ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಹತ್ಯೆ ತನಿಖೆಗೆ ವಿಶೇಷ ತಂಡ

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನ ಮಹಾಜನ ಕಾಲೇಜಿನ ಇಬ್ಬರು  ಬಿಬಿಎಂ ವಿದ್ಯಾರ್ಥಿಗಳ ಹತ್ಯೆ ಪ್ರಕರಣದಲ್ಲಿ  ಹಂತಕರ ಬಗ್ಗೆ ಪೊಲೀಸರಿಗೆ ಇನ್ನೂ ಯಾವುದೇ ಸುಳಿವು ದೊರಕಿಲ್ಲ.  ಈ ನಡುವೆ  `ಈ ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ~ ಎಂದು ಗೃಹ ಸಚಿವ ಆರ್.ಅಶೋಕ ಸೋಮವಾರ ಇಲ್ಲಿ ತಿಳಿಸಿದರು.

ಈ ಪ್ರಕರಣವನ್ನು ಸರ್ಕಾರ ಸವಾಲಾಗಿ ಸ್ವೀಕರಿಸಿದೆ. ಆರೋಪಿಗಳ ಪತ್ತೆಗೆ ಬೆಂಗಳೂರಿನ ಅಪರಾಧ ವಿಭಾಗದ ಡಿಸಿಪಿ ಕೃಷ್ಣಂರಾಜು ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ಸುದ್ದಿಗಾರರಿಗೆ ಅವರು ವಿವರಿಸಿದರು.

`ಪ್ರಕರಣ ಬೆಳಕಿಗೆ ಬಂದ ತಕ್ಷಣ ಡಿಜಿಪಿ ಎಸ್. ಟಿ. ರಮೇಶ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ) ರೂಪಕ್‌ಕುಮಾರ್ ದತ್ತ ಅವರನ್ನು ಕರೆಸಿ ಈ ಕುರಿತು ಎಲ್ಲ ವಿವರ ಪಡೆದಿದ್ದೇನೆ. ತನಿಖೆಗೆ ಸೂಚಿಸಿದ್ದೇನೆ. ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಡುವ ಪ್ರವೃತ್ತಿಗೆ ಕಡಿವಾಣ ಹಾಕಲು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು~ ಎಂದರು.

ಹುಣಸೂರು ವರದಿ: ಪೊಲೀಸರು ಚುರುಕಾಗಿ ಕಾರ್ಯನಿರ್ವಹಿಸಿದ್ದರೆ  ಇಬ್ಬರು ವಿದ್ಯಾರ್ಥಿಗಳ ಜೀವ ಉಳಿಯುತ್ತಿತ್ತೇ? ಇಂಥದೊಂದು ಪ್ರಶ್ನೆ ಈಗ ಕೇಳಿ ಬರುತ್ತಿದೆ.

ಅಪಹೃತ ಬಿಬಿಎಂ ವಿದ್ಯಾರ್ಥಿಗಳಿಬ್ಬರ ಹತ್ಯೆ ಪ್ರಕರಣ ಜಿಲ್ಲೆಯ ಪೊಲೀಸರ ವೈಫಲ್ಯವನ್ನು ಹಾಗೂ ಇಲಾಖೆಯಲ್ಲೇ ಪರಸ್ಪರ ಹೊಂದಾಣಿಕೆ ಇಲ್ಲದಿರುವುದನ್ನು ಬಹಿರಂಗಪಡಿಸಿದೆ. ಜೊತೆಗೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿದೆ.

ಜೂನ್ 8ರಂದು ಅಪಹರಣ ನಡೆದಿದ್ದರೂ ಮರುದಿನ ಸಂಜೆಯವರೆಗೂ ಈ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿಲ್ಲ.  ಬುಧವಾರ ಸಂಜೆ ಸುಧೀಂದ್ರ ಮತ್ತು ವಿಘ್ನೇಶ್ ಕಾಲೇಜಿನಿಂದ ಹಿಂದಿರುಗಿ ಬಾರದಾಗ ಆತಂಕಗೊಂಡ ಪೋಷಕರು ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾದರೂ. ಘಟನೆ ನಡೆದಿರುವುದು ಮೈಸೂರಿನಲ್ಲಿ, ಅಲ್ಲಿಯೇ ದೂರು ದಾಖಲಿಸಿ ಎಂದು ಸ್ಥಳೀಯ ಪೊಲೀಸರು ಕೈ ತೊಳೆದುಕೊಂಡರು.

ಮೈಸೂರಿನ ಪೊಲೀಸ್ ಠಾಣೆಯವರೂ ಸೂಕ್ತ ರೀತಿಯಲ್ಲಿ ಸ್ಪಂದಿಸದ  ಕಾರಣ ಪೋಷಕರು ಕಂಗಾಲಾದರು. ಒಂದೆಡೆ ಮಕ್ಕಳು ಕಾಣೆಯಾದ  ಆತಂಕ ಇನ್ನೊಂದೆಡೆ ಠಾಣೆಯಿಂದ ಠಾಣೆಗೆ ಸುತ್ತಾಡುವ ಧಾವಂತ. ಅಪಹೃತ ಮಕ್ಕಳು ಮೊಬೈಲ್ ಫೋನ್ ಮಾಡಿದಾಗ ಅದು ಮಂಡ್ಯ ಜಿಲ್ಲೆ ಬಾಬೂರಾಯನ ಕೊಪ್ಪಲು ಗ್ರಾಮದಿಂದ ಬಂದಿದೆ ಎನ್ನುವುದನ್ನು ಮೈಸೂರು ಪೊಲೀಸರು ಪತ್ತೆ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಾಲಕರು ಸೂಚಿಸಿದರೂ `ಅದು ಮಂಡ್ಯ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ~ ಎಂಬ ಉತ್ತರ ಪೊಲೀಸರಿಂದ ಬಂದಿದ್ದು ಪಾಲಕರನ್ನು ಇನ್ನಷ್ಟು ಕಂಗಾಲಾಗಿಸಿತು.

ಜೂನ್ 9ರಂದು ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿದರೂ ಎಫ್‌ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಮೀನ ಮೇಷ ಎಣಿಸಿದ್ದರು.

ಅಷ್ಟರೊಳಗೆ ಸುಧೀಂದ್ರ ಸೆಲ್‌ಫೋನ್‌ನಿಂದ ಕರೆ ಮಾಡಿ ಹಣ ನೀಡುವಂತೆ ಪೋಷಕರಿಗೆ ಮನವಿ ಮಾಡಿಕೊಂಡಿದ್ದ.

ನಂತರ ಕೊಂಚ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ನಾಕಾಬಂದಿ ಏರ್ಪಡಿಸಿ ಮೈಸೂರು ಮತ್ತು ಸುತ್ತಲಿನ ಜಿಲ್ಲೆಯಾದ್ಯಂತ ಪಹರೆ ಹಾಕಿತು. ಅಪಹರಣಕಾರರು ಎರಡು ಮೂರು ಬಾರಿ ದೂರವಾಣಿ ಕರೆ ಮಾಡಿದ್ದರೂ ಕರೆ ಎಲ್ಲಿಂದ ಬಂತು ಎನ್ನುವುದನ್ನು ನಿಖರವಾಗಿ ಪತ್ತೆ ಮಾಡಲು ಪೊಲೀಸರು ವಿಫಲರಾದರು.

ಹುಣಸೂರು ಉಪವಿಭಾಗ ಕೇಂದ್ರವಾಗಿದ್ದು, ಇಲ್ಲಿನ ಪೊಲೀಸ್ ಕಚೇರಿಯಲ್ಲಿ ಸೆಲ್ ಫೋನ್ ಕರೆಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನದ ವ್ಯವಸ್ಥೆ ಕೂಡ ಇಲ್ಲ ಎನ್ನಲಾಗುತ್ತಿದೆ. ಅಪಹರಣಕಾರರು ದೂರವಾಣಿಯಲ್ಲಿ ಮಾತನಾಡಿದ್ದನ್ನು ಧ್ವನಿಮುದ್ರಣ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

ಪರಿಚಿತರ ಕೃತ್ಯ: ಹುಣಸೂರು ಪಟ್ಟಣದಲ್ಲಿ ಹಾರ್ಡ್‌ವೇರ್ ವಹಿವಾಟಿನಲ್ಲಿ ಪ್ರಖ್ಯಾತಿ ಗಳಿಸಿರುವ ಸುಧೀಂದ್ರ ಒಡೆತನದ ಅಶೋಕ್ ಟ್ರೇಡರ್ಸ್‌, ಕೊಡಗು ಜಿಲ್ಲೆಯವರೆಗೂ ತನ್ನ  ವಹಿವಾಟು ವಿಸ್ತರಿಸಿದೆ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವ ಇವರ ಬಗ್ಗೆ ತಿಳಿದಿರುವವರೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗುತ್ತಿದೆ.

ಅಪಹರಣಗೊಂಡ ದಿನದಿಂದ ಕೇವಲ ಮೂರು ದೂರವಾಣಿ ಕರೆ ಮಾಡಿದ್ದು, ಒಂದು ಪತ್ರ ಕಳುಹಿಸಿಕೊಡಲಾಗಿದೆ. ಹುಣಸೂರು ಪಟ್ಟಣದ ಮೋಹನ್ ಅವರ ನಿವಾಸದಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆ ಅಪಹರಣಕಾರನಿಗೆ ಕ್ಷಣದಲ್ಲೇ ತಿಳಿಯುತ್ತಿತ್ತು. ಅದನ್ನೇ ಅವರು ದೂರವಾಣಿಯಲ್ಲಿಯೂ ಹೇಳುತ್ತಿದ್ದರು. ಇಲ್ಲಿನ ವಿದ್ಯಮಾನ ಅವರಿಗೆ ಸಿಗುತ್ತಿದ್ದುದು ಹೇಗೆ ಎಂದು ಸುಧೀಂದ್ರನ ದೊಡ್ಡಪ್ಪ ಅಶೋಕ್ ಪ್ರಶ್ನೆ ಮಾಡುತ್ತಾರೆ.

ಸುಧೀಂದ್ರನ ಬಗ್ಗೆ ಸಂಪೂರ್ಣ ತಿಳಿದಿದ್ದ ಆತನ ಸ್ನೇಹಿತರಿಂದಲೇ ಹಣಕ್ಕಾಗಿ ಈ  ಕೃತ್ಯ ನಡೆದಿರಬಾರದೇಕೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಸುಧೀಂದ್ರ ಆಗರ್ಭ ಶ್ರೀಮಂತ ಎಂಬ ವಿಚಾರ ತಿಳಿದಿದ್ದ ಕಾಲೇಜು ಸ್ನೇಹಿತರು ಹಣದಾಸೆಗೆ ಈತನನ್ನು ಏಕೆ ಅಪಹರಿಸಿ ಈ ಕೃತ್ಯ ನಡೆಸಿ ಅಂತ್ಯ ಹೇಳಿರಬಾರದು ಎಂದೂ ಶಂಕಿಸಲಾಗುತ್ತಿದೆ.

ಬಂದ್: ಕೊಲೆಯಾದ ಸುಧೀಂದ್ರ ಮತ್ತು ವಿಘ್ನೇಶ್ ಅವರ ಅಂತ್ಯಕ್ರಿಯೆ  ಹುಣಸೂರಿನಲ್ಲಿ ಸೋಮವಾರ ಮಧ್ಯಾಹ್ನ ನೆರವೇರಿತು. ಪಟ್ಟಣದ ವರ್ತಕರ ಸಂಘ, ಹೊಟೇಲ್ ಮಾಲೀಕರ ಸಂಘ, ಮತ್ತು ವಿವಿಧ ಸಂಘ ಸಂಸ್ಥೆಗಳು ವಹಿವಾಟು  ಸ್ಥಗಿತಗೊಳಿಸಿ ಬಂದ್ ನಡೆಸಿ ಮೃತರಿಗೆ ಅಂತಿಮ ಗೌರವ ಸಲ್ಲಿಸಿದರು.
ಈ ನಡುವೆ ಸಾರ್ವಜನಿಕರು ವಿದ್ಯಾರ್ಥಿಗಳ ಹತ್ಯೆಯನ್ನು ಖಂಡಿಸಿ ಮಂಗಳೂರು-ಬೆಂಗಳೂರು ರಸ್ತೆ ತಡೆ ನಡೆಸಿದರು.

ಪೊಲೀಸರ ವಿಷಾದ: ವಿದ್ಯಾರ್ಥಿಗಳ ಅಪಹರಣದ ಪ್ರಕರಣವನ್ನು ದಾಖಲಿಸಿಕೊಳ್ಳಲು ವಿಳಂಬವಾಗಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳನ್ನು ಪತ್ತೆ ಮಾಡಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗಿತ್ತು. ಆದರೂ ಇದರಲ್ಲಿ ಯಶಸ್ವಿಯಾಗದೇ ಇರುವುದಕ್ಕೆ ವಿಷಾದವಿದೆ.
 - ಮನೀಷ್ ಕರ್ಬಿಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT