ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಕಾರ್ಖಾನೆಯಲ್ಲಿ ರೈಲು ಬೋಗಿ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ವಿಮಾನ ತಯಾರಿಕಾ ನಕ್ಷೆಯಲ್ಲಿ ಭಾರತಕ್ಕೆ ಖ್ಯಾತಿ ತಂದು ಕೊಟ್ಟಿರುವ ಎಚ್‌ಎಎಲ್ ವಾಸ್ತವವಾಗಿ ಆರಂಭಗೊಂಡಿದ್ದು ಕಾರು ತಯಾರಿಕಾ ಸಂಸ್ಥೆಯಾಗಿ. ಆದರೆ ಮುಂದೆ ಅದು ವಿಮಾನ ತಯಾರಿಕಾ ಕಾರ್ಖಾನೆಯಾಗಿ ಬದಲಾಯಿತು. ಇದೇ ವಿಮಾನ ತಯಾರಿಕಾ ಕಂಪನಿ ರೈಲು ಬೋಗಿಗಳನ್ನೂ ಉತ್ಪಾದಿಸುತ್ತಿತ್ತು ಎಂಬ ವಿಚಾರಕ್ಕೆ ಬಹಳಷ್ಟು ಪ್ರಚಾರ ಸಿಕ್ಕಿಲ್ಲ.

ಇದು ನಿಜ. ಎಚ್‌ಎಎಲ್ 1964 ರವರೆಗೂ ರೈಲ್ವೆ ಬೋಗಿಗಳನ್ನು ನಿರ್ಮಿಸುತ್ತಿತ್ತು. ಈ ಸಿದ್ಧ ಬೋಗಿಗಳ ಸಾಗಾಟಕ್ಕೆ ಕಂಟೋನ್ಮೆಂಟ್‌ನಿಂದ ಹೆಚ್‌ಎಎಲ್ ಕಾರ್ಖಾನೆ (ಎಚ್‌ಎಎಲ್ ವಿಮಾನ ನಿಲ್ದಾಣ) ವರೆಗೆ ಹಳಿಗಳು ಇದ್ದವು. ರೈಲು ಓಡಾಡುತ್ತಿತ್ತು, ಜನರೂ ಪ್ರಯಾಣಿಸುತ್ತಿದ್ದರು. ಸ್ಟೇಷನ್ ಕೂಡ ಇತ್ತು. ಹಿಂದೆ ರೈಲು ಮಾರ್ಗವಿದ್ದ ಜಾಗ ಈಗ ಉದ್ಯಾನವಾಗಿದೆ. ಹಸಿರು ತುಂಬಿಕೊಂಡಿದೆ. ಅಲ್ಲಲ್ಲಿ ರೈಲು ಹಳಿ ಇಣುಕುತ್ತದೆ.

ಎಚ್‌ಎಎಲ್‌ನಲ್ಲಿದ್ದ ರೈಲ್ವೆ ತಯಾರಿಕಾ ಘಟಕವನ್ನು ಪ್ರತ್ಯೇಕಿಸಿ ರೈಲು ಕೋಚ್ ನಿರ್ಮಾಣಕ್ಕಾಗಿ ಬಿಇಎಂಎಲ್ (ಭಾರತ್ ಅರ್ಥ್ ಮೂವರ್ಸ್‌ ಲಿಮಿಟೆಡ್) ಕಾರ್ಖಾನೆಯನ್ನು ಕೇಂದ್ರ ರಕ್ಷಣಾ ಇಲಾಖೆ 1964ರ ಮೇ ನಲ್ಲಿ ಆರಂಭಿಸಿತು.

ಹಳೇ ಮದ್ರಾಸ್ ರಸ್ತೆಯಿಂದ ಬೆಮೆಲ್ ಕಾರ್ಖಾನೆಯೊಳಕ್ಕೆ ರೈಲು ಹಳಿಗಳು ಈಗಲೂ ಇವೆ. ತಯಾರಾದ ಬೋಗಿಗಳ ಸಾಗಣೆಗೆ ಇವು ಬಳಕೆಯಾಗುತ್ತಿವೆ.

ಬೆಮೆಲ್ ಹೆಗ್ಗಳಿಕೆ
ಭಾರತೀಯ ರೈಲ್ವೆಗೆ ಪ್ರಯಾಣಿಕರ ಹಾಗೂ ಸರಕು ಸಾಗಾಣೆ ಬೋಗಿಗಳನ್ನು ತಯಾರಿಸುತ್ತಿರುವ ಬೆಮೆಲ್ ವಿದೇಶಿ ರೈಲು ಸಂಸ್ಥೆಗಳಿಗೂ ಬೋಗಿ ನಿರ್ಮಿಸುವ ಬೇಡಿಕೆ ಹೊಂದಿದೆ. ಇದರೊಂದಿಗೆ ಭಾರತೀಯ ಮೆಟ್ರೊ ಸಂಪರ್ಕ ನಿರ್ಮಾಣದಲ್ಲೂ ಬೆಮೆಲ್ ಪ್ರಮುಖ ಪಾತ್ರ ವಹಿಸುತ್ತಿದೆ. ಬೆಂಗಳೂರಿನ ಬೆಮೆಲ್‌ಗೆ ನವದೆಹಲಿಯ ಮೆಟ್ರೊಗೆ 22 ಬೋಗಿಗಳನ್ನು ತಯಾರಿಸಿಕೊಟ್ಟ ಹೆಗ್ಗಳಿಕೆ ಇದೆ.

ಬೆಂಗಳೂರಿನ `ನಮ್ಮ ಮೆಟ್ರೊ~ಗೂ ಬೋಗಿಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿರುವ ಬೆಮೆಲ್ ದೇಶದ ಇತರೆಡೆ ನಿರ್ಮಾಣ ಹಂತದಲ್ಲಿರುವ ಮೆಟ್ರೊ ಜಾಲಕ್ಕೂ ಬೋಗಿಗಳನ್ನು ಒದಗಿಸುವ ಹೊಣೆ ಪಡೆದುಕೊಂಡಿದೆ.

ಸ್ವಾತಂತ್ರ್ಯಾ ನಂತರ ದೇಶಕ್ಕೆ ಐವರು ರೈಲ್ವೆ ಮಂತ್ರಿಗಳನ್ನು ನೀಡಿದ ಕರ್ನಾಟಕದಲ್ಲಿ ರೈಲ್ವೆ ಇಲಾಖೆ ಪ್ರಾರಂಭಿಸಿದ ಏಕೈಕ ಕಾರ್ಖಾನೆ ಎಂದರೆ ಯಲಹಂಕದ ಗಾಲಿ ಮತ್ತು ಅಚ್ಚು ತಯಾರಿಕಾ ಘಟಕ. 1984 ರಲ್ಲಿ ಇದು ಆರಂಭಗೊಂಡು ಭಾರತೀಯ ರೈಲ್ವೆಗಳಿಗೆ ಗಾಲಿ ಹಾಗೂ ಅಚ್ಚು ಸಿದ್ಧಪಡಿಸುವುದರ ಜೊತೆಗೆ ಅಮೆರಿಕದಲ್ಲೂ ತನ್ನ ಉತ್ಪಾದನೆಗೆ ಬೇಡಿಕೆ ಹೊಂದಿರುವುದು ಒಂದು ವಿಶೇಷ.

ರೈಲ್ವೆ ಸೌಲಭ್ಯಗಳಲ್ಲಿ ಸದಾ ಅವಜ್ಞೆಗೆ ಒಳಗಾಗುತ್ತಲೇ ಇರುವ ಕರ್ನಾಟಕಕ್ಕೆ ಪ್ರಸ್ತುತ ರೈಲು ಮುಂಗಡ ಪತ್ರದಲ್ಲಿ ವ್ಯಾಗನ್ ನಿರ್ಮಾಣ ಘಟಕ ಮಂಜೂರಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರೈಲು ಸೌಕರ್ಯದ ವಿಷಯದಲ್ಲಿ ಕರ್ನಾಟಕಕ್ಕೆ ಹೆಚ್ಚು ಸಿಕ್ಕಿಲ್ಲ ಎಂಬ ಕೊರಗು ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT