ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದ ರೋಮಾಂಚನ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

`ಅದು ಗಾಳಿಯಲ್ಲಿ ತುಂಬಾ ಚಿಕ್ಕದಾಗಿ ಆದರೆ ಅಷ್ಟೇ ಮನೋಹರವಾಗಿ ಕಾಣುತ್ತಿದೆ~ ಎಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ತಮ್ಮ ಎಂದಿನ ಅನನ್ಯ ಶೈಲಿಯಲ್ಲಿ ಮೃದುವಾಗಿ ಉಚ್ಚರಿಸಿದ್ದರು. ಈಗ್ಗೆ 50 ವರ್ಷಗಳ ಹಿಂದೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ!

ಹೌದು. ದೇಶೀಯವಾಗಿ ವಿನ್ಯಾಸಗೊಂಡ ಹಾಗೂ ಇಲ್ಲೇ ತಯಾರಾದ ಎಚ್‌ಎಫ್-24 ಜೆಟ್ ಫೈಟರ್ 1961 ಜೂನ್ 17ರಂದು ಆಗಸದಲ್ಲಿ ಚೊಚ್ಚಲ ಹಾರಾಟ ನಡೆಸುತ್ತ ಶಕ್ತಿ ಸಾಮರ್ಥ ಪ್ರದರ್ಶಿಸುತ್ತ್ದ್ದಿದು ನೋಡಿ ನೆಹರೂಜಿ ಮಾತ್ರವಲ್ಲ ಅಲ್ಲಿದ್ದವರೆಲ್ಲ ಖುಷಿಯಾಗಿದ್ದರು. ಬೆರಗಾಗಿ ಅಭಿಮಾನದಿಂದ ವೀಕ್ಷಿಸಿದ್ದರು.

ಎಚ್‌ಎಫ್-24ನಲ್ಲಿ ಪೈಲಟ್ ತೋರುತ್ತಿದ್ದ ಕಸರತ್ತು ರೋಮಾಂಚಕಾರಿಯಾಗಿತ್ತು. ಭೂಮಿಯಿಂದ 20 ಸಾವಿರ ಮೀಟರ್ ಮೇಲೆರುವ ಮತ್ತು ಡಿಢೀರನೇ ಕೆಳಕ್ಕೆ ಇಳಿಯುವ ವೈಮಾನಿಕ ಕೌತುಕವನ್ನು ವೀಕ್ಷಿಸಿ ನೆಹರು ಅಂದು ಭಾರಿ ಹರ್ಷಗೊಂಡಿದ್ದರು.

ಅದು ಹಿಂದುಸ್ತಾನ್ ಏರ್‌ಕ್ರಾಫ್ಟ್ ಲಿಮಿಟೆಡ್‌ಗೆ ಒಂದು ಅವಿಸ್ಮರಣೀಯ ಕ್ಷಣ. ಇಡೀ ದೇಶಕ್ಕೆ ಕೂಡ. ಅದಕ್ಕೆ ಪ್ರಮುಖ ಕಾರಣ ಇಡೀ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಬಾರಿಗೆ ಸೂಪರ್‌ಸಾನಿಕ್ ಫೈಟರ್ ಸಿದ್ಧಪಡಿಸಿದ ಕೀರ್ತಿ ಅದಕ್ಕೆ ದಕ್ಕಿತ್ತು. ಈ ಫೈಟರ್‌ಗೆ (ಯುದ್ಧ ವಿಮಾನ) ನೆಹರು ಅವರು ಭಗವದ್ಗೀತೆಯಲ್ಲಿ ಬರುವ `ಮಾರುತ್~ ಎಂದು ನಾಮಕರಣ ಮಾಡಿದ್ದರು. ಇದರ ವೇಗ ಬಿರುಗಾಳಿಯಂತೆ ಅತ್ಯಂತ ರಭಸವಾಗಿದ್ದುದರಿಂದ ಈ ಹೆಸರು ಸೂಚಿಸಿರಬಹುದು. ಮಾರುತ್‌ನ ಶಕ್ತಿ ಮತ್ತು ರಭಸವನ್ನು ಕಂಡು ಹಿಂದುಸ್ತಾನ್ ಏರ್‌ಕ್ರಾಫ್ಟ್‌ನ ಸಿಬ್ಬಂದಿ ಹಾಗೂ ಅಧಿಕಾರಿಗಳು ರನ್‌ವೇನಲ್ಲಿ ಸಾಲಾಗಿ ನಿಂತು ಹರ್ಷೋದ್ಗಾರ ಮಾಡುತ್ತ ಚಪ್ಪಾಳೆ ತಟ್ಟುತ್ತಿದ್ದರು.

1940ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಗೊಂಡ ಹಿಂದೂಸ್ತಾನ್ ಏರ್‌ಕ್ರಾಫ್ಟ್ ಇಂದು ಎಚ್‌ಎಎಲ್ ಎಂದು ಜಗತ್ಪ್ರಸಿದ್ಧಿ ಪಡೆದಿದೆ. ರಾಜಸ್ತಾನಿ ವ್ಯಾಪಾರಿಗಳಾದ ಲಾಲ್‌ಚಂದ್ ಹೀರಾಚಂದ್ ಮತ್ತು ವಾಲ್‌ಚಂದ್ ಹೀರಾಚಂದ್ ಅವರು ವಿಮಾನ ಕಾರ್ಖಾನೆ ಸ್ಥಾಪಿಸಲು ಸೂಕ್ತ ಜಾಗಕ್ಕೆ ಹುಡುಕಾಟ ನಡೆಸುತ್ತಿದ್ದರು. ಅಂದಿನ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಅವಕಾಶವನ್ನು ಮುಂದಿಟ್ಟುಕೊಂಡು ಅವರನ್ನು ಬೆಂಗಳೂರಿಗೆ ಆಹ್ವಾನಿಸಿ ಭೂಮಿ ಮತ್ತಿತರ ಸೌಕರ್ಯ ಒದಗಿಸಿಕೊಟ್ಟರು.

ಮೈಸೂರು ಮಹಾರಾಜರಿಗೆ  ಹಾಗೂ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾ ಇಸ್ಮಾಯಿಲ್ ಅವರಿಗೆ ಕೈಗಾರಿಕೀಕರಣವೊಂದೇ ತ್ವರಿತ ಅಭಿವೃದ್ಧಿಯ ಮಾರ್ಗ ಎಂಬುದು ದೃಢವಾಗಿ ಗೊತ್ತಿತ್ತು.

ಬ್ರಿಟಿಷ್ ವಾಯುಪಡೆ ಆರ್‌ಐಎಎಫ್ ಸೇವೆ ನೀಡುವ ಮೂಲಕ ಪ್ರಾರಂಭಗೊಂಡ ಏರ್‌ಕ್ರಾಫ್ಟ್ ಕಾರ್ಖಾನೆ, 1947ರಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಎಂಬ ಹೆಸರಿನೊಂದಿಗೆ ಸರ್ಕಾರದ ಅಧೀನಕ್ಕೆ ಬಂತು.

ಎಚ್‌ಎಫ್-24 ಉದ್ಘಾಟನಾ ಸಮಾರಂಭದ ವೇಳೆ `ಪಿ ಎಂ~ (ಪ್ರೈಮ್ ಮಿನಿಸ್ಟರ್) ನೆಹರೂ ಜತೆ ಮತ್ತೊಬ್ಬ ಪಿ ಎಂ ಇದ್ದರು. ಅವರೇ ಪಿ.ಎಂ.ರೆಡ್ಡಿ. ಎಚ್‌ಎಎಲ್‌ನ ಅಂದಿನ ವ್ಯವಸ್ಥಾಪಕ ನಿರ್ದೇಶಕ. ಆಗಸದಲ್ಲಿ ಮೋಡಗಳ ನಡುವೆ ವಿಪರೀತ ಶಬ್ದ ಹೊರಡಿಸುತ್ತಾ ತನ್ನ ಶಕ್ತಿ ಸಾಮರ್ಥ ಪ್ರದರ್ಶಿಸುತ್ತಿದ್ದ ದೃಶ್ಯವನ್ನು ನೆಹರೂ ಆಸ್ವಾದಿಸುತ್ತಿದ್ದರು. ವೈಮಾನಿಕ ಪ್ರದರ್ಶನವನ್ನು ಮತ್ತಷ್ಟು ಹತ್ತಿರದಿಂದ ವೀಕ್ಷಿಸಲಿ ಎಂದು ಪಿ.ಎಂ.ರೆಡ್ಡಿ ಅವರು ತಾವು ಜರ್ಮನಿ ಪ್ರವಾಸದ ವೇಳೆ ಸಂಗ್ರಹಿಸಿದ್ದ ಅಪರೂಪದ ಬೈನಾಕ್ಯುಲರನ್ನು ನೆಹರೂಜಿಗೆ ನೀಡಿದರು.

ಸಮಾರಂಭ ಮುಗಿದ ಮೇಲೆ ನೆಹರೂ ಎಲ್ಲರಿಗೂ ಗುಡ್‌ಬೈ ಹೇಳಿ ಕಾರು ಹತ್ತಿ ಹೊರಟರು. ಕೂಡಲೇ ಪಿ.ಎಂ.ರೆಡ್ಡಿ ಅವರು ನೆಹರೂ ಅವರ ಕಾರನ್ನು ಬೆಂಬತ್ತಿ ಓಡಿದರು. ಇದರಿಂದ ಸೋಜಿಗಗೊಂಡ ನಾನೂ ಕೂಡ ಕ್ಯಾಮೆರಾ ಸಜ್ಜು ಮಾಡಿಕೊಂಡು ಅವರನ್ನು ಬೆನ್ನತ್ತಿದೆ. ನಾವಿಬ್ಬರೂ ಓಡುತ್ತ ಬರುವುದನ್ನು ನೋಡಿಯೋ ಏನೋ ಪ್ರಧಾನಿ ಕಾರು ನಿಲ್ಲಿಸಿದರು. ಆಗ ಈ ಪಿ ಎಂ ಅವರು ಆ ಪಿಎಂಗೆ (ನೆಹರೂ) ಏದುಸಿರುಬಿಡುತ್ತಾ `ಸರ್, ನಾನು ನಿಮಗೆ ಕೊಟ್ಟ ಬೈನ್ಯಾಕ್ಯುಲರ್ ಎಲ್ಲಿ?~ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಕೇಳಿ ಕುಪಿತಗೊಂಡ ನೆಹರೂ ಅವರು  `ನಿಮ್ಮ ಬೈನಾಕ್ಯುಲರ್ ಜೋಪಾನವಾಗಿ ನೋಡಿಕೊಳ್ಳುವ ಕೆಲಸವನ್ನು ನೀವು ಈ ದೇಶದ ಪ್ರಧಾನಿಗೇ ವಹಿಸಿದಂತಿದೆಯಲ್ಲ~ ಎಂದು ಆಕ್ಷೇಪಿಸುವ ಧ್ವನಿಯಲ್ಲಿ ಮುಖಕ್ಕೆ ಹೊಡೆದಂತೆ ಹೇಳಿ ಭುರ‌್ರೆಂದು ಹೊರಟೇ ಬಿಟ್ಟರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT