ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ಕ್ಷೇತ್ರದಲ್ಲೂ ಸುಧಾರಣೆ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಇನ್ನಷ್ಟು ಹೊಸ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ ತನ್ನ ನಿರ್ಧಾರದಲ್ಲಿ ಅಚಲವಾಗಿ ನಿಂತಿರುವ ಕೇಂದ್ರ ಸರ್ಕಾರ, ಪಿಂಚಣಿ ಹಾಗೂ ವಿಮಾ ಕ್ಷೇತ್ರಗಳಲ್ಲಿ ಶೇ 49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಗುರುವಾರ ಅನುಮತಿ ನೀಡಿದೆ.

ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ವಿಮಾ ಕ್ಷೇತ್ರದಲ್ಲಿ ಶೇ 26 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಮಾತ್ರ ಅವಕಾಶವಿತ್ತು.

`ಎಫ್‌ಡಿಐ ಹೆಚ್ಚಳದಿಂದಾಗಿ ವಿಮಾ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಹರಿದು ಬರಲಿದೆ.  ಈ ಕ್ಷೇತ್ರದಲ್ಲಿನ ಖಾಸಗಿ ಕಂಪೆನಿಗಳೂ ಇದರ ಹೆಚ್ಚಿನ ಲಾಭ ಪಡೆಯಲಿವೆ~ ಎಂದು ಹಣಕಾಸು ಸಚಿವ ಪಿ. ಚಿದಂಬರಂ ಸುದ್ದಿಗಾರರಿಗೆ ತಿಳಿಸಿದರು.

ವಿಮಾ ಕ್ಷೇತ್ರದಲ್ಲಿನ ಈ ಪ್ರಸ್ತಾವಕ್ಕೆ ಸಚಿವ ಸಂಪುಟ ಅನುಮೋದನೆ ನೀಡುವುದರೊಂದಿಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಮಾ ಕಾನೂನು (ತಿದ್ದುಪಡಿ) ಮಸೂದೆ ಅಂಗೀಕಾರಕ್ಕಾಗಿ ಚರ್ಚೆಗೆ ಬರಲಿದೆ.

ಪಿಂಚಣಿಗೂ ಎಫ್‌ಡಿಐ: ಪಿಂಚಣಿ ಕ್ಷೇತ್ರದ್ಲ್ಲಲೂ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಸಿರು ನಿಶಾನೆ ತೋರಿಸಿರುವ ಸರ್ಕಾರ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಮಸೂದೆಗೆ ತಿದ್ದುಪಡಿ ತರಲು ಸಮ್ಮತಿಸಿದೆ.

2011ರ ಮಾರ್ಚ್ ತಿಂಗಳಲ್ಲಿ `ಪಿಎಫ್‌ಆರ್‌ಡಿಎ~ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದರ ಬೆನ್ನ ಹಿಂದೆಯೇ ಸೆಪ್ಟೆಂಬರ್ ತಿಂಗಳಲ್ಲಿ ಹಣಕಾಸು ಸ್ಥಾಯಿ ಸಮಿತಿ ತನ್ನ ಶಿಫಾರಸುಗಳನ್ನು ನೀಡಿತ್ತು.

ಜೊತೆಗೆ ಅದರಲ್ಲಿನ ಐದು ಪ್ರಮುಖ ಶಿಫಾರಸುಗಳನ್ನು ಸರ್ಕಾರ ಸ್ವೀಕರಿಸಿತ್ತು ಎಂದು ಚಿದಂಬರಂ ಹೇಳಿದರು.
ಷೇರು ಮಾರುಕಟ್ಟೆಯಲ್ಲಿ ಭಾಗಶಃ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ಈ ಮಸೂದೆಯು ಮುಂದಿನ ಸಂಸತ್ ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

ಮೂಲ ಮಸೂದೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಯಾವುದೇ ಅವಕಾಶವಿರದಿದ್ದುದರಿಂದ ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ ನೇತೃತ್ವದ ಹಣಕಾಸು ಮೇಲಿನ ಸ್ಥಾಯಿ ಸಮಿತಿ ಪಿಂಚಣಿ ಕ್ಷೇತ್ರದಲ್ಲಿ ಗರಿಷ್ಠ ಶೇ 26ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಲು ಶಿಫಾರಸು ಮಾಡಿತ್ತು.

ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ವಿರೋಧಪಕ್ಷಗಳು ಮತ್ತು ಮಿತ್ರಪಕ್ಷಗಳ ತೀವ್ರ ವಿರೋಧದಿಂದಾಗಿ ಈ ಮಸೂದೆಗೆ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. 2012ರ ಜೂನ್ ತಿಂಗಳಲ್ಲಿ ತೃಣಮೂಲ ಕಾಂಗ್ರೆಸ್‌ನ ತೀವ್ರ ವಿರೋಧದಿಂದಾಗಿ ಮಸೂದೆ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದನ್ನು ಸಂಸತ್ ಮುಂದೂಡಿತ್ತು.

ಎಫ್‌ಡಿಐ: ಮಿಶ್ರ ಪ್ರತಿಕ್ರಿಯೆ
ವಿಮೆ ಹಾಗೂ ಪಿಂಚಣಿ ಕ್ಷೇತ್ರಗಳಲ್ಲಿ ಶೇ 49ರಷ್ಟು ವಿದೇಶಿ ನೇರ ಬಂಡಬಾಳ ಹೂಡಿಕೆಗೆ ಅನುಮತಿ ನೀಡಿರುವ ಸಂಪುಟದ ನಿರ್ಧಾರಕ್ಕೆ ರಾಜಕೀಯ ಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಂಪುಟದ ನಿರ್ಧಾರಕ್ಕೆ ಬಿಜೆಪಿ ಷರತ್ತುಬದ್ಧ ಬೆಂಬಲ ನೀಡಿದ್ದು, ತೃಣ ಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT