ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲೀನಕ್ಕೆ ಮುನ್ನವೇ ಕಾಂಗ್ರೆಸ್ ಸದಸ್ಯನಾದೆ! : ಚಿರಂಜೀವಿ

Last Updated 7 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಕೋಲಾರ:  ‘ಪ್ರಜಾರಾಜ್ಯಂ ಪಕ್ಷ ವಿಲೀನಗೊಳಿಸುವ ಮುನ್ನವೇ ನಾನು ಇಲ್ಲಿಗೆ ಬಂದು ದಿಢೀರನೆ ಕಾಂಗ್ರೆಸ್ ಕುಟುಂಬದ ಸದಸ್ಯನಾಗಿಬಿಟ್ಟ ಪುಳಕ ಅನುಭವಿಸುತ್ತಿದ್ದೇನೆ. ಇದು ನಾನು ಪಾಲ್ಗೊಂಡ ಕಾಂಗ್ರೆಸ್ ಪಕ್ಷದ ಮೊದಲ ಬಹಿರಂಗ ಸಭೆ. ನಮ್ಮ ಪಕ್ಷದ ವಿಲೀನಕ್ಕೆ ಇಲ್ಲಿಂದಲೇ ಬೋಣಿಯಾಗಿದೆ’ ಎಂದು ನಟ, ಪ್ರಜಾರಾಜ್ಯಂ ಪಕ್ಷದ ಅಧ್ಯಕ್ಷ ಚಿರಂಜೀವಿ ಹರ್ಷದಿಂದ ನುಡಿದರು.

ಉಪಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕಾಂಗ್ರೆಸ್ ಪಕ್ಷವು ಏರ್ಪಡಿಸಿದ್ದ ರೋಡ್‌ಶೋನಲ್ಲಿ ಪಾಲ್ಗೊಳ್ಳುವ ಮುನ್ನ ನಡೆದ ಬಹಿರಂಗ ಸಮಾವೇಶಲ್ಲಿ ಅವರು ಮಾತನಾಡಿದರು.

ತಮ್ಮನ್ನು ನೋಡಲೆಂದೇ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ನೋಡಿ ಭಾವೋತ್ಕರ್ಷಕ್ಕೆ ಒಳಗಾದ ಚಿರಂಜೀವಿ ಅಚ್ಚ ತೆಲುಗಿನಲ್ಲಿ ಹೃದಯ ತುಂಬಿ ಮಾತನಾಡಿದರು. ‘ಮಿಮ್ಮುನ್ನಿ ಚೂಸ್ತುಂಟೆ ಈ ಚಿರಂಜೀವಿ ಮೀದ ಅಭಿಮಾನಕಿ ಎಲ್ಲಲು ಲೇವು ಅನಿಪಿಸ್ತುಂದಿ. ಇನ್ನಾಳ್ಳು, ಇನ್ನಿ ಸಂವತ್ಸರಾಲು ಮಿಮ್ಮುನ್ನಿ ಎಂದುಕು ಚೂಡಲೇಕ ಪೋಯಾನು ಅನಿ ಅನಿಪಿಸ್ತುಂದಿ’ (ನಿಮ್ಮನ್ನು ನೋಡುತ್ತಿದ್ದರೆ ಚಿರಂಜೀವಿ ಮೇಲಿನ ಅಭಿಮಾನಕ್ಕೆ ಕೊನೆಯೇ ಇಲ್ಲ ಎನಿಸುತ್ತಿದೆ. ಇಷ್ಟು ವರ್ಷ ನಿಮ್ಮ ಹತ್ತಿರಕ್ಕೆ ನಾನು ಯಾಕೆ ಬರಲಿಲ್ಲವೋ ಎನಿಸುತ್ತಿದೆ) ಎಂದರು.

‘ಕಾಂಗ್ರೆಸ್‌ನಲ್ಲಿ ನಾನು ಇನ್ನೂ ಪೂರ್ತಿಯಾಗಿ ಅವತಾರ ಎತ್ತಿಲ್ಲ. ಅದಕ್ಕಿಂತ ಮೊದಲೇ ನಾನು ನೀವು ಮಾನಸಿಕವಾಗಿ ಒಂದಾಗಿಬಿಟ್ಟಿದ್ದೇವೆ. ನಾನು ಕಾಂಗ್ರೆಸ್ ಮನುಷ್ಯನಾದ ಬಳಿಕ ನೀವು ನನಗೆ ಏನಾದರೂ ಕಾಣಿಕೆ ಕೊಡಬೇಕೆಂದರೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ’ ಎಂದು ಮನವಿ ಮಾಡಿದರು.

‘ರಾಷ್ಟ್ರದಾದ್ಯಂತ ನಿಮ್ಮ ಸೇವೆಯನ್ನು ನಾವು ಬಳಸಿಕೊಳ್ಳಲು ಅವಕಾಶ ಕೊಡಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹೇಳಿದಾಗ ನಾನು ಹೆಮ್ಮೆಪಟ್ಟೆ. ಅದಕ್ಕೆ ನಾನು ಮಾತ್ರ ಕಾರಣವಲ್ಲ. ಅತ್ಯದ್ಭುತ ಅಭಿಮಾನ ತೋರಿದ ನಿಮ್ಮಂಥ ಅಭಿಮಾನಿಗಳೇ ಕಾರಣ. ಅದಕ್ಕೆ ನಿಮಗೆ ನಾನು ಕೃತಜ್ಞನಾಗಿರುವೆ’ ಎಂದರು.

‘70 ಲಕ್ಷ ಮತದಾರರ ಬೆಂಬಲವಿರುವ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂದು ಬಹಳಷ್ಟು ಮಂದಿ ಕೇಳುತ್ತಿದ್ದಾರೆ. ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಬೇಕೆಂಬ ಏಕೈಕ ಕಾರಣದಿಂದ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುತ್ತಿರುವೆ. ವ್ಯಕ್ತಿಯಾಗಿ ನನ್ನ ಶಕ್ತಿ, ಮಿತಿ ಅರಿವಾಗಿದೆ’ ಎಂದರು. ಈಗ ಕಾಂಗ್ರೆಸ್ ಮತ್ತು ಪ್ರಜಾರಾಜ್ಯಂ ಪಕ್ಷಕ್ಕೆ ವಿನ್-ವಿನ್ ಸನ್ನಿವೇಶವಿದೆ. ಅಂದರೆ, ವಿಲೀನದಿಂದ ಕಾಂಗ್ರೆಸ್‌ಗೂ ಲಾಭ, ಪ್ರಜಾರಾಜ್ಯಂಗೂ ಲಾಭವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT