ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಸ್ತ್ರಳಾಗಲು ರಾ ಮಾಜಿ ಅಧಿಕಾರಿ ಯತ್ನ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಎರಡು ವರ್ಷಗಳ ಹಿಂದೆ ಪ್ರಧಾನಿ ಕಚೇರಿ ಹೊರಗೆ ಆತ್ಮಹತ್ಯೆಗೆ ಯತ್ನಿಸಿ ದೇಶದ ಗಮನ ಸೆಳೆದಿದ್ದ ದೇಶದ ಪ್ರತಿಷ್ಠಿತ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್(ರಾ)ನ ಮಾಜಿ ಅಧಿಕಾರಿ ನಿಶಾಪ್ರಿಯಾ ಭಾಟಿಯಾ ಗುರುವಾರ ದೆಹಲಿ ಹೈಕೋರ್ಟ್‌ನಲ್ಲಿ ವಿವಸ್ತ್ರಳಾಗಲು ಯತ್ನಿಸಿದ ಅಪರೂಪದ ಘಟನೆ ನಡೆದಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದ ವಿಚಾರಣೆ ಮುಂದೂಡಿದ ನ್ಯಾಯಮೂರ್ತಿಗಳ ವರ್ತನೆಯಿಂದ ಬೇಸತ್ತ ನಿಶಾ ಗುರುವಾರ ಮಧ್ಯಾಹ್ನ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳ ಎದುರೇ ಬಟ್ಟೆ ಕಳಚಿ ಪ್ರತಿಭಟಿಸಲು ಯತ್ನಿಸಿದರು. ತಕ್ಷಣ  ಪೊಲೀಸರು ಅವರ ಯತ್ನವನ್ನು ತಡೆದರು.

ಮಾನಸಿಕವಾಗಿ ಅಸ್ವಸ್ಥರಾಗಿರುವ ಕಾರಣ ಅವರನ್ನು ಮಾನಸಿಕರೋಗ ತಜ್ಞರ ಬಳಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ  ನ್ಯಾಯಮೂರ್ತಿ ಅಜಿತ್ ಬಾರಿಹೋಕ್ ಆದೇಶೀಸಿದರು.
ನ್ಯಾಯಾಲಯ ಕಲಾಪಗಳಿಗೆ ಅಡ್ಡಿ ಮಾಡಿದ ಆರೋಪದ ಮೇಲೆ ಅವರನ್ನು ಜೈಲಿಗೆ ಕಳುಹಿಸಬಹುದು. ಆದರೆ, ಅವರಿಗೆ ಸೂಕ್ತ ಚಿಕಿತ್ಸೆ ಅಗತ್ಯವಿದೆ ಎಂದು ಅವರು ಹೇಳಿದರು. 

ನ್ಯಾಯಮೂರ್ತಿಗಳ ಆದೇಶದಂತೆ ಪೊಲೀಸರು ತಕ್ಷಣ ನಿಶಾ ಅವರನ್ನು ವಶಕ್ಕೆ ತೆಗೆದುಕೊಂಡರು. ಮಗಳನ್ನು ಶಾಲೆಯಿಂದ ಕರೆ ತರಲು ಅವರಿಗೆ ಅವಕಾಶ ಕಲ್ಪಿಸುವಂತೆ ನಿಶಾ  ಪರ ವಕೀಲರು ಮನವಿ ಮಾಡಿದರು.

ತಮ್ಮ ಹಿರಿಯ ಸಹೋದ್ಯೋಗಿ ಮತ್ತು ರಾ ಜಂಟಿ ಕಾರ್ಯದರ್ಶಿ ಅಶೋಕ ಚತುರ್ವೇದಿ ಅವರನ್ನು ಲೈಂಗಿಕ ದೌರ್ಜನ್ಯ ಆರೋಪದಿಂದ ದೆಹಲಿ ಹೈಕೋರ್ಟ್‌ನಿಂದ ಬಿಡುಗಡೆಯಾದದ್ದನ್ನು ಪ್ರಶ್ನಿಸಿ ನಿಶಾ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗುತ್ತಿದೆ ಎಂದು ಆರೋಪಿಸಿ ಅವರು ಈ ಕೃತ್ಯಕ್ಕೆ ಮುಂದಾಗಿದ್ದರು.

ಅನಗತ್ಯವಾಗಿ ಪ್ರಕರಣವನ್ನು ಮುಂದೂಡುತ್ತಿರುವ ಕಾರಣ ರೋಸಿಹೋಗಿ ತಾವು ಈ ರೀತಿ ಪ್ರತಿಭಟಿಸಬೇಕಾಯಿತು ಎಂದು ಅವರು ನಂತರ ಮಾಧ್ಯಮದ ಎದುರು ತಮ್ಮ ಗೋಳು ತೋಡಿಕೊಂಡರು.

ಹಿರಿಯ ಅಧಿಕಾರಿಗಳ ವಿರುದ್ಧ ಲೈಂಗಿಕ ದೌರ್ಜನ್ಯ, ಕಿರುಕುಳ ದೂರು ನೀಡಿದ ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿ ಹಲವು ಪ್ರಕರಣಗಳಲ್ಲಿ ಸಿಲುಕಿಸಿದ್ದಾರೆ ಎಂದು ಅವರು ಆರೋಪಿಸಿದರು. 

ಹಿನ್ನೆಲೆ: ಮಾನವ ಕಳ್ಳಸಾಗಾಣೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಅವರು, ಗುಡಗಾಂವದಲ್ಲಿರುವ ‘ರಾ’ ತರಬೇತಿ ಘಟಕದ ಪ್ರಭಾರ ಅಧಿಕಾರಿಯಾಗಿದ್ದರು. 

ನಿಶಾ ಅವರ ನಡವಳಿಕೆ, ವರ್ತನೆ ವಿರುದ್ಧ ಅವರ ಸಹೋದ್ಯೋಗಿಗಳು ದೂರು ನೀಡಿದ್ದರು. ಹಿರಿಯ ಅಧಿಕಾರಿಗಳಿಗೆ ಅಶ್ಲೀಲ ಎಸ್‌ಎಂಎಸ್ ಕಳುಹಿಸಿದ ಆರೋಪವೂ ಅವರ ಮೇಲಿತ್ತು. ಈ ಮೊದಲು ಅವರನ್ನು ಪರೀಕ್ಷಿಸಿದ್ದ ಮನೋವೈದ್ಯರು ಅವರ ಮಾನಸಿಕ ಸ್ಥಿತಿ ಸರಿಯಾಗಿಲ್ಲದ ಕಾರಣ ಅವರಿಗೆ ಕೌನ್ಸಿಲಿಂಗ್ ಅಗತ್ಯವಿದೆ ಎಂಬ ವರದಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT