ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ ಆತ್ಮಹತ್ಯೆ: ರಾಮಯ್ಯ ಕಾಲೇಜಿಗೆ ನೋಟಿಸ್

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಂ.ಎಸ್. ರಾಮಯ್ಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿ ದುರುಗೇಶ್ ಕನ್ವರ್ ಶೆಖಾವತ್ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಇನ್ನಾವುದೇ ಸ್ವತಂತ್ರ ತನಿಖಾ ದಳದ ತನಿಖೆಗೆ ವಹಿಸಿಕೊಡುವಂತೆ ಕೋರಿ ಅವರ ತಂದೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕಳೆದ ಮಾರ್ಚ್ 22ರಂದು ನಡೆದಿರುವ ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಕಾಲೇಜಿನ ಡೀನ್ ಡಾ.ಎಸ್.ಕುಮಾರ್, ಅಧ್ಯಕ್ಷ ಎಂ.ಆರ್.ಜಯರಾಮ್ ಸೇರಿದಂತೆ ಇತರ ಪ್ರತಿವಾದಿಗಳಿಗೆ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ನೋಟಿಸ್ ಜಾರಿಗೆ ಮಂಗಳವಾರ ಆದೇಶಿಸಿದ್ದಾರೆ.

ಮಧ್ಯಪ್ರದೇಶ ಮೂಲದ ದುರುಗೇಶ್ ಅವರು ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ಪದವಿಯಲ್ಲಿ ಕಲಿಯುತ್ತಿದ್ದರು. ಇವರು ಕಾಲೇಜಿನ `ತ್ರಿವೇಣಿ ಸ್ತ್ರೀಯರ ವಸತಿಗೃಹ~ದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪವನ್ನು ಇವರು ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಪರೀಕ್ಷೆ ತೆಗೆದುಕೊಳ್ಳಲು ಕಾಲೇಜು ಅನುಮತಿ ನೀಡಿರಲಿಲ್ಲ. ಅಷ್ಟೇ ಅಲ್ಲದೇ ಅವರನ್ನು ವಸತಿಗೃಹದಿಂದ ತೆಗೆದುಹಾಕಲಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ವರದಿ ತಿಳಿಸುತ್ತದೆ.

ತಮ್ಮ ಮಗಳ ವಿರುದ್ಧ ವಿನಾಕಾರಣ ಆರೋಪ ಹೊರಿಸಲಾಗಿದೆ ಎನ್ನುವುದು ಅವರ ತಂದೆ ಹನುಮಾನ್ ಸಿಂಗ್ ಶೆಖಾವತ್ ಅವರ ಆರೋಪ. ಪ್ರತಿಭಾನ್ವಿತೆಯಾಗಿದ್ದ ತಮ್ಮ ಮಗಳು ನಕಲು ಮಾಡಲು ಸಾಧ್ಯವೇ ಇಲ್ಲ ಎಂದಿರುವ ಅವರು, ಪುತ್ರಿಯು ಎಸ್ಸೆಸ್ಸೆಲ್ಸಿ, ಪಿಯುಸಿ, ಕಾಮೆಡ್-ಕೆ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ತೆಗೆದುಕೊಂಡಿರುವ ಅತ್ಯಧಿಕ ಅಂಕಗಳ ಕುರಿತು ಅಂಕಪಟ್ಟಿಯ ದಾಖಲೆಗಳನ್ನು ನೀಡಿದ್ದಾರೆ.

`ಕಾಲೇಜಿನ ವಿರುದ್ಧ ದೂರು ದಾಖಲಿಸಿಕೊಳ್ಳಲು ಸಂಜಯನಗರ ಪೊಲೀಸರು ನಿರಾಕರಿಸಿದರು. ಸುಮ್ಮನೆ ದೂರನ್ನು ವಾಪಸ್ ಪಡೆದುಕೊಳ್ಳುವಂತೆ ತಿಳಿಸಿದರು. ಇದರಿಂದ ಬೇರೆ ದಾರಿ ಕಾಣದೆ ಕೋರ್ಟ್ ಬಾಗಿಲಿಗೆ ಬಂದಿದ್ದೇನೆ~ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.

ವಿಚಾರಣೆ ಮುಂದೂಡಿಕೆ:  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಅಳಿಯ ಆರ್.ಎನ್. ಸೋಹನ್ ಕುಮಾರ್ ವಿರುದ್ಧ ಭೂಹಗರಣದ ತನಿಖೆಯ ಕುರಿತಾದ ಮುಖ್ಯ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಬುಧವಾರಕ್ಕೆ ಮುಂದೂಡಿದೆ. ಇವರಿಬ್ಬರ ವಿರುದ್ಧ ವಕೀಲ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ದೂರು ಇದಾಗಿದೆ. ಅದರಂತೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ-ಐಜಿಪಿ) ಹುದ್ದೆಗೆ ಸಂಬಂಧಿಸಿದಂತೆ ಇರುವ ಅರ್ಜಿಯ ವಿಚಾರಣೆಯನ್ನೂ ಬುಧವಾರಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT