ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಂದ ಬೃಹತ್ ಮೆರವಣಿಗೆ

Last Updated 4 ಜನವರಿ 2013, 8:38 IST
ಅಕ್ಷರ ಗಾತ್ರ

ಸಿರುಗುಪ್ಪ: ದೆಹಲಿಯಲ್ಲಿ ಈಚೆಗೆ ನಡೆದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಗುರುವಾರ ಸಿರುಗುಪ್ಪ ನಾಗರಿಕ ವೇದಿಕೆ ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಶಾಲಾ-ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಇಲ್ಲಿಯ ಪ್ರೌಢಶಾಲಾ ಮೈದಾನದಿಂದ ಆರಂಭಗೊಂಡ ಮೆರವಣಿಗೆ ಮುಖ್ಯ ಬೀದಿಯಲ್ಲಿ ತೆರಳಿ ಗಾಂಧೀ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು.

ಅಲ್ಲಿಂದ ತಾಲ್ಲೂಕು ಕಚೇರಿಗೆ ತೆರಳಿ ಬಹಿರಂಗ ಸಭೆ ನಡೆಸಿದ ಮುಖಂಡರು, ಈ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ನಿಜಕ್ಕೂ ಅಕ್ಷಮ್ಯ, ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು ಎಂದರು.

ಅತ್ಯಾಚಾರ ಎಸಗಿದ ಆರೋಪಿಗಳಿಗೆ ತುರ್ತಾಗಿ ಕಠಿಣ ಶಿಕ್ಷೆ ವಿಧಿಸುವಂತೆ ಅವರುಗಳು ಸರ್ಕಾರವನ್ನು ಒತ್ತಾಯಿಸಿದರು. ಐದು ಬೇಡಿಕೆಗಳ ಮನವಿಪತ್ರವನ್ನು ತಹಶೀಲ್ದಾರ್‌ಗೆ ಅರ್ಪಿಸಿದರು. ನಾಗರಿಕ ಸಮಿತಿಯ ಅಧಕ್ಷ ಬಿ.ಈರಣ್ಣ, ಎಚ್.ಕೆ.ಮಲ್ಲಿಕಾರ್ಜುನಯ್ಯ, ಡಾ.ಮಧುಸೂಧನ ಕಾರಿಗನೂರು, ವೀರಣ್ಣ ಪತ್ತಾರ್, ಕೆ.ನಾಗನಗೌಡ, ಜಿ. ವೆಂಕಟಗಿರಿಯಪ್ಪ, ಎಂ.ಪಂಪಾಪತಿ, ಎಚ್.ಜೆ. ಹನುಮಂತಯ್ಯ, ಡಿ. ಮಲ್ಲಿಕಾರ್ಜುನ, ಪ್ರೇಮಾಕುಂದರಗಿ, ಕೆ.ಪುಷ್ಪಾವತಿ, ಡಾ.ಗಂಗಮ್ಮ, ಸರ್ವಮಂಗಳ, ಶ್ರೀಧರ, ಎಲಿಗಾರ ವೆಂಕಟೇಶ, ರಮಾ, ಡಾ. ಅಚ್ಯುತ್‌ಕುಮಾರ್ ಮತ್ತಿತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.

`ಗಲ್ಲು ಶಿಕ್ಷೆ ವಿಧಿಸಿ'
ಕೂಡಿಗ್ಲಿ: ಸಾಮೂಹಿಕ ಅತ್ಯಾಚಾರವೆಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಪಟ್ಟಣದ ಎಡೆಯೂರು  ಸಿದ್ಧಲಿಂಗೇಶ್ವರ ವಿದ್ಯಾಪೀಠದ ಆಡಳಿತಾಧಿಕಾರಿ ರಶ್ಮಿ ರವೀಂದ್ರಕುಮಾರ ಆಗ್ರಹಿಸಿದರು.

ಅತ್ಯಾಚಾರ ಖಂಡಿಸಿ ಗುರುವಾರ ಪಟ್ಟಣದ ಎಡೆಯೂರು ಶ್ರಿ ಸಿದ್ದಲಿಂಗೇಶ್ವರ ವಿದ್ಯಾಪೀಠದ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜು ವಿದ್ಯಾರ್ಥಿಗಳು ನಡೆಸಿದ ಜನ ಜಾಗೃತಿ ಮೆರವಣಿಗೆಯಲ್ಲಿ ಮಾತನಾಡಿದರು.

ದೆಹಲಿಯ ಅತ್ಯಾಚಾರ ಪ್ರಕರಣವು ಇಡೀ ಮಾನವ ಕುಲವೇ ತಲೆ ತಗ್ಗಿಸುವ ಘಟನೆಯಾಗಿದ್ದು, ಇನ್ನು ಮುಂದೆ ಇಂತಹ ಕೃತ್ಯಗಳನ್ನು ನಡೆಸುವವರ ವಿರುದ್ಧ ಉಗ್ರ ಕ್ರಮಗಳನ್ನು ಕೈಗೊಳ್ಳುವಂತಹ ಕಾನೂನುಗಳನ್ನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು.

ಜ್ಞಾನಭಾರತಿ ಶಾಲೆಯ ಆವರಣದಿಂದ ಹೊರಟ ವಿದ್ಯಾರ್ಥಿಗಳ ಜನಜಾಗೃತಿ ಮೆರವಣಿಗೆ, ಗಾಂಧೀಜಿಯವರ ಪವಿತ್ರ ಚಿತಾಭಸ್ಮ ಸ್ಮಾರಕದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿಸಂಚರಿಸಿ, ಮದಕರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ನಂತರ ಒಂದು ನಿಮಿಷದ ಮೌನಾಚರಣೆ ಮಾಡುವುದರ ಮೂಲಕ ಮೃತ ಯುವತಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಜಾತಪ್ಪ, ಕರಿಬಸಮ್ಮ, ಮುಖ್ಯ ಶಿಕ್ಷಕರಾದ ಜಿ.ಓಬಳೇಶ್, ಗುಪ್ಪಾಲ್ ಕೊಟ್ರೇಶ್, ಮಂಜುನಾಥ, ಮಮತ, ದೈಹಿಕ ಶಿಕ್ಷಕ ನಾಗೇಂದ್ರ, ಕೆ.ಎಚ್.ಮಠದ್ ಹಾಗೂ ಶಿಕ್ಷಕರು, ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT