ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದದಲ್ಲಿ ನಿವೃತ್ತ ಸೇನಾ ಮುಖ್ಯಸ್ಥ ಸಿಂಗ್‌

ಒಮರ್‌ ಪದಚ್ಯುತಿಗೆ ‘ಸಂಚು’: ಸಿಬಿಐ ತನಿಖೆ ಸಂಭವ
Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜನರಲ್‌ (ನಿವೃತ್ತ) ವಿ.ಕೆ. ಸಿಂಗ್‌ ಅವರು ಸೇನಾ ಮುಖ್ಯಸ್ಥರಾಗಿದ್ದಾಗ ಪ್ರಾರಂಭಿಸಿದ್ದ ತಾಂತ್ರಿಕ ಸೇವಾ ವಿಭಾಗದ (ಟಿಎಸ್‌ಡಿ) ಮೂಲಕ ‘ಗುಪ್ತ ನಿಧಿ’ ದುರ್ಬಳಕೆ ಮಾಡಿಕೊಂಡು ಜಮ್ಮು ಮತ್ತು ಕಾಶ್ಮೀರದ ಒಮರ್‌ ಅಬ್ದುಲ್ಲ ಸರ್ಕಾರದ ಪದಚ್ಯುತಿಗೆ ಸಂಚು  ನಡೆಸಲಾಯಿತು ಎನ್ನುವ ಸೇನಾ ವರದಿ ರಾಜಕೀಯ ಮತ್ತು ರಕ್ಷಣಾ ವಲಯದಲ್ಲಿ ಭಾರಿ ವಿವಾದ ಹುಟ್ಟಿಸಿದೆ.

ಸೇನೆಯ ಹಾಲಿ ಮುಖ್ಯಸ್ಥ ಜನರಲ್‌ ಬಿಕ್ರಂಸಿಂಗ್‌ ಅವರು ಆ ಸ್ಥಾನಕ್ಕೆ ಬರದಂತೆ ತಪ್ಪಿಸಲು ಏನಾದರೂ ಮಾಡುವಂತೆ ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ಗುಪ್ತ ನಿಧಿಯಿಂದ ಹಣ ನೀಡಲಾಗಿತ್ತು ಮತ್ತು ರಕ್ಷಣಾ ಖಾತೆಯ ಹಿರಿಯ ಅಧಿಕಾರಿಗಳ ದೂರವಾಣಿ ಕದ್ದಾಲಿಸಲಾಗುತ್ತಿತ್ತು ಎಂಬ ಮಾಹಿತಿಯೂ ಈ ವರದಿಯಲ್ಲಿದೆ.

ಈ ಆರೋಪದ ಬಗ್ಗೆ ಸಿಬಿಐ ತನಿಖೆ  ನಡೆಸುವ ಇಂಗಿತವನ್ನು ಸರ್ಕಾರ ವ್ಯಕ್ತಪಡಿಸಿದೆ.

‘ಸೇನಾ ಮುಖ್ಯ ಕಾರ್ಯಾಲಯದಿಂದ ಈ ಸಂಬಂಧ ವರದಿ ಯೊಂದು ಬಂದಿದ್ದು, ಎಚ್ಚರಿಕೆಯಿಂದ ಅಧ್ಯಯನ ನಡೆಸಲಾಗುತ್ತಿದೆ.  ಇದು ರಾಷ್ಟ್ರೀಯ ಭದ್ರತೆಗೆ ಆಘಾತ ನೀಡುವಂತಹದ್ದು’ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಆದರೆ ಇದು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದೊಂದು ‘ರಾಜಕೀಯ ಪ್ರತೀಕಾರ’ ಎಂದು ಬಿಜೆಪಿ ದೂರಿದೆ. ಇದನ್ನು ಕಾಂಗ್ರೆಸ್‌ ಅಲ್ಲಗಳೆದಿದೆ.

ಪತ್ರಿಕೆಗಳಲ್ಲಿ ಬಹಿರಂಗ: ವಿ.ಕೆ. ಸಿಂಗ್‌ ಅವರು ತಮ್ಮ ಹುದ್ದೆಯ ಘನತೆ ದುರ್ಬಳಕೆ ಮಾಡಿಕೊಂಡು ಟಿಎಸ್‌ಡಿ ಮೂಲಕ ಅಕ್ರಮ ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎಂದು ಸೇನೆಯ ತನಿಖಾ ವರದಿಗಳನ್ನು ಉಲ್ಲೇಖಿಸಿ ಕೆಲ ಪತ್ರಿಕೆಗಳು ವರದಿ ಮಾಡಿದ್ದವು. 

ಟಿಎಸ್‌ಡಿ ನಡೆಸಿರುವ ಅಕ್ರಮ ವ್ಯವಹಾರಗಳ ಕುರಿತು ಮಾಧ್ಯಮ ಗಳಲ್ಲಿ ಬಂದಿರುವ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆರೋಪಗಳು ನಿಜವೇ ಆಗಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಮನೀಶ್‌ ತಿವಾರಿ ಶುಕ್ರವಾರ ಇಲ್ಲಿ ಎಚ್ಚರಿಸಿದರು.

ಸಿಂಗ್‌ ವಿರುದ್ಧ ಕೈಗೊಳ್ಳಬಹುದಾದ ಶಿಸ್ತುಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ ತಿವಾರಿ, ‘ವ್ಯಕ್ತಿಯೊಬ್ಬರನ್ನು ಕೇಂದ್ರ ವಾಗಿಟ್ಟುಕೊಂಡು ಕ್ರಮ ಕೈಗೊಳ್ಳುವ ವಿಷಯ ಇದಲ್ಲ. ಬದಲಿಗೆ ರಾಷ್ಟ್ರೀಯ ಹಿತಾಸಕ್ತಿ ಮುಂದಿಟ್ಟುಕೊಂಡು ತನಿಖೆಯ ನಂತರ ಈ ಕುರಿತು ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದರು.

ಸಚಿವ ಮೀರ್‌ ಪಾತ್ರ ತನಿಖೆಯಾಗಲಿ (ಶ್ರೀನಗರ ವರದಿ): ಟಿಎಸ್‌ಡಿ ಚಟುವಟಿಕೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್‌ ಕಾನ್ಫರೆನ್ಸ್ ಒತ್ತಾಯಿಸಿದೆ.

ರಾಜ್ಯದ ತಂಗ್‌ಮರ್ಗ್ ಕ್ಷೇತ್ರದ ಪಕ್ಷೇತರ ಶಾಸಕ, ಸಚಿವ ಮೀರ್‌ ಅವರು ಒಮರ್‌ ಸರ್ಕಾರ ಪದಚ್ಯುತಿಗೆ ಟಿಎಸ್‌ಡಿಯಿಂದ ಹಣ ಪಡೆಯುತ್ತಿದ್ದರು ಎಂಬ ಆರೋಪ ಇದ್ದು, ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಸಿಪಿಐ, ಸಿಪಿಎಂ  ಒತ್ತಾಯಿಸಿವೆ.
ಆದರೆ ಈ ಆರೋಪವನ್ನು ಮೀರ್‌ ಅಲ್ಲಗಳೆದಿದ್ದು, ರಾಜ್ಯ ಸರ್ಕಾರದ ಸ್ಥಿರತೆಗೆ ತಾವು ಶ್ರಮವಹಿಸಿದ್ದಾಗಿ ತಿಳಿಸಿದ್ದಾರೆ.

ವರದಿಯಲ್ಲೇನಿದೆ?
ಜನರಲ್‌ ವಿ.ಕೆ. ಸಿಂಗ್‌ ಅಧಿಕಾರಾವಧಿಯಲ್ಲಿ ತಾಂತ್ರಿಕ ಸೇವಾ ವಿಭಾಗ ಎಂಬ ಅತ್ಯುನ್ನತ ಗುಪ್ತಚರ ಘಟಕ ಸ್ಥಾಪಿಸಿ ಅದರ ಮೂಲಕ ನಡೆಸಿದ ‘ಕಾರ್ಯಗಳ’ ಬಗ್ಗೆ ಮಿಲಿಟರಿ ಕಾರ್ಯಾಚರಣೆಯ ಹಿರಿಯ ಅಧಿಕಾರಿ ಲೆಫ್ಟಿನೆಂಟ್‌ ಜನರಲ್‌ ವಿನೋದ್‌ ಭಾಟಿಯಾ ತನಿಖೆ ನಡೆಸಿ ಕಳೆದ ಮಾರ್ಚ್‌ನಲ್ಲಿಯೇ ರಕ್ಷಣಾ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

‘ವಿ.ಕೆ. ಸಿಂಗ್‌ ನಂತರ ಜನರಲ್‌ ಬಿಕ್ರಂ ಸಿಂಗ್‌ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳದಂತೆ ಅವರ ಮೇಲಿರುವ ಆರೋಪಗಳ ಕುರಿತು ತನಿಖೆಗೆ ಒತ್ತಾಯಿಸಲು ಸಂಘ ಸಂಸ್ಥೆಗಳಿಗೆ ಟಿಎಸ್‌ಡಿ ಹಣಕಾಸು ನೆರವು ನೀಡುತ್ತಿತ್ತು’.

‘ಒಮರ್‌ ಸರ್ಕಾರ ಬೀಳಿಸಲು ಎಂಜಿನಿಯರ್‌ ಒಬ್ಬರ ಮೂಲಕ ಕಾಶ್ಮೀರದ ಕೃಷಿ ಸಚಿವ ಗುಲಾಂ ಹಸನ್‌ ಮೀರ್‌ಗೆ ಟಿಎಸ್‌ಡಿಯಿಂದ ₨ 1.19 ಕೋಟಿ ನೀಡಲಾಗಿತ್ತು’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೋದಿ ಸಖ್ಯದ ಪರಿಣಾಮ: ಸಿಂಗ್‌
ಈ ಕುರಿತು ಪ್ರತಿಕ್ರಿಯೆ ನೀಡಿದ ವಿ.ಕೆ. ಸಿಂಗ್‌, ‘ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಇದೆಲ್ಲ ಅವರದೇ ಕೆಲಸ’ ಎಂದು ಟೀಕಿಸಿದರು.

ರೇವಾರಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಮೋದಿ ಅವರೊಂದಿಗೆ ಸಿಂಗ್‌ ಕಾಣಿಸಿಕೊಂಡಿದ್ದನ್ನು ಗುರಿ ಯಾಗಿಟ್ಟುಕೊಂಡು ಈ ಆರೋಪ ಮಾಡಲಾಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT