಬೀಸಿದ್ದು ವಿಶೇಷವಾಗಿತ್ತು.

ಭಾಟಿಯಾ ನೇರ ಡ್ರೈವ್‌ನಲ್ಲಿ ಬಾರಿಸಿದ ನಾಲ್ಕು ಬೌಂಡರಿಗಳು ಮತ್ತು ಒಂದು ಆಕರ್ಷಕ ಸಿಕ್ಸರ್ ಗಮನ ಸೆಳೆಯಿತು. ಎರಡೂವರೆ ಗಂಟೆಗೂ ಹೆಚ್ಚು ಕಾಲ ಮಿಥುನ್ ಮತ್ತು ಭಾಟಿಯಾ ಕ್ರೀಸ್‌ಗೆ ಅಂಟಿಕೊಂಡು ನಿಂತ ಕಾರಣ ಪಂದ್ಯ ಡ್ರಾದತ್ತ ಹೊರಳಲಿದೆಯೇ ಎನ್ನುವ ಅನುಮಾನವೂ ಒಂದು ಕ್ಷಣ ಸುಳಿದು ಹೋಯಿತು. ಆದರೆ, 67ನೇ ಓವರ್‌ನ ಮೊದಲ ಎಸೆತದಲ್ಲಿಯೇ ಸ್ಟುವರ್ಟ್ ಬಿನ್ನಿ ಈ ಜೊತೆಯಾಟಕ್ಕೆ ತೆರೆ ಎಳೆದರು. ಈ ವಿಕೆಟ್ ದೆಹಲಿ ತಂಡದ ಸೋಲಿಗೆ ಹಾಗೂ ಆತಿಥೇಯರ ಗೆಲುವಿಗೆ ಮುನ್ನುಡಿ ಬರದಂತಿತ್ತು. ಈ ನಿರೀಕ್ಷೆ ನಿಜವಾಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ.

ಅಮೋಘ ಕ್ಯಾಚ್: ಹಿಂದಿನ ಪಂದ್ಯಗಳಲ್ಲಿ ಕ್ಯಾಚ್ ಕೈಚೆಲ್ಲಿ ಟೀಕೆಗೆ ಗುರಿಯಾಗಿದ್ದ ಕರ್ನಾಟಕದ ಆಟಗಾರರು ಈ ಪಂದ್ಯದಲ್ಲಿ ಅತ್ಯುತ್ತಮ ಕ್ಷೇತ್ರರಕ್ಷಣೆಯ ಮೂಲಕ ಗಮನ ಸೆಳೆದರು. ಮಂಗಳವಾರ ಪಡೆದ ಎರಡು ಅಮೋಘ ಹಾಗೂ ಆಕರ್ಷಕ ಕ್ಯಾಚ್‌ಗಳೇ ಇದಕ್ಕೆ ಸಾಕ್ಷಿ.

ಸೋಲಿನ ಭೀತಿಯಲ್ಲಿದ್ದರೂ ವೇಗವಾಗಿ ರನ್ ಕಲೆ ಹಾಕಲು ಯತ್ನಿಸಿದ ಭಾಟಿಯಾಗೆ ಬಿನ್ನಿ ಭಾರೀ ಆಘಾತ ನೀಡಿದರು. 73ನೇ ಓವರ್‌ನ ನಾಲ್ಕನೇ ಎಸೆತದ ಚೆಂಡನ್ನು ಭಾಟಿಯಾ `ಶಾರ್ಟ್ ಕವರ್'ನಲ್ಲಿ ವೇಗವಾಗಿ ಬಾರಿಸಿದರು. ಅಲ್ಲಿ ಕ್ಷೇತ್ರರಕ್ಷಣೆ ನಿಂತಿದ್ದ ಕುನಾಲ್ ಕಪೂರ್ ಚೆಂಡನ್ನು ತಮ್ಮ ಹಿಡಿತಕ್ಕೆ ಪಡೆದ ರೀತಿಯಂತೂ ಚಿತ್ತಾಕರ್ಷಕವಾಗಿತ್ತು. ಈ ವೇಳೆ ಬಿನ್ನಿ ಅವರು ಕುನಾಲ್ ಅವರನ್ನು ತಬ್ಬಿಕೊಂಡು ಸಂಭ್ರಮ ಪಟ್ಟ ರೀತಿ ಕರ್ನಾಟಕದ ಹಿಂದಿನ ಪಂದ್ಯಗಳ ಎಲ್ಲಾ ನಿರಾಸೆಯನ್ನೂ ಮರೆಸುವಂತಿತ್ತು.

ಕೊಡಗಿನ ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಎಸೆತದಲ್ಲಿ ಪುನಿತ್ ಬಿಸ್ಟ್ `ಥರ್ಡ್ ಮ್ಯಾನ್'ನತ್ತ ಚೆಂಡನ್ನು ತಳ್ಳಿದರು. ಈ ಸ್ಥಳದಲ್ಲಿ ಕ್ಷೇತ್ರರಕ್ಷಣೆಯಲ್ಲಿದ್ದ ಮನೀಷ್ ಪಾಂಡೆ ದೂರ ಜಿಗಿದು ಕ್ಯಾಚ್ ಪಡೆದ ರೀತಿ ಅಮೋಘವಾಗಿತ್ತು. ಈ ಎರಡು ಕ್ಯಾಚ್‌ಗಳು ಪಂದ್ಯದ ಗತಿಯನ್ನೇ ಬದಲಿಸಿದವು. ಇಲ್ಲವಾದರೆ, ಪಂದ್ಯ ಡ್ರಾದತ್ತ ಹೊರಳಿ ಆತಿಥೇಯ ಬಳಗಕ್ಕೆ ಮತ್ತೊಂದು ನಿರಾಸೆ ಕಾದು ಕುಳಿತಿರುತ್ತಿತ್ತು.

ಏಳು ವರ್ಷಗಳ ಬಳಿಕ ಲಭಿಸಿದ ಜಯ: ಕರ್ನಾಟಕ ತಂಡಕ್ಕೆ ದೆಹಲಿ ವಿರುದ್ಧ ಏಳು ವರ್ಷಗಳ ಬಳಿಕ ಲಭಿಸಿದ ಮೊದಲ ಗೆಲುವು ಇದು. 2005-06ರಲ್ಲಿ ಉದ್ಯಾನನಗರಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕರ್ನಾಟಕ 167 ರನ್‌ಗಳ ಗೆಲುವು ಸಾಧಿಸಿತ್ತು. 2005-06ರ  ಪಂದ್ಯದ ನಂತರ ಮೂರು ಸಲ ಎರಡೂ ತಂಡಗಳು ಪೈಪೋಟಿ ನಡೆಸಿವೆಯಾದರೂ ಫಲಿತಾಂಶ ಬಂದಿರಲಿಲ್ಲ.

ಐದನೆಯ ಗೆಲುವು: ರಣಜಿ ಇತಿಹಾಸದಲ್ಲಿ ಕರ್ನಾಟಕ ಮತ್ತು ದೆಹಲಿ 15 ಸಲ ಮುಖಾಮುಖಿಯಾಗಿವೆ. ಐದು ಸಲ ಆತಿಥೇಯರು ಗೆಲುವು ಸಾಧಿಸಿದ್ದಾರೆ. ಒಮ್ಮೆ ಮಾತ್ರ ದೆಹಲಿಗೆ ಜಯ ಲಭಿಸಿದೆ.

ಸ್ಕೋರ್ ವಿವರ

ಕರ್ನಾಟಕ ಪ್ರಥಮ ಇನಿಂಗ್ಸ್ 65 ಓವರ್‌ಗಳಲ್ಲಿ 192
ದೆಹಲಿ ಮೊದಲ ಇನಿಂಗ್ಸ್ 59.3 ಓವರ್‌ಗಳಲ್ಲಿ 258
ಕರ್ನಾಟಕ ದ್ವಿತೀಯ ಇನಿಂಗ್ಸ್ 103.2 ಓವರ್‌ಗಳಲ್ಲಿ - 9 ವಿಕೆಟ್‌ಗೆ 475
ದೆಹಲಿ ಎರಡನೇ ಇನಿಂಗ್ಸ್ 81.5 ಓವರ್‌ಗಳಲ್ಲಿ 250


(ಸೋಮವಾರದ ಅಂತ್ಯಕ್ಕೆ 13 ಓವರ್‌ಗಳಲ್ಲಿ 3 ವಿಕೆಟ್‌ಗೆ 40)
ಮೋಹಿತ್ ಶರ್ಮಾ ಸಿ ಗೌತಮ್ ಬಿ ಅಭಿಮನ್ಯು ಮಿಥುನ್  04
ಮಿಥುನ್ ಮನ್ಹಾಸ್ ಸಿ. ಮನೀಷ್ ಪಾಂಡೆ ಬಿ ಸ್ಟುವರ್ಟ್ ಬಿನ್ನಿ 80
ವೈಭವ್ ರಾವಲ್ ಸಿ ಕೆ.ಎಲ್. ರಾಹುಲ್ ಬಿ ಶರತ್  13
ರಜತ್ ಭಾಟಿಯಾ ಸಿ. ಕುನಾಲ್ ಕಪೂರ್ ಬಿ ಸ್ಟುವರ್ಟ್ ಬಿನ್ನಿ 63
ಪುನಿತ್ ಬಿಸ್ಟ್ ಸಿ ಮನೀಷ್ ಪಾಂಡೆ ಬಿ ಕೆ.ಪಿ. ಅಪ್ಪಣ್ಣ  02
ಸುಮಿತ್ ನರ್ವಾಲ್ ಸಿ ರಾಬಿನ್ ಉತ್ತಪ್ಪ ಬಿ ವಿನಯ್   41
ಪರ್ವಿಂದರ್ ಅವಾನ ಸಿ ರಾಹುಲ್ ಬಿ ವಿನಯ್ ಕುಮಾರ್ 06
ಆಶಿಶ್ ನೆಹ್ರಾ ಔಟಾಗದೆ  00

ಇತರೆ: ಬೈ-8, ಲೆಗ್ ಬೈ-1, ನೋ ಬಾಲ್-1  10
ವಿಕೆಟ್ ಪತನ: 1-30 (ಉನ್ಮುಕ್ತ್; 8.1), 2-35 (ಧವನ್; 10.2), 3-35 (ವಿಕಾಸ್; 10.5), 4-43 (ಮೋಹಿತ್; 15.5), 5-76 (ವೈಭವ್; 28.4), 6-186 (ಮನ್ಹಾಸ್; 66.1), 7-203 (ಭಾಟಿಯಾ; 72.4), 8-209 (ಪುನಿತ್; 75.6), 9-250 (ಸುಮಿತ್; 81.2), 10-250 (ಪರ್ವಿಂದರ್; 82.5).

ಬೌಲಿಂಗ್: ಆರ್ ವಿನಯ್ ಕುಮಾರ್ 18.5-5-59-3, ಅಭಿಮನ್ಯು ಮಿಥುನ್ 20-3-72-1, ಎಚ್.ಎಸ್. ಶರತ್ 14-3-40-3, ಸ್ಟುವರ್ಟ್ ಬಿನ್ನಿ 19-5-60-2, ಕೆ.ಪಿ. ಅಪ್ಪಣ್ಣ 9-3-10-1, ಕುನಾಲ್ ಕಪೂರ್ 1-1-0-0.

ಫಲಿತಾಂಶ: ಕರ್ನಾಟಕಕ್ಕೆ 159 ರನ್ ಗೆಲುವು ಹಾಗೂ ಆರು ಪಾಯಿಂಟ್. ಪಂದ್ಯ ಶ್ರೇಷ್ಠ: ಸ್ಟುವರ್ಟ್ ಬಿನ್ನಿ.

ಕರ್ನಾಟಕದ ಮುಂದಿನ ಪಂದ್ಯ: ವಿದರ್ಭ   (ಡಿಸೆಂಬರ್ 15ರಿಂದ 18, ಮೈಸೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT