ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಉತ್ಪಾದನೆ: ದುಬೈ ತಂಡದ ಸಲಹೆ

ಮಂಡೂರು - ಮಾವಳ್ಳಿಪುರದಲ್ಲಿ ತ್ಯಾಜ್ಯದ ರಾಶಿಯಿಂದ ಅಪಾರ ಮಿಥೇನ್
Last Updated 3 ಆಗಸ್ಟ್ 2013, 19:31 IST
ಅಕ್ಷರ ಗಾತ್ರ

ಬೆಂಗಳೂರು: `ಮಂಡೂರು ಮತ್ತು ಮಾವಳ್ಳಿಪುರದಲ್ಲಿ ಸಂಗ್ರಹವಾಗಿರುವ ತ್ಯಾಜ್ಯದ ರಾಶಿಯಿಂದ ಅಪಾರ ಪ್ರಮಾಣದ ಮಿಥೇನ್ ವ್ಯರ್ಥವಾಗಿ ವಾತಾವರಣ ಸೇರುತ್ತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡರೆ ನಿತ್ಯ 125 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ' ಎಂದು ಜರ್ಮನಿಯ ಎಸ್‌ಇಎಫ್ ಎನರ್ಜಿಟೆಕ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಡಾ.ಆರ್ನ್ಡ್ ಸೇಫರ್ಟ್ ಹೇಳಿದರು.

ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗವು ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಳೆದ ಎರಡು ದಿನಗಳಲ್ಲಿ ಮಂಡೂರು ಮತ್ತು ಮಾವಳ್ಳಿಪುರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ್ದೇವೆ. ಎರಡೂ ಕಡೆಗಳಲ್ಲಿ ಅಪಾರದ ಪ್ರಮಾಣದ ಮಿಥೇನ್ ವಾತಾವರಣ ಸೇರುತ್ತಿರುವುದು ಗೊತ್ತಾಗಿದೆ. ಈ ಮಿಥೇನ್ ಸದುಪಯೋಗ ಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕು' ಎಂದರು.

`ಮಂಡೂರು ಮತ್ತು ಮಾವಳ್ಳಿಪುರಗಳಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡದೇ ಇರುವುದರಿಂದ ಪರಿಸರ ಹಾಳಾಗಿದೆ. ಅಲ್ಲಿನ ಅಂತರ್ಜಲ ಮಲಿನಗೊಂಡಿದೆ. ಕೆಟ್ಟವಾಸನೆ ವಾತಾವರಣ ತುಂಬಿದೆ. ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಮಿಥೇನ್ ಪ್ರಮಾಣ ಹೆಚ್ಚಾಗಿರುವುದರಿಂದ, ಮಿಥೇನ್‌ಗೆ ಬೆಂಕಿ ತಗುಲಿದರೆ ಇಡೀ ತ್ಯಾಜ್ಯ ರಾಶಿ ಹೊತ್ತಿ ಉರಿಯುವ ಸಂಭವವೂ ಇದೆ' ಎಂದು ಹೇಳಿದರು.

ದುಬೈನ ಗ್ರೀನ್ ಎನರ್ಜಿ ಸಂಸ್ಥೆಯ ವ್ಯವಹಾರ ಅಭಿವೃದ್ಧಿ ವಿಭಾಗದ ನಿರ್ದೇಶಕಿ ಅನಿತಾ ನೂರಿ ಮಾತನಾಡಿ, `ದುಬೈ ನಗರದ ಅಲ್- ಕ್ವಾಯಿಸ್ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 2012ರಲ್ಲಿ ಮಂಡೂರಿನಂತೆಯೇ ತ್ಯಾಜ್ಯ ರಾಶಿಯಾಗಿ ಬಿದ್ದಿತ್ತು. ದುಬೈ ನಗರ ಪಾಲಿಕೆ ಈ ತ್ಯಾಜ್ಯ ಸಂಸ್ಕರಣೆಯ ಜವಾಬ್ದಾರಿಯನ್ನು ನಮ್ಮ ಸಂಸ್ಥೆಗೆ ವಹಿಸಿತು. ಒಂದು ವರ್ಷದ ಅವಧಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ವಚ್ಛವಾಗಿಸುವ ಜತೆಗೆ, ತ್ಯಾಜ್ಯದಿಂದ ಹೊರಬರುವ ಮಿಥೇನ್‌ನಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ' ಎಂದು ತಿಳಿಸಿದರು.

`ದುಬೈನಲ್ಲಿ ಕೂಡಾ ಬೆಂಗಳೂರಿನಂತೆಯೇ ಹಸಿ ಹಾಗೂ ಒಣ ತ್ಯಾಜ್ಯ ಮಿಶ್ರಣಗೊಂಡ ಕಸದ ರಾಶಿ ನಿರ್ಮಾಣವಾಗಿತ್ತು. ಅಲ್ಲಿನ ಒಟ್ಟು ತ್ಯಾಜ್ಯದಲ್ಲಿ ಹಸಿ ಕಸ ಶೇ 35ರಷ್ಟಿತ್ತು. ಇಲ್ಲಿನ ಒಟ್ಟು ತ್ಯಾಜ್ಯದಲ್ಲಿ ಶೇ 65ರಷ್ಟು ತ್ಯಾಜ್ಯವಿರುವುದರಿಂದ ಹೆಚ್ಚಿನ ಮಿಥೇನ್ ಉತ್ಪಾದನೆಯಾಗುತ್ತಿದೆ. ಇದರಿಂದ ಗೋಬರ್ ಗ್ಯಾಸ್ ಉತ್ಪಾದಿಸಬಹುದು. ಅಲ್ಲದೇ ಹಸಿ ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸಲೂ ಅವಕಾಶವಿದೆ' ಎಂದರು.

ಹಾಫ್‌ಸೆಟ್ಟರ್ ಸಂಸ್ಥೆಯ ಎಂಜಿನಿಯರ್ ಪೀಟರ್ ಸ್ಪಿಲ್‌ಮನ್ ಮಾತನಾಡಿ, `ಮಂಡೂರು ಮತ್ತು ಮಾವಳ್ಳಿಪುರದಲ್ಲಿ ದುಬೈ ಮಾದರಿಯಲ್ಲಿ ಮಿಥೇನ್‌ನಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ಜಾರಿಗೆ ತರಲು ಸುಮಾರು ರೂ 50 ಕೋಟಿ ಬೇಕಾಗುತ್ತದೆ. ರಾಜ್ಯ ಸರ್ಕಾರ ಯೋಜನೆಯನ್ನು ಅಳವಡಿಸಿಕೊಳ್ಳಲು ಒಪ್ಪಿದರೆ ಅಗತ್ಯ ತಾಂತ್ರಿಕ ಸಹಕಾರ ನೀಡುತ್ತೇವೆ' ಎಂದು ಅವರು ಹೇಳಿದರು.

ಪ್ರಾಧಿಕಾರ ರಚಿಸಲು ಮನವಿ
`ವಿದೇಶಿ ತಜ್ಞರ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರವೇ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಬೇಕು. ರಾಜಧಾನಿಯ ಕಸ ವಿಲೇವಾರಿಗಾಗಿಯೇ ಪ್ರತ್ಯೇಕ ಪ್ರಾಧಿಕಾರವೊಂದನ್ನು ರಚಿಸಬೇಕು' ಎಂದು ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ ಮನವಿ ಮಾಡಿದರು.

`ಮುಖ್ಯಮಂತ್ರಿಯವರ ನೇರ ಉಸ್ತುವಾರಿಯಲ್ಲಿ ಪ್ರಾಧಿಕಾರವು ಕಾರ್ಯನಿರ್ವಹಿಸಬೇಕು. ಇದರಿಂದ ನಾಗರಿಕರಿಗೆ ಕೊಟ್ಟ ಮಾತಿನಂತೆ ಆದಷ್ಟು ಬೇಗ ನಗರದಲ್ಲಿ ಕಸ ಮುಕ್ತ ವಾತಾವರಣವನ್ನು ನಿರ್ಮಿಸಬಹುದು' ಎಂದು ಅವರು ಅಭಿಪ್ರಾಯಪಟ್ಟರು.

ದುಬೈನಲ್ಲಿ ಮಾಡಿದ್ದೇನು?
`ದುಬೈನ ತ್ಯಾಜ್ಯ ವಿವೇವಾರಿ ಘಟಕದಲ್ಲಿಯೂ ಮಂಡೂರಿನಂತೆಯೇ ತ್ಯಾಜ್ಯ ರಾಶಿ ಬಿದ್ದಿತ್ತು. ಆ ತ್ಯಾಜ್ಯವನ್ನು ಪದರ ಪದರವಾಗಿ ಹರಡಿ, ನಾಲ್ಕು ಮೀಟರ್ ಅಂತರದಲ್ಲಿ ಕಾಲುವೆ ತೆಗೆಯಲಾಯಿತು. ಈ ಕಾಲುವೆಗೆ ಸಣ್ಣ ರಂಧ್ರಗಳುಳ್ಳ ಪೈಪ್ ಅಳವಡಿಸಿ, ಇಡೀ ತ್ಯಾಜ್ಯ ವಿಲೇವಾರಿ ಘಟಕದ ಮೇಲೆ ಪ್ಲಾಸ್ಟಿಕ್ ಹಾಳೆಗಳನ್ನು ಹಾಸಲಾಯಿತು.

ಇದರಿಂದ ಕಸದಿಂದ ಉತ್ಪಾದನೆಯಾಗುವ ಮಿಥೇನ್ ಪೈಪ್‌ಗಳ ಮೂಲಕ ಸಂಗ್ರಹಗೊಂಡು ಒಂದೆಡೆ ಸಂಗ್ರಹವಾಗುವಂತಾಯಿತು. ಸಂಗ್ರಹಗೊಂಡ ಮಿಥೇನ್‌ನಿಂದ ಸದ್ಯ ನಿತ್ಯ 20 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ' ಎಂದು ಅನಿತಾ ನೂರಿ ತಿಳಿಸಿದರು.

`ತ್ಯಾಜ್ಯ ವಿಲೇವಾರಿ ಘಟಕದ ಕೆಳಗೆ ಹಾಗೂ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಹಾಳೆ ಹಾಸುವುದರಿಂದ ಕಸದ ಮೇಲೆ ಮಳೆ ನೀರು ಬಿದ್ದು, ದ್ರವರೂಪದ ತ್ಯಾಜ್ಯ ಅಂತರ್ಜಲ ಸೇರುವುದನ್ನು ತಪ್ಪಿಸಬಹುದು. ಮಿಥೇನ್ ವ್ಯರ್ಥವಾಗಿ ವಾತಾವರಣ ಸೇರುವುದಿಲ್ಲ. ಅಲ್ಲದೇ ಕೆಟ್ಟವಾಸನೆಯೂ ಇರುವುದಿಲ್ಲ. ಈ ಯೋಜನೆಯ ನಂತರ ದುಬೈ ನಗರ ಪಾಲಿಕೆ ತ್ಯಾಜ್ಯ ನಿರ್ವಹಣೆಯನ್ನು ಗುತ್ತಿಗೆ ನೀಡದೇ ತಾನೇ ನಿರ್ವಹಿಸುತ್ತಿದೆ' ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT